ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: ವಿಮಾನನಿಲ್ದಾಣ ಮಾರ್ಗ ಕಾಮಗಾರಿ ಪ್ರಾರಂಭಕ್ಕೆ ದಿನಗಣನೆ

ರೀಚ್‌ 2ಎ–2ಬಿಗೆ ಮಂಜೂರಾತಿ ಆದೇಶ ನೀಡಿದ ಕೇಂದ್ರ ಸರ್ಕಾರ
Last Updated 7 ಜೂನ್ 2021, 20:41 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಸಿಲ್ಕ್‌ ಬೋರ್ಡ್‌ನಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 58.19 ಕಿ.ಮೀ. ಉದ್ದದ ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಸೋಮವಾರ ಮಂಜೂರಾತಿ ಆದೇಶ ನೀಡಿದ್ದು, ಕಾಮಗಾರಿ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ.

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯವು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಪತ್ರ ಬರೆದಿದ್ದು, ಮಂಜೂರಾತಿ ಆದೇಶ ನೀಡಿದ ದಿನದಿಂದ ಐದು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಕೆ.ಆರ್. ಪುರ 19.75 ಕಿ.ಮೀ. ಮತ್ತು ಕೆ.ಆರ್. ಪುರದಿಂದ ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣದವರೆಗಿನ 38.44 ಕಿ.ಮೀ. ಸೇರಿದಂತೆ ಒಟ್ಟಾರೆ 58.19 ಕಿ.ಮೀ. ಉದ್ದದ ಈ ಮಾರ್ಗವನ್ನು ₹14,788 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 50:50ರ ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರವು ಈ ಮೊತ್ತವನ್ನು ಭರಿಸಲಿವೆ.

ಕೇಂದ್ರ ಸರ್ಕಾರದಿಂದ ಏಪ್ರಿಲ್‌ನಲ್ಲಿ ಈ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ದೊರಕಿತ್ತು. ಆದರೆ, ಇನ್ನೂ ಮಂಜೂರಾತಿ ಆದೇಶ ನೀಡಿರಲಿಲ್ಲ. ರಾಜ್ಯ ಸರ್ಕಾರವು 2019ರ ಜನವರಿಯಲ್ಲಿ ಇದಕ್ಕೆ ಮಂಜೂರಾತಿ ಆದೇಶ ನೀಡಿತ್ತು. ಆಗ ಯೋಜನಾ ವೆಚ್ಚ ₹10,584 ಕೋಟಿ ಆಗಿತ್ತು.

ಈಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, 2025ರ ಸೆಪ್ಟೆಂಬರ್ ಒಳಗೆ ಈ ಮಾರ್ಗದ ಕಾಮಗಾರಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಭೂಸ್ವಾಧೀನ:

ಹೊರವರ್ತುಲ ರಸ್ತೆ ಮಾರ್ಗದ ಭೂಸ್ವಾಧೀನ ಕಾರ್ಯ ಶೇ 100ರಷ್ಟು ಪೂರ್ಣಗೊಂಡಿದ್ದು, ವಿಮಾನ ನಿಲ್ದಾಣ ಮಾರ್ಗದ ಭೂಸ್ವಾಧೀನ ಕಾರ್ಯ ಶೇ 90ರಷ್ಟು ಆಗಿದೆ.

30 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿದ್ದು, ಯೋಜನೆ ಪೂರ್ಣಗೊಂಡ ನಂತರ ಅಂದರೆ 2025ಕ್ಕೆ ನಿತ್ಯ 4.33 ಲಕ್ಷ ಜನ ಪ್ರಯಾಣಿಸಲಿದ್ದು, 2041ರ ವೇಳೆಗೆ ಇಲ್ಲಿ ಪ್ರಯಾಣಿಕರ ಸಂಖ್ಯೆ 11.14 ಲಕ್ಷಕ್ಕೆ ಏರಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT