ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಎಸ್‌ಜೆಡ್‌ನಲ್ಲಿ ಬಿಎಂಟಿಸಿ ಡಿಪೊ: ಸಿಎಜಿ ವರದಿಯಲ್ಲಿ ಉಲ್ಲೇಖ

Last Updated 18 ಫೆಬ್ರುವರಿ 2020, 22:09 IST
ಅಕ್ಷರ ಗಾತ್ರ

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದ ಪರಿಸರ ಅತೀ ಸೂಕ್ಷ್ಮ ‍ಪ್ರದೇಶದಲ್ಲಿ (ಇಎಸ್‌ಜೆಡ್) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ₹6.92 ಕೋಟಿ ವೆಚ್ಚದಲ್ಲಿ ಬಸ್‌ ಡಿಪೊ ನಿರ್ಮಿಸಿದೆ!

ತಿಪ್ಪಗೊಂಡನಹಳ್ಳಿ ಜಲಾನಯನದ ಅಧಿಸೂಚಿತ ಪ್ರದೇಶದಲ್ಲಿ ಹಸಿರು ವರ್ಗದ ಕೈಗಾರಿಕೆಗಳಿಗೆ ಮಾತ್ರ ಅನುಮತಿ ಇರುತ್ತದೆ. ಆದರೂ, ನಿಗಮವು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪೂರ್ವಾನುಮತಿಯಿಲ್ಲದೆ ಡಿಪೊ ನಿರ್ಮಿಸಿತು. ಇದು ಜಲ ಅಧಿನಿಯಮದ 25ನೇ ಪರಿಚ್ಛೇದ ಹಾಗೂ ವಾಯು ಅಧಿನಿಯಮದ 21ನೇ ಪರಿಚ್ಛೇದದ ಉಲ್ಲಂಘನೆ. ಇದು ಭೂಮಿ ಹಂಚಿಕೆ ಷರತ್ತುಗಳ ಉಲ್ಲಂಘನೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಆಕ್ಷೇಪಿಸಲಾಗಿದೆ. ಈ ವರದಿಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ.

ಈ ಡಿಪೊವನ್ನು ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ನೀಡಿತ್ತು. ಇದರ ಹೊರತಾಗಿಯೂ ಬಿಎಂಟಿಸಿಯು ಡಿಪೊ ಕಾರ್ಯಾಚರಣೆ ಮುಂದುವರಿಸಿದೆ. ಈ ನಡೆ ನಿಗಮದ ಪರಿಸರಸ್ನೇಹಿ ಉಪಕ್ರಮಕ್ಕೆ ವಿರುದ್ಧ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬಿಎಂಟಿಸಿ ಬಸ್‌ ಡಿಪೊ ನಿರ್ಮಾಣಕ್ಕೆ ದಾಸನಪುರ ಹೋಬಳಿಯಲ್ಲಿ 13 ಎಕರೆ ಜಾಗವನ್ನು ₹5.27 ಕೋಟಿ ಕೊಟ್ಟು ರಾಜ್ಯ ಸರ್ಕಾರದಿಂದ 2008ರಲ್ಲಿ ಖರೀದಿಸಿತು. ಈ ಜಾಗದಲ್ಲಿ ₹6.64 ಕೋಟಿ ವೆಚ್ಚದಲ್ಲಿ 2012ರಲ್ಲಿ ಡಿಪೊ ನಿರ್ಮಿಸಿತು. ಅಲ್ಲಿ ಡೀಸೆಲ್‌ ಜನರೇಟರ್‌ ಸೆಟ್ಟಿನ ಕಾರ್ಯಾಚರಣೆಯ ಅನುಮತಿಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಗೆ 2013ರ ಜೂನ್‌ನಲ್ಲಿ ಅರ್ಜಿ ಸಲ್ಲಿಸಿತು.

ಯು ಹಾಗೂ ಜಲ ನಿಯಮ ಪಾಲಿಸಿಲ್ಲ ಎಂದು ಕಾರಣ ಕೇಳಿ ನಿಗಮಕ್ಕೆ ಮಂಡಳಿ ನೋಟಿಸ್‌ ನೀಡಿತು. ಅದಕ್ಕೂ ನಿಗಮ ಉತ್ತರ ನೀಡಲಿಲ್ಲ. ಸಂಸ್ಕರಿಸದ ಕೊಳಚೆ ನೀರನ್ನು ಚರಂಡಿಗೆ ಬಿಡುತ್ತಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿತು. ಡಿಪೊ ಕಾರ್ಯಾಚರಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ತಾಕೀತು ಮಾಡಿತು.

ಈ ನಡುವೆ, ನಿಗಮ ₹28.08 ಲಕ್ಷ ವೆಚ್ಚದಲ್ಲಿ ಕೊಳಚೆ ನೀರು ಸಂಸ್ಕರಣಾ ಸ್ಥಾವರವನ್ನು ಆರಂಭಿಸಿತು ಹಾಗೂ ತನ್ನ ಪ್ರಾಂಗಣದಲ್ಲಿ ಹಸಿರು ವಾತಾವರಣವನ್ನು ಅಭಿವೃದ್ಧಿಪಡಿಸಿತು. ಜತೆಗೆ, ಡಿಪೊ ಕಾರ್ಯಾಚರಣೆಗೆ ಅನುಮತಿ ನೀಡುವಂತೆ ಮತ್ತೊಂದು ಅರ್ಜಿ ಸಲ್ಲಿಸಿತು. ಇದನ್ನು ಮಂಡಳಿ ತಿರಸ್ಕರಿಸಿತು.

ವರದಿಯಲ್ಲಿರುವ ಇತರ ಪ್ರಮುಖ ಅಂಶಗಳು
*ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು ಟೆಂಡರು ಷರತ್ತುಗಳನ್ನು ಮಾರ್ಪಾಡು ಮಾಡಿ ಕೇಬಲ್‌ಗಳ ಸರಬರಾಜಿಗೆ ಎಸ್‌ಬಿಇಇ ಕೇಬಲ್ಸ್‌ ಇಂಡಿಯಾ ಲಿಮಿಟೆಡ್‌ಗೆ ಗುತ್ತಿಗೆ ನೀಡಿತು. ಈ ಮೂಲಕ ಗುತ್ತಿಗೆದಾರರಿಗೆ ₹1.61 ಕೋಟಿ ಮೊತ್ತದಷ್ಟು ಹೆಚ್ಚುವರಿ ಪಾವತಿ ಮಾಡುವಂತಾಯಿತು.

*ಮೈಸೂರು ಕಾಗದ ಕಾರ್ಖಾನೆಯು ಹೆಚ್ಚುವರಿ ಕಚ್ಚಾ ಸಾಮಗ್ರಿಗಳನ್ನು ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳದ ಕಾರಣ ₹4.74 ಕೋಟಿಯಷ್ಟು ನಷ್ಟ ಉಂಟಾಯಿತು.

*ಕರ್ನಾಟಕ ಖನಿಜಗಳ ನಿಗಮವು ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯದೆ ಖನಿಜಗಳನ್ನು ತೆಗೆದಿದ್ದರಿಂದ ₹15.21 ಕೋಟಿ ಮೊತ್ತದ ಖನಿಜವನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.

*ಕಂಪನಿಯ ನಿರ್ದೇಶಕರ ನಿರ್ಧಾರದ ಆಧಾರದಲ್ಲಿ ಭೋಗ್ಯದ ಕರಾರನ್ನು ರದ್ದುಪಡಿಸಿದ್ದರಿಂದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಗೆ ₹5.73 ಕೋಟಿ ನಷ್ಟ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT