ಬುಧವಾರ, ಆಗಸ್ಟ್ 10, 2022
19 °C
ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡವರು 1.5 ಲಕ್ಷ ಜನ ಮಾತ್ರ * 56 ಸಾವಿರ ಮಂದಿಯಿಂದ ದಂಡ ಪಾವತಿ

ನೆಮ್ಮದಿಯ ನಾಳೆಗಳಿಗೆ ಇಳೆಗಿಳಿಯಲಿ ಮಳೆನೀರು

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಳೆಗಾಲ ಆರಂಭವಾಗಿದೆ. ಸುರಿಯುವ ಮಳೆ ನೀರು ಕಾಂಕ್ರೀಟ್ ಅಥವಾ ಡಾಂಬರುಗಳ ಮೇಲೆ ಹರಿದು ಹೋಗಿ ವ್ಯರ್ಥವಾಗುತ್ತಿದೆ. ಜಲಮೂಲಗಳನ್ನು ಸಂರಕ್ಷಿಸಿ, ನೀರಿನ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸುವ ಸಾಕಷ್ಟು ಅವಕಾಶಗಳನ್ನು ರಾಜಧಾನಿ ಹೊಂದಿದೆ. ಮಳೆನೀರನ್ನು ಜತನದಿಂದ ಬಳಸುವ ಮಾದರಿಗಳು ನಗರದಲ್ಲೇ ಸಾಕಷ್ಟಿದ್ದರೂ ಅವು ಮನೆ ಮನೆಗಳಲ್ಲಿ ಬಳಕೆ ಆಗುವಂತೆ ಮಾಡುವಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.

95 ಕಿ.ಮೀ. ದೂರದ ಕಾವೇರಿ ನದಿ ನೀರನ್ನೇ ಅವಲಂಬಿಸಿರುವ ಈ ಮಹಾನಗರದಲ್ಲಿ ಬೀಳುವ ಮಳೆ ನೀರನ್ನೇ ಸಂಗ್ರಹಿಸಿದ್ದರೆ, ಬೇಸಿಗೆಯಲ್ಲಿ ಖಾಸಗಿ ಟ್ಯಾಂಕರ್‌ಗಳ ‘ಮೆರವಣಿಗೆ’ ನೋಡುವುದು ತಪ್ಪುತ್ತಿತ್ತು.

ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ನೀರಿನ ಸಂರಕ್ಷಣೆ ಮತ್ತು ಸದ್ಬಳಕೆಯೂ ಒಂದು. ಯಾವುದೇ ನಗರ ಸಮಗ್ರ ಅಭಿವೃದ್ಧಿ ಸಾಧಿಸಿದೆ ಅಥವಾ ಸಾಧಿಸುವ ಹಾದಿಯಲ್ಲಿದೆ ಎಂದರೆ ಈ ಗುರಿ ಈಡೇರಲೇ ಬೇಕಿದೆ. 

ಜಲಮಂಡಳಿಯು ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಕೆಯನ್ನು ಕಡ್ಡಾಯ ಮಾಡಿರುವುದೇನೋ ನಿಜ. ಆದರೆ, ಈ ಕುರಿತು ಆಗಿರುವ ಪ್ರಗತಿ ಮತ್ತು ಈ ವಿಚಾರದಲ್ಲಿ ಜನರ ನಿರಾಸಕ್ತಿ ಗಮನಿಸಿದರೆ ಬೇಸರ ಮೂಡುತ್ತದೆ.

ಇಂತಹದ ಬೇಸರಗಳ ನಡುವೆಯೂ ಕೆಲವರು, ಮಳೆ ನೀರು ಸಂಗ್ರಹಕ್ಕೆ ತಮ್ಮದೇ ಆದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆ ಮೂಲಕ ತಮ್ಮ ಮನೆ ಮತ್ತು ನಗರದ ‘ನೆಮ್ಮದಿಗೆ’ ಪರೋಕ್ಷವಾಗಿ ಕೊಡುಗೆ ನೀಡುತ್ತಿದ್ದಾರೆ.

ಒಮ್ಮೆ ಸಂಗ್ರಹ–ಎರಡು ಬಾರಿ ಬಳಕೆ

ನಗರದ ವಿದ್ಯಾರಣ್ಯಪುರದ ನಿವಾಸಿ, ಸಿವಿಲ್‌ ಎಂಜಿನಿಯರ್‌ ವಿಶ್ವನಾಥ್ ಅವರು ತಮ್ಮ ಇಡೀ ಮನೆಯನ್ನೇ ‘ಮಳೆ ನೀರು ಸಂಗ್ರಹದ ಮಾದರಿ ಮನೆ’ಯಂತೆ ರೂಪಿಸಿದ್ದಾರೆ. ಮಳೆ ನೀರನ್ನು ಸಂಗ್ರಹಿಸಿ, ಅದನ್ನು ಬಳಸಿದ ನಂತರ, ಆ ನೀರನ್ನೇ ಸಸಿಗಳಿಗೆ ಉಣಿಸುವ ಮೂಲಕ ಮನೆಯ ಮೇಲೆ ‘ತಾರಸಿ ತೋಟ’ವನ್ನೇ ಮಾಡಿದ್ದಾರೆ.

ಸುಮಾರು 25 ವರ್ಷಗಳಿಂದ ಮಳೆ ನೀರನ್ನು ಸಂಗ್ರಹಿಸುತ್ತಿದ್ದಾರೆ ವಿಶ್ವನಾಥ್.

‘ಮಳೆ ನೀರನ್ನು ಎರಡು ಬಾರಿ ಬಳಸಿಕೊಳ್ಳಲು ಸಾಧ್ಯವಿದೆ. ನೀರು ಎಲ್ಲೆಲ್ಲಿ ಹರಿದು ಹೋಗುತ್ತದೆಯೋ ಅಲ್ಲಲ್ಲಿ ಪೈಪ್‌ಗಳನ್ನು ಅಳವಡಿಸಿ ಆ ನೀರು ಸಂಪು ಸೇರುವಂತೆ ವ್ಯವಸ್ಥೆ ಮಾಡಿದ್ದೇವೆ‘ ಎಂದು ಅವರು ತಿಳಿಸಿದರು. 

‘ಸ್ನಾನ ಮಾಡಿದ, ಬಟ್ಟೆ ಒಗೆದ ನೀರನ್ನೂ 200 ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ನಲ್ಲಿ ಸಂಗ್ರಹಿಸಲಾಗುತ್ತಿದೆ. ಅದು ಹರಿದು ಹೋಗುವ ಜಾಗದಲ್ಲಿ ಬೇರಿನ ಜೊಂಡು ಅಳವಡಿಸಲಾಗಿದೆ. ಇದು ನೀರಿನಲ್ಲಿರುವ ಉಪ್ಪಿನ ಅಂಶ ಹಾಗೂ ಫಾಸ್ಫೇಟ್, ನೈಟ್ರೇಟ್‌ನಂತಹ ಅಂಶಗಳನ್ನು ಸೋಸುತ್ತದೆ. ಈ ನೀರನ್ನು ಗಿಡಗಳಿಗೆ ಮತ್ತು ಶೌಚಾಲಯ ಬಳಕೆಗೆ ಉಪಯೋಗಿಸಬಹುದು‘ ಎಂದು ಅವರು ವಿವರಿಸಿದರು. 

ಬಳಸಿ ಉಳಿದ ನೀರನ್ನು ಇಂಗು ಬಾವಿಗೆ ಬಿಡುವ ವ್ಯವಸ್ಥೆಯನ್ನು ಇವರು ಮಾಡಿದ್ದಾರೆ. ಇದರಲ್ಲಿ ಪ್ರತಿ ವರ್ಷ 10 ಲಕ್ಷ ಲೀಟರ್‌ ನೀರು ಇಂಗುವ ಮೂಲಕ ಅಂತರ್ಜಲ ಸೇರುತ್ತಿದೆ.

ಮಳೆ ನೀರಿನಿಂದಲೇ ಕಟ್ಟಿದರು ಮನೆ !

ಎಲ್ಲರೂ ಮನೆ ಕಟ್ಟಿದ ಮೇಲೆ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡರೆ, ತಮ್ಮ ನಿವೇಶನದಲ್ಲಿ ಮೊದಲೇ ಈ ವ್ಯವಸ್ಥೆ ಅಳವಡಿಸಿಕೊಂಡು ಅದೇ ನೀರಿನಿಂದ 40X60 ವಿಸ್ತೀರ್ಣದ  ಮನೆ ಕಟ್ಟಿದ್ದಾರೆ ಖಾಸಗಿ ಕಂಪನಿ ಉದ್ಯೋಗಿ ರಘುರಾಮ್ ಗಿರಿಧರ್.

ವಿದ್ಯಾರಣ್ಯಪುರದಲ್ಲಿರುವ ತಮ್ಮ ನಿವಾಸ ‘ಉತ್ಸವ’ದಲ್ಲಿ ಪ್ರತಿ ಮಳೆಗಾಲದಲ್ಲೂ ನೀರಿನ ‘ಉತ್ಸವ’ ನಡೆಯುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

‘ಮನೆ ಕಟ್ಟುವುದಕ್ಕೂ ಮುನ್ನ ನಿವೇಶನದ ಮೇಲೆ ಬೀಳುವ ಮಳೆ ನೀರು ಬಾವಿಗೆ ಸೇರುವಂತೆ ಮಾಡಿದ್ದೆವು. ಮೂರು ವರ್ಷಗಳ ಹಿಂದೆ ಮನೆ ಕಟ್ಟಲು ಆರಂಭಿಸಿದೆವು. ಬೋರ್‌ವೆಲ್‌ ಕೊರೆಯಿಸಲೇಬಾರದು ಎಂದು ಮೊದಲೇ ನಿರ್ಣಯಿಸಿದ್ದೆವು. ಒಂದು ಸಂಪ್‌ ಮಾಡಿ, ಅದರಿಂದ ಬಾವಿಗೆ ನೀರು ಬಿಟ್ಟಿದ್ದೆವು. ಆ ನೀರಿನಿಂದಲೇ ಮನೆ ನಿರ್ಮಾಣ ಮಾಡಿದ್ದೇವೆ‘ ಎಂದು ಹೇಳಿದರು.

‘ಬೋರ್‌ವೆಲ್‌ ಕೊರೆಸಲು ಲಕ್ಷಗಟ್ಟಲೇ ಖರ್ಚು ಮಾಡಬೇಕಾಗುತ್ತದೆ. ಕೇವಲ ₹25 ಸಾವಿರ ವೆಚ್ಚದಲ್ಲಿ ಬಾವಿಯನ್ನು ಮಾಡಿಕೊಂಡಿದ್ದೆವು. ಈ ಬಾವಿಯಲ್ಲಿ ಸುಮಾರು ನಾಲ್ಕು ಅಡಿಗಳಷ್ಟು ನೀರು ಇದ್ದೇ ಇರುತ್ತದೆ. ಕುಡಿಯಲು ಹೊರತು ಪಡಿಸಿ, ಉಳಿದೆಲ್ಲ ಕೆಲಸಗಳಿಗೆ ಇದೇ ನೀರು ಬಳಸುತ್ತೇವೆ. ಬಾವಿಯ ನಿರ್ವಹಣಾ ವೆಚ್ಚ ಮತ್ತು ಕಾವೇರಿ ನೀರಿನ ಶುಲ್ಕ ಸೇರಿ ತಿಂಗಳಿಗೆ ₹300 ಬಿಲ್ ಮಾತ್ರ ಬರುತ್ತಿದೆ’ ಎಂದು ರಘುರಾಮ್‌ ಹೇಳಿದರು.

ತಾರಸಿಯ ನೀರು ಹರಿದು ಬರಲು ಪೈಪ್‌ ಅಳವಡಿಸಿದ್ದು, ಅದು ಸಂಪ್‌ಗೆ ಸೇರುವಂತೆ ಮಾಡಲಾಗಿದೆ. ಈ ನೀರು ಶುದ್ಧೀಕರಣವಾಗಿ ಬರಲು ₹4,000 ವೆಚ್ಚದಲ್ಲಿ ಪೈಪ್‌ಗೆ ‘ಫಿಲ್ಟರ್‌’ ಅಳವಡಿಸಲಾಗಿದೆ. ಸಂಪ್‌ಗೆ ಬರುವ ನೀರನ್ನು ಟ್ಯಾಂಕ್‌ಗೆ ಏರುವಂತೆ ಮಾಡಿರುವ ರಘುರಾಮ್‌, ‘ನಾಲ್ಕು ಬಾರಿ ಮಾಲ್‌ಗೆ ಹೋಗಿ ಬರುವ ಖರ್ಚಿನಲ್ಲಿಯೇ ಈ ರೀತಿಯ ಬಾವಿ ನಿರ್ಮಾಣ ಮಾಡಿಕೊಳ್ಳಬಹುದು‘ ಎಂದೂ ಅವರು ಸಲಹೆ ನೀಡುತ್ತಾರೆ.

ನಗರದಲ್ಲಿ ಇನ್ನೂ ಲಕ್ಷಾಂತರ ಮನೆಗಳಿಗೆ ಇಂತಹ ವ್ಯವಸ್ಥೆ ಅಳವಡಿಸಿಕೊಳ್ಳಲು ಅವಕಾಶವಿದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಬಹುತೇಕರು ದಂಡ ಕಟ್ಟಿ ಸುಮ್ಮನಾಗುತ್ತಿದ್ದಾರೆ. ಜಲಮಂಡಳಿ ಕೂಡ ದಂಡ ಕಟ್ಟಿಸಿಕೊಂಡು ಸುಮ್ಮನಾಗದೆ ಇನ್ನಷ್ಟು ಕಟ್ಟುನಿಟ್ಟಾಗಿ ನಿಯಮ ಪಾಲನೆಗೆ ಮುಂದಾದರೆ, ವಿಶ್ವನಾಥ್ ಮತ್ತು ರಘುರಾಮ್‌ ಅವರಂಥವರ ಸಂಖ್ಯೆ ಹೆಚ್ಚಾದರೆ ವರ್ಷಧಾರೆಯು ನಗರದ ಪಾಲಿಗೆ ನಿಜವಾದ ಸಂಪತ್ತಾಗಬಹುದು.

ದಂಡ ಕಟ್ಟಿ ಸುಮ್ಮನಾಗುತ್ತಾರೆ !

ಜಲಮಂಡಳಿಯ ಕಾಯ್ದೆ 72ಎ ಪ್ರಕಾರ, ಬಿಬಿಎಂಪಿ  ವ್ಯಾಪ್ತಿಯಲ್ಲಿರುವ 2,400 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚು ವಿಸ್ತೀರ್ಣದ ನಿವೇಶನದಲ್ಲಿ, ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ಹಾಗೂ ನೂತನವಾಗಿ ನಿರ್ಮಿಸುವ 1,200 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚು ವಿಸ್ತೀರ್ಣದ ಎಲ್ಲ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸುವುದು ಕಡ್ಡಾಯ. 2009ರ ಆಗಸ್ಟ್‌ನಿಂದ ಈ ಕಾನೂನು ಜಾರಿಗೆ ಬಂದಿದೆ.

2009ರ ನಂತರ ನಿರ್ಮಾಣವಾದ ನಗರದ ಸುಮಾರು 1.50 ಲಕ್ಷ ಕಟ್ಟಡಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆ ಅಳವಡಿಸಿಕೊಳ್ಳದ 56 ಸಾವಿರ ಕಟ್ಟಡಗಳ ಮಾಲೀಕರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಜಲಮಂಡಳಿ ಹೇಳುತ್ತದೆ. ತಿಂಗಳಿಗೆ ₹1.5 ಕೋಟಿಗೂ ಹೆಚ್ಚು ದಂಡ ವಸೂಲಿ ಮಾಡಲಾಗುತ್ತಿದೆ.

ಉದಾಹರಣೆಗೆ, ನೀರಿನ ಶುಲ್ಕ ₹100 ಎಂದು ತೆಗೆದುಕೊಂಡರೆ, ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳದ ಕಟ್ಟಡಗಳ ಮಾಲೀಕರಿಗೆ ಮೊದಲ ಮೂರು ತಿಂಗಳು ₹25ರಂತೆ ದಂಡ ಹಾಕಲಾಗುತ್ತದೆ. ಅಂದರೆ, ಅವರು ₹125 ಪಾವತಿಸಬೇಕು. ಆರು ತಿಂಗಳ ನಂತರವೂ ಮಳೆ ಸಂಗ್ರಹ ವ್ಯವಸ್ಥೆ ಅಳವಡಿಸದಿದ್ದರೆ, ನೀರಿನ ಶುಲ್ಕದ ಶೇ 50ರಷ್ಟು ದಂಡ ವಿಧಿಸಲಾಗುತ್ತದೆ. 

ಸಮಗ್ರ ಮಾಹಿತಿಯ ‘ಸುಗ್ಗಿ ಕೇಂದ್ರ’

ಜಯನಗರದ ಸರ್.ಎಂ. ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರದಲ್ಲಿ ಮಳೆ ಸಂಗ್ರಹ ವ್ಯವಸ್ಥೆಯ 21 ಮಾದರಿಗಳು ಇವೆ. ಇಲ್ಲಿಗೆ ಭೇಟಿ ನೀಡಿದರೆ ಈ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮತ್ತು ಸಮಗ್ರ ಮಾಹಿತಿ ಸಿಗಲಿದೆ.

‘ಈವರೆಗೆ ಈ ಕೇಂದ್ರಕ್ಕೆ ಶಾಲಾ ವಿದ್ಯಾರ್ಥಿಗಳು, ನಾಗರಿಕರು ಸೇರಿ 50 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ಇಲ್ಲಿಗೆ ಬಂದವರ ಪೈಕಿ ಶೇ 50ಕ್ಕೂ ಹೆಚ್ಚು ಜನ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ’ ಎಂದು ಜಲಮಂಡಳಿ ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಂ. ಮಂಜುನಾಥ್ ಹೇಳಿದರು.

ಮಳೆ ನೀರು ಸಂಗ್ರಹದ ಬಗ್ಗೆ ಮಾಹಿತಿಗೆ, 080–26653666 ಸಂಖ್ಯೆ ಸಂಪರ್ಕಿಸಬಹುದು.

ಖರ್ಚಿನ ಚಿಂತೆ !

30x40 ಚದರ ಅಡಿ ವಿಸ್ತೀರ್ಣದ ಮನೆಗೆ ಸಂಪು ಸಮೇತ ಈ ವ್ಯವಸ್ಥೆ ಅಳವಡಿಸಿಕೊಳ್ಳಲು ₹6 ಸಾವಿರದಿಂದ ₹7 ಸಾವಿರ ವೆಚ್ಚವಾಗುತ್ತದೆ. ಇಂಗುಗುಂಡಿ ಮಾಡಲು ₹15 ಸಾವಿರದಿಂದ ₹16 ಸಾವಿರ ಖರ್ಚಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಸೇವಾ ಸಂಸ್ಥೆಗಳು ₹30 ಸಾವಿರಕ್ಕಿಂತ ಹೆಚ್ಚು ಶುಲ್ಕ ಕೇಳುತ್ತವೆ. ಹೀಗಾಗಿ, ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಹಿಂದೆ ಮುಂದೆ ನೋಡುವಂತಾಗಿದೆ ಎನ್ನುತ್ತಾರೆ ಜೆ.ಪಿ. ನಗರದ ಸಂಗಮೇಶ್.

ಅಂಕಿ–ಅಂಶ

145 ಕೋಟಿ ಲೀಟರ್‌

ಕಾವೇರಿ ನದಿಯಿಂದ ನಗರಕ್ಕೆ ದಿನಕ್ಕೆ ಪೂರೈಕೆಯಾಗುವ ನೀರಿನ ಪ್ರಮಾಣ

970 ಮಿ.ಮೀ.

ವರ್ಷವೊಂದರಲ್ಲಿ ನಗರದಲ್ಲಿ ಬೀಳುವ ಮಳೆಯ ಸರಾಸರಿ ಪ್ರಮಾಣ

300 ಕೋಟಿ ಲೀಟರ್

ಮಳೆ ನೀರು ಸಂಗ್ರಹಿಸಿದರೆ ನಗರಕ್ಕೆ ನಿತ್ಯ ಸಿಗುವ ನೀರು

200%: ಕಾವೇರಿಯಿಂದ ಬರುವ ನೀರಿಗೆ ಹೋಲಿಸಿದರೆ ನಗರದಲ್ಲಿ ಸಂಗ್ರಹಿಸಿ ಬಳಸಬಹುದಾದ ಮಳೆನೀರಿನ ಪ್ರಮಾಣ

ಬೆಂಗಳೂರಿನಲ್ಲಿ ಮಳೆ ಪ್ರಮಾಣ ಮತ್ತು ದಿನಗಳು

ತಿಂಗಳು;  ಸರಾಸರಿ ಮಳೆ ದಿನಗಳು; ಮಳೆಪ್ರಮಾಣ (ಮಿ.ಮೀ);  40X60 ನಿವೇಶನಗಳಲ್ಲಿ ಸಂಗ್ರಹಿಸಬಹುದಾದ ನೀರು (ಲೀಟರ್‌ಗಳಲ್ಲಿ)

ಜನವರಿ; 0; 5; 1,113

ಫೆಬ್ರುವರಿ; 0; 7; 1,634

ಮಾರ್ಚ್‌; 1;10;2,214

ಏಪ್ರಿಲ್‌; 3; 47; 10,529

ಮೇ; 7; 112; 24,968

ಜೂನ್‌ 6; 80; 17,764

ಜುಲೈ; 8; 112; 24,968

ಆಗಸ್ಟ್‌; 10; 139; 30,914

ಸೆಪ್ಟೆಂಬರ್‌; 9; 182; 40,660

ಅಕ್ಟೋಬರ್‌; 8; 161; 35,815

ನವೆಂಬರ್‌; 4; 58; 12,883

ಡಿಸೆಂಬರ್‌; 1; 16; 3,657

ಒಟ್ಟು; 57; 929; 2,07,074

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು