ಗುರುವಾರ , ಆಗಸ್ಟ್ 18, 2022
25 °C
ಡಿಪೊಗಳಿಗೆ ಸರಬರಾಜು ಸ್ಥಗಿತ: ಖಾಸಗಿ ಪೆಟ್ರೋಲ್‌ ಬಂಕ್‌ಗಳಲ್ಲಿ ಭರ್ತಿ

ಡೀಸೆಲ್‌ಗಾಗಿ ಬಿಎಂಟಿಸಿ ಪರದಾಟ: ಡಿಪೊಗಳಿಗಿಲ್ಲ ಸರಬರಾಜು , ಖಾಸಗಿಗೆ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾಲದ ಸುಳಿಯಲ್ಲಿ ಸಿಲುಕಿರುವ ಬಿಎಂಟಿಸಿ ಈಗ ಡೀಸೆಲ್‌ಗಾಗಿಯೂ ಪರದಾಡುವ ಸ್ಥಿತಿ ಎದುರಾಗಿದೆ. ಡಿಪೊಗಳಿಗೆ ಇಂಧನ ಪೂರೈಕೆಯಾಗದೆ, ಖಾಸಗಿ ಪೆಟ್ರೋಲ್ ಬಂಕ್‌ಗಳ ಬಳಿ ಸಾಲುಗಟ್ಟಿ ನಿಲ್ಲುವಂತಾಗಿದೆ.

ಎಚ್‌ಪಿಸಿಎಲ್‌ನಿಂದ ಇಂಧನ ಖರೀದಿಸುತ್ತಿದ್ದ ಬಿಎಂಟಿಸಿ, ₹70 ಕೋಟಿ ಬಾಕಿ ಉಳಿಸಿಕೊಂಡಿದೆ. ಇದಲ್ಲದೇ ಸಗಟು ಖರೀದಿ ದರ ಪ್ರತಿ ಲೀಟರ್‌ ಡೀಸೆಲ್‌ಗೆ ₹119 ಆಗಿದೆ. ಚಿಲ್ಲರೆ ವ್ಯಾಪಾರದಲ್ಲಿ ಡೀಸೆಲ್ ದರ ಲೀಟರ್‌ಗೆ ₹87 ಇದೆ. ಇದರಿಂದಾಗಿ ಬಿಎಂಟಿಸಿ, ಚಿಲ್ಲರೆ ವ್ಯಾಪಾರಿಗಳಿಂದಲೇ ಡೀಸೆಲ್ ಖರೀದಿಸಿ ಬಸ್‌ಗಳ ಸಂಚಾರವನ್ನು ಸುಗಮ ಮಾಡಿಕೊಂಡಿತ್ತು. ಚಿಲ್ಲರೆ ವ್ಯಾಪಾರಿಗಳೇ ಟ್ಯಾಂಕರ್‌ಗಳಲ್ಲಿ ಪ್ರತಿದಿನ ಸಂಸ್ಥೆಗಳ ಡಿಪೊಗಳಲ್ಲಿರುವ ಬಂಕ್‌ಗಳಿಗೆ ಪೂರೈಕೆ ಮಾಡುತ್ತಿದ್ದರು. ಅಂದಿನ ಡೀಸೆಲ್ ಮೊತ್ತವನ್ನು ಅಂದೇ ಪಾವತಿಸಿ ಬಿಎಂಟಿಸಿ ಕೈತೊಳೆದುಕೊಳ್ಳುತ್ತಿತ್ತು. ಈ ಪ್ರಕ್ರಿಯೆ ಎರಡು ತಿಂಗಳಿಂದ ನಡೆದುಕೊಂಡು ಬಂದಿದೆ.

ಈಗ ಎರಡು ದಿನಗಳಿಂದ ಬಂಕ್‌ಗಳಿಗೆ ಪೂರೈಕೆ ಮಾಡುವುದನ್ನು ವ್ಯಾಪಾರಿಗಳು ಸ್ಥಗಿತಗೊಳಿಸಿದ್ದಾರೆ. ಡಿಪೊಗಳ ಬಂಕ್‌ಗಳಲ್ಲಿ ಡೀಸೆಲ್ ಖಾಲಿಯಾಗಿ ಬಸ್‌ಗಳು ಡಿಪೋ ಸಮೀಪದ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್‌ಗಾಗಿ ಸಾಲುಗಟ್ಟಿ ನಿಲ್ಲುತ್ತಿವೆ. ಇದರಿಂದಾಗಿ ಬಂಕ್‌ಗಳ ಮುಂದೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪೀಣ್ಯದಲ್ಲಿ ಶನಿವಾರ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಬಸ್‌ಗಳ ಸಾಲು ಇತ್ತು.

‘ನಮ್ಮ ಡಿಪೊಗಳಲ್ಲಿನ ಬಂಕ್‌ಗಳಿಗೆ ಟ್ಯಾಂಕರ್‌ಗಳ ಮೂಲಕ ಡೀಸೆಲ್‌ ಪೂರೈಸುತ್ತಿದ್ದ ವ್ಯಾಪಾರಿಗಳಿಗೆ ಕಂಪನಿಗಳು ಬೆದರಿಕೆ ಹಾಕುತ್ತಿವೆ. ಬಿಎಂಟಿಸಿಗೆ ಡೀಸೆಲ್ ಪೂರೈಸಿದರೆ ಪರವಾನಗಿ ರದ್ದುಪಡಿಸುವ ಬೆದರಿಕೆ ಹಾಕುತ್ತಿವೆ. ಇದರಿಂದಾಗಿ ವ್ಯಾಪಾರಿಗಳು ನಮಗೆ ಡೀಸೆಲ್ ಪೂರೈಸಲು ಹೆದರುತ್ತಿದ್ದಾರೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಹೇಳಿದರು.

‘ಸಗಟು ಡೀಸೆಲ್ ದರವನ್ನು ಲೀಟರ್‌ಗೆ ₹119ಕ್ಕೆ ಏರಿಸಲಾಗಿದೆ. ಚಿಲ್ಲರೆಯಾಗಿ ನಮಗೆ ₹87ಕ್ಕೆ ಡೀಸೆಲ್ ಸಿಗುತ್ತಿದೆ. ದುಬಾರಿ ಮೊತ್ತದಲ್ಲೇ ನಾವು ಡೀಸೆಲ್ ಖರೀದಿ ಮಾಡಬೇಕಾದ ಅನಿವಾರ್ಯವನ್ನು ಕಂಪನಿಗಳು ಸೃಷ್ಟಿಸುತ್ತಿವೆ. ಚಿಲ್ಲರೆ ವ್ಯಾಪಾರಿಗಳನ್ನೂ ಬೆದರಿಸಿ ನಮಗೆ ಪೂರೈಕೆ ಸ್ಥಗಿತಗ ವಾಗುವಂತೆ ಮಾಡಿವೆ’ ಎಂದು ದೂರಿದರು.

‘ಸಮಸ್ಯೆ ಸರಿಪಡಿಸುವ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಮತ್ತು ರಾಜ್ಯದಲ್ಲಿರುವ ಎಲ್ಲ ತೈಲ ಕಂಪನಿಗಳು ಸಮನ್ವಯಕಾರರಿಗೆ ಪತ್ರ ಬರೆದಿದ್ದೇವೆ. ಸಮಸ್ಯೆ ಸರಿಪಡಿಸದಿದ್ದರೆ ಬಸ್‌ಗಳನ್ನು ರಸ್ತೆಗೆ ಇಳಿಸುವುದು ಕಷ್ಟವಾಗಲಿದೆ. ಖಾಸಗಿ ಪೆಟ್ರೋಲ್ ಬಂಕ್‌ಗಳಿಗೆ ಬಸ್‌ಗಳು ಹೋದರೆ ಸಂಚಾರ ದಟ್ಟಣೆ ಸಮಸ್ಯೆಯೂ ಹೆಚ್ಚಾಗಲಿದೆ. ಪೊಲೀಸ್ ಆಯುಕ್ತರಿಗೂ ಪತ್ರ ಬರೆದಿದ್ದೇವೆ’ ಎಂದು ಹೇಳಿದರು.

ಬಂಕ್‌ಗಳಲ್ಲೂ ಇಂಧನ ಖಾಲಿ

ಸಾರಿಗೆ ಸಂಸ್ಥೆಗಳ ಸಮಸ್ಯೆ ಒಂದೆಡೆಯಾದರೆ, ಪೆಟ್ರೋಲ್ ಬಂಕ್‌ಗಳಿಗೂ ಡೀಸೆಲ್ ಮತ್ತು ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ನಗರದಲ್ಲಿ ಹಲವು ಬಂಕ್‌ಗಳಲ್ಲಿ ಇಂಧನ ಖಾಲಿ ಎಂಬ ಫಲಕಗಳನ್ನು ಹಾಕಲಾಗಿದೆ.

‘ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಕಂಪನಿಗಳು ಬೇಡಿಕೆಗೆ ತಕ್ಕಷ್ಟು ಇಂಧನ ಪೂರೈಕೆ ಮಾಡುತ್ತಿಲ್ಲ. ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ ಎನ್ನುವ ಕಾರಣಕ್ಕೆ ನಮಗೆ ಇಂಧನ ಪೂರೈಕೆ ಮಾಡುತ್ತಿಲ್ಲ’ ಎಂದು ಬಂಕ್ ಮಾಲೀಕರು ಬೇಸರ ವ್ಯಕ್ತಪಡಿಸುತ್ತಾರೆ.

‘ಗ್ರಾಹಕರನ್ನು ವಾಪಸ್‌ ಕಳುಹಿಸಬೇಕಾದ ಸ್ಥಿತಿ ಇದೆ ಎಂದು ಸಮಸ್ಯೆಯನ್ನು ವಿವರಿಸಿದ ಬಳಿಕ ಶನಿವಾರ ಸ್ವಲ್ಪ ಪ್ರಮಾಣದ ಇಂಧನ ಪೂರೈಕೆ ಮಾಡಿದ್ದಾರೆ. ಸೋಮವಾರದಿಂದ ಮತ್ತೆ ಅದೇ ಸ್ಥಿತಿಯಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

ಕಾರ್ಯಾಚರಣೆಗೂ ತೊಡಕು

ಡೀಸೆಲ್‌ಗಾಗಿ ಪೆಟ್ರೋಲ್ ಬಂಕ್‌ಗಳ ಬಳಿ ಬಿಎಂಟಿಸಿ ಬಸ್‌ಗಳು ಕಾದು ನಿಂತರೆ ಬಸ್‌ಗಳ ಕಾರ್ಯಾಚರಣೆ ಮೇಲೂ ಪರಿಣಾಮ ಬೀರಲಿದೆ.

ಕೆಲವು ಡಿಪೊಗಳಲ್ಲಿ ಮೂರು ದಿನಕ್ಕೆ ಸಾಕಾಗುವಷ್ಟು ದಾಸ್ತಾನು ಇದ್ದರೆ, ಇನ್ನೂ ಕೆಲವು ಡಿಪೊಗಳಲ್ಲಿ ಡೀಸೆಲ್ ಖಾಲಿಯಾಗಿದೆ. ಭಾನುವಾರ ಕಾರ್ಯಾಚರಣೆ ಶೇ 20ರಷ್ಟು ಕಡಿಮೆ ಇರಲಿದ್ದು, ತೊಂದರೆ ಕಾಣಿಸುವುದಿಲ್ಲ. ಆದರೆ, ಸೋಮವಾರದ ತನಕ ಸಮಸ್ಯೆ ಪರಿಹಾರವಾಗದಿದ್ದರೆ ಸಂಚಾರ ದಟ್ಟಣೆ ಜತೆಗೆ ಕಾರ್ಯಾಚರಣೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು