ಮಂಗಳವಾರ, ಜನವರಿ 19, 2021
25 °C
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಕೆ

‘ಬ್ರಾಹ್ಮಣರ ಅಭಿವೃದ್ಧಿಗೆ ₹297 ಕೋಟಿ ಅನುದಾನಕ್ಕೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ

ಬೆಂಗಳೂರು: ‘ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ₹297 ಕೋಟಿ ಅನುದಾನ‌ ನೀಡುವಂತೆ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ಹಮ್ಮಿ ಕೊಂಡಿರುವ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಸಾಂದೀಪನಿ ಶಿಷ್ಯವೇತನ ಯೋಜನೆ, ಪುರುಷೋತ್ತಮ ಯೋಜನೆ, ಅರುಂಧತಿ, ಅನ್ನದಾತ, ಮೈತ್ರೇಯಿ ಯೋಜನೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜ.6ರಂದು ಬೆಳಿಗ್ಗೆ 10ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಚಾಲನೆ ನೀಡಲಿದ್ದಾರೆ’ ಎಂದು ಹೇಳಿದರು.

‘500 ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಲಾಗುವುದು. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಪ್ರತಿ ಜಿಲ್ಲೆಯ 3 ವಿಪ್ರ ವಿದ್ಯಾರ್ಥಿಗಳಿಗೆ ‘ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ’ ಯೋಜನೆಯಡಿ ತಲಾ ₹15 ಸಾವಿರ, ₹10 ಸಾವಿರ, ₹5 ಸಾವಿರ ವಿದ್ಯಾರ್ಥಿವೇತನ ನೀಡಲಾಗುವುದು’ ಎಂದರು.

‘ಚಾಣಕ್ಯ ಆಡಳಿತ ತರಬೇತಿ ಯೋಜನೆ’ಯಡಿ ಬ್ರಾಹ್ಮಣ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ನೀಡಲಾಗುವುದು. ಉನ್ನತ ಶಿಕ್ಷಣ ಪೂರೈಸುವ 7,500 ವಿಪ್ರ ವಿದ್ಯಾರ್ಥಿಗಳಿಗೆ ಸಾಂದೀಪನಿ ಶಿಷ್ಯವೇತನ ಯೋಜನೆಯಡಿ ಆರ್ಥಿಕ ನೆರವು ನೀಡ ಲಾಗುವುದು. ಈ ಸಂಬಂಧ ಅರ್ಜಿ ಆಹ್ವಾನಿಸಲಾಗಿದ್ದು, ಇದಕ್ಕಾಗಿ ₹14 ಕೋಟಿ ಮೀಸಲಿಡಲಾಗಿದೆ’ ಎಂದು ವಿವರಿಸಿದರು.

‘ಅರುಂಧತಿ ಯೋಜನೆಯಡಿ ಬಡ ಹೆಣ್ಣುಮಕ್ಕಳ ಮದುವೆಗೆ ₹25 ಸಾವಿರ ನೀಡಲಾಗುವುದು. 5 ಎಕರೆ ಗಿಂತ ಕಡಿಮೆ ಜಮೀನು ಉಳ್ಳವ ರಿಗೆ ಅನ್ನದಾತ ಯೋಜನೆಯಡಿ ಬೋರ್‌ವೆಲ್‌, ಟ್ರಾಕ್ಟರ್ ಖರೀದಿ ಮತ್ತು ಹೈನುಗಾರಿಕೆಗೆ ಧನಸಹಾಯ ನೀಡಲಾಗುವುದು. ಅರ್ಚಕ, ಪುರೋ ಹಿತರನ್ನು ಮದುವೆಯಾಗುವವರಿಗೆ ಮೈತ್ರೇಯಿ ಯೋಜನೆಯಡಿ ₹3 ಲಕ್ಷ ಬಾಂಡ್ ನೀಡಲಾಗುವುದು. ಬ್ರಾಹ್ಮಣರ ಸಮಸ್ಯೆಗಳನ್ನು ಆಲಿಸಲು ಜಿಲ್ಲೆಗಳಲ್ಲಿ ಸಹಾಯವಾಣಿ ಕೇಂದ್ರ ತೆರೆಯಲು ಚಿಂತಿಸಲಾಗಿದೆ’ ಎಂದು ನುಡಿದರು.

ಮಂಡಳಿಯ ನಿರ್ದೇಶಕರಾದ ಭಾನುಪ್ರಕಾಶ್ ಶರ್ಮ, ಬಿ.ಎಸ್.ರಾಘವೇಂದ್ರ ಭಟ್, ವತ್ಸಲಾ ನಾಗೇಶ್, ಪವನ್ ಕುಮಾರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು