ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ರಾಜಭವನ್ ಚಲೋ

Published 6 ಜೂನ್ 2024, 10:34 IST
Last Updated 6 ಜೂನ್ 2024, 10:34 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ₹187 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯುವಂತೆ  ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅವರಿಗೆ ಬಿಜೆಪಿ ಮನವಿ ಸಲ್ಲಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರ ನೇತೃತ್ವದ ನಿಯೋಗ ವಿಧಾನಸೌಧದಿಂದ ರಾಜಭವನದವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಮನವಿಯನ್ನು ಸಲ್ಲಿಸಿತು.

ಆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಿಜಯೇಂದ್ರ, ‘ಹೈದರಾಬಾದ್‌ನಲ್ಲಿ 18 ಕ್ಕೂ ಹೆಚ್ಚು ನಕಲಿ ಬ್ಯಾಂಕ್‌ ಖಾತೆಗಳನ್ನು ತೆರೆದು ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ. ಹಣಕಾಸು ಇಲಾಖೆ ಅನುಮತಿ ಇಲ್ಲದೇ ಇದು ನಡೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

ಮುಖ್ಯಮಂತ್ರಿಯವರ ಗಮನಕ್ಕೆ ಬರದೇ ಈ ಹಗರಣ ನಡೆದಿರಲು ಸಾಧ್ಯವಿಲ್ಲ. ಕೇವಲ ಸಚಿವರ ರಾಜೀನಾಮೆ ಪಡೆದರೆ ಸಾಲದು. ರಾಜ್ಯದ ಇತಿಹಾಸದಲ್ಲಿ ಇಂಥ ದೊಡ್ಡ ಹಗರಣ ನಡೆದಿರಲಿಲ್ಲ. ಹಗರಣ ನಡೆದು ಇಷ್ಟು ದಿನ ಆದರೂ ಸಚಿವರ ರಾಜೀನಾಮೆ ಪಡೆಯಲು ಸಿಎಂ ಹಿಂದೆ–ಮುಂದೆ ನೋಡುತ್ತಿದ್ದಾರೆ. ಸಿಬಿಐ ತನಿಖೆಗೆ ಕೋರಿದ್ದು, ಅದಕ್ಕೂ ಮಣಿದಿಲ್ಲ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಚಾರವನ್ನು ಇಲ್ಲಿಗೇ ಕೈಬಿಡುವುದಿಲ್ಲ. ವಿಪಕ್ಷವಾಗಿ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಮುಖ್ಯಮಂತ್ರಿಯವರು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆನೆ ನಡೆದಿದ್ದೇ ದಾರಿ ಎಂಬಂತೆ ಮುಖ್ಯಮಂತ್ರಿಯವರ ವರ್ತಿಸುತ್ತಿರುವುದನ್ನು ಖಂಡಿಸುತ್ತೇವೆ. ಈ ವಿಷಯದಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ ಎಂದರು.

20 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಈ ಸರ್ಕಾರದ ಯೋಗ್ಯತೆ ಏನೆಂದು ಮತದಾರರು ತೋರಿಸಿಕೊಟ್ಟಿದ್ದಾರೆ ಎಂದು ವಿಜಯೇಂದ್ರ ಹರಿಹಾಯ್ದರು.

ನಿಯೋಗದಲ್ಲಿ ಬಿಜೆಪಿ ಪ್ರಧಾನಕಾರ್ಯದರ್ಶಿ ಹಾಗೂ ಶಾಸಕ ವಿ.ಸುನಿಲ್‌ಕುಮಾರ್‌, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಸ್‌.ಆರ್‌.ವಿಶ್ವನಾಥ್‌, ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮತ್ತು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT