ಬುಧವಾರ, ನವೆಂಬರ್ 13, 2019
17 °C

ಬಿಎಂಟಿಸಿ ಪ್ರಯಾಣ ದರ ಶೀಘ್ರ ಇಳಿಕೆ: ಹೊಸದಾಗಿ 6 ಸಾವಿರ ಬಸ್‌ಗಳ ಸೇರ್ಪಡೆ

Published:
Updated:
Prajavani

ಬೆಂಗಳೂರು: ಬಿಎಂಟಿಸಿ ಬಸ್ ಪ್ರಯಾಣ ದರ ಇಳಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಎಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬೇಕು ಎಂಬ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ.

ಸಾರ್ವಜನಿಕ ಸಾರಿಗೆ ತುಟ್ಟಿಯಾಗಿದ್ದು, ಬಡವರು, ಮಧ್ಯಮ ವರ್ಗದ ಜನರು ದ್ವಿಚಕ್ರ, ಖಾಸಗಿ ವಾಹನಗಳನ್ನು ಅಧಿಕ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ. ಇದರಿಂದ ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ದಿನದಿಂದ ದಿನಕ್ಕೆ ವಾಯುಮಾಲಿನ್ಯ ಏರಿಕೆಯಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸಬೇಕಾಗಿದ್ದು, ಅದಕ್ಕಾಗಿ ಬಸ್ ಪ್ರಯಾಣ ದರ ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.

ನಗರದ ಪ್ರಗತಿ ಕುರಿತು ನಡೆದ ಸಭೆಯ ನಂತರ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಬಸ್ ಪ್ರಯಾಣ ದರ ಕಡಿಮೆ ಮಾಡುವುದರಿಂದ ಆಗುವ ನಷ್ಟವನ್ನು ಸರ್ಕಾರ ತುಂಬಿಕೊಡಲಿದೆ. ಇದರಿಂದ ಯಾವುದೇ ನಷ್ಟವಿಲ್ಲದೆ ಬಿಎಂಟಿಸಿ ಮುನ್ನಡೆಯಲಿದೆ’ ಎಂದರು.

6 ಸಾವಿರ ಹೊಸ ಬಸ್: ‘ಬಿಎಂಟಿಸಿ ಬಳಿ ಪ್ರಸ್ತುತ 6,500 ಬಸ್‌ಗಳಿದ್ದು, ಹೊಸದಾಗಿ 6 ಸಾವಿರ ಬಸ್‌ಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಬಸ್‌ಗಳನ್ನು ಖರೀದಿಸುವ ಬದಲು ಬಸ್ ತಯಾರಿಸುವ ಕಂಪನಿಗಳಿಂದ ನೇರವಾಗಿ ಬಾಡಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗುತ್ತದೆ. ಅವುಗಳಲ್ಲಿ ಶೇ 50ರಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ತೆಗೆದುಕೊಳ್ಳಲಾಗುವುದು. ಹಾಗಾಗಿ, ವಾಯುಮಾಲಿನ್ಯ ಕಡಿಮೆಯಾಗಲಿದೆ’ ಎಂದು ಹೇಳಿದರು.

‘ಈ ಬಸ್‌ಗಳಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು ಇರುತ್ತಾರೆ. ಕಿಲೋ ಮೀಟರ್ ಅಥವಾ ದಿನದ ಬಾಡಿಗೆ ಲೆಕ್ಕದಲ್ಲಿ ಹಣ ನೀಡಲಾಗುತ್ತದೆ. ಒಮ್ಮೆಲೆ ಇಷ್ಟೊಂದು ಬಸ್‌ಗಳನ್ನು ಖರೀದಿಸಲು ₹5 ಸಾವಿರ ಕೋಟಿಯಿಂದ 6 ಸಾವಿರ ಕೋಟಿ ಬೇಕಾಗುತ್ತದೆ. ಇದು ಸರ್ಕಾರಕ್ಕೆ ಹೊರೆಯಾಗಲಿದೆ. ಹೀಗಾಗಿ ಬಾಡಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗುತ್ತದೆ’ ಎಂದು ವಿವರಿಸಿದರು.

12 ಕಾರಿಡಾರ್: ನಗರದಲ್ಲಿ ತೀವ್ರ ಸಂಚಾರ ದಟ್ಟಣೆ ಇರುವ 12 ಮಾರ್ಗಗಳನ್ನು ಗುರುತಿಸಲಾಗಿದ್ದು, ಈ ರಸ್ತೆಗಳಲ್ಲಿ ಬಸ್‌ಗಳಿಗೆ ಪ್ರತ್ಯೇಕ ಸಂಚಾರ ವ್ಯವಸ್ಥೆ, ಸೈಕಲ್ ಪಥ ನಿರ್ಮಿಸಲಾಗುವುದು ಎಂದರು.

ಪ್ರತಿಕ್ರಿಯಿಸಿ (+)