ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಲಂಚ: ಸಿಬಿಎಫ್‌ಸಿ ಅಧಿಕಾರಿ ಸೇರಿ ಮೂವರ ಬಂಧನ

Published 29 ನವೆಂಬರ್ 2023, 23:30 IST
Last Updated 29 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಸಿನಿಮಾವೊಂದಕ್ಕೆ ಸೆನ್ಸಾರ್‌ ಪ್ರಮಾಣಪತ್ರ ನೀಡಲು ₹ 12,000 ಲಂಚ ಪಡೆಯುತ್ತಿದ್ದ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಾದೇಶಿಕ ಅಧಿಕಾರಿ ಪ್ರಶಾಂತ್‌ ಕುಮಾರ್‌ ಮತ್ತು ಇಬ್ಬರು ಮಧ್ಯವರ್ತಿಗಳನ್ನು ಸಿಬಿಐ ಮಂಗಳವಾರ ಬಂಧಿಸಿದೆ.

ನಿರ್ಮಾಪಕ ಎ.ವಿ. ನಾಗರಾಜ ಎಂಬುವವರು ಸಂವಿಧಾನ ಸಿನಿ ಕಂಬೈನ್ಸ್‌ ಮೂಲಕ ‘ಅಡವಿ’ ಹೆಸರಿನ ಸಿನಿಮಾ ನಿರ್ಮಿಸಿದ್ದರು. ಸಿನಿಮಾವನ್ನು ಸೆನ್ಸಾರ್‌ಗಾಗಿ ಸಲ್ಲಿಸಲಾಗಿತ್ತು. ‘ಸಬ್‌ ಟೈಟಲ್‌’ ನೀಡಿರುವುದರಲ್ಲಿ ಇದ್ದ ಲೋಪಗಳನ್ನು ಆಧರಿಸಿ ಸೆನ್ಸಾರ್‌ ಪ್ರಮಾಣಪತ್ರ ನೀಡಲಾಗದು ಎಂದಿದ್ದ ಪ್ರಾದೇಶಿಕ ಅಧಿಕಾರಿ, ₹ 15,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ನಿರ್ಮಾಪಕರು ಭೇಟಿ ಮಾಡಿ ಚೌಕಾಸಿ ನಡೆಸಿದ್ದರು. ₹ 12,000 ಲಂಚ ಕೊಟ್ಟರೆ ಸೆನ್ಸಾರ್‌ ಪ್ರಮಾಣಪತ್ರ ನೀಡುವುದಾಗಿ ಅಧಿಕಾರಿ ತಿಳಿಸಿದ್ದರು. ಈ ಕುರಿತು ನಿರ್ಮಾಪಕರು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ಘಟಕಕ್ಕೆ ದೂರು ನೀಡಿದ್ದರು.

ಮಲ್ಲೇಶ್ವರದಲ್ಲಿರುವ ಥಿಯೇಟರ್‌ ಒಂದಕ್ಕೆ ಬಂದು ಹಣ ತಲುಪಿಸುವಂತೆ ಪ್ರಶಾಂತ್‌ ಕುಮಾರ್‌ ಸೂಚಿಸಿದ್ದರು. ಮಂಗಳವಾರ ಸಂಜೆ ನಾಗರಾಜ ಹಣದ ಸಮೇತ ಅಲ್ಲಿಗೆ ಹೋಗಿದ್ದರು. ಅಧಿಕಾರಿಯ ಸೂಚನೆಯಂತೆ ಪೃಥ್ವಿರಾಜ್‌ ಮತ್ತು ರವಿ ಎಂಬ ಖಾಸಗಿ ವ್ಯಕ್ತಿಗಳು ಹಣ ಪಡೆದಿದ್ದರು. ತಕ್ಷಣ ದಾಳಿಮಾಡಿದ ಸಿಬಿಐ ಅಧಿಕಾರಿಗಳು ಮೂವರನ್ನೂ ಬಂಧಿಸಿದ್ದರು.

‘ಕಾರ್ಯಾಚರಣೆ ಬಳಿಕ ಸಿಬಿಎಫ್‌ಸಿ ಪ್ರಾದೇಶಿಕ ಅಧಿಕಾರಿಯ ಮನೆಯ ಮೇಲೆ ದಾಳಿಮಾಡಿ, ಶೋಧ ನಡೆಸಲಾಗಿದೆ. ಅಲ್ಲಿ ₹ 3 ಲಕ್ಷ ನಗದು ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ. ಮೂವರು ಆರೋಪಿಗಳನ್ನೂ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ನ್ಯಾಯಾಲಯದ ಆದೇಶದಂತೆ ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಸಿಬಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT