ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು | ಉಪನಗರ ರೈಲು: ಕಾಮಗಾರಿಗೆ ಇನ್ನೂ ಮೀನಮೇಷ

ಪ್ರಧಾನಿ ನೀಡಿರುವ 40 ತಿಂಗಳ ಗಡುವಿನೊಳಗೆ ಯೋಜನೆ ಅನುಷ್ಠಾನ ಅನುಮಾನ
Last Updated 1 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ಉಪನಗರ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಅಡಿಗಲ್ಲು ಹಾಕಿದರೂ ಕಾಮಗಾರಿ ಆರಂಭಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ–ರೈಡ್) ಇನ್ನೂ ಮೀನಮೇಷ ಎಣಿಸುತ್ತಿದೆ. ಬೈಯಪ್ಪನಹಳ್ಳಿ–ಚಿಕ್ಕಬಾಣಾವರ (ಮಲ್ಲಿಗೆ ಕಾರಿಡಾರ್) ನಡುವಿನ 25 ಕಿಲೋ ಮೀಟರ್ ಮಾರ್ಗದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಗುತ್ತಿಗೆ ಪಡೆದಿರುವ ಕಂಪನಿಗೆ ಇನ್ನೂ ಕಾರ್ಯಾದೇಶ ನೀಡಿಲ್ಲ.

ಜೂನ್ 20ರಂದು ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ, ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ‘40 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗೆ ಈಗ ಚಾಲನೆ ನೀಡಲಾಗುತ್ತಿದ್ದು, 40 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಘೋಷಣೆ ಮಾಡಿದ್ದರು.

ಈ ಭರವಸೆ ನೀಡಿ 42 ದಿನಗಳು ಕಳೆದಿದ್ದರೂ, ಕಾಮಗಾರಿ ಆರಂಭವಾಗಿಲ್ಲ. ಆರಂಭವಾಗುವ ಲಕ್ಷಣಗಳೂ ಕಾಣಿಸುತ್ತಿಲ್ಲ. ನಾಲ್ಕು ಕಾರಿಡಾರ್‌ಗಳ ಪೈಕಿ ಬೈಯಪ್ಪನಹಳ್ಳಿ–ಯಶವಂತಪುರ–ಚಿಕ್ಕಬಾಣಾವರ ಮಾರ್ಗದ ಕಾಮಗಾರಿಗೆ ಮಾತ್ರ ಟೆಂಡರ್ ಪ್ರಕ್ರಿಯೆ ನಡೆದಿದೆ. ಮಾರ್ಚ್‌ನಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದ್ದು, ಎಲ್‌ ಆ್ಯಂಡ್ ಟಿ ಕಂಪನಿಯು ಸಿವಿಲ್ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದೆ. ಆದರೆ, ಈ ಕಂಪನಿಗೆ ಕೆ–ರೈಡ್ ಇನ್ನೂ ಕಾರ್ಯಾದೇಶ ನೀಡಿಲ್ಲ.

‘ಯಾವುದೇ ತೊಡಕುಗಳಿಲ್ಲ. ನಿಗದಿತ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಕೆ–ರೈಡ್ ಅಧಿಕಾರಿಗಳು ಎರಡು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಈ ಯೋಜನೆಗೆ 2020ರ ಅಕ್ಟೋಬರ್ 21ರಂದು ಅನುಮೋದನೆ ದೊರೆತಿದ್ದು, 2190 ದಿನಗಳಲ್ಲಿ (73 ತಿಂಗಳು) ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಗಡುವನ್ನು ಕೇಂದ್ರ ಸರ್ಕಾರ ನೀಡಿತ್ತು. ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು 1095 ದಿನಗಳಲ್ಲಿ(ಮೂರು ವರ್ಷ) ಪೂರ್ಣಗೊಳಿಸಬೇಕು ಎಂದು ತಿಳಿಸಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಯೋಜನೆಯನ್ನು ಇನ್ನು 40 ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

ಯೋಜನೆಗೆ ಅನುಮೋದನೆ ದೊರೆತು 656 ದಿನಗಳು ಕಳೆದಿವೆ. ‌ಸಿವಿಲ್ ಕಾಮಗಾರಿ ಆರಂಭವೇ ಆಗಿಲ್ಲ. ಆದರೂ ಕಾಮಗಾರಿ ಪೂರ್ಣಗೊಳಿಸಲು ಹೇಗೆ ಸಾಧ್ಯ ಎಂಬುದು ಈ ಯೋಜನೆ ಬಗ್ಗೆ ಕನಸು ಹೊತ್ತಿರುವ ರೈಲ್ವೆ ಹೋರಾಟಗಾರರ ಪ್ರಶ್ನೆ.

ನಗರಕ್ಕೆ ಪ್ರತ್ಯೇಕವಾಗಿ ರೈಲು ಸೇವೆ ಆರಂಭಿಸುವ ಬಗ್ಗೆ ರೈಲ್ವೆ ಇಲಾಖೆ 1983ರಲ್ಲೇ ಪ್ರಸ್ತಾವ ಸಿದ್ಧಪಡಿಸಿತ್ತು. 2010ರಲ್ಲಿ ಪ್ರಜಾ ಸಂಘಟನೆಗಳ ಒತ್ತಾಸೆಯಿಂದ ಈ ಕೂಗು ತೀವ್ರಗೊಂಡಿತು. 2019ರ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಉಲ್ಲೇಖಿಸಲಾಯಿತು. 2020ರ ಅ. 21ರಂದು ರೈಲ್ವೆ ಮಂಡಳಿಯಿಂದ ಇದಕ್ಕೆ ಅನುಮೋದನೆಯೂ ದೊರೆಯಿತು.

ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ ( ಕೆ–ರೈಡ್) ಈ ಯೋಜನೆಯನ್ನು ನಾಲ್ಕು ಕಾರಿಡಾರ್‌ಗಳನ್ನಾಗಿ ವಿಂಗಡಿಸಿದೆ. ‌

ಬೈಯಪ್ಪನಹಳ್ಳಿ–ಚನ್ನಸಂದ್ರ ನಡುವೆ ಜೋಡಿ ಮಾರ್ಗಕ್ಕೆ ಟೆಂಡರ್ ಕರೆದು ಗುತ್ತಿಗೆದಾರರನ್ನು ಅಂತಿಮಗೊಳಿಸಲಾಗಿದೆ. ಉಳಿದಂತೆ ಮೂರು ಕಾರಿಡಾರ್‌ಗಳ ಟೆಂಡರ್ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ‌ಉರುಳುತ್ತಿರುವ ದಿನಗಳನ್ನು ಎಣಿಸುವ ಕೆಲಸ ಬಿಟ್ಟರೆ ಕೆ–ರೈಡ್‌ ಬೇರೆ ಏನನ್ನೂ ಮಾಡುತ್ತಿಲ್ಲ. ಕೆ–ರೈಡ್‌ಗೆ ಚುರುಕು ಮುಟ್ಟಿಸಬೇಕಾದ ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ ಎಂದು ರೈಲ್ವೆ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಜನಪ್ರತಿನಿಧಿಗಳ ನಿದ್ರೆ

‘ಉಪನಗರ ರೈಲು ಯೋಜನೆ ಅನುಷ್ಠಾನ ವಿಳಂಬಕ್ಕೆ ರಾಜಕಾರಣಿಗಳ ನಿರ್ಲಕ್ಷ್ಯವೇ ಕಾರಣ’ ಎಂದು ರೈಲ್ವೆ ಹೋರಾಟಗಾರ ರಾಜಕುಮಾರ್ ದುಗಾರ್ ಆರೋಪಿಸಿದರು.

‘ಕೆ–ರೈಡ್ ದೂಷಿಸಿ ಪ್ರಯೋಜನವಿಲ್ಲ. ಯೋಜನೆಗೆ ಅನುಮೋದನೆ ಸಿಕ್ಕಾಗ ಪ್ರಚಾರ ಪಡೆದುಕೊಳ್ಳಲು ಪೈಪೋಟಿ ನಡೆಸುತ್ತಿದ್ದ ಬೆಂಗಳೂರಿನ ಸಂಸದರು ಈಗ ಸುಮ್ಮನಾಗಿದ್ದಾರೆ. ರಾಜಕಾರಣಿಗಳ ಈ ರೀತಿಯ ನಿದ್ರೆಯಿಂದ ಉಪನಗರ ರೈಲು ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ’ ಎಂದು ಹೇಳಿದರು.

ಅನುಮೋದನೆ ದೊರೆತು 656 ದಿನಗಳೇ ಆಗಿವೆ. ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿ 42 ದಿನಗಳು ಕಳೆದಿವೆ. ಆದರೂ, ಸಿವಿಲ್ ಕಾಮಗಾರಿ ಆರಂಭವಾಗಿಲ್ಲ. ಬೆಂಗಳೂರು ಮತ್ತು ಸುತ್ತಮತ್ತಲ ಊರುಗಳ ಸುಮಾರು 2 ಕೋಟಿ ಜನರಿಗೆ ಅನುಕೂಲ ಆಗುವ ಯೋಜನೆ ಇದು. ಈ ವಿಷಯದಲ್ಲಿ ಜನಪ್ರತಿನಿಧಿಗಳು ಇಷ್ಟು ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ ಎಂದರು.

‘ಉಪನಗರ ರೈಲು ಯೋಜನೆಗೆ ಅನುಮೋದನೆ ದೊರೆತ ಎಂಟು ತಿಂಗಳ ನಂತರ ವಿಮಾನ ನಿಲ್ದಾಣ ಮಾರ್ಗದ ಮೆಟ್ರೊ ರೈಲು ಯೋಜನೆಗೆ ಅನುಮೋದನೆ ಸಿಕ್ಕಿದೆ. ಮೆಟ್ರೊ ರೈಲು ಯೋಜನೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಅದೇ ರೀತಿ ಉಪನಗರ ರೈಲು ಯೋಜನೆ ಅನುಷ್ಠಾನ ಆಗಬಾರದೇಕೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT