ಸೋಮವಾರ, ನವೆಂಬರ್ 29, 2021
20 °C
ಆಮೆ ವೇಗದ ಕಾಮಗಾರಿ: ಕೊಂಕಣ ಸುತ್ತಿ ಮೈಲಾರ ಸೇರುವ ಕಿರಿಕಿರಿ

ಬ್ರ್ಯಾಂಡ್‌ ಬೆಂಗಳೂರು: ಸುತ್ತು ಬಳಸು ಹಾದಿ– ಸವಾರರ ಜೇಬಿಗೆ ಕತ್ತರಿ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಒಂದೆಡೆ ಪೆಟ್ರೋಲ್ ಮತ್ತು ಡೀಸೆಲ್ ದರ ಶರವೇಗದಲ್ಲಿ ಏರುತ್ತಿದ್ದರೆ, ಅದಕ್ಕೆ ತದ್ವಿರುದ್ಧವಾಗಿ ನಗರದ ಅಭಿವೃದ್ಧಿ ಕಾಮಗಾರಿಗಳು ಆಮೆ ವೇಗದಲ್ಲಿ ನಡೆಯುತ್ತಿವೆ. ಕಾಮಗಾರಿಗಳ ಸಲುವಾಗಿ ವರ್ಷಾನುಗಟ್ಟಲೆಯಿಂದ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಕೊಂಕಣ ಸುತ್ತಿ ಮೈಲಾರ ಸೇರಬೇಕಾದ ಪಾಡು ವಾಹನ ಸವಾರರದ್ದು. ಸುತ್ತಿ ಬಳಸಿ ಸಂಚರಿಸಬೇಕಾದ ಅನಿವಾರ್ಯ ಸ್ಥಿತಿ ವಾಹನ ಸವಾರರ ಕಿಸೆಗೂ ಕತ್ತರಿ ಬೀಳುವಂತೆ ಮಾಡುತ್ತಿದೆ.

ಶಿವಾನಂದ ವೃತ್ತ, ಅರಮನೆ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ಗೂಡ್‌ಶೆಡ್ ರಸ್ತೆಗಳಲ್ಲಿ ವಾಹನ ಸವಾರರು ಅನುಭವಿಸುತ್ತಿರುವ ಸಮಸ್ಯೆಗಳು ಇದಕ್ಕೆ ಉದಾಹರಣೆಗಳು. ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹109 ದಾಟಿದ್ದರೆ, ಡೀಸೆಲ್ ದರ ಪ್ರತಿ ಲೀಟರ್‌ಗೆ ₹100ರ ಗಡಿ ದಾಟಿದೆ. ತಮ್ಮದಲ್ಲದ ತಪ್ಪಿಗೆ ವಾಹನ ಸವಾರರು ದಿನವೂ ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ಹೆಚ್ಚುವರಿ ವೆಚ್ಚ ಮಾಡುವ ಮೂಲಕ ದಂಡ ತೆರುತ್ತಿದ್ದಾರೆ.

ಶಿವಾನಂದ ವೃತ್ತದಲ್ಲಿ ಉಕ್ಕಿನ ಸೇತುವೆ ಕಾಮಗಾರಿ ಆರಂಭವಾಗಿ ಐದು ವರ್ಷಗಳೇ ಕಳೆದಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಶಿವಾನಂದ ವೃತ್ತದಲ್ಲಿ ಕಾಮಗಾರಿ ಆರಂಭವಾಗಿತ್ತು. ಇದಾದ ನಂತರ ಮೂರು ಸರ್ಕಾರಗಳು ಬದಲಾದರೂ ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿಗೆ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ರೇಸ್ ಕೋರ್ಸ್‌  ಪ್ರವೇಶ ದ್ವಾರದ ರಸ್ತೆ ಕಡೆಯಿಂದ ಶಿವಾನಂದ ವೃತ್ತಕ್ಕೆ ಬರುವ ಮಾರ್ಗವನ್ನು ಬಂದ್ ಮಾಡಲಾಗಿದೆ. ಹಾಗಾಗಿ ಬಸವೇಶ್ವರ ವೃತ್ತದ ಕಡೆಯಿಂದ ಬರುವ ವಾಹನಗಳು ರೇಸ್‌ಕೋರ್ಸ್‌ ರಸ್ತೆಯಲ್ಲೇ ಮುಂದುವರಿದು ಕುಮಾರಕೃಪಾ ರಸ್ತೆಯ ಕಡೆ ತಿರುವು ಪಡೆದುಕೊಂಡು ಶಿವಾನಂದ ವೃತ್ತಕ್ಕೆ ಬರಬೇಕು.

ಬಸವೇಶ್ವರ ವೃತ್ತದಿಂದ ನೇರವಾಗಿ ಶಿವಾನಂದ ವೃತ್ತಕ್ಕೆ 950 ಮೀಟರ್ ದೂರವಿದೆ. ಆದರೆ, ಕಾಮಗಾರಿ ನಡೆಯುತ್ತಿರುವುದರಿಂದ ಒಂದೂವರೆ ಕಿಲೊಮೀಟರ್ ಸುತ್ತಾಡಿ ಬರಬೇಕಿದೆ. ಶಿವಾನಂದ ವೃತ್ತದಿಂದ ಬಸವೇಶ್ವರ ವೃತ್ತಕ್ಕೆ ಕುಮಾರಕೃಪಾ ರಸ್ತೆ ಮತ್ತು ಸ್ಯಾಂಕಿ ಟ್ಯಾಂಕ್ ರಸ್ತೆ ಮೂಲಕ ಸಾಗಲು 2.2 ಕಿ.ಮೀ. ಕ್ರಮಿಸಬೇಕು.

ಹೆಚ್ಚಿನ ದೂರ ಕ್ರಮಿಸುವ ಪರ್ಯಾಯ ಮಾರ್ಗಗಳ ಮೇಲೆ ಹೆಚ್ಚುವರಿ ಸಂಚಾರ ಒತ್ತಡ ಹೇರಲಾಗುತ್ತಿದೆ. ಅದರಿಂದ ಉಂಟಾಗುವ ದಟ್ಟಣೆಯಿಂದಲೂ ನಿಧಾನವಾಗಿ ಸಂಚರಿಸಬೇಕು. ಅದಕ್ಕೆ ಖರ್ಚಾಗುವ ಹೆಚ್ಚುವರಿ ಇಂಧನದ ಹೊರೆಯನ್ನೂ ಸವಾರ ಹೊರಬೇಕು.

‘ನಮ್ಮದೇ ತೆರಿಗೆ ಹಣದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳು ಅಧಿಕಾರ ನಡೆಸುವವರ ಬೇಜವಾಬ್ದಾರಿತನದಿಂದ ವಿಳಂಬ ಆಗುತ್ತಿವೆ. ವಿಪರ್ಯಾಸವೆಂದರೆ ಇದಕ್ಕೂ ನಾವೇ ದಂಡ ತೆರಬೇಕಾಗಿದೆ. ಇಂಧನ ದರದ ಮೇಲೆ ಹಿಡಿತ ಸಾಧಿಸದ ಸರ್ಕಾರ, ಮಧ್ಯಮ ವರ್ಗದ ಜನರ ಜೇಬಿಗೆ ಈ ರೀತಿಯಾಗಿ
ಪರೋಕ್ಷ ಕತ್ತರಿಯನ್ನೂ ಹಾಕುತ್ತಿದೆ’ ಎಂದು ವಾಹನ ಸವಾರ ಸುಧೀಂದ್ರ ಹಿಡಿಶಾಪ ಹಾಕಿದರು.

‘ರಸ್ತೆ ಬಂದ್ ಮಾಡಿ ನಿರ್ವಹಿಸುತ್ತಿರುವ ಕಾಮಗಾರಿಗಳಿಂದ ವಾಹನ ಸವಾರರಿಗೆ

ಸಮಸ್ಯೆ ಆಗುತ್ತಿರುವುದು ಒಂದು ಕಡೆಯಾದರೆ, ಕಾಮಗಾರಿ ಸಲುವಾಗಿ ರಸ್ತೆ ಕಿರಿದು ಮಾಡಿದ್ದರಿಂದ ಸವಾರರು ವರ್ಷಗಟ್ಟಲೆಯಿಂದ ಸಂಚಾರ ದಟ್ಟಣೆಯ ಕಿರಿಕಿರಿ ಅನುಭವಿಸಬೇಕಾದ ಪ್ರಮೇಯಗಳು ಅನೇಕ ಕಡೆ ಎದುರಾಗುತ್ತಿವೆ. ದಟ್ಟಣೆ ಸೀಳಲು ಜನ ತಮ್ಮ ಸಮಯದ ಜೊತೆಗೆ ಹೆಚ್ಚುವರಿ ಇಂಧನವನ್ನೂ ಖರ್ಚು ಮಾಡಬೇಕಾದ ಅನಿವಾರ್ಯ ಸೃಷ್ಟಿಸಲಾಗಿದೆ’ ಎಂದು ಸವಾರ ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಬ್ಯಾಂಕ್‌ ವೃತ್ತ ಬಲುದೂರ

ಮೆಜೆಸ್ಟಿಕ್, ಬಸವೇಶ್ವರ ವೃತ್ತದ ಕಡೆಯಿಂದ ಮೈಸೂರು ಬ್ಯಾಂಕ್ ವೃತ್ತ ತಲುಪಲು ಈಗ ಹಿಂದಿಗಿಂತ ಹೆಚ್ಚು ದೂರ ಕ್ರಮಿಸಬೇಕಾಗಿದೆ. ಅರಮನೆ ರಸ್ತೆಯ ವೈಟ್‌ ಟಾಪಿಂಗ್ ಕಾಮಗಾರಿ ಆರಂಭವಾಗಿ ವರ್ಷಗಳೇ ಕಳೆದಿವೆ. ಬಸವೇಶ್ವರ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತಕ್ಕೆ ಬರುವ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.

ಸ್ವಾತಂತ್ರ್ಯ ಉದ್ಯಾನದಿಂದ ಮೈಸೂರು ಬ್ಯಾಂಕ್‌ ವೃತ್ತಕ್ಕೆ 1 ಕಿ.ಮೀ. ದೂರವಿದೆ. ಈಗ ಕೆ.ಆರ್‌. ವೃತ್ತದವರೆಗೆ ಸಾಗಿ ಸಿಟಿ ಸಿವಿಲ್ ಕೋರ್ಟ್‌ ಮುಂದಿನ ರಸ್ತೆಯಲ್ಲಿ (ಪೋಸ್ಟ್ ಆಫೀಸ್ ರಸ್ತೆ) ಮೈಸೂರು ಬ್ಯಾಂಕ್ ವೃತ್ತಕ್ಕೆ ಬರಬೇಕಿದೆ. ಇದಕ್ಕೆ 1.5 ಕಿ.ಮೀ ಕ್ರಮಿಸಬೇಕು. ನೃಪತುಂಗ ರಸ್ತೆ, ಕೆ.ಜಿ.ರಸ್ತೆ ಮಾರ್ಗದಲ್ಲಿ ಬಂದರೆ 2.5 ಕಿಲೋ ಮೀಟರ್ ದೂರವಾಗುತ್ತದೆ.

ಕಾಳಿದಾಸ ಮಾರ್ಗದಲ್ಲಿ ಸಾಗಿ ಬಿವಿಕೆ ಅಯ್ಯಂಗಾರ್ ರಸ್ತೆಗೆ ತಲುಪಿ, ಅಲ್ಲಿಂದ ಚಿಕ್ಕಪೇಟೆಯ ಹಾಸ್ಪಿಟಲ್ ರಸ್ತೆಗೆ ಎಡ ತಿರುವು ಪಡೆದು ಅವೆನ್ಯೂ ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತಕ್ಕೆ ಬರಲು 1.3 ಕಿ.ಮೀ ಕ್ರಮಿಸಬೇಕು. ಈ ಮಾರ್ಗ ಕಿರಿದಾದ ರಸ್ತೆಗಳನ್ನು ಹೊಂದಿದ್ದು, ದ್ವಿಚಕ್ರ ವಾಹನ ಸವಾರರಿಗಷ್ಟೇ ಅನುಕೂಲ. ಬೇರೆ ವಾಹನ ಸವಾರರು ಬೇರೆ ರಸ್ತೆಗಳನ್ನೇ ಹುಡುಕಿಕೊಳ್ಳಬೇಕು. ‌

ಇನ್ನು ಗಾಂಧಿನಗರದ ಕಾಳಿದಾಸ ವೃತ್ತದಿಂದ ಅರಮನೆ ರಸ್ತೆಗೆ ಬರಲು ಇರುವ ರಸ್ತೆಯನ್ನೂ ಬಂದ್ ಮಾಡಲಾಗಿದೆ. ಅವರು ಶೇಷಾದ್ರಿ ರಸ್ತೆಗೆ ಹೋದರೆ ಮೌರ್ಯ ವೃತ್ತಕ್ಕೆ ಹೋಗಿ ಯೂ–ಟರ್ನ್ ಪಡೆದುಕೊಂಡು ಕೆ.ಆರ್. ವೃತ್ತಕ್ಕೆ ಬರಬೇಕಾದ ಅನಿವಾರ್ಯ ಇದೆ.

ಗೂಡ್‌ಶೆಡ್ ರಸ್ತೆಯಲ್ಲೂ ಪಡಿಪಾಟಲು

ಸಿಮೆಂಟ್ ರಸ್ತೆ ನಿರ್ಮಾಣಕ್ಕಾಗಿ ಗೂಡ್‌ಶೆಡ್ ರಸ್ತೆಯಲ್ಲಿ (ಟಿಸಿಎಂ ರಾಯನ್ ರಸ್ತೆ) ಸಂಚಾರ ಬಂದ್ ಮಾಡಲಾಗಿದೆ. ಮೈಸೂರು ರಸ್ತೆಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಹತ್ತಿದರೆ ಗೂಡ್‌ಶೆಡ್‌ ರಸ್ತೆಗೆ ಇಳಿದು ಮೆಜೆಸ್ಟಿಕ್ ತಲುಪಲು 2 ಕಿಲೋ ಮೀಟರ್ ದೂರದ ಸುಲಭವಾದ ಮಾರ್ಗ. ಈಗ ರಸ್ತೆಯಲ್ಲಿ ಕಾಮಗಾರಿ ನಿರ್ವಹಿಸಲು ಇದನ್ನು ಬಂದ್ ಮಾಡಲಾಗಿದೆ.

ಮೇಲ್ಸೇತುವೆ ಹತ್ತುವ ಮುನ್ನವೇ ಸರ್ವೀಸ್ ರಸ್ತೆಯಲ್ಲಿ ಸಾಗಿ ಟ್ಯಾಂಕ್‌ ಬಂಡ್ ರಸ್ತೆಗೆ ಎಡತಿರುವು ಪಡೆದು ಬಿನ್ನಿಮಿಲ್ ದಾಟಿದ ಬಳಿಕ ಬಲ ತಿರುವು ಪಡೆದು ಮತ್ತೆ ಗೂಡ್‌ಶೆಡ್ ರಸ್ತೆ ಮೂಲಕ ಹಾದು ಮೆಜೆಸ್ಟಿಕ್ ತಲುಪಲು 3 ಕಿ.ಮೀ. ಕ್ರಮಿಸಬೇಕು.

ಗೂಡ್‌ಶೆಡ್ ರಸ್ತೆ ಬಂದ್ ಆಗಿರುವ ಅರಿವಿಲ್ಲದವರು ಮೇಲ್ಸೇತುವೆ ಹತ್ತಿದರೆ ಪುರಭವನ, ಕೆ.ಜಿ. ರಸ್ತೆ ಮೂಲಕ 5.8 ಕಿ.ಮೀ. ಕ್ರಮಿಸಿ ಮೆಜೆಸ್ಟಿಕ್ ತಲುಪಬೇಕಾಗುತ್ತದೆ.

ಎಂ.ಜಿ. ರಸ್ತೆ–ಕಮರ್ಷಿಯಲ್ ಸ್ಟ್ರೀಟ್ ತಪ್ಪಿದ ಕೊಂಡಿ

ಎಂ.ಜಿ. ರಸ್ತೆಗೆ ಹೊಂದಿಕೊಂಡಂತೆ ಕಾಮರಾಜ ರಸ್ತೆಯಲ್ಲಿ ಮೆಟ್ರೊ ರೈಲು ನಿಲ್ದಾಣದ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಕಬ್ಬನ್ ರಸ್ತೆಯಿಂದ ಎಂ.ಜಿ. ರಸ್ತೆ ತನಕ ಸಂಚಾರ ಬಂದ್ ಮಾಡಿ ಮೂರು ವರ್ಷಗಳೇ ಕಳೆದಿವೆ.

ಕಮರ್ಷಿಯಲ್ ಸ್ಟ್ರೀಟ್ ವೃತ್ತಕ್ಕೂ ಬ್ರಿಗೇಡ್‌ ರಸ್ತೆಗೂ ಕೇವಲ 700 ಮೀಟರ್ ದೂರವಿದೆ. ಈ ಎರಡೂ ಪ್ರಮುಖ ರಸ್ತೆಗಳ ಸಂಪರ್ಕವೇ ಕಡಿತಗೊಂಡಿದೆ. ಕಮರ್ಷಿಯಲ್ ಸ್ಟ್ರೀಟ್‌ ಕಡೆಯಿಂದ ಕಾಮರಾಜ ರಸ್ತೆ ಮೂಲಕ ಕಬ್ಬನ್ ರಸ್ತೆಗೆ ಬಂದು ಡಿಕೆನ್ಸನ್ ರಸ್ತೆ ಮೂಲಕ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಗೆ ತಲುಪಲು 2 ಕಿಲೋ ಮೀಟರ್ ಕ್ರಮಿಸಬೇಕು.

ಎಂ.ಜಿ. ರಸ್ತೆಯಿಂದ ಕಬ್ಬನ್ ರಸ್ತೆಗೆ ಹೋಗಿ, ಕಮರ್ಷಿಯಲ್ ಸ್ಟ್ರೀಟ್‌ ವೃತ್ತದ ಕಾಮರಾಜ ರಸ್ತೆಯ ತುದಿಗೆ ತಲುಪಲು 2.1 ಕಿ.ಮೀ ಕ್ರಮಿಸುವುದು ಅನಿವಾರ್ಯ.

‘ಉತ್ತರದಾಯಿತ್ವವೂ ಇಲ್ಲ, ಕಾಳಜಿಯೂ ಇಲ್ಲ’

 ಕಾಮಗಾರಿ ವಿಳಂಬ ಆದರೆ ಗುತ್ತಿಗೆ ನಿರ್ವಹಿಸುತ್ತಿರುವ ಕಂಪನಿಗಳು ನಿಗದಿಗಿಂತ ಹೆಚ್ಚುವರಿ ಮೊತ್ತಕ್ಕೆ ಬೇಡಿಕೆ ಇಡುತ್ತವೆ. ಅದನ್ನು ಅನುಮೋದಿಸುವ ಮೂಲಕ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತದೆ. ಉತ್ತರದಾಯಿತ್ವ ಮತ್ತು ಕಾಳಜಿ ಇಲ್ಲದಿರುವುದು ಇದಕ್ಕೆ ಕಾರಣ ಎಂದು ಬೆಂಗಳೂರು ಪ್ರಜಾ ವೇದಿಕೆಯ ಡಿ.ಎಸ್. ರಾಜಶೇಖರ್ ಹೇಳಿದರು.

‘ಕಾಮಗಾರಿಗೆ ನಿಗದಿ ಮಾಡಿದ್ದ ಮೊತ್ತ ಹೆಚ್ಚಿಸಿದರೆ ಅದಕ್ಕೆ ತಕ್ಕಂತೆ ಲಂಚವೂ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ತಲುಪುತ್ತದೆ. ಕಾಮಗಾರಿ ವಿಳಂಬ ಆಗುವುದು ಜನರಿಗೆ ಹೊರೆಯಾಗುವ ಜೊತೆಗೆ ಸರ್ಕಾರದ ಬೊಕ್ಕಸವನ್ನೂ ನುಂಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಸ್ತೆ ಬಂದ್ ಮಾಡಿರುವ ಕಡೆಯಷ್ಟೇ ಅಲ್ಲ. ಮಾನ್ಯತಾ ಟೆಕ್‌ ಪಾರ್ಕ್ ಬಳಿಯ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದಕ್ಕೆ ರಸ್ತೆ ಕಿರಿದಾಗಿದೆ. ಮಳೆ ಬಂದರೆ ರಸ್ತೆಯಲ್ಲೇ ನಿಲ್ಲುವ ನೀರಿನ ನಡುವೆ ವಾಹನ ಸಂಚಾರ ನಿಧಾನವಾಗುತ್ತದೆ. ಅಲ್ಲಿಯೂ ಇಂಧನದ ಹೆಚ್ಚುವರಿ ಹೊರೆಯನ್ನು ಸವಾರರು ಹೊರಬೇಕಾಗಿದೆ’ ಎಂದರು.

‘ಬಿಬಿಎಂಪಿ ಹಾಗೂ ಇತರ ಏಜೆನ್ಸಿಗಳು ನಿರ್ವಹಿಸುತ್ತಿರುವ ಕಾಮಗಾರಿಗಳಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಒಂದೂವರೆ ವರ್ಷಗಳಿಂದ ಪಾಲಿಕೆ ಸದಸ್ಯರೂ ಇಲ್ಲ. ಯಾರ ಬಳಿ ಸಮಸ್ಯೆ ಹೇಳಬೇಕು ಎಂಬುದೇ ತಿಳಿಯದಾಗಿದೆ. ಒಟ್ಟಾರೆ, ಜನ ತೊಂದರೆ ಅನುಭವಿಸಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹೇಳಿಕೊಳ್ಳಿ ಸಂಚಾರದ ಸಂಕಟ

ಆಮಗತಿಯ ಕಾಮಗಾರಿಯಿಂದಾಗಿ ಸುತ್ತಿ ಬಳಸಿ ಸಂಚರಿಸುವ ಪರಿಸ್ಥಿತಿ ಎದುರಿಸುತ್ತಿದ್ದೀರಾ? ನಿಮ್ಮ  ಸಂಚಾರದ ಸಂಕಟವನ್ನು ನಮಗೆ ವಾಟ್ಸ್‌ ಆ್ಯಪ್‌ ಮಾಡಿ. ನಿಮ್ಮ ಅಳಲುಗಳನ್ನು ನಮ್ಮನ್ನು ಆಳುವವರ ಗಮನಕ್ಕೆ ತರಲು ‘ಪ್ರಜಾವಾಣಿ’ ನೆರವಾಗಲಿದೆ.

 ವಾಟ್ಸ್‌ ಆ್ಯಪ್‌ ಸಂಖ್ಯೆ: 9606038256

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು