ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದಡಿ ವಿದ್ಯುತ್‌ ಮಾರ್ಗ, ತಪ್ಪಲಿದೆ ಅವಘಡ: ಹೆಚ್ಚಲಿದೆ ಸೌಂದರ್ಯ

ಬೆಂಗಳೂರು ಮೆಟ್ರೊಪಾಲಿಟನ್ ಪ್ರದೇಶದಲ್ಲಿ ಭೂಗತ ಕೇಬಲ್ ಅಳವಡಿಕೆ
Last Updated 21 ಮಾರ್ಚ್ 2021, 20:43 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಜನ–ಜೀವನ ಸುಧಾರಿಸಲು ಮತ್ತು ಸರಾಗವಾಗಿ ನಡೆಯಲು ಮೂಲಸೌಲಭ್ಯಗಳ ಒದಗಿಸುವಿಕೆ ಅಗತ್ಯ. ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯಂತಹ ಸಮಸ್ಯೆಗಳು ಆಯಾ ನಗರದ ಅಭಿವೃದ್ಧಿಯ ವೇಗವನ್ನು ನಿಧಾನವಾಗಿಸುತ್ತವೆ. ಈ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಅವುಗಳ ನಿರ್ವಹಣೆಯ ಕಾರ್ಯವೂ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ.

ನಗರಕ್ಕೆ ವಿದ್ಯುತ್‌ ಪೂರೈಕೆಯ ಜವಾಬ್ದಾರಿ ಹೊತ್ತಿರುವ ಬೆಸ್ಕಾಂನ ಪಾತ್ರ ಇದರಲ್ಲಿ ಮಹತ್ವದ್ದು. ಅನಿಯಮಿತವಾಗಿ ವಿದ್ಯುತ್‌ ಪೂರೈಸುವುದರ ಜೊತೆಗೆ ಯಾವುದೇ ಅವಘಡಗಳು ಸಂಭವಿಸಿದಂತೆ ಬೆಸ್ಕಾಂ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಪರ್ಯಾಯ ವಿದ್ಯುತ್‌ ಉತ್ಪಾದನೆಗೆ ಆದ್ಯತೆ ನೀಡುವುದು ಸೇರಿದಂತೆ ನಗರದ ‘ಬ್ರ್ಯಾಂಡ್ ಮೌಲ್ಯ ಹೆಚ್ಚಿಸಲು ಅಗತ್ಯವಿರುವ ಕ್ರಮಗಳ ಅನುಷ್ಠಾನಕ್ಕೂ ಬೆಸ್ಕಾಂ ಮುಂದಾಗುವ ಅಗತ್ಯವಿದೆ.

ಭೂಗತ ಕೇಬಲ್ ಅಳವಡಿಕೆ

ಮಳೆಗಾಲ ಬಂದರೆ ಸಾಕು ವಿದ್ಯುತ್‌ ಕಂಬಗಳು, ಮರಗಳು ವಿದ್ಯುತ್‌ ತಂತಿಗಳ ಮೇಲೆ ಬೀಳುವುದು ಸಾಮಾನ್ಯವಾಗಿರುತ್ತದೆ. ಇದರಿಂದ ಅವಘಡಗಳೂ ಸಂಭವಿಸುತ್ತಿವೆ. ಅಲ್ಲಲ್ಲಿ ಜೋತು ಬೀಳುವ ವಿದ್ಯುತ್‌ ವೈರ್‌ಗಳು ನಗರದ ಸೌಂದರ್ಯಕ್ಕೂ ಧಕ್ಕೆ ತರುತ್ತಿವೆ. ಈ ಸಮಸ್ಯೆಗೆಲ್ಲ ಏಕೈಕ ಪರಿಹಾರ ಎನ್ನುವಂತೆ ಭೂಗತ ಕೇಬಲ್‌ ಅಳವಡಿಕೆ ಕಾರ್ಯ ಕೈಗೆತ್ತಿಕೊಂಡಿದೆ ಬೆಸ್ಕಾಂ.

ಬೆಂಗಳೂರು ಮೆಟ್ರೊಪಾಲಿಟನ್‌ ಪ್ರದೇಶ ವಲಯದಲ್ಲಿರುವ (ಬಿಎಂಎಝಡ್‌) 11 ಕೆವಿ ಸಾಮರ್ಥ್ಯದ ವಿದ್ಯುತ್‌ ಕೇಬಲ್‌ಗಳನ್ನು ಪರಿವರ್ತಿಸಿ ಭೂಗತ ಕೇಬಲ್‌ಗಳನ್ನು (ಅಂಡರ್‌ಗ್ರೌಂಡ್‌ ಕೇಬಲ್‌) ಅಳವಡಿಸಲಾಗುತ್ತಿದೆ. 2018–19ರ ಬಜೆಟ್‌ನಲ್ಲಿಯೇ ಈ ಘೋಷಣೆ ಮಾಡಲಾಗಿದ್ದು, 2019ರ ಸೆಪ್ಟೆಂಬರ್‌ನಿಂದ ಕಾಮಗಾರಿ ಆರಂಭವಾಗಿದೆ.

ಯುಜಿ ಕೇಬಲ್‌ಗಳ ಜೊತೆಗೆ ಒಎಫ್‌ಸಿ ಅಳವಡಿಕೆಯ ಕಾರ್ಯವೂ ಸಾಗಿದೆ. ಬಿಎಂಎಝಡ್‌ ವ್ಯಾಪ್ತಿಯಲ್ಲಿ ಬೆಸ್ಕಾಂನ 63 ಉಪವಿಭಾಗಗಳಿದ್ದು, ಈಗಾಗಲೇ 11 ಉಪವಿಭಾಗಗಳಲ್ಲಿ ಯುಜಿ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಉಳಿದ 52 ಉಪವಿಭಾಗಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

‘ಯುಜಿ ಕೇಬಲ್‌ ಅಳವಡಿಕೆಯ ಕಾರ್ಯ ಪ್ರಾರಂಭದಲ್ಲಿ ಚುರುಕಿನಿಂದ ಸಾಗಿತ್ತು. ಈ ನಡುವೆ ಕೋವಿಡ್‌ ಬಿಕ್ಕಟ್ಟಿನ ಕಾರಣದಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಈ ಯೋಜನೆಯನ್ನು 2023ರ ವೇಳೆಗೆ ಪೂರ್ಣಗೊಳಿಸಲಾಗುವುದು’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ. ರಾಜೇಶ್‌ಗೌಡ ತಿಳಿಸಿದರು.

ಇವಿ ಚಾರ್ಜಿಂಗ್‌ಗೆ ವ್ಯವಸ್ಥೆ

‘ಸೌರವಿದ್ಯುತ್‌ ಉತ್ಪಾದನೆ ಉತ್ತೇಜಿಸಲು ಹಲವು ಪ್ರೋತ್ಸಾಹಕ ಯೋಜನೆಗಳನ್ನು ಸರ್ಕಾರದ ನೆರವಿನೊಂದಿಗೆ ಬೆಸ್ಕಾಂ ಕೈಗೆತ್ತಿಕೊಳ್ಳುತ್ತಿದೆ. ಅಲ್ಲದೆ, ಎಲೆಕ್ಟ್ರಿಕ್‌ ವಾಹನಗಳ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ನಗರದ ಹಲವು ಕಡೆಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ ನಿರ್ಮಾಣ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

‘ಬೆಸ್ಕಾಂನ ಕೇಂದ್ರ ಕಚೇರಿಯ ಆವರಣದಲ್ಲಿ ಸೌರವಿದ್ಯುತ್‌, ಎನರ್ಜಿ ಸ್ಟೋರೇಜ್‌ (ಬ್ಯಾಟರಿ) ಮತ್ತು ವಿದ್ಯುತ್‌ ಬಳಸಿಕೊಂಡು ಕಾರ್ಯನಿರ್ವಹಿಸುವ ಘಟಕವನ್ನು ಸ್ಥಾಪಿಸಲಾಗಿದೆ. ಅಂದರೆ, ಸೌರವಿದ್ಯುತ್‌ ಇಲ್ಲದಿದ್ದರೆ ಬ್ಯಾಟರಿ, ಅದೂ ಇಲ್ಲದಿದ್ದರೆ ವಿದ್ಯುತ್‌ ಬಳಸಿಕೊಂಡು ಕೆಲಸ ಮಾಡುವ ಇಂತಹ ಘಟಕ ಅಳವಡಿಸಿರುವುದು ದೇಶದಲ್ಲಿಯೇ ಮೊದಲು’ ಎಂದೂ ಮಾಹಿತಿ ನೀಡಿದರು.

ವಿದ್ಯುತ್‌ ಪೂರೈಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತಂತ್ರಜ್ಞಾನದ ನೆರವಿನೊಂದಿಗೆ ಹಲವು ಉಪಕ್ರಮಗಳನ್ನು ಬೆಸ್ಕಾಂ ಕೈಗೊಳ್ಳುತ್ತಿದೆ. ಪರ್ಯಾಯ ವಿದ್ಯುತ್‌ ಮೂಲಗಳ ಉತ್ಪಾದನೆಯತ್ತಲೂ ಬೆಸ್ಕಾಂ ಗಮನ ಹರಿಸಿದರೆ ಗುಣಮಟ್ಟದ ಅನಿಯಮಿತ ವಿದ್ಯುತ್‌ ಪೂರೈಕೆ ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರು ಸಲಹೆ ನೀಡುತ್ತಾರೆ.

ಭೂಗತ ಕೇಬಲ್‌ ಅಳವಡಿಕೆ ವಿವರ

₹5,325 ಕೋಟಿ – ಭೂಗತ ಕೇಬಲ್ ಅಳವಡಿಕೆಯ ಒಟ್ಟು ವೆಚ್ಚ

6,543 ಕಿ.ಮೀ. – ಬಿಎಂಎಝಡ್‌ನಲ್ಲಿ ಹಾಕಲಾಗುವ ಭೂಗತ ಕೇಬಲ್

1,681 ಕಿ.ಮೀ. – ಈವರೆಗೆ ಹಾಕಲಾಗಿರುವ ಕೇಬಲ್‌ಗಳು

4,862 ಕಿ.ಮೀ. – ಇನ್ನೂ ಹಾಕಬೇಕಾಗಿರುವ ಕೇಬಲ್‌ಗಳ ಪ್ರಮಾಣ

ಶೇ 34 – ಕೇಬಲ್‌ ಅಳವಡಿಕೆಯ ಈವರೆಗಿನ ಪ್ರಗತಿಯ ಪ್ರಮಾಣ

ಇವಿ ಚಾರ್ಜಿಂಗ್‌ ಸ್ಟೇಷನ್‌ ವಿವರ

70 – ನಗರದಲ್ಲಿ ಚಾರ್ಜಿಂಗ್‌ ಸ್ಟೇಷನ್‌ಗಳಿರುವ ಸ್ಥಳಗಳು

136 – ನಗರದಲ್ಲಿರುವ ಚಾರ್ಜಿಂಗ್ ಸ್ಟೇಷನ್‌ಗಳ ಸಂಖ್ಯೆ

140 – 6 ತಿಂಗಳಲ್ಲಿ ಅಳವಡಿಸಲಾಗುವ ಘಟಕಗಳ ಸಂಖ್ಯೆ

1,300 – ತಿಂಗಳಿಗೆ ಚಾರ್ಜಿಂಗ್‌ ಮಾಡಿಸಿಕೊಳ್ಳುತ್ತಿರುವ ವಾಹನಗಳ ಸಂಖ್ಯೆ

‘ನಾಲ್ಕು ಹಂತಗಳಲ್ಲಿ ಅಳವಡಿಕೆ’

‘ಭೂಗತ ಕೇಬಲ್‌ಗಳನ್ನು ನಾಲ್ಕು ಹಂತಗಳಲ್ಲಿ ಅಳವಡಿಸಲಾಗುವುದು. ಈಗ ಮೊದಲ ಮೂರು ಹಂತದ ಕಾರ್ಯ ಪ್ರಗತಿಯಲ್ಲಿದ್ದು, ನಾಲ್ಕನೇ ಹಂತಕ್ಕೆ ಸಮೀಕ್ಷೆ ಕಾರ್ಯ ನಡೆಯಬೇಕಿದೆ’ ಎಂದು ಬೆಸ್ಕಾಂನ ಉಪಪ್ರಧಾನ ವ್ಯವಸ್ಥಾಪಕ (ಯೋಜನೆ) ಪಿ. ರಂಗಸ್ವಾಮಿ ಹೇಳಿದರು.

‘ವಿದ್ಯುತ್‌ ಅವಘಡಗಳನ್ನು ತಪ್ಪಿಸುವುದರ ಜೊತೆಗೆ, ಪೂರೈಕೆ ವೇಳೆ ಸಂಭವಿಸುತ್ತಿದ್ದ ವಿದ್ಯುತ್‌ ನಷ್ಟವನ್ನೂ ತಗ್ಗಿಸಬಹುದು. ಗುಣಮಟ್ಟದ ವಿದ್ಯುತ್ ಪೂರೈಸಲು ಇದರಿಂದ ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.

‘ಕೆಯುಐಡಿಎಫ್‌ಸಿ, ಎಡಿಬಿ ಹಾಗೂ ಬೆಸ್ಕಾಂನ ಆಂತರಿಕ ಮೂಲಗಳಿಂದ ಈ ಯೋಜನೆಗೆ ಹಣಕಾಸು ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಮಿತವ್ಯಯ–ಪರಿಸರ ಸ್ನೇಹಿ ಇವಿ’

‘ಜಗತ್ತಿನ ಹೆಚ್ಚು ಮಾಲಿನ್ಯ ನಗರಗಳಲ್ಲಿ ದೇಶದ ನಗರಗಳ ಸಂಖ್ಯೆಯೇ ಹೆಚ್ಚಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಕೂಡ ಸ್ಥಾನ ಪಡೆದಿದೆ. ಪರಿಸರ ರಕ್ಷಣೆಯ ದೃಷ್ಟಿಯಿಂದ ಎಲೆಕ್ಟ್ರಿಕ್‌ ವಾಹನಗಳ (ಇವಿ) ಬಳಕೆ ಹೆಚ್ಚಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ನೋಡಲ್‌ ಏಜೆನ್ಸಿಯಾಗಿರುವ ಬೆಸ್ಕಾಂ ಇವಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ನಿರ್ಮಿಸಿ, ನಿರ್ವಹಿಸುತ್ತಿದೆ’ ಎಂದು ಬೆಸ್ಕಾಂನ ಉಪಪ್ರಧಾನ ವ್ಯವಸ್ಥಾಪಕ (ಇವಿ ಮತ್ತು ಸ್ಮಾರ್ಟ್‌ಗ್ರಿಡ್‌) ಸಿ.ಕೆ. ಶ್ರೀನಾಥ್ ಹೇಳಿದರು.

‘ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳು ಆರ್ಥಿಕವಾಗಿಯೂ ಬಹು ಉಪಯೋಗಿ. ಈ ವಾಹನಗಳನ್ನು ಬಳಸುವವರಿಗೆ ಪೆಟ್ರೋಲ್‌–ಡೀಸೆಲ್‌ ಬೆಲೆ ಏರಿಕೆ ಅಷ್ಟೊಂದು ಬಾಧಿಸದು’ ಎಂದೂ ಅವರು ಹೇಳಿದರು.

ಇವಿ ಚಾರ್ಜಿಂಗ್‌ಗೆ ‘ಎಲೆಕ್ಟ್ರಿಫೈ’

ಈ ಚಾರ್ಜಿಂಗ್‌ ಘಟಕಗಳನ್ನು ಉಪಯೋಗಿಸಲು ಮೊಬೈಲ್‌ನಲ್ಲಿ ‘electreefi' ಆ್ಯಪ್ ಅಳವಡಿಸಿಕೊಳ್ಳಬೇಕು. ಗೂಗಲ್‌ ಪ್ಲೇ ಸ್ಟೋರ್‌ನಿಂದ ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ನಗರದ ಎಲ್ಲೆಲ್ಲಿ ಚಾರ್ಜಿಂಗ್‌ ಘಟಕಗಳಿವೆ ಎಂಬ ಪಟ್ಟಿ ಇದರಲ್ಲಿ ತೋರಿಸುತ್ತದೆ. ಅದನ್ನು ತಲುಪುವ ನಕ್ಷೆಯನ್ನೂ ಇದು ತೋರಿಸುತ್ತದೆ. ಅಲ್ಲದೆ, ಯಾವ ಮಾದರಿಯ ಘಟಕ, ಬಳಕೆಗೆ ಲಭ್ಯವಿದೆಯೇ, ದರ ಎಷ್ಟು ಎಂಬ ಮಾಹಿತಿ ಸಿಗುತ್ತದೆ. ಒಂದು ಗಂಟೆ ಮೊದಲೇ ನೀವು ಘಟಕವನ್ನು ಈ ಆ್ಯಪ್‌ ಮೂಲಕ ಕಾಯ್ದಿರಿಸಬಹುದು. ಅಲ್ಲದೆ, ಚಾರ್ಜಿಂಗ್‌ ನಂತರ ಆನ್‌ಲೈನ್‌ನಲ್ಲಿಯೇ ಹಣ ಪಾವತಿಸಬೇಕಾಗುತ್ತದೆ. ನಗದು ವ್ಯವಹಾರಕ್ಕೆ ಅವಕಾಶವಿಲ್ಲ.ಕ್ಯೂಆರ್‌ ಕೋಡ್, ಒಟಿಪಿ ಅಥವಾ ಆರ್‌ಎಫ್‌ಐಡಿ ಬಳಸಿ ಶುಲ್ಕ ಪಾವತಿಸಬೇಕು.

ಬೆಸ್ಕಾಂಗೆ ಪ್ರಶಸ್ತಿ ಗರಿ

‘ಪರ್ಫಾರ್ಮ್‌, ಅಚೀವ್‌ ಆ್ಯಂಡ್‌ ಟ್ರೇಡ್‌’ ಮಾನದಂಡಗಳ ಅಡಿಯಲ್ಲಿ ಕೇಂದ್ರ ಸರ್ಕಾರವು 15 ದಿನಗಳ ಹಿಂದೆ ಬೆಸ್ಕಾಂಗೆ ಪ್ರಶಸ್ತಿ ನೀಡಿದೆ. ಅಗ್ರ ಐದು ಎಸ್ಕಾಂಗಳಲ್ಲಿ ನಾವು ಮೊದಲನೇ ಸ್ಥಾನ ಪಡೆದಿದ್ದೇವೆ’ ಎಂದು ರಾಜೇಶ್‌ಗೌಡ ಹೇಳಿದರು.

‘ವಿದ್ಯುತ್‌ ವಿತರಣೆ ವೇಳೆ ಸಂಭವಿಸುವ ನಷ್ಟದ ಪ್ರಮಾಣವನ್ನು ಶೇ 15ಕ್ಕೆ ತಗ್ಗಿಸಬೇಕು ಎಂದು ಗುರಿ ನೀಡಲಾಗಿತ್ತು. ಬೆಸ್ಕಾಂನಲ್ಲಿ 12.62ರಷ್ಟು ಇದೆ. ಅಲ್ಲದೆ, ಬೇಡಿಕೆ ಮತ್ತು ಪೂರೈಕೆಗೆ ಸಂಬಂಧಿಸಿದ ವಲಯದಲ್ಲಿಯೂ ನಾವು ಮೊದಲ ಸ್ಥಾನದಲ್ಲಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT