ಭಾನುವಾರ, ಮಾರ್ಚ್ 7, 2021
32 °C

ಕ್ರಿಸ್ತ ಶಕದಂತೆ ಮೋದಿ ಪರ್ವ: ಕಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕದ ಮಾದರಿಯಲ್ಲಿ ನರೇಂದ್ರ ಮೋದಿ ಪೂರ್ವ ಮತ್ತು ನಂತರದ ಆಡಳಿತ ಎಂಬ ಪರಿಕಲ್ಪನೆ ಇತಿಹಾಸದಲ್ಲಿ ಉಳಿಯಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿದರು.

ಬಿಜೆಪಿ ಮಾಧ್ಯಮ ವಿಭಾಗದಿಂದ ಶನಿವಾರ ಆಯೋಜಿಸಿದ್ದ ‘ಮಾಧ್ಯಮ ಮಂಥನ 2021’ ಕಾರ್ಯಾಗಾರದ ಉದ್ಘಾಟಿಸಿ ಅವರು ಮಾತನಾಡಿದರು. ‘ಜನಪರ ಆಡಳಿತ ಮತ್ತು ಅದ್ಭುತ ಕಾರ್ಯವೈಖರಿ ಮೂಲಕ ದೇಶ ಮತ್ತು ಜಗತ್ತಿನಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಪ್ರಸಿದ್ಧಿಯ ಹಿಂದೆ ಅವರು ಹೋಗಲಿಲ್ಲ. ಪ್ರಸಿದ್ಧಿಯೇ ಅವರ ಹಿಂದೆ ಬಂದಿದೆ’ ಎಂದರು.

‘ಆರು ವರ್ಷ ಕಾಲ ಭ್ರಷ್ಟಾಚಾರರಹಿತ ಆಡಳಿತ ಕೇಂದ್ರದಲ್ಲಿ ನಡೆದಿದೆ. ಯಾವುದೇ ಗಲಭೆಗಳಿಲ್ಲದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. 370ನೇ ವಿಧಿ ರದ್ದತಿ ನಂತರ ಗಲಭೆ ಆಗಬಹುದೆಂಬ ಮಾತುಗಳಿದ್ದರೂ ಏನೂ ಆಗಲಿಲ್ಲ. ರಾಷ್ಟ್ರಪ್ರೇಮದ ಜಾಗೃತಿ ಯುವಜನರಲ್ಲಿ ಉಂಟಾಗಿದೆ’ ಎಂದು ಹೇಳಿದರು.

‘ಅಧ್ಯಯನಶೀಲತೆಗೆ ಚಿಂತನ ಮಂಥನ ಅತ್ಯಗತ್ಯ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲೂ ಚಿಂತನ– ಮಂಥನ ನಡೆಯಲಿ’ ಎಂದು ಆಶಿಸಿದರು.

ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್, ಬಿಜೆಪಿ ರಾಷ್ಟ್ರೀಯ ವಕ್ತಾರ ನೂಪುರ್ ಶರ್ಮ, ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಸಿದ್ದರಾಜು, ಉಪಾಧ್ಯಕ್ಷ  ನಿರ್ಮಲ್‍ಕುಮಾರ್ ಸುರಾನ ಇದ್ದರು.

ಅಧ್ಯಯನ ಅನಿವಾರ್ಯ: ಸಿ.ಟಿ.ರವಿ

‘ಅಧ್ಯಯನ ಇದ್ದಾಗ ಮಾತ್ರ ಅಧಿಕಾರಯುತ ಮಾತು ಸಾಧ್ಯ. ವಿಷಯದ ಕುರಿತ ಅಧ್ಯಯನ ಅನಿವಾರ್ಯ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಪಾದಿಸಿದರು.

ಕಾರ್ಯಾಗಾರದ ಸಮಾರೋಪ ಭಾಷಣ ಮಾಡಿದ ಅವರು, ‘ಕಾಶ್ಮೀರ, ರಾಮಮಂದಿರ, ಗೋಹತ್ಯೆ, ಸಿಎಎ ರೀತಿಯ ಸೈದ್ಧಾಂತಿಕ ವಿಚಾರದಲ್ಲಿ ದ್ವಂದ್ವ ನಿಲುವು ಸಲ್ಲದು’ ಎಂದರು.

‘ಸಮುದಾಯವನ್ನು ಉದ್ದೇಶಿಸಿ ನೋವಾಗುವಂತೆ ಮಾತನಾಡಿದರೆ, ಏಕವಚನ ಬಳಸಿದರೆ ಅದರಿಂದ ಪಕ್ಷಕ್ಕೂ ಹಾನಿ ಆಗಬಹುದು. ಅದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಎಲ್ಲಾ ಕಾಲಕ್ಕೂ ಮಾತು ಅನಿವಾರ್ಯ ಅಲ್ಲ. ಮೌನವೂ ಸಂದೇಶ ನೀಡಬಲ್ಲದು’ ಎಂದು ಹೇಳಿದರು.

‘ಪತ್ರಕರ್ತರ ಜೊತೆ ಉತ್ತಮ ಸಂಬಂಧ ಬೇಕು. ಇಬ್ಬರೂ ಒಬ್ಬರಿಗೊಬ್ಬರು ಗೂಢಾಚಾರರಲ್ಲ. ಪಕ್ಷಕ್ಕೆ  ಧಕ್ಕೆ ಆಗದಂಥ ಧನಾತ್ಮಕ ಸಂಗತಿಗಳನ್ನಷ್ಟೇ ಹಂಚಿಕೊಳ್ಳಬೇಕು’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು