ಭಾನುವಾರ, ಜೂನ್ 20, 2021
29 °C
ಕೋವಿಡ್‌ ಕಾರ್ಯಾಚರಣೆ ಬಿರುಸು

ಬೊಮ್ಮನಹಳ್ಳಿ: ಮರಣ ಪ್ರಮಾಣ ತಗ್ಗಿಸುವುದೇ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ಕೊರೊನಾ ಸೋಂಕು ಸಮುದಾಯದೊಳಗೆ ನುಸುಳುವುದನ್ನು ತಡೆಗಟ್ಟಲು ಬೊಮ್ಮನಹಳ್ಳಿ ವಲಯದಲ್ಲಿ ಕಾರ್ಯಾಚರಣೆಯನ್ನು ಬಿರುಸುಗೊಳಿಸಲಾಗಿದೆ.

ಸಂಚಾರಿ ಕೋವಿಡ್ ತಪಾಸಣಾ ವಾಹನಗಳಿಗೆ ಭಾನುವಾರ ಚಾಲನೆ ನೀಡಲಾಯಿತು. ಪ್ರತಿ ವಾರ್ಡ್‌ನಲ್ಲಿ ಎರಡು ವಾಹನಗಳು ಜನರಿರುವಲ್ಲಿ ತೆರಳಿ ತಪಾಸಣೆ ನಡೆಸಲಿವೆ. ಇವು ವಲಯದ ಹದಿನಾರು ವಾರ್ಡ್‌ಗಳಲ್ಲೂ ಕಾರ್ಯಾಚರಿಸಲಿವೆ. ಈ ವಾಹನಗಳ ಮೂಲಕ ದಿನಕ್ಕೆ 1,200 ಜನರ ತಪಾಸಣೆ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಶನಿವಾರ ಹೊಂಗಸಂದ್ರ ವಾರ್ಡ್ ನಲ್ಲಿ 564 ಜನ ತಪಾಸಣೆಗೆ ಒಳಪಟ್ಟವರಲ್ಲಿ 43 ಜನರಿಗೆ ಸೋಂಕು ದೃಢಪಟ್ಟಿದೆ. ಉತ್ತರಹಳ್ಳಿ ವಾರ್ಡ್‌ನಲ್ಲಿ 544 ಜನರನ್ನು ತಪಾಸಣೆ ಮಾಡಲಾಗಿದ್ದು 36 ಸೋಂಕಿತರು ಪತ್ತೆಯಾಗಿದ್ದಾರೆ.

‘ಸೋಂಕು ದೃಢಪಟ್ಟ ಸೋಂಕಿತರು ಯಾವುದೇ ರೋಗ ಲಕ್ಷಣಗಳು ಇಲ್ಲದಾಗಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಆನಂತರ ಹೋಂ ಕ್ವಾರಂಟೈನ್‌ ಮಾಡಲಾಗುತ್ತದೆ. ಸೋಂಕು ಹರಡುವಿಕೆ ತಡೆಯಲು ಇದು ಅನಿವಾರ್ಯ’ ಎಂದು ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣ ಮಾಹಿತಿ ನೀಡಿದರು.

‘ಪ್ರತಿ ವಾರ್ಡ್ ನಲ್ಲಿಯೂ ಸ್ವಯಂಸೇವಕ ತಂಡಗಳು ಆರೋಗ್ಯ ತಪಾಸಣೆ ನಡೆಸಲಿದ್ದು, ರೋಗ ಲಕ್ಷಣಗಳು ಕಂಡುಬಂದಲ್ಲಿ ಅಂಥವರ ಕುರಿತು ವಾಕಿಟಾಕಿ ಮೂಲಕ ವಾರ್ ರೂಂಗೆ ಮಾಹಿತಿ ರವಾನೆ ಆಗಲಿದೆ. ಎಲ್ಲ ಹದಿನಾರು ವಾರ್ ರೂಂಗಳ ಮಾಹಿತಿಯನ್ನು ಪ್ರತಿ 2 ಗಂಟೆಗೆ ಒಮ್ಮೆ ಪ್ರಧಾನ ವಾರ್ ರೂಂಗೆ ಮಾಹಿತಿ ರವಾನೆ ಆಗಲಿದೆ’ ಎಂದು ಕೋವಿಡ್ ಉಸ್ತುವಾರಿ ಮಣಿವಣ್ಣನ್ ಹೇಳಿದರು.

‘ಮರಣ ಪ್ರಮಾಣ ತಗ್ಗಿಸುವುದು ನಮ್ಮ ಮೊದಲ ಆದ್ಯತೆ, ಹೀಗಾಗಿ ಸ್ವಯಂ ಸೇವಕರು ತಪಾಸಣೆಗಾಗಿ ಮನೆಗಳ ಬಳಿ ಬಂದಾಗ ಸಾರ್ವಜನಿಕರು ಸಹಕರಿಸಬೇಕು’ ಎಂದು ಶಾಸಕ ಕೃಷ್ಣಪ್ಪ ಹೇಳಿದರು.

ಕೋಡಿಚಿಕ್ಕನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ರೆಡ್ಡಿ ಮೊಬೈಲ್ ತಪಾಸಣಾ ವಾಹನಗಳಿಗೆ ಚಾಲನೆ ನೀಡಿದರು.

‘ವಾರ್ ರೂಂ ಜತೆಗೆ ಕೋವಿಡ್ ಕಮಾಂಡ್ ರೂಂ, ವೈದ್ಯರ ತಂಡ, ಪ್ರಾಥಮಿಕ ಸಂಪರ್ಕಿತರ ಪತ್ತೆ ತಂಡಗಳು ಸಮಾನಾಂತರವಾಗಿ ಕಾರ್ಯಾಚರಣೆ ನಡೆಸಲಿವೆ, ಸೋಂಕು ತಡೆಗಟ್ಟವಲ್ಲಿ ಪರಿಣಾಮಕಾರಿ ಪ್ರಗತಿ ಸಾಧಿಸುವ ವಿಶ್ವಾಸ ಇದೆ’ ಎಂದು ಬೊಮ್ಮನಹಳ್ಳಿ ವಲಯ ಕೋವಿಡ್ ಉಸ್ತುವಾರಿಯಾಗಿರುವ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು