ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿಯದ ಬಸ್‌; ಪ್ರಯಾಣಿಕರ ಪರದಾಟ

ಯಶವಂತಪುರದಲ್ಲಿ ರಸ್ತೆ ಮೇಲೆಯೇ ಅಡುಗೆ * ಕೆಲಸಕ್ಕೆ ಹಾಜರಾಗಿದ್ದ ಸಿಬ್ಬಂದಿ ಮೇಲೆ ಹಲ್ಲೆ, ಬಸ್ಸಿಗೆ ಕಲ್ಲು ತೂರಾಟ
Last Updated 11 ಡಿಸೆಂಬರ್ 2020, 20:24 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ನೌಕರರು ಶುಕ್ರವಾರ ಬೆಳಿಗ್ಗೆ ದಿಢೀರ್‌ ಮುಷ್ಕರ ಆರಂಭಿಸಿದ್ದರಿಂದ ಬಸ್‌ಗಳು ರಸ್ತೆಗಿಳಿಯದೇ ಪ್ರಯಾಣಿಕರು ಪರದಾಡುವಂತಾಯಿತು.

ನಿತ್ಯವೂ ನಸುಕಿನಲ್ಲಿ ಮೆಜೆಸ್ಟಿಕ್‌, ಯಶವಂತಪುರ, ಪೀಣ್ಯ ಸೇರಿದಂತೆ ಹಲವು ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿದ್ದವು. ಅದರಂತೆ ಪ್ರಯಾಣಿಕರು, ಶುಕ್ರವಾರ ಬೆಳಿಗ್ಗೆ ನಿಲ್ದಾಣಕ್ಕೆ ಬಂದು ಬಸ್ಸಿಗಾಗಿ ಕಾಯುತ್ತಿದ್ದರು. ಡಿಪೊಗೆ ಬಂದ ನೌಕರರು, ಏಕಾಏಕಿಗೆ ಕರ್ತವ್ಯಕ್ಕೆ ತೆರಳದೇ ಹೊರ ನಡೆದರು. ಬಸ್‌ಗಳನ್ನು ನಿಲ್ದಾಣಕ್ಕೆ ತೆಗೆದುಕೊಂಡು ಹೋಗದೆ, ಡಿಪೊ ಎದುರೇ ಪ್ರತಿಭಟನೆ ಆರಂಭಿಸಿದ್ದರು.

45 ಡಿಪೊಗಳ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ಪಾಳಿಯಲ್ಲಿದ್ದ ನೌಕರರು, ಬಸ್‌ಗಳನ್ನು ಡಿಪೊ ಹಾಗೂ ನಿಗದಿತ ನಿಲ್ದಾಣಕ್ಕೆ ತಂದು ನಿಲ್ಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದಾಗಿ ಬೆಳಿಗ್ಗೆಯೇ ನಗರದ ಬಹುತೇಕ ಕಡೆ ಬಸ್‌ ಸಂಚಾರ ಸ್ಥಗಿತಗೊಂಡಿತು. ಬಸ್ಸಿಗಾಗಿ ಕಾಯುತ್ತ ಕುಳಿತಿದ್ದ ಪ್ರಯಾಣಿಕರು, ಬಸ್‌ ಬಾರದಿದ್ದರಿಂದ ತೊಂದರೆಗೆ ಸಿಲುಕಿದರು. ಕೆಲಸಕ್ಕೆ ಹೊರಟಿದ್ದ ಜನ, ಬಸ್‌ ಇಲ್ಲದೇ ಮನೆಯತ್ತ ಹೆಜ್ಜೆ ಹಾಕಿದರು.

ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದಿದ್ದ ಜನ, ಮೆಜೆಸ್ಟಿಕ್‌ ಹಾಗೂ ಸುತ್ತಮುತ್ತ ರಸ್ತೆ ಬದಿಯಲ್ಲೇ ಮೂಟೆಗಳನ್ನು ಇಟ್ಟುಕೊಂಡು ಕುಳಿತುಕೊಂಡಿದ್ದು ಕಂಡುಬಂತು. ಒಂದೆಡೆ ನೌಕರರು, ಪ್ರತಿಭಟನೆ ನಡೆಸುತ್ತಿದ್ದರು. ಇನ್ನೊಂದೆಡೆ ಪ್ರಯಾಣಿಕರು, ಲಗೇಜು ಹಾಗೂ ಮಕ್ಕಳ ಸಮೇತ ತಮ್ಮ ಸ್ಥಳಗಳಿಗೆ ತೆರಳುತ್ತಿದ್ದ ದೃಶ್ಯಗಳು ಕಾಣಿಸಿದವು.

ಮೆಜೆಸ್ಟಿಕ್ ಕೇಂದ್ರ ಬಸ್‌ ನಿಲ್ದಾಣ, ಬಸ್‌ಗಳು ಇಲ್ಲದೇ ಬಿಕೋ ಎನ್ನುತ್ತಿತ್ತು. ಕೆಲ ಪ್ರಯಾಣಿಕರು, ಬಸ್ಸಿಗಾಗಿ ಕಾಯುತ್ತ ನಿಲ್ದಾಣದಲ್ಲೇ ಮಲಗಿಕೊಂಡಿದ್ದರು.

‘ಕಲಬುರ್ಗಿಯಿಂದ ಬೆಳಿಗ್ಗೆ ಬಂದಿದ್ದೇನೆ. ಜಿಗಣಿಗೆ ಹೋಗಬೇಕು. ಆದರೆ, ಇಲ್ಲಿ ಬಸ್ಸಿಲ್ಲ. ಹೀಗಾಗಿ. ನಿಲ್ದಾಣದಲ್ಲೇ ಚೀಲ ಇಟ್ಟುಕೊಂಡು ಕುಳಿತುಕೊಂಡಿದ್ಧೇನೆ’ ಎಂದು ಕಾರ್ಮಿಕ ಶರಣಪ್ಪ ಹೇಳಿದರು.

ಬೀದರ್‌ನ ರತ್ನಮ್ಮ, ‘ಪತಿ ಹಾಗೂ ನಾನು, ವೈಟ್‌ಫೀಲ್ಡ್‌ನ ಕಂಪನಿಯೊಂದರಲ್ಲಿ ಸ್ವಚ್ಛತಾ ಕೆಲಸ ಮಾಡುತ್ತೇವೆ. ಇತ್ತೀಚೆಗೆ ಊರಿಗೆ ಹೋಗಿದ್ದೆವು. ಶುಕ್ರವಾರ ವಾಪಸು ಬಂದೆವು. ಬಿಎಂಟಿಸಿ ನಿಲ್ದಾಣದಿಂದ ವೈಟ್‌ಫೀಲ್ಡ್‌ಗೆ ಹೋಗಲು ಬಸ್ಸಿರಲಿಲ್ಲ. ಇಬ್ಬರು ಮಕ್ಕಳ ಜೊತೆ ನಿಲ್ದಾಣದಲ್ಲೇ ಗಂಟೆಗಟ್ಟಲೆ ಕಾದೆವು’ ಎಂದು ಅಳಲು ತೋಡಿಕೊಂಡರು.

ಮೆಟ್ರೊ ರೈಲಿನಲ್ಲಿ ದಟ್ಟಣೆ: ಬಸ್‌ಗಳು ಇಲ್ಲದಿದ್ದರಿಂದ ಬಹುತೇಕರು, ಮೆಟ್ರೊ ರೈಲು ಮೊರೆ ಹೋದರು. ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣದಲ್ಲಿ ದಟ್ಟಣೆ ಕಂಡುಬಂತು. ನಾಲ್ಕು ಮಾರ್ಗಗಳಲ್ಲೂ ರೈಲುಗಳು ಸೀಟುಗಳು ಭರ್ತಿಯಾಗಿದ್ದವು.

ಸಿಬ್ಬಂದಿ ಮೇಲೆ ಹಲ್ಲೆ; ಕೆಲ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು ಎನ್ನಲಾಗಿದೆ. ಅವರ ಮೇಲೆ ಹಲ್ಲೆ ನಡೆದಿರುವ ಮಾಹಿತಿ ಇದ್ದು, ಆದರೆ, ಹಲ್ಲೆ ಬಗ್ಗೆ ಯಾವ ಠಾಣೆಯಲ್ಲೂ ಪ್ರಕರಣ ದಾಖಲಾಗಿಲ್ಲ.

ರಸ್ತೆ ಮೇಲೆಯೇ ಅಡುಗೆ: ಯಶವಂತಪುರ ಡಿಪೊ ನೌಕರರು, ಬೆಳಿಗ್ಗೆ 6 ಗಂಟೆಯಿಂದಲೇ ಪ್ರತಿಭಟನೆ ಆರಂಭಿಸಿದರು. ಡಿಪೊ ಎದುರು ರಸ್ತೆಯಲ್ಲಿ ಕುಳಿತಿದ್ದ ನೌಕರರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಾಹ್ನ ರಸ್ತೆ ಮೇಲೆ ಅಡುಗೆ ಮಾಡಿದ ನೌಕರರು, ಸಾಮೂಹಿಕ ಭೋಜನ ಮಾಡಿದರು.

ಹೆಚ್ಚಿನ ದರ ವಸೂಲಿ

ಬಸ್‌ಗಳ ಸಂಚಾರವಿಲ್ಲದಿದ್ದರಿಂದ, ನಿಲ್ದಾಣದಲ್ಲಿ ಆಟೊ ಹಾಗೂ ಖಾಸಗಿ ವಾಹನಗಳದ್ದೇ ಕಾರುಬಾರು. ಅದರ ಚಾಲಕರು, ನಿತ್ಯದ ದರಕ್ಕಿಂತಲೂ ದುಪ್ಪಟ್ಟು ದರ ಪಡೆದು ಪ್ರಯಾಣಿಕರಿಗೆ ಮತ್ತಷ್ಟು ತೊಂದರೆ ನೀಡಿದರು.

‘₹ 25 ಕೊಟ್ಟು ಬಸ್‌ನಲ್ಲಿ ನಮ್ಮ ಮನೆಗೆ ಹೋಗುತ್ತಿದ್ದೆವು. ಆದರೆ, ಈಗ ಆಟೊದವರು 200ರಿಂದ 300 ಕೇಳಿದರು. ಒಂದು ದಿನದ ದುಡಿಮೆ ಹಣವನ್ನು ಆಟೊಗೆ ಕೊಟ್ಟರೆ, ನಮ್ಮ ಗತಿಯೇನು’ ಎಂದು ಕಾರ್ಮಿಕರು ಪ್ರಶ್ನಿಸಿದರು.

ಮೀಟರ್‌ ಲೆಕ್ಕವಿಲ್ಲದಂತೆ ಆಟೊದವರು ದರ ವಸೂಲಿ ಮಾಡಿದರು. ಕೆಲವೆಡೆ ಪ್ರಯಾಣಿಕರು ಹಾಗೂ ಆಟೊ ಚಾಲಕರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT