ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗಸೂಚಿ ಉಲ್ಲಂಘನೆ: ಅಪಾಯ ಆಹ್ವಾನಿಸುತ್ತಿದೆ ನೆಲದೊಳಗಿನ ವಿದ್ಯುತ್‌ ಕೇಬಲ್

ಕೇಬಲ್ ಅಳವಡಿಕೆ ವೇಳೆ ಸುರಕ್ಷತೆ ಕಡೆಗಣನೆ
Last Updated 20 ಡಿಸೆಂಬರ್ 2021, 20:14 IST
ಅಕ್ಷರ ಗಾತ್ರ

ಬೆಂಗಳೂರು: ಕಂಬ ಕಂಬಗಳ ನಡುವೆ ಜೋತಾಡುತ್ತಿದ್ದ ವಿದ್ಯುತ್ ಕೇಬಲ್‌ಗಳು ಇನ್ನು ನೆಲದೊಳಗೆ ಸೇರಿಕೊಳ್ಳಲಿವೆ... ಇಡೀ ಬೆಂಗಳೂರು ಸಿಂಗಪುರದಂತಾಗಲಿದೆ... ಎಂದೆಲ್ಲಾ ಕನಸು ಬಿತ್ತಿದ್ದ ಬೆಸ್ಕಾಂ, ಕಳಪೆ ಕಾಮಗಾರಿ ಮೂಲಕ ಅಪಾಯವನ್ನು ತಂದೊಡ್ಡಿದೆಯೇ ಎಂಬ ಆತಂಕ ಜನರನ್ನು ಕಾಡುತ್ತಿದೆ.

ಬೆಂಗಳೂರು ನಗರದಲ್ಲಿ ಕಂಬಗಳಲ್ಲಿನ ತಂತಿಗಳ ಮೂಲಕ ವಿದ್ಯುತ್ ಸರಬರಾಜು ಮಾಡುವುದನ್ನು ತಪ್ಪಿಸಿ ನೆಲದೊಳಗೆ ಕೇಬಲ್‌ಗಳನ್ನು ತೂರಿಸುವ ಯೋಜನೆಯನ್ನು 2018–19ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಘೋಷಣೆ ಮಾಡಿತ್ತು. ಬೆಸ್ಕಾಂ ವ್ಯಾಪ್ತಿಯಲ್ಲಿನ 63 ಉಪ ವಿಭಾಗಗಳ ಪೈಕಿ 52 ಉಪ ವಿಭಾಗಗಳಲ್ಲಿ 11 ಕೆ.ವಿ ವಿದ್ಯುತ್ ಮೇಲ್ಮಾರ್ಗಗಳನ್ನು ನೆಲದೊಳಗೆ ಹುದುಗಿಸುವ ಕಾಮಗಾರಿಯನ್ನು ಬೆಸ್ಕಾಂ ಆರಂಭಿಸಿದೆ.

4 ಹಂತಗಳ, ₹5,031.65 ಕೋಟಿಯ ಈ ಯೋಜನೆಯನ್ನು 27 ಪ್ಯಾಕೇಜ್‌ಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಕೆಲವೆಡೆ ಕಾಮಗಾರಿ ಕಳಪೆಯಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಬೆಸ್ಕಾಂ ಜಾಲಹಳ್ಳಿ ವಿಭಾಗದ ವಿದ್ಯಾರಣ್ಯಪುರ, ಕೊಡಿಗೇಹಳ್ಳಿ, ವಿರೂಪಾಕ್ಷಾಪುರ, ಎಂ.ಎಸ್. ಪಾಳ್ಯದಲ್ಲಿ ಕಾಮಗಾರಿ ಕಳಪೆ ಯಾಗಿದೆ ಎಂದು ಸ್ಥಳೀಯರು ಬೆಸ್ಕಾಂಗೆ ದೂರು ನೀಡಿದ್ದಾರೆ.

‘ಮಾರ್ಗಸೂಚಿ ಪ್ರಕಾರ ಓಪನ್ ಟ್ರಂಚ್ ವಿಧಾನದಲ್ಲಿ 1 ಮೀಟರ್ ಆಳದ ಕಾಲುವೆ ಅಗೆದು 245 ಮಿಲಿ ಮೀಟರ್ ಮರಳು ತುಂಬಿಸಬೇಕು. ಅದರ ಮಧ್ಯದಲ್ಲಿ ಕೇಬಲ್ ಇರುವಂತೆ ನೋಡಿಕೊಳ್ಳಬೇಕು. ಕೇಬಲ್ ಇರುವ ಜಾಗದಲ್ಲಿ ಮೇಲ್ಭಾಗದಲ್ಲಿ ಟೈಲ್ಸ್‌ಗಳನ್ನು ಹೊದಿಸಬೇಕು. ಬಳಿಕ ಅದರ ಮೇಲೆ ಮಣ್ಣು ಮುಚ್ಚಬೇಕು. ಆದರೆ, ವಿದ್ಯಾರಣ್ಯಪುರದ ಕೆಲವೆಡೆ ಒಂದರಿಂದ ಒಂದೂವರೆ ಅಡಿಯಷ್ಟೇ ಆಳದಲ್ಲೇ ಕೇಬಲ್ ಅಳವಡಿಸಲಾಗಿದೆ’ ಎಂದು ಸ್ಥಳೀಯರು ದೂರಿದ್ದಾರೆ.

‘ಅಡ್ಡ ಕೊರೆಯುವಿಕೆ (ಎಚ್‌ಡಿಡಿ) ವಿಧಾನದ ಕಾಮಗಾರಿಯಲ್ಲೂ ಲೋಪಗಳಿವೆ. ಕನಿಷ್ಠ 0.9 ಮೀಟರ್ ಆಳದಲ್ಲಿ ಕೇಬಲ್ ಅಳವಡಿಕೆಯಾಗಬೇಕು. ಆದರೆ, ಈಗ ಅಳವಡಿಕೆ ಮಾಡಿರುವುದರಲ್ಲಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವ್ಯತ್ಯಾಸ ಇದೆ. ಆದ್ದರಿಂದ ನಿರ್ವಹಣೆ ಕ್ಲಿಷ್ಟಕರವಾಗಲಿದೆ’ ಎಂದು ಆರೋಪಿಸುತ್ತಾರೆ.

‘ಎರಡು ಕೇಬಲ್ ಅಳವಡಿಸುವಾಗ ಎರಡರ ನಡುವೆ 330 ಮಿಲಿ ಮೀಟರ್ ಅಂತರ ಇರಬೇಕು. ಮೂರು ಕೇಬಲ್‌ ಅಳವಡಿಸುವಾಗ ತಲಾ 280 ಮಿಲಿ ಮೀಟರ್ ಅಂತರ ಇರಲೇಬೇಕು. ಕೇಬಲ್‌ಗಳ ನಡುವೆ ಮರಳು ಮತ್ತು ಟೈಲ್ಸ್ ಅಳವಡಿಸಲೇಬೇಕು ಎಂದು ಮಾರ್ಗಸೂಚಿ ಹೇಳುತ್ತದೆ. ಆದರೆ, ಕೇಬಲ್‌ಗಳನ್ನು ಒಟ್ಟೊಟ್ಟಿಗೇ ಜೋಡಿಸಿ ಭೂಮಿಯಲ್ಲಿ ಹೂಳಲಾಗುತ್ತಿದೆ. ಕಾರಣಾಂತರದಿಂದ ಒಂದು ಕೇಬಲ್ ಹಾಳಾದರೆ, ಜೊತೆಯಲ್ಲಿರುವ ಕೇಬಲ್‌ ಕೂಡ ಹಾಳಾಗುತ್ತದೆ. ಜೋಡಣೆ ಕೆಲಸಕ್ಕೆ ಮತ್ತೆ ಕನಿಷ್ಠ ₹50 ಸಾವಿರ ಖರ್ಚು ಮಾಡಬೇಕಾಗುದೆ’ ಎಂದು ವಿದ್ಯುತ್ ಗುತ್ತಿಗೆದಾರರೊಬ್ಬರು ವಿವರಿಸಿದರು.

ವಿದ್ಯಾರಣ್ಯಪುರದಲ್ಲಿ ಅಳವಡಿಕೆಯಾಗಿರುವ ಕೇಬಲ್ ಕಾಮಗಾರಿಯನ್ನು ‘ಪ್ರಜಾವಾಣಿ’ ತಂಡ ವೀಕ್ಷಣೆ ಮಾಡಿದಾಗ ಬಾಕ್ಸ್ ಚರಂಡಿ ಹಾದು ಹೋಗಿರುವ ಕಡೆ ‌ರಸ್ತೆಯೇ ಮೇಲೆಯೇ ಎಚ್‌ಟಿಯುಜಿ ಕೇಬಲ್ ಅಳವಡಿಕೆ ಮಾಡಿರುವುದು ಕಂಡು ಬಂತು. ಟ್ರಾನ್ಸ್‌ಫಾರ್ಮರ್‌ಗಳನ್ನು ಪಾದಚಾರಿ ಮಾರ್ಗಗಳ ಮೇಲೆ ಅಳವಡಿಸಬಾರದು ಎಂದು ಹೈಕೋರ್ಟ್‌ ಪದೇ ಪದೇ ಹೇಳುತ್ತಲೇ ಇದೆ. ಹೊಸದಾಗಿ ಅಳವಡಿಕೆ ಮಾಡುತ್ತಿರುವ ಆರ್‌ಎಂಯುಗಳನ್ನು(ರಿಂಗ್ ಮೈನ್ ಯುನಿಟ್‌) ಪಾದಚಾರಿ ಮಾರ್ಗದಲ್ಲೇ ಅಳವಡಿಕೆ ಮಾಡಿರುವುದು ಗೋಚರಿಸಿತು.

ಅಪಾಯ ಹೇಗೆ?
ರಸ್ತೆ ಬದಿಯಲ್ಲೇ ಕೇಬಲ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಅದೇ ಮಾರ್ಗದಲ್ಲಿ ಹಲವು ನಾಗರಿಕ ಸೌಲಭ್ಯ ಒದಗಿಸುವ ಪೈಪ್‌ಲೈನ್‌ಗಳೂ ಹಾದು ಹೋಗಿವೆ.

ಅವುಗಳ ದುರಸ್ತಿಗೆ ಮುಂದಾಗುವ ಕಾರ್ಮಿಕರು ಸಲಾಕೆಯಿಂದ ಒಮ್ಮೆ ಅಗೆದರೂ 11 ಕೆ.ವಿ ವಿದ್ಯುತ್ ಹಾದು ಹೋಗುತ್ತಿರುವ ಮಾರ್ಗದಿಂದ ವಿದ್ಯುತ್ ಪ್ರವಹಿಸಿ ಸಾವು ಸಂಭವಿಸುವ ಅಪಾಯ ಇದೆ ಎಂಬುದು ಸ್ಥಳೀಯರ ಆತಂಕ.

ಫಲಕಗಳನ್ನು ಅಳವಡಿಸಿಯೇ ಇಲ್ಲ
ಎಚ್‌ಟಿಯುಜಿ ಕೇಬಲ್ ಹಾದು ಹೋಗಿರುವ ಮಾರ್ಗದಲ್ಲಿ ಎಲ್ಲಿಯೂ ಸುರಕ್ಷತಾ ಫಲಕಗಳನ್ನು ಅಳವಡಿಸಿಯೇ ಇಲ್ಲ. ಈ ಕೇಬಲ್ ಅಳವಡಿಕೆಯ ಬಹುಪಾಲು ಜಾಗದಲ್ಲಿ ಅನಿಲ ಪೂರೈಕೆ ಕೊಳವೆ ಮಾರ್ಗ ಕೂಡ ಹಾದು ಹೋಗಿದೆ. ಮುಂದಿನ ದಿನಗಳಲ್ಲಿ ಭಾರಿ ಅನುಹುತ ಸಂಭವಿಸುವ ಸಾಧ್ಯತೆ ಇದೆ.

ಫಲಕ ಅಳವಡಿಕೆ ಮಾಡದಿದ್ದರೆ ಅದೇ ಜಾಗವನ್ನು ಬಿಬಿಎಂಪಿ ಅಥವಾ ಜಲ ಮಂಡಳಿಯಿಂದ ಕಾಮಗಾರಿ ಆರಂಭಿಸಿದರೆ 11 ಕೆ.ವಿ ವಿದ್ಯುತ್ ಇರುವ ಕೇಬಲ್‌ಗಳನ್ನು ಮೀಟಿ ಅಪಾಯಕ್ಕೆ ಸಿಲುಕುವ ಆತಂಕವೂ ಇದೆ ಎನ್ನುತ್ತಾರೆ ಸ್ಥಳೀಯರು.

ಸಚಿವರಿಗೆ ದೂರು
ಕಳಪೆ ಕಾಮಗಾರಿ ಮತ್ತು ಅದರಿಂದ ಎದುರಾಗಲಿರುವ ಸಮಸ್ಯೆ ಬಗ್ಗೆ ಕೊಡಿಗೇಹಳ್ಳಿಯ ಬಿ. ಮುನೇಗೌಡ ಅವರು ಇಂಧನ ಸಚಿವ ಸುನಿಲ್‌ಕುಮಾರ್ ಅವರಿಗೆ ದೂರು ನೀಡಿದ್ದಾರೆ.

‘ಜಾಲಹಳ್ಳಿ ವಿಭಾಗದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿರುವುದು ಉದಾಹರಣೆಯಷ್ಟೇ. ಇಡೀ ಬೆಂಗಳೂರಿನಲ್ಲಿ ಇದೇ ರೀತಿ ಕಾಮಗಾರಿ ನಡೆಯುತ್ತಿದೆ. ನೆಲದಡಿ ಕೇಬಲ್ ಅಳವಡಿಕೆ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ’ ಎಂದು ಅವರು ದೂರಿದರು.

ಎಲ್ಲಾ ವಿಭಾಗದ ಕೆಲಸವನ್ನು ಸಿಸಿಬಿ, ಸಿಐಡಿ ಮತ್ತು ಲೋಕಾಯುಕ್ತಕ್ಕೆ ವಹಿಸಿ ತನಿಖೆ ಮಾಡಬೇಕು. ಇಡೀ ಬೆಸ್ಕಾಂ ವ್ಯಾಪ್ತಿಯ ಪ್ರತಿಯೊಂದ ಕೆಲಸದ ಸ್ಥಳ ಪರಿಶೀಲನೆ ಮಾಡಿ ಗುಣಮಟ್ಟದ ಬಗ್ಗೆ ವರದಿ ಪಡೆಯುವ ತನಕ ಬಿಲ್‌ಗಳನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.

‘ಜಾಲಹಳ್ಳಿ ವಿಭಾಗದ ಕಾಮಗಾರಿಯನ್ನು ಏಷಿಯನ್ ಫ್ಯಾಬ್ ಟೆಕ್ ಲಿಮಿಟೆಡ್‌ ಕಾಮಗಾರಿ ನಿರ್ವಹಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ₹1,848 ಕೋಟಿ ಮೊತ್ತದ ಗುತ್ತಿಗೆಯನ್ನು ಅದೇ ಕಂಪನಿಗೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸಾವಿರಾರು ಜನ ವಿದ್ಯುತ್ ಗುತ್ತಿಗೆದಾರರಿದ್ದಾರೆ. ₹20 ಕೋಟಿ ಮೊತ್ತದ ಕಾಮಗಾರಿಗಳನ್ನು ಒಗ್ಗೂಡಿಸಿ ಒಬ್ಬರಿಗೇ ನೀಡಲಾಗಿದೆ. ಈ ಬಗ್ಗೆಯೂ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.

ತಪಾಸಣೆ ನಡೆಸಿ: ಸದಾನಂದ ಗೌಡ
ಕೇಬಲ್ ಅಳವಡಿಕೆ ಕಾಮಗಾರಿಯಲ್ಲಿನ ಲೋಪದ ಬಗ್ಗೆ ತಪಾಸಣೆ ನಡೆಸುವಂತೆ ಸಂಸದ ಡಿ.ವಿ. ಸದಾನಂದಗೌಡ ಅವರು ಇಂಧನ ಸಚಿವ ಸುನೀಲ್‌ಕುಮಾರ್ ಮತ್ತು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರಿಗೆ ಪತ್ರ ಬರೆದಿದ್ದಾರೆ. ತಪಾಸಣೆ ನಡಸಿ ವರದಿ ಬರುವ ತನಕ ಗುತ್ತಿಗೆದಾರರಿಗೆ ಬಾಕಿ ಮೊತ್ತ ಪಾವತಿಸಬಾರದು ಎಂದು ತಿಳಿಸಿದ್ದಾರೆ.

*
ಬೆಂಗಳೂರಿನಲ್ಲಿ 6 ಸಾವಿರ ಕಿಲೋ ಮೀಟರ್‌ನಲ್ಲಿ ಕೇಬಲ್ ಅಳವಡಿಕೆಯಾಗುತ್ತಿದೆ. ಕೆಲ ಪ್ರದೇಶದಲ್ಲಿನ ಕಳಪೆ ಕಾಮಗಾರಿ ಬಗ್ಗೆ ದೂರು ಬಂದಿದೆ. ಯೋಜನಾ ನಿರ್ವಹಣಾ ಸಲಹೆಗಾರರಿಂದ(ಪಿಎಂಸಿ) ವರದಿ ಪಡೆಯಲಾಗುವುದು. ಲೋಪವಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು.

–ರಾಜೇಂದ್ರ ಚೋಳನ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT