ಸೋಮವಾರ, ಸೆಪ್ಟೆಂಬರ್ 26, 2022
22 °C

ಬ್ರಿಟನ್ ರಾಣಿ 2ನೇ ಎಲಿಜಬೆತ್ ಬೆಂಗಳೂರಿಗೆ ಭೇಟಿ ನೀಡಿದ್ದ ಅಪರೂಪದ ವಿಡಿಯೊ ನೋಡಿ..

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ರಿಟನ್‌ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ 2ನೇ ಎಲಿಜಬೆತ್ (96) ಶುಕ್ರವಾರ ನಿಧನರಾದರು. ರಾಣಿಯ ಅಂತ್ಯಸಂಸ್ಕಾರದ ನಂತರವೂ ಏಳು ದಿನಗಳವರೆಗೆ ರಾಜಮನೆತನದಲ್ಲಿ ಶೋಕಾಚರಣೆ ಮುಂದುವರಿಯಲಿದೆ. ಭಾರತದಲ್ಲಿ ಒಂದು ದಿನ ಶೋಕಾಚರಣೆ ಆಚರಿಸಲಾಯಿತು.

ಪ್ರಪಂಚದಲ್ಲೇ ವಿಶಿಷ್ಠ ವ್ಯಕ್ತಿತ್ವ ಹೊಂದಿದ್ದ 2ನೇ ಎಲಿಜಬೆತ್ ಅವರಿಗೆ ಭಾರತದ ಮೇಲೆ ವಿಶೇಷ ಪ್ರೀತಿ ಇತ್ತು.

ಉದ್ಯಾನ ನಗರಿ ಬೆಂಗಳೂರು ಸೇರಿದಂತೆ ಮೂರು ಬಾರಿ (1961, 1983, 1997) ಭಾರತಕ್ಕೆ ಭೇಟಿ ನೀಡಿದ್ದರು. ಭಾರತದ ಬಗ್ಗೆ ಅಭಿಮಾನ ಹೊಂದಿದ್ದ ಅವರು, ‘ಭಾರತೀಯರ ಪ್ರೀತಿ, ಆತಿಥ್ಯ ಮತ್ತು ಈ  ದೇಶದ ಸಂಸ್ಕೃತಿ, ಶ್ರೀಮಂತಿಕೆ ಮತ್ತು ವೈವಿಧ್ಯ ಎಲ್ಲರಿಗೂ ಪ್ರೇರಣೆ’ ಎಂದು ಶ್ಲಾಘಿಸಿದ್ದರು. 

1961ರಲ್ಲಿ ಪತಿ, ದಿವಂಗತ ಫಿಲಿಪ್, ಡ್ಯೂಕ್ ಆಫ್ ಎಡಿನ್ ಬರ್ಗ್ ಅವರೊಂದಿಗೆ ಮುಂಬೈ, ಚೆನ್ನೈ, ಕೋಲ್ಕತ್ತಗೆ ಪ್ರವಾಸ ಮಾಡಿದ್ದರು. ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಿ ಸಂಭ್ರಮಿಸಿದ್ದರು. ರಾಜ್‌ಘಾಟ್‌ಗೆ ತೆರಳಿ ಮಹಾತ್ಮಗಾಂಧಿ ಅವರಿಗೆ ಗೌರವ ಸಲ್ಲಿಸಿದರು.  

ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಆಹ್ವಾನದ ಮೇರೆಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿದ್ದರು. ಆಗಲೇ ರಾಮ್‌ಲೀಲಾ ಮೈದಾನದಲ್ಲಿ ಅಸಂಖ್ಯ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು.

ಬೆಂಗಳೂರಿಗೆ ಭೇಟಿ

 

ಗುರುವಾರ ನಿಧನರಾದ ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಅವರು 1961ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದಲ್ಲದೇ, ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಎಲಿಜಬೆತ್ ತೀರಿಕೊಂಡ ಹೊತ್ತಿನಲ್ಲಿ ಅವರು ಬೆಂಗಳೂರಿಗೆ ಭೇಟಿ ನೀಡಿದ್ದ ನೆನಪು ಹಾಗೂ ವಿಡಿಯೊಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನಗರಕ್ಕೆ ಭೇಟಿ ನೀಡಿದ್ದ ರಾಣಿ ಎಲಿಜಬೆತ್‌ ಅವರನ್ನು ಅಂದಿನ ರಾಜ್ಯಪಾಲರು ಮತ್ತು ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಅವರನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದ್ದರು. ನಗರದ ನಾಗರಿಕರ ಪರವಾಗಿ ಬೆಂಗಳೂರಿನ ಮೇಯರ್‌ ಅವರು ಹಾಜರಿದ್ದರು.

ಎಂ.ಜಿ. ರಸ್ತೆಯ ಇಕ್ಕೆಲಗಳಲ್ಲಿಅಪಾರ ಸಂಖ್ಯೆಯಲ್ಲಿ ಸೇರಿದ್ದ ನಾಗರಿಕರು, ಶಾಲಾ ಮಕ್ಕಳು ಸಂಭ್ರಮದಿಂದ ರಾಣಿ ಅವರನ್ನು ಸ್ವಾಗತಿಸಿದ್ದರು. ಎಲ್ಲರೂ ಕೈಬೀಸಿ, ಶುಭಾಶಯ ಕೋರಿದ್ದರು.

ಇವತ್ತಿನ ಅನಿಲ್ ಕುಂಬ್ಳೆ ವೃತ್ತದಲ್ಲಿರುವ ‘ಬೈಬಲ್‌ ಸೊಸೈಟಿ ಆಫ್‌ ಇಂಡಿಯಾ’ದ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೀಡಿದ್ದ ಈ ಭೇಟಿಯು ಮಹತ್ವದ್ದಾಗಿತ್ತು. ಈ ಸೊಸೈಟಿಯ ರಾಷ್ಟ್ರೀಯ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿದೆ. ರಾಣಿ ಎಲಿಜಬೆತ್‌ ಅವರಿಗೆ ಬೈಬಲ್‌ ಅನ್ನು ಕಾಣಿಕೆಯಾಗಿ ನೀಡಲಾಗಿತ್ತು.

ಭೇಟಿಯ ಸಂದರ್ಭದಲ್ಲಿ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದ ರಾಣಿ ಎಲಿಜಬೆತ್‌ ಅವರು, ಸಸ್ಯತೋಟದ ಸೌಂದರ್ಯ ಸೊಬಗನ್ನು ಸವಿದಿದ್ದರು. ಭೇಟಿಯ ನೆನಪಿಗಾಗಿ ಸಸಿಯನ್ನು ನೆಟ್ಟಿದ್ದರು. ಗಾಜಿನ ಮನೆಗೆ ನೀಡಿ ಅದರ ವೈಶಿಷ್ಟ್ಯವನ್ನು ಮೆಚ್ಚಿದ್ದರು.

ಭೇಟಿಯ ಚಿತ್ರಗಳು ಮತ್ತು ವಿಡಿಯೊಗಳು ಈಗ ಗಮನಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲೂ  ಹರಿದಾಡುತ್ತಿವೆ.

 

ಭಾರತಕ್ಕೆ ಭೇಟಿ ನೀಡಿದ್ದ ಸಂಪೂರ್ಣ ವಿಡಿಯೊ ಇಲ್ಲಿದೆ

 

ಸುದೀರ್ಘ ಕಾಲ ರಾಣಿಯಾಗಿದ್ದು, ಯಾವುದೇ ದೇಶದ ಆಡಳಿತದಲ್ಲಿ 70 ವರ್ಷ ಆಡಳಿತ ವ್ಯವಸ್ಥೆಯ ಮುಖ್ಯಸ್ಥೆಯಾಗಿ ಅಧಿಕಾರದಲ್ಲಿದ್ದುದು ಒಂದು ದಾಖಲೆಯಾಗಿ ಇತಿಹಾಸದ ಪುಟ ಸೇರಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು