ಗುರುವಾರ , ಜೂನ್ 30, 2022
25 °C
ಲಾಕ್‌ಡೌನ್‌: ತೆವಳುತ್ತಾ ಸಾಗುತ್ತಿದ್ದ ರಸ್ತೆ ಕಾಮಗಾರಿಗೆ ಚುರುಕು

ಸ್ಮಾರ್ಟ್‌ ಸಿಟಿ: ಗಡುವಿನೊಳಗೆ ಮುಗಿದೀತೇ ಕಾಮಗಾರಿ?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ನಗರದ ಕಸ್ತೂರಿ ಬಾ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಗತಿಯಲ್ಲಿರುವ ದೃಶ್ಯ ಸೋಮವಾರ ಕಂಡುಬಂತು -ಪ್ರಜಾವಾಣಿ ಚಿತ್ರ/ರಂಜು ಪಿ

ಬೆಂಗಳೂರು: ಲಾಕ್‌ಡೌನ್‌ನಿಂದ ನಗರದ ಜನತೆ ತರಹೇವಾರಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸದಾ ವಾಹನಗಳಿಂದ ಗಿಜಿಗುಡುತ್ತಿದ್ದ ರಸ್ತೆಗಳಲ್ಲೂ ಬೆರಳೆಣಿಕೆಯಷ್ಟೇ ವಾಹನಗಳು ಓಡಾಡುತ್ತಿವೆ. ಲಾಕ್‌ಡೌನ್‌ನಿಂದ ಇತರರಿಗೆ ಏನೇ ಸಮಸ್ಯೆ ಆಗಿರಬಹುದು. ಆದರೆ, ಇದರಿಂದ ಪ್ರಯೋಜನ ಪಡೆದಿದ್ದು ಮಾತ್ರ ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಸಂಸ್ಥೆ.

ನಗರದ ಕೇಂದ್ರ‌ ವಾಣಿಜ್ಯ ಪ್ರದೇಶದಲ್ಲಿ ಸದಾ ಗಿಜಿಗುಡುವ ರಸ್ತೆಗಳಲ್ಲಿ ಕಾಮಗಾರಿಗಳನ್ನು ಅತ್ತ ಸರಾಗವಾಗಿ ನಡೆಸಲೂ ಆಗದೇ, ಇತ್ತ ವಾಹನ ಸಂಚಾರ ಮಾರ್ಗವನ್ನೂ ಮಾರ್ಪಾಡು ಮಾಡಲೂ ಆಗದೇ ಹೈರಾಣಾಗಿದ್ದ ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಸಂಸ್ಥೆ ಲಾಕ್‌ಡೌನ್‌ ಸಂದರ್ಭದ ವಿರಳ ವಾಹನ ಸಂಚಾರದ ಅನುಕೂಲವನ್ನು ಬಳಸಿಕೊಂಡು ರಸ್ತೆ ಅಭಿವೃದ್ಧಿ ಕಾಮಗಾರಿಗಳ ವೇಗ ಹೆಚ್ಚಿಸಿದೆ. ಸದಾ ತೆವಳುತ್ತಾ ಸಾಗುತ್ತಿದ್ದ ಸ್ಮಾರ್ಟ್‌ ಸಿಟಿ ಯೋಜನೆಯ ರಸ್ತೆ ಕಾಮಗಾರಿಗಳು ಒಂದೂವರೆ ತಿಂಗಳಿನಿಂದ ಜಾರಿಯಲ್ಲಿರುವ ಲಾಕ್‌ಡೌನ್‌ ಸಂದರ್ಭದಲ್ಲಿ ಸ್ವಲ್ಪ ಚುರುಕಿನಿಂದ ನಡೆದಿವೆ. 

ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಕೈಗೆತ್ತಿಕೊಳ್ಳಲಾದ ಒಟ್ಟು 36 ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಲ್ಲಿ 32 ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಅವುಗಳಲ್ಲಿ ಒಂಬತ್ತು ಕಾಮಗಾರಿಗಳು ಪೂರ್ಣಗೊಂಡಿವೆ. 12 ರಸ್ತೆ ಕಾಮಗಾರಿಗಳನ್ನು ಜೂನ್‌ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುವ ಹುಮ್ಮಸ್ಸಿನಲ್ಲಿದೆ ಸ್ಮಾರ್ಟ್‌ ಸಿಟಿ ಸಂಸ್ಥೆ. ಇನ್ನುಳಿದ ಕಾಮಗಾರಿಗಳನ್ನು ಜುಲೈನಲ್ಲಿ ಪೂರ್ಣಗೊಳಿಸಲು ಸಂಸ್ಥೆಯು ಸಿದ್ಧತೆ ಮಾಡಿಕೊಂಡಿದೆ.

ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ನಗರದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ್ದಾಗ ಕಾಮಗಾರಿಗಳನ್ನು ನಡೆಸುವುದಕ್ಕೂ ಸರ್ಕಾರ ಅನುಮತಿ ನೀಡಿರಲಿಲ್ಲ. ಹಾಗಾಗಿ ಎರಡು ತಿಂಗಳು ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ನಂತರ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಲು ಸರ್ಕಾರ ಅನುಮತಿ ನೀಡಿತಾದರೂ, ಅಷ್ಟರಲ್ಲಿ ಬಹುತೇಕ ಕಾರ್ಮಿಕರು ನಗರವನ್ನು ತೊರೆದಿದ್ದರು. ಹಾಗಾಗಿ ಕಳೆದ ಲಾಕ್‌ಡೌನ್‌ ಸಂದರ್ಭದಲ್ಲಿ ವಾಹನ ಸಂಚಾರ ವಿರಳವಾಗಿದ್ದ ಪರಿಸ್ಥಿತಿಯ ಪ್ರಯೋಜನವನ್ನು ಪಡೆಯಲು ಸಂಸ್ಥೆಗೆ ಸಾಧ್ಯವಾಗಿರಲಿಲ್ಲ.

ಆದರೆ, ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಜಾರಿಗೊಂಡ ಲಾಕ್‌ಡೌನ್‌ ವೇಳೆ ಹಾಗಾಗಲಿಲ್ಲ. ಲಾಕ್‌ಡೌನ್‌ ಜಾರಿಯಲ್ಲಿದ್ದಾಗಲೂ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸುವುದಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿತು. ಹಾಗಾಗಿ ರಾಜಭವನ ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್‌, ಅರಮನೆ ರಸ್ತೆ, ಕ್ವೀನ್ಸ್‌ ರಸ್ತೆ, ಬ್ರಿಗೇಡ್‌ ರಸ್ತೆಯಂತಹ ಸದಾ ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಗಳಲ್ಲೂ ಸ್ಮಾರ್ಟ್‌ ಸಿಟಿ ಕಾಮಗಾರಿಯನ್ನು ತ್ವರಿತವಾಗಿ ಜಾರಿಗೊಳಿಸಲು ಸಂಸ್ಥೆಯೂ ಸಿದ್ಧತೆ ಮಾಡಿಕೊಂಡಿತು.

‘ಉನ್ನತ ಅಧಿಕಾರಿಗಳು ಮುತುವರ್ಜಿ ವಹಿಸಿ ಲಾಕ್‌ಡೌನ್‌ ಸಂದರ್ಭದಲ್ಲೂ ಸ್ಮಾರ್ಟ್‌ಸಿಟಿ ಕಾಮಗಾರಿ ಮುಂದುವರಿಸುವುದಕ್ಕೆ ಅನುಮತಿ ನೀಡಿದರು. ಅದಕ್ಕೆ ಪೂರಕವಾಗಿ ನಾವು ಕಾಮಗಾರಿಗೆ ಅಗತ್ಯವಿರುವ ಕಾರ್ಮಿಕರ ಓಡಾಟಕ್ಕೆ ವಿಶೇಷ ವಾಹನ ವ್ಯವಸ್ಥೆ ಮಾಡಿದೆವು. ಪೊಲೀಸ್‌ ಇಲಾಖೆಯವರೂ ಸಹಕಾರ ನೀಡಿದರು. ಸರಕುಗಳ ಹಾಗೂ ಪರಿಕರ ಸಾಗಾಟಕ್ಕೂ ವಿಶೇಷ ಅನುಮತಿ ಪಡೆದುಕೊಂಡಿದ್ದೆವು. ಹಾಗಾಗಿ ಲಾಕ್‌ಡೌನ್‌ ಅವಧಿಯಲ್ಲಿ ಸಂಚಾರ ದಟ್ಟಣೆ ಇಲ್ಲದ ಸಂದರ್ಭ ಬಳಸಿಕೊಂಡು ಬಹುತೇಕ ರಸ್ತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದೆವು’ ಎಂದು ಬೆಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ಹಿರಿಯ ಎಂಜಿನಿಯರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

’ಕಾರ್ಮಿಕರೆಲ್ಲರಿಗೂ ಕೋವಿಡ್‌ ಲಸಿಕೆ ಹಾಕಿಸಿದ್ದೆವು. ಅವರು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಕೆಲಸದಲ್ಲಿ ನಿರತರಾಗಿದ್ದರು. ಅವರಿಗೆ ಊಟ ಹಾಗೂ ಉಪಾಹಾರವನ್ನು ಕಾಮಗಾರಿಯ ಸ್ಥಳಕ್ಕೆ ಪೂರೈಸಲು ವ್ಯವಸ್ಥೆ ಮಾಡಿದ್ದೆವು’ ಎಂದು ಅವರು ಮಾಹಿತಿ ನೀಡಿದರು.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಬಹುತೇಕ ರಸ್ತೆ ಕಾಮಗಾರಿಗಳಲ್ಲಿ ಶೇ 75ರಷ್ಟು ಪ್ರಮುಖ ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನು ಕೆಲವು ಕಡೆ ಅಂತಿಮ ಸ್ಪರ್ಶ ನೀಡುವ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ’ ಎಂದು ಅವರು ತಿಳಿಸಿದರು.

ಮಿಲ್ಲರ್ಸ್‌ ರಸ್ತೆ, ಬೌರಿಂಗ್‌ ರಸ್ತೆ ಕಾಮಗಾರಿಗಳು ಜುಲೈನಲ್ಲಿ ಅಥವಾ ಆಗಸ್ಟ್‌ನಲ್ಲಿ ಪೂರ್ಣಗೊಳಿಸುವುದಾಗಿ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅವೆನ್ಯೂ ರಸ್ತೆಯ ಕಾಮಗಾರಿ ಈಗಲೂ ಚುರುಕುಗೊಂಡಂತಿಲ್ಲ. ಲಾಕ್‌ಡೌನ್‌ ತೆರವುಗೊಳ್ಳುತ್ತಿದ್ದಂತೆಯೇ ಇಲ್ಲಿ ಜನದಟ್ಟಣೆ  ಮತ್ತೆ ಯಥಾಸ್ಥಿತಿಗೆ ಬಂದರೆ ಕಾಮಗಾರಿ ಮುಂದುವರಿಸಲು ಕಷ್ಟವಾಗುತ್ತದೆ. ಹೆಚ್ಚು ಜನದಟ್ಟಣೆಯಿಂದ ಕೂಡಿರುವ ಈ ರಸ್ತೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. 

ಜೂನ್‌ ಅಂತ್ಯದೊಳಗೆ 21 ರಸ್ತೆ ಲೋಕಾರ್ಪಣೆ

’ನಗರದ ಕೇಂದ್ರ ವಾಣಿಜ್ಯ ಪ್ರದೇಶದ ಒಟ್ಟು 36 ರಸ್ತೆಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅವುಗಳಲ್ಲಿ 32 ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಇವುಗಳಲ್ಲಿ 21 ರಸ್ತೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಜೂನ್‌ ಅಂತ್ಯದೊಳಗೆ ಇವುಗಳನ್ನು ಲೋಕಾರ್ಪಣೆ ಮಾಡಲಿದ್ದೇವೆ’ ಎಂದು ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್‌ ‘ಪ್ರಜಾವಾಣಿ’ಗೆ ತಿಳಿಸಿದರು.


ಪಿ.ರಾಜೇಂದ್ರ ಚೋಳನ್‌

‘11 ರಸ್ತೆಗಳ ಕಾಮಗಾರಿಗಳನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದೇವೆ. ಈ ರಸ್ತೆಗಳಲ್ಲೂ ಒಂದು ಪಾರ್ಶ್ವದ ಕಾಮಗಾರಿ ಮುಗಿದಿದ್ದು, ಇನ್ನೊಂದು ಪಾರ್ಶ್ವದ ಕಾಮಗಾರಿ ಮಾತ್ರ ಬಾಕಿ ಇದೆ. ಅವೆನ್ಯೂ ರಸ್ತೆ ಕಾಮಗಾರಿ ಮಾತ್ರ ಸ್ವಲ್ಪ ವಿಳಂಬವಾಗಲಿದೆ. ಈ ಕಾಮಗಾರಿ ಆರಂಭಿಸುವಾಗಲೇ ತಡವಾಗಿತ್ತು’ ಎಂದು ಮಾಹಿತಿ ನೀಡಿದರು.

‘ಲಾಕ್‌ಡೌನ್‌ ಜಾರಿಯಾಗಿದ್ದರಿಂದ ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಯಿತು. ಕಾಮಗಾರಿ ಚುರುಕುಗೊಳಿಸಲು ಮಾರ್ಚ್‌ನಲ್ಲೇ ಸಿದ್ಧತೆ ಮಾಡಿಕೊಂಡಿದ್ದೆವು. ಗುತ್ತಿಗೆದಾರರಿಗೆ ಹಾಗೂ ಕಾರ್ಮಿಕರಿಗೆ ಬೇಕಾದ ಅನುಕೂಲ ಮಾಡಿಕೊಟ್ಟೆವು’ ಎಂದರು.

‘ರಸ್ತೆ ಕಾಮಗಾರಿಗಳಲ್ಲದೇ ಕೆ.ಆರ್‌.ಮಾರುಕಟ್ಟೆ ಅಭಿವೃದ್ಧಿ, ಜವಾಹರಲಾಲ್‌ ನೆಹರೂ ತಾರಾಲಯದಲ್ಲಿ ಸಭಾಂಗಣ ನಿರ್ಮಾಣ ಕಾಮಗಾರಿಗಳೂ ಪ್ರಗತಿಯಲ್ಲಿವೆ. ಆದರೆ, ಲಾಕ್‌ಡೌನ್‌ ಸಂದರ್ಭದಲ್ಲಿ ಉಳಿದ ಕೆಲಸಗಳಿಗಿಂತ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಿದೆವು. ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ರಸ್ತೆಗಳೆಲ್ಲವೂ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿವೆ. ಇಲ್ಲಿ ವಾಹನಗಳು ಸದಾ ಗಿಜಿಗುಡುತ್ತಿರುತ್ತವೆ. ಈ ಪರಿಸ್ಥಿತಿಯಲ್ಲಿ ಒಳಚರಂಡಿ ಕೊಳವೆಗಳನ್ನು ಸ್ಥಳಾಂತರಿಸುವುದು ದೊಡ್ಡ ತಲೆನೋವಿನ ಕೆಲಸ. ಇದಕ್ಕಾಗಿ ಕೆಲವೊಮ್ಮೆ ವಾಹನ ಸಂಚಾರ ಮಾರ್ಗ ಮಾರ್ಪಾಡು ಮಾಡಬೇಕಾಗುತ್ತದೆ. ಅದಕ್ಕೆ ಸಂಚಾರ ಪೊಲೀಸರಿಂದ ಅನುಮತಿ ಪಡೆಯಲು ಸಮಯ ತಗಲುತ್ತದೆ. ಲಾಕ್‌ಡೌನ್‌ ಸಂದರ್ಭದಲ್ಲಿ ವಾಹನ ಸಂಚಾರ ವಿರಳವಾಗಿದ್ದರಿಂದ ಯಾವುದೇ ರಗಳೆಗಳಿಲ್ಲದೇ ಕಾಮಗಾರಿ ನಡೆಸಲು ಸಾಧ್ಯವಾಯಿತು’ ಎಂದು ಅವರು ವಿವರಿಸಿದರು.

ಪೂರ್ಣಗೊಂಡಿರುವ ರಸ್ತೆ ಕಾಮಗಾರಿಗಳು

ಹೇಯ್ನ್ಸ್‌ ರಸ್ತೆ

ವುಡ್‌ ಸ್ಟ್ರೀಟ್‌

ಟೇಟ್‌ ಲೇನ್

ರಾಜಾ ರಾಮಮೋಹನರಾಯ್‌ ರಸ್ತೆ

ಕಾನ್ವೆಂಟ್‌ ರಸ್ತೆ

ಮೆಗ್ರಾತ್‌ ರಸ್ತೆ

ಕ್ಯಾಸಲ್‌ ಸ್ಟ್ರೀಟ್‌

ಲ್ಯಾವೆಲ್ಲೆ ರಸ್ತೆ

ತಾರಾಲಯ ರಸ್ತೆ

2021ರ ಜೂನ್‌ನಲ್ಲಿ ಪೂರ್ಣಗೊಳ್ಳಲಿರುವ ರಸ್ತೆ ಕಾಮಗಾರಿಗಳು

ಕ್ವೀನ್ಸ್‌ ರಸ್ತೆ

ಇನ್ಫೆಂಟ್ರಿ ರಸ್ತೆ

ಕಮರ್ಷಿಯಲ್‌ ಸ್ಟ್ರೀಟ್‌

ಡಿಕೆನ್ಸನ್‌ ರಸ್ತೆ

ಬ್ರಿಗೇಡ್‌ ರಸ್ತೆ

ಕಂಟೋನ್ಮೆಂಟ್‌ ರಸ್ತೆ

ಮಿಲ್ಲರ್ಸ್‌ ರಸ್ತೆ ಎಕ್ಸ್‌ಟೆನ್ಷನ್‌

ರಾಜಭವನ ರಸ್ತೆ

ಚಾಂದಿನಿ ಚೌಕ ರಸ್ತೆ

ಜುಮ್ಮಾ ಮಸೀದಿ ರಸ್ತೆ

ಕಸ್ತೂರಬಾ ರಸ್ತೆ

ಅರಮನೆ ರಸ್ತೆ

2021ರ ಜುಲೈ/ ಆಗಸ್ಟ್‌ನಲ್ಲಿ ಪೂರ್ಣಗೊಳ್ಳುವ ರಸ್ತೆ ಕಾಮಗಾರಿಗಳು

ಮಿಲ್ಲರ್ಸ್‌ ರಸ್ತೆ

ಅವೆನ್ಯೂ ರಸ್ತೆ

ಕಾಮರಾಜ ರಸ್ತೆ

ಹಲಸೂರು ರಸ್ತೆ

ಸೇಂಟ್‌ ಜಾನ್ಸ್‌ ರಸ್ತೆ

ಸೇಂಟ್ ಜಾನ್ಸ್‌ ಚರ್ಚ್ ರಸ್ತೆ

ಎಚ್‌ಕೆಪಿ ರಸ್ತೆ

ಎನ್‌ಆರ್ ರಸ್ತೆ

ರೇಸ್‌ಕೋರ್ಸ್‌ ರಸ್ತೆ

ರೆಹ್ನಿಯಸ್‌ ರಸ್ತೆ

ಸೆಂಟ್ರಲ್‌ ಸ್ಟ್ರೀಟ್‌

ಬೌರಿಂಗ್ ರಸ್ತೆ

ಅಂಕಿ ಅಂಶ

36- ಸ್ಮಾರ್ಟ್‌ ಸಿಟಿ ಯೋಜನೆಯಡಿ ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ರಸ್ತೆಗಳ ಸಂಖ್ಯೆ

26 ಕಿ.ಮೀ- ಅಭಿವೃದ್ಧಿಗೊಳ್ಳಲಿರುವ ರಸ್ತೆಗಳ ಒಟ್ಟು ಉದ್ದ

₹ 481.65 ಕೋಟಿ- ರಸ್ತೆ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಮೊತ್ತ

₹ 191.1 ಕೋಟಿ- ಇದುವರೆಗೆ ವೆಚ್ಚವಾಗಿರುವ ಮೊತ್ತ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು