ಶನಿವಾರ, ಅಕ್ಟೋಬರ್ 31, 2020
22 °C

ನವ ಬೆಂಗಳೂರು– ಚಿಂತನೆಗಳ ಹೊಸ ಚಿಗುರು

ಪ್ರವೀಣ್ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗೊತ್ತುಗುರಿ ಇಲ್ಲದೇ ಬೆಳೆಯುತ್ತಿರುವ ಬೆಂಗಳೂರಿನ ನಾಗಾಲೋಟಕ್ಕೆ ಕಡಿವಾಣ ಹಾಕಿ ಈ ನಗರವನ್ನು ವ್ಯವಸ್ಥಿತವಾಗಿ ಕಟ್ಟುವ ಕನಸನ್ನು ಇಟ್ಟುಕೊಂಡು ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯೇತರ ಮೂರು ಪಕ್ಷಗಳು ಬಿಬಿಎಂಪಿಯಲ್ಲೂ ರಾಜಕೀಯ ರಂಗ ಪ್ರವೇಶಕ್ಕೆ ಸಜ್ಜಾಗುತ್ತಿವೆ. ರಾಜಕೀಯದಿಂದ ದೂರ ಉಳಿದುಕೊಂಡೇ ನಗರದ ಆಗುಹೋಗುಗಳ ಬಗ್ಗೆ, ಇಲ್ಲಿನ ಭ್ರಷ್ಟ ವ್ಯವಸ್ಥೆಯ ಬಗ್ಗೆ, ದೋಷಪೂರಿತ ನೀತಿಗಳ ಬಗ್ಗೆ ಧ್ವನಿ ಎತ್ತುತ್ತಾ ಸಕ್ರಿಯವಾಗಿದ್ದ ವಿವಿಧ ಸಂಘಟನೆಗಳ ಪ್ರಮುಖರೇ ಈ ಹೊಸ ಪಕ್ಷಗಳ ಮೂಲಕ ಬಿಬಿಎಂಪಿ ಚುನಾವಣಾ ಕಣಕ್ಕಿಳಿಯುವ ಸಾಹಸಕ್ಕೆ ಮುಂದಾಗಿದ್ದಾರೆ.

ಅನಗತ್ಯ ಯೋಜನೆಗಳನ್ನು ಜಾರಿಗೊಳಿಸಲು ಸಂಪನ್ಮೂಲಗಳ ಅಪವ್ಯಯ, ಅಭಿವೃದ್ಧಿಯಲ್ಲಿ ಪ್ರಾದೇಶಿಕ ತಾರತಮ್ಯ, ವ್ಯಾಪಕ ಭ್ರಷ್ಟಾಚಾರ, ಜನರಿಗೆ ಅಗತ್ಯಕ್ಕೆ ತಕ್ಕಂತೆ ರೂಪುಗೊಳ್ಳದ ಯೋಜನೆಗಳು, ಹಸಿರಿನ ವಿನಾಶ, ನೆಲದ ನುಡಿ, ಪರಂಪರೆ, ಸಂಸ್ಕೃತಿಗಳ ಕಡೆಗಣನೆ, ಜನರ ಸಹಭಾಗಿತ್ವದ ಕೊರತೆ, ಯೋಜನೆ ರೂಪಿಸುವಾಗ ದೂರಗಾಮಿ ಚಿಂತನೆಗಳು ಇಲ್ಲದಿರುವುದು, ಜನರು ತೀವ್ರವಾಗಿ ಎದುರಿಸುತ್ತಿರುವ ಸಂಚಾರ ದಟ್ಟಣೆ, ದುಬಾರಿ ಶಿಕ್ಷಣ, ಕೈಗೆಟುಕದ ಆರೋಗ್ಯ ಸೇವೆ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ರಾಜಕೀಯ ಪಕ್ಷಗಳ ಅಸಡ್ಡೆ, ಆಡಳಿತ ಯಂತ್ರದ ದುರ್ಬಳಕೆ, ನೆಲ– ಜಲ ಸಂರಕ್ಷಣೆಗೆ ಆದ್ಯತೆ ನೀಡದಿರುವುದು... ಮುಂತಾದ ಹತ್ತು ಹಲವು ವಿಚಾರಗಳು ಈ ಹೋರಾಟಗಾರರು ಬೆಂಗಳೂರು ನವನಿರ್ಮಾಣ ಪಕ್ಷ (ಬಿಎನ್‌ಪಿ), ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಹಾಗೂ ಆಮ್‌ ಆದ್ಮಿ ಪಾರ್ಟಿ (ಎಎಪಿ) ಪಕ್ಷಗಳ ಮೂಲಕ ಬಿಬಿಎಂಪಿ ಚುನಾವಣಾ ಕಣಕ್ಕಿಳಿಯುವ ಮನಸು ಮಾಡುವುದಕ್ಕೆ ಪ್ರೇರಣೆಯಾಗಿವೆ.

ಆಡಳಿತ ಯಂತ್ರದ ಹೊರಗಿದ್ದುಕೊಂಡು ಏನನ್ನೂ ಸಾಧಿಸಲಾಗದು. ನಗರದ ಏಳಿಗೆಯನ್ನು ಸರಿದಾರಿಗೆ ತರಬೇಕಾದರೆ, ಸ್ವತಃ ಅಧಿಕಾರ ಪಡೆಯಬೇಕು. ರಾಜಕೀಯದಲ್ಲೂ ಹೊಸ ಚಿಂತನೆಗಳಿಗೆ ಅವಕಾಶ ಕಲ್ಪಿಸಬೇಕು. ಜಗದ್ವಿಖ್ಯಾತಿ ಗಳಿಸಿರುವ ಬೆಂಗಳೂರಿನ ಹೆಸರನ್ನು ಉಳಿಸುವುದರ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗ ಮಾತ್ರ ಸಾಧ್ಯ ಎಂಬುದು ಈ ಹೋರಾಟಗಾರರ ನಿಲುವು.

ಪ್ರಮುಖ ರಾಜಕೀಯ ಪಕ್ಷಗಳು ಬಿಬಿಎಂಪಿ ಚುನಾವಣೆಗೆ ಈಗಲೇ ಸಿದ್ಧತೆ ನಡೆಸಿದ್ದಾವೋ ಇಲ್ಲವೋ ತಿಳಿಯದು. ಆದರೆ, ಈ ಮೂರು ಪಕ್ಷಗಳು ಜನರ ಮನ ಗೆಲ್ಲುವ ಕಾರ್ಯದಲ್ಲಿ ಸದ್ದಿಲ್ಲದೇ ತೊಡಗಿಸಿಕೊಂಡಿವೆ. ಮನೆ ಮನೆ ಭೇಟಿಯ ಜೊತೆಗೆ ಸಾಮಾಜಿಕ ಮಾಧ್ಯಮಗಳ ಮೂಲಕವೂ ಬದಲಾವಣೆಯ ಗಾಳಿಗೆ ಜನಬೆಂಬಲ ಪಡೆಯುವ ಪ್ರಯತ್ನದಲ್ಲಿ ನಿರತವಾಗಿವೆ. ಜನರು ಬದಲಾಗದೆ ವ್ಯವಸ್ಥೆ ಬದಲಾಗದು ಎಂಬುದನ್ನು ಮನದಟ್ಟು ಮಾಡಲು ಕಸರತ್ತು ನಡೆಸುತ್ತಿವೆ.    

ನಗರದ ಅಭಿವೃದ್ಧಿಯ ರೂಪರೇಷೆಗಳನ್ನು ನಿರ್ಧರಿಸುವ ಹೋರಾಟಗಳಲ್ಲಿ ತೊಡಗಿದ್ದ ವಿವಿಧ ಸಂಘಟನೆಗಳ ಪ್ರಮುಖರು ಲಾಗಾಯ್ತಿನಿಂದ ಆಡಳಿತ ನಡೆಸುತ್ತ ಬಂದಿರುವ ರಾಜಕೀಯ ಪಕ್ಷಗಳ ಬಗ್ಗೆ ನಂಬಿಕೆ ಕಳೆದುಕೊಳ್ಳಲು ಕಾರಣಗಳೇನು, ಈ ನಗರದಲ್ಲಿ ಅವರು ಗುರುತಿಸಿರುವ ಪ್ರಮುಖ ಸಮಸ್ಯೆಗಳು ಯಾವುವು, ಈ ಹೊಸ ಕನಸುಗಾರರ ಮುಂದಿರುವ ಸವಾಲುಗಳೇನು, ಅದಕ್ಕೆ ಅವರ ಬತ್ತಳಿಕೆಯಲ್ಲಿರುವ ಅಸ್ತ್ರಗಳೇನು? ಎಂಬುದನ್ನು ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವ ಈ ಹೊಸ ಪಕ್ಷಗಳ ಪ್ರಮುಖರೇ ಇಲ್ಲಿ ಹಂಚಿಕೊಂಡಿದ್ದಾರೆ.

‘ಜನರ ಸಹಭಾಗಿತ್ವ, ಪಾರದರ್ಶಕತೆಯೇ ಮೂಲಮಂತ್ರ’
ಬಿಬಿಎಂಪಿಯ ಈಗಿನ ಆಡಳಿತ ವ್ಯವಸ್ಥೆಯಲ್ಲಿ ಜನರ ಸಹಭಾಗಿತ್ವಕ್ಕೆ ಅವಕಾಶ ಎಲ್ಲಿದೆ ಹೇಳಿ. ವಾರ್ಡ್‌ನ ಚಿಕ್ಕ ಚಿಕ್ಕ ಸಮಸ್ಯೆಗಳನ್ನು ಸ್ಥಳೀಯ ಹಂತದಲ್ಲೇ ಬಗೆಹರಿಸುವುದಕ್ಕೂ ಅವಕಾಶ ಇಲ್ಲದ ಸ್ಥಿತಿ ಇದೆ. ಯಾವ ವಿಚಾರದಲ್ಲೂ ಪಾರದರ್ಶಕತೆಯೇ ಇಲ್ಲ. ಈ ಎರಡು ವಿಚಾರಗಳನ್ನು ಸರಿಪಡಿಸಿದರೆ ಬಿಬಿಎಂಪಿ ಆಡಳಿತವನ್ನು ಸರಿದಾರಿಗೆ ತರಬಹುದು.

ನಮ್ಮ ಮುಂದಿನ ಹಾದಿ ಬಲು ಕಠಿಣ ಎಂಬುದು ನಮಗೆ ತಿಳಿದಿದೆ. ಆದರೆ, ಈಗಾಗಲೇ ಅನೇಕ ವಾರ್ಡ್‌ಗಳಲ್ಲಿ ನಮ್ಮ ನಾಯಕರು ಜನಮನ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ನಾವು ಹೆಜ್ಜೆ ಇಟ್ಟಿದ್ದೇವೆ. ಬದಲಾವಣೆ ತಂದೇ ತರುತ್ತೇವೆ ಎಂಬ ವಿಶ್ವಾಸವಿದೆ. ನಮಗೆ ರಾಜಕೀಯ ಹೊಸತಿರಬಹುದು. ಆದರೆ, ನಗರವನ್ನು, ಇಲ್ಲಿನ ಸಮಸ್ಯೆಗಳನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಇಲ್ಲಿನ ಸಮಸ್ಯೆಗಳನ್ನು ನಿವಾರಿಸುವ ವಿಚಾರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡವರೇ ಹೆಚ್ಚಾಗಿ ನಮ್ಮ ಜೊತೆಗಿದ್ದಾರೆ.
–ಶ್ರೀಕಾಂತ್‌ ನರಸಿಂಹನ್‌, ಬೆಂಗಳೂರು ನವನಿರ್ಮಾಣ ಪಕ್ಷದ ಪ್ರಧಾನ ಕಾರ್ಯದರ್ಶಿ

**

‘ಭ್ರಷ್ಟಾಚಾರಕ್ಕೆ ಕಡಿವಾಣ– ನಮ್ಮ ಪಣ’
ನಗರದ ಅಭಿವೃದ್ಧಿ ಹಾದಿ ತಪ್ಪಿರುವುದಕ್ಕೆ ಪ್ರಮುಖ ಕಾರಣ ಭ್ರಷ್ಟಾಚಾರ. ಅದಕ್ಕೆ ಕಡಿವಾಣ ಹಾಕುವುದಕ್ಕೆ ಪಣತೊಟ್ಟು ಹೋರಾಟ ಮಾಡುತ್ತಾ ಬಂದವರು ನಾವು. ಬಿಬಿಎಂಪಿಯಲ್ಲೂ ಕಳಂಕರಹಿತ ಆಡಳಿತ ಸಾಧ್ಯ ಎಂಬುದನ್ನು ತೋರಿಸುವುದು ನಮ್ಮ ಉದ್ದೇಶ. 

ಈಗಂತೂ ಗೊತ್ತುಗುರಿ ಇಲ್ಲದೇ ಭಾರಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಜಯದೇವ ಆಸ್ಪತ್ರೆ ಬಳಿ ನಿರ್ಮಿಸಿದ್ದ ಮೇಲ್ಸೇತುವೆಯನ್ನು ‘ನಮ್ಮ ಮೆಟ್ರೊ’ ಕಾಮಗಾರಿ ಸಲುವಾಗಿ ಕೆಡವಿರುವುದು ಇದಕ್ಕೊಂದು ಜ್ವಲಂತ ಉದಾಹರಣೆ.

ಜನರಿಗೆ ಬಿಬಿಎಂಪಿ ಎಲ್ಲ ಸೇವೆಗಳು ಸುಲಲಿತವಾಗಿ ಸಿಗಬೇಕೆಂಬುದು ನಮ್ಮ ಆಶಯ. ಆಡಳಿತದಲ್ಲಿ ಪಾರದರ್ಶಕತೆ ತರುವುದು ನಮ್ಮ ಕನಸು. ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ಇದು ಕಷ್ಟವಲ್ಲ.
–ಸಿ.ಎನ್‌.ದೀಪಕ್‌ , ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ

**

‘ಗುಣಮಟ್ಟದ ಶಿಕ್ಷಣ, ಸುಸಜ್ಜಿತ ಆರೋಗ್ಯ ವ್ಯವಸ್ಥೆ’
ಬೆಂಗಳೂರಿನ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಬಿಬಿಎಂಪಿ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾಗುತ್ತದೆ. ಜನರಿಗೆ ಅತ್ಯಗತ್ಯವಾದ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಸರ್ಕಾರದ ಬಳಿ ಸಮರ್ಪಕ ಯೋಜನೆಗಳೇ ಇಲ್ಲ. ಈ ಕೊರತೆ ನೀಗಿಸುವುದಕ್ಕೆ ನಮ್ಮ ಆದ್ಯತೆ. ನಮ್ಮ ಪಕ್ಷವು ನವದೆಹಲಿಯಲ್ಲಿ ಇದನ್ನು ಮಾಡಿ ತೋರಿಸಿದೆ.

ಕೋವಿಡ್‌ ನಿರ್ವಹಣೆಯ ಬಗ್ಗೆ ಜನರಲ್ಲಿ ಸಾಕಷ್ಟು ಅಸಮಾಧಾನ ಮಡುಗಟ್ಟಿದೆ. ಪ್ರಾಥಮಿಕ ಆರೋಗ್ಯ ವ್ಯವಸ್ಥೆಯನ್ನು ಚೆನ್ನಾಗಿ ರೂಪಿಸುತ್ತಿದ್ದರೆ ಕೋವಿಡ್‌ನಂತಹ ಕಾಯಿಲೆಯನ್ನು ಎದುರಿಸುವುದು ಸುಲಭವಾಗುತ್ತಿತ್ತು. ಸಾವಿನ  ಪ್ರಮಾಣ ತಗ್ಗಿಸಬಹುದಿತ್ತು. ಆರೋಗ್ಯ ಕ್ಷೇತ್ರದ ಕಡೆಗಣನೆಯಿಂದ ಏನೆಲ್ಲ ಅನಾಹುತ ಆಗಬಹುದು ಎಂಬುದನ್ನು ಕೋವಿಡ್ ತೋರಿಸಿಕೊಟ್ಟಿದೆ. ನವದೆಹಲಿಯ ಮೊಹಲ್ಲಾ ಕ್ಲಿನಿಕ್‌ ಮಾದರಿಯನ್ನು ಇಲ್ಲೂ ಜಾರಿಗೆ ತರುವುದು ನಮ್ಮ ಆಶಯ.

ಜನರಿಗೆ ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ಪರಿಚಯಿಸುವುದಕ್ಕಾಗಿ ಅವರ ಆಶೋತ್ತರಗಳ ಬಗ್ಗೆ ತಿಳಿದುಕೊಳ್ಳುವುಕ್ಕಾಗಿಯೇ ‘ನಮ್ಮೂರ ಚರ್ಚೆ’, ‘ಹೊಸ ಬೆಂಗಳೂರು–ಜನಸಂವಾದ’ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ.
–ಶಾಂತಲಾ ದಾಮ್ಲೆ, ಆಮ್‌ ಆದ್ಮಿ ಪಕ್ಷದ ಬಿಬಿಎಂಪಿ ಚುನಾವಣಾ ಉಸ್ತುವಾರಿ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು