ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರ್ಯಾಂಡ್‌’ ಬೆಂಗಳೂರು’: ಘೋಷಣೆಗಳ ದರ್ಬಾರು

ಭಾಷಣವೇ ಭೂಷಣ ಅಭಿವೃದ್ಧಿ ಗೌಣ–3
Published 25 ಜನವರಿ 2024, 22:15 IST
Last Updated 25 ಜನವರಿ 2024, 22:15 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ 25 ವರ್ಷದ ದೂರದೃಷ್ಟಿಯಿಟ್ಟುಕೊಂಡು ರಾಜಧಾನಿಯನ್ನು ಮರುಕಟ್ಟಿ, ವಿಶ್ವಮಟ್ಟದ ಸೌಲಭ್ಯ ಇರುವ ನಗರವಾಗಿ ಪರಿವರ್ತಿಸಲು ‘ಬ್ರ್ಯಾಂಡ್‌ ಬೆಂಗಳೂರು’ ಎಂಬ ಆಕರ್ಷಕ ಘೋಷಣೆ ಹಾಗೂ ಯೋಜನೆಗೆ ಸರ್ಕಾರ ಅಡಿ ಇಟ್ಟಿದೆ. ಜೂನ್‌ನಲ್ಲಿ ಆರಂಭವಾದ ಈ ಪರಿಕಲ್ಪನೆ, ಯೋಜನೆಯ ಹಂತಕ್ಕೆ ತಲುಪಿಯೇ ಇಲ್ಲ.

‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯಲ್ಲಿ ಯೋಜನೆ ರೂಪಿಸಲು ಎಂಟು ವಿಭಾಗಗಳನ್ನು ಗುರುತಿಸಿ, ಅದಕ್ಕಾಗಿ ವಿಶೇಷ ಆಯುಕ್ತರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. 2023 ಜೂನ್‌ನಿಂದ ಈ ತಂಡಗಳು ಯೋಜನೆ ರೂಪಿಸುತ್ತಿದ್ದರೂ, ಅಂತಿಮ ವರದಿ ತಯಾರಾಗಿಲ್ಲ. ‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯ ಅಂತಿಮ ಹಂತ ಎಂದು ಪ್ರಕಟಿಸಿ, ಅಕ್ಟೋಬರ್‌ 9ರಂದು ‘ಬ್ರ್ಯಾಂಡ್‌ ಬೆಂಗಳೂರು ಸಮ್ಮೇಳನ’ ನಡೆಯಿತು. ಆನಂತರವೂ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ.

ವಿಶೇಷ ಆಯುಕ್ತರ ನೇತೃತ್ವದ ಪ್ರತಿ ತಂಡವೂ ನೂರಾರು ಸಲಹೆಗಳನ್ನು ನೀಡಿದೆ. ಹಿಂದಿನ ಯೋಜನೆಗಳನ್ನು ಒಟ್ಟುಗೂಡಿಸಿಕೊಂಡು ಅದಕ್ಕೊಂದು ‘ಬ್ರ್ಯಾಂಡ್‌’ ಶೀರ್ಷಿಕೆ ನೀಡುವುದಕ್ಕಾಗಿ ಸಾಕಷ್ಟು ಸಭೆಗಳೂ ನಡೆದಿವೆ. ಸಂಘ–ಸಂಸ್ಥೆ ಪ್ರತಿನಿಧಿಗಳೂ ಸೇರಿದಂತೆ ಅಧಿಕಾರಿಗಳು ಹಲವಾರು ಸಭೆಗಳನ್ನು ನಡೆಸಿದ್ದಾರೆ, ಕೆಲವು ವಿಭಾಗಗಳು ಅವರ ಸಲಹೆಗಳನ್ನು ಪುಸ್ತಕದ ರೂಪದಲ್ಲಿಯೂ ಪ್ರಕಟಿಸಿವೆ. ಇವ್ಯಾವುದಕ್ಕೂ ಮುಖ್ಯ ಆಯುಕ್ತರಿಂದ ಅಂತಿಮ ಮುದ್ರೆ ಬಿದ್ದಿಲ್ಲ.

‌‘ನಗರದ ನಾಗರಿಕರು ತಮ್ಮ ನಗರ ಬೆಳೆಯಲು ಏನು, ಹೇಗೆ ಬಯಸುತ್ತಾರೆ ಅದನ್ನೇ ಬ್ರ್ಯಾಂಡ್‌ ಬೆಂಗಳೂರು’ನಡಿ ಅಭಿವೃದ್ಧಿ ಮಾಡಲಾಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಇದಕ್ಕೆ ಪ್ರತಿಸ್ಪಂದನೆಯಾಗಿ ‘70 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ’ ಎಂದು ಅವರೇ ಹೇಳಿದ್ದರು. ಆದರೆ ಎಂಟು ವಿಭಾಗಗಳ ನೇತೃತ್ವ ವಹಿಸಿರುವ ಹಿರಿಯ ಅಧಿಕಾರಿಗಳ ತಂಡ ರಚಿಸಿರುವ ಕರಡು ವರದಿಯಲ್ಲಿ ನಾಗರಿಕರ ಸಲಹೆಗಳಿಗೆ ಆದ್ಯತೆ ಸಿಕ್ಕಿಲ್ಲ ಎಂಬ ದೂರು ವ್ಯಕ್ತವಾಗುತ್ತಲೇ ಇದೆ. ಇದನ್ನು ಸರಿಪಡಿಸುವತ್ತ ಅಧಿಕಾರಿಗಳು ಇನ್ನೂ ಚಿತ್ತ ಹರಿಸಿಲ್ಲ.

ನಾಗರಿಕರು ಹಾಗೂ ತಜ್ಞರೊಂದಿಗೂ ವಿಶೇಷ ಸಭೆಗಳನ್ನು ನಡೆಸಲಾಗಿತ್ತು. ಅವರಿಂದಲೂ ಸಲಹೆಗಳು ಬಂದಿವೆ. ಅಲ್ಲದೆ, ಹಲವು ಸಂಸ್ಥೆಗಳು ಸಮಾರಂಭಗಳನ್ನು ನಡೆಸಿ ‘ಬೆಂಗಳೂರು ಹೀಗೆ ಅಭಿವೃದ್ಧಿಯಾಗಬೇಕು’ ಎಂದು ರಸ್ತೆ ಗುಂಡಿ, ವಾಹನ ಸಂಚಾರ, ಆಂಬುಲೆನ್ಸ್ ಮೇಲೆ ಜಿಪಿಎಸ್‌, ಪಾದಚಾರಿ ಮಾರ್ಗ ದುರಸ್ತಿಯಂತಹ ಸಮಸ್ಯೆಗಳ ಪರಿಹಾರಕ್ಕೆ ವರದಿ ನೀಡಿವೆ. 

ಎಂಟು ವಿಭಾಗಗಳ ವರದಿಯನ್ನು ಒಟ್ಟುಗೂಡಿಸಿ, ‘ಬ್ರ್ಯಾಂಡ್‌ ಬೆಂಗಳೂರು’ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಅಂತಿಮ ವರದಿ ಸಲ್ಲಿಕೆಯಾಗ ಬೇಕು. ಅನುಷ್ಠಾನಕ್ಕೆ ಉಪ ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ‘ಸಮನ್ವಯ ಸಮಿತಿ’ ರಚಿಸುವ ಯೋಚನೆಯಿದೆ. ಆದರೆ, ಪ್ರತಿ ದಿನವೂ ‘ಬ್ರ್ಯಾಂಡ್‌ ಬೆಂಗಳೂರು’ ಕರಡು ವರದಿಯಲ್ಲಿರುವ ವಿಷಯಗಳನ್ನೇ ಹೇಳಲಾಗುತ್ತಿದೆ. ಕೆಲವು ಬಾರಿ ಹಿಂದಿನ ವಿಷಯಗಳಿಗೇ ಒಂದಂಶ ಹೊಸದಾಗಿ ಸೇರಿಸಿ ಹೇಳುವ ಪ್ರಕಟಣೆ, ಹೇಳಿಕೆಗಳು ಕೇಳಿಬರುತ್ತಿವೆ. ಎಂಟು ತಿಂಗಳಿಂದ ನೂರಾರು ಸಭೆಗಳನ್ನು ಮಾಡಿದ್ದರೂ ‘ಬ್ರ್ಯಾಂಡ್‌ ಬೆಂಗಳೂರು’ ಜಾರಿಗೆ ಯೋಜನೆ ಇನ್ನೂ ಸಿದ್ಧವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT