ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಬಸ್ ಸಂಚಾರ: ರಸ್ತೆಗಿಳಿಯಲಿವೆ ಎರಡು ಸಾವಿರ ಬಸ್

ನಿಂತು ಪ್ರಯಾಣಿಸಲು ಅವಕಾಶವಿಲ್ಲ
Last Updated 18 ಮೇ 2020, 22:25 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಅವಧಿ 31ರವರೆಗೆ ವಿಸ್ತರಿಸಲಾಗಿದ್ದರೂ, ಸಾರ್ವಜನಿಕ ಬಸ್‌ ಸಂಚಾರಕ್ಕೆ ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿರುವುದರಿಂದ ಮೊದಲ ಹಂತವಾಗಿ ಬಿಎಂಟಿಸಿಯ ಎರಡು ಸಾವಿರ ಬಸ್‌ಗಳು ಮಂಗಳವಾರ ರಸ್ತೆಗಿಳಿಯಲಿವೆ.

‘ಬಸ್‌ಗಳ ಕಾರ್ಯಾಚರಣೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಜ್ಜುಗೊಂಡಿದೆ. ಈಗಾಗಲೇ 15 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯ ಆರೋಗ್ಯ ಪರೀಕ್ಷೆ (ಥರ್ಮಲ್‌ ಸ್ಕ್ರೀನಿಂಗ್) ಮಾಡಲಾಗಿದೆ. ಮಂಗಳವಾರದ ವೇಳೆಗೆ ಇನ್ನೂ ಹೆಚ್ಚು ಸಿಬ್ಬಂದಿಯ ಪರೀಕ್ಷೆ ನಡೆಸಿದ ನಂತರ ಕರ್ತವ್ಯಕ್ಕೆ ನಿಯೋಜಿಸಲಾಗುವುದು’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚು ಜನರು ಸಂಚರಿಸುವ ಅಥವಾ ದಟ್ಟಣೆಯ ಪ್ರದೇಶಗಳಲ್ಲಿ ಮೊದಲು ಸೇವೆ ನೀಡಲಾಗುವುದು. ಕ್ರಮೇಣವಾಗಿ ಉಳಿದ ಭಾಗಗಳಲ್ಲಿ ಸೇವೆ ವಿಸ್ತರಿಸಲಾಗುವುದು’ ಎಂದು ಅವರು ತಿಳಿಸಿದರು.

ನಿಂತು ಪ್ರಯಾಣಿಸುವಂತಿಲ್ಲ:

‘ಬಸ್‌ಗಳ ಆಸನ ಸಾಮರ್ಥ್ಯ ಎಷ್ಟಿದೆಯೋ ಅಷ್ಟು ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಬಸ್ಸಿನಲ್ಲಿ ನಿಂತುಕೊಂಡು ಪ್ರಯಾಣಿಸಲು ಅವಕಾಶ ನೀಡಲಾಗುವುದಿಲ್ಲ’ ಎಂದು ಶಿಖಾ ತಿಳಿಸಿದರು.

ಮುಖಗವಸು ಕಡ್ಡಾಯ:

ಎಲ್ಲ ಪ್ರಯಾಣಿಕರು ಮುಖಗವಸು ಧರಿಸಬೇಕಾದುದು ಕಡ್ಡಾಯ. ಮಾಸ್ಕ್‌ ಹಾಕಿಕೊಳ್ಳದವರ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ.

‘ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರಯಾಣಿಕರು ಸಹಕರಿಸಬೇಕು. ಮೊದಲಿನಂತೆ ಗುಂಪು–ಗುಂಪಾಗಿ ಬಸ್‌ ಏರಬಾರದು. ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಸಿಬ್ಬಂದಿ ಸುರಕ್ಷತೆ:

‘ನಿತ್ಯ ಚಾಲಕ ಮತ್ತು ನಿರ್ವಾಹಕರ ದೇಹದ ತಾಪಪಮಾನ ಪರೀಕ್ಷೆ ಮಾಡಲಾಗುವುದು. ಎಲ್ಲರಿಗೂ ಮುಖ–ಕೈಗವಸು, ಸ್ಯಾನಿಟೈಸರ್‌ ವಿತರಿಸಲಾಗುವುದು ಹಾಗೂ ಎಲ್ಲ ಬಸ್‌ಗಳನ್ನು ನಿತ್ಯ ಸೋಂಕು ಮುಕ್ತಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.

‘ನಗದು ವ್ಯವಹಾರ ಕಡಿಮೆಗೊಳಿಸಲು ಮಾಸಿಕ ಹಾಗೂ ವಾರದ ಪಾಸ್‌ಗಳನ್ನು ಹೆಚ್ಚು ವಿತರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT