ಭಾನುವಾರ, ಸೆಪ್ಟೆಂಬರ್ 26, 2021
21 °C
ಹರಿದಾಸ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಮೆಚ್ಚುಗೆ

ಬಡಾವಣೆಗಳಲ್ಲಿ ಯಕ್ಷಗಾನ: ಅರಳುಮಲ್ಲಿಗೆ ಪಾರ್ಥಸಾರಥಿ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಉದ್ಯೋಗವನ್ನರಸಿ ಇಲ್ಲಿಗೆ ಬಂದವರು ತಮ್ಮ ಕಲೆ ಮತ್ತು ಸಂಸ್ಕೃತಿಯನ್ನೂ ವಿಸ್ತರಿಸಿದರು. ಇದರಿಂದಾಗಿ ಯಕ್ಷಗಾನ ಕಲೆಯು ಈಗ ಬೆಂಗಳೂರಿನ ಬಡಾವಣೆಗಳಿಗೆ ಹರಡಿಕೊಳ್ಳುತ್ತಿದೆ’ ಎಂದು ಹರಿದಾಸ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತ್ಯ ವಿಚಾರ ವೇದಿಕೆ ಆನ್‌ಲೈನ್ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಲೇಖಕ ಆನಂದರಾಮ ಉಪಾಧ್ಯ ಅವರ ‘ಯಕ್ಷಪಥ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ದಕ್ಷಿಣ ಕನ್ನಡ, ಉತ್ತರ ಕನ್ನಡದಿಂದ ದುಡಿಮೆಗಾಗಿ ಇಲ್ಲಿಗೆ ವಲಸೆ ಬಂದವರು ಕಲೆಯನ್ನು ಕೂಡ ಬೆಳೆಸುತ್ತಿದ್ದಾರೆ. ಯಕ್ಷಗಾನ ಮತ್ತು ದಾಸ ಸಾಹಿತ್ಯದ ನಡುವೆ ಅವಿನಾಭಾವವಾದ ಸಂಬಂಧವಿದೆ. ಎಂಟು ಸಾಲಿನ ದಾಸರ ಹಾಡುಗಳಿಗೆ ರಾಗ-ತಾಳ, ವೇಷ ಭೂಷಣ ಹಾಕಿದರೆ ವೇದಿಕೆಯ ಮೇಲೆ ಯಕ್ಷಗಾನ ಅರಳಿಕೊಳ್ಳಲಿದೆ. ಆಧುನಿಕತೆಯ ಹೆಸರಿನಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಿರುವಾಗ ಯಕ್ಷಗಾನವು ಇಲ್ಲಿನ ಜನತೆಯನ್ನು ಹೇಗೆ ಕುಣಿಸಿತು ಎನ್ನುವ ಸಂಗತಿಯನ್ನು ಪುಸ್ತಕ ರೂಪದಲ್ಲಿ ದಾಖಲಿಸಿರುವುದು ಶ್ಲಾಘನೀಯ’ ಎಂದರು.

ಬರಹಗಾರ ರವಿ ಮಡೋಡಿ, ‘ಸಾಮಾನ್ಯವಾಗಿ ಯಕ್ಷಗಾನ ಅಂದೊಡೆನೆ ಕರಾವಳಿ ಮತ್ತು ಮಲೆನಾಡಿನ ಸಾಂಸ್ಕೃತಿಕ ವೈಭವ ಕಣ್ಣಮುಂದೆ ಬರುತ್ತದೆ. ಯಕ್ಷಗಾನದ ಪ್ರಭೇದಗುಳು ರಾಜ್ಯದ ವಿವಿಧೆಡೆ ಬೇರು ಮೂಡಿಸಿವೆ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರು ಕೂಡ ಈ ಕಲೆಯನ್ನು ಕಲಿತು, ಪ್ರದರ್ಶನ ನೀಡುತ್ತಿದ್ದಾರೆ. ಪ್ರತಿವರ್ಷ ರಾಜ್ಯದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಗಳಲ್ಲಿ ಶೇ 10ರಷ್ಟು ಪ್ರದರ್ಶನಗಳು ರಾಜಧಾನಿಯಲ್ಲಿಯೇ ನಡೆಯುತ್ತಿವೆ. ಅದರಲ್ಲೂ ಮಳೆಗಾಲದಲ್ಲಿ ರವೀಂದ್ರಕಲಾಕ್ಷೇತ್ರವು ಈ ಕಲೆಗೆ ವೇದಿಕೆ ಕಲ್ಪಿಸುತ್ತಿದೆ’ ಎಂದು ತಿಳಿಸಿದರು.

ಲೇಖಕ ಆನಂದರಾಮ ಉಪಾಧ್ಯ ಮಾತನಾಡಿ, ‘ಯಕ್ಷಗಾನದ ಪ್ರಸಂಗಗಳು ಎಲ್ಲೆಡೆ ಎಲ್ಲರಿಗೂ ಸಿಗಬೇಕಾದರೆ ಡಿಜಿಟಲೀಕರಣ ಪ್ರಕ್ರಿಯೆ ನಡೆಯಬೇಕು. ಈ ಕಾರ್ಯವನ್ನು ಯಕ್ಷವಾಹಿನಿ ಪ್ರತಿಷ್ಠಾನ ಮಾಡುತ್ತಿದೆ. ಈಗಾಗಲೇ 1,600ಕ್ಕೂ ಅಧಿಕ ಯಕ್ಷಗಾನ ಪ‍್ರಸಂಗಗಳು ಡಿಜಿಟಲೀಕರಣಗೊಂಡಿವೆ. ಇವನ್ನು ವಿದೇಶದಲ್ಲಿ ಇರುವವರು ಕೂಡ ಓದಲು ಸಾಧ್ಯವಾಗುತ್ತಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು