ಗುರುವಾರ , ಆಗಸ್ಟ್ 18, 2022
27 °C

ಲಂಚ ಪ್ರಕರಣ: ಗುತ್ತಿಗೆ ನೌಕರನಿಗೆ ಜೈಲು ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯ ಇಂದಿರಾನಗರ ಸಹಾಯಕ ಆಯುಕ್ತರ ಕಚೇರಿಯಲ್ಲಿ ಗುತ್ತಿಗೆ ನೌಕರರಾಗಿದ್ದ ಎಸ್‌. ಶ್ರೀನಿವಾಸಮೂರ್ತಿ ಎಂಬುವವರಿಗೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಮಾಹಿತಿ ಸಲ್ಲಿಸಲು ‘ಯೂಸರ್‌ ನೇಮ್‌’ ಮತ್ತು ‘ಪಾಸ್‌ವರ್ಡ್‌’ ನೀಡಲು ₹ 5,000 ಲಂಚ ಪಡೆದಿದ್ದ ಪ್ರಕರಣದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ನಾಲ್ಕು ವರ್ಷ ಜೈಲು ಹಾಗೂ ₹ 10,000 ದಂಡ ವಿಧಿಸಿದೆ.

ದೊಮ್ಮಲೂರಿನಲ್ಲಿ ಕಂಪ್ಯೂಟರ್‌ ಸಲ್ಯೂಷನ್ಸ್‌ ಕಚೇರಿ ಹೊಂದಿದ್ದ ಶಾಂತಿನಗರದ ನಿವಾಸಿಯೊಬ್ಬರು ಆದಾಯ ತೆರಿಗೆ ದಾಖಲೆಗಳನ್ನು ಸಕಾಲಕ್ಕೆ ಸಲ್ಲಿಸದ ಕಾರಣದಿಂದ ಅವರ ವ್ಯಾಟ್‌ ‘ಯೂಸರ್‌ ನೇಮ್‌’ ಮತ್ತು ‘ಪಾಸ್‌ವರ್ಡ್‌’ಗಳನ್ನು 2018ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಪುನಃ ಅವುಗಳನ್ನು ನೀಡುವಂತೆ ಉದ್ಯಮಿ ಅರ್ಜಿ ಸಲ್ಲಿಸಿದ್ದರು. ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸಮೂರ್ತಿ ಅಲಿಯಾಸ್‌ ಮೂರ್ತಿ ಅವರನ್ನು ಭೇಟಿಮಾಡಿದ್ದರು.

ಶ್ರೀನಿವಾಸಮೂರ್ತಿ ‘ಯೂಸರ್‌ ನೇಮ್‌’ ಮತ್ತು ‘ಪಾಸ್‌ವರ್ಡ್‌’ ನೀಡಲು ₹ 8,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದರು. ಅರ್ಜಿದಾರರಿಂದ ₹ 5,000 ಲಂಚ ಪಡೆಯುತ್ತಿದ್ದ ಗುತ್ತಿಗೆ ನೌಕರನನ್ನು ಎಸಿಬಿ ಬಂಧಿಸಿತ್ತು. ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ಎಸಿಬಿ, 2018ರ ನವೆಂಬರ್‌ನಲ್ಲೇ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಸೋಮವಾರ ತೀರ್ಮಾನ ಪ್ರಕಟಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ. ಲಕ್ಷ್ಮೀನಾರಾಯಣ ಭಟ್‌, ‘ಶ್ರೀನಿವಾಸಮೂರ್ತಿ ಅಪರಾಧಿ’ ಎಂದು ಸಾರಿದರು. ಅಪರಾಧಿಗೆ ನಾಲ್ಕು ವರ್ಷಗಳ ಸಾಧಾರಣ ಜೈಲು ಶಿಕ್ಷೆ ಮತ್ತು ₹ 10,000 ದಂಡ ವಿಧಿಸಿ ಆದೇಶ ಹೊರಡಿಸಿದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸಂತೋಷ್‌ ನಾಗರಲೆ ಅವರು ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಪರವಾಗಿ ವಾದ ಮಂಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು