ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಾವಕಾಶಕ್ಕೆ ಪೂರಕ: ಬಿ.ಎಸ್.ಯಡಿಯೂರಪ್ಪ

ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಬ್ರಿಟಿಷ್ ಕೌನ್ಸಿಲ್ ನಡುವೆ ಒಪ್ಪಂದಕ್ಕೆ ಅಂಕಿತ
Last Updated 17 ಡಿಸೆಂಬರ್ 2020, 21:23 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಕೌಶಲ ಅಭಿವೃದ್ಧಿ, ಉದ್ಯೋಗಾವಕಾಶ ಹೆಚ್ಚಳ ಸೇರಿದಂತೆ ಹಲವು ಗುರಿಗಳನ್ನು ಒಳಗೊಂಡ ಒಡಂಬಡಿಕೆಗೆ (ಎಂಒಯು) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಹಾಗೂ ಬ್ರಿಟಿಷ್ ಕೌನ್ಸಿಲ್ ಗುರುವಾರ ಅಂಕಿತ ಹಾಕಿದವು.

ಮೂರು ವರ್ಷ ಅವಧಿಯ ಈ ಒಪ್ಪಂದಕ್ಕೆ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಷಿ ಮತ್ತು ಬ್ರಿಟಿಷ್ ಕೌನ್ಸಿಲ್ (ಇಂಡಿಯಾ) ಮುಖ್ಯಸ್ಥೆ ಬಾರ್ಬರಾ ವಿಕ್ ಹ್ಯಾಮ್ ಒ.ಬಿ.ಇ.ಸಹಿ ಹಾಕಿದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮತ್ತು ಇಂಗ್ಲೆಂಡಿನ ವಿದೇಶಾಂಗ, ಕಾಮನ್ ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಸಚಿವ ಡಾಮಿನಿಕ್ ರಾಬ್ ಇದ್ದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ, ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾಯಕತ್ವ ಬೆಳವಣಿಗೆಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ’ ಎಂದರು.

‘ಉನ್ನತ ಶಿಕ್ಷಣ ಸಂಸ್ಥೆಗಳು ಸ್ವಾಯತ್ತ ಸಂಸ್ಥೆಗಳಾಗಬೇಕು. ಸಮಾಜವು ಜ್ಞಾನ ಕೇಂದ್ರಿತ ಸಮಾಜ ಆಗಬೇಕೆಂಬುದು ರಾಷ್ಟ್ರೀಯ ಶಿಕ್ಷಣ ಕಾರ್ಯನೀತಿಯ ಆಶಯ. ಇದಕ್ಕೆ ಪೂರಕವಾಗಿ ಕರ್ನಾಟಕದ ಶಿಕ್ಷಣ ಸಂಸ್ಥೆಗಳು ಹಾಗೂ ಬ್ರಿಟನ್‌ ಶಿಕ್ಷಣ ಸಂಸ್ಥೆಗಳ ನಡುವೆ ಕೊಡುಕೊಳ್ಳುವಿಕೆಗೆ ಒಪ್ಪಂದ ಅನುವು ಮಾಡಿಕೊಡಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಹೇಳಿದರು.

ಬ್ರಿಟಿಷ್ ಕೌನ್ಸಿಲ್‍ನ (ಭಾರತ) ನಿರ್ದೇಶಕರಾದ ಬಾರ್ಬರಾ ವಿಕ್‍ಹ್ಯಾಮ್, ‘ಒಪ್ಪಂದವು ಭಾರತ ಮತ್ತು ಬ್ರಿಟನ್‌ ನಡುವಿನ ಶೈಕ್ಷಣಿಕ ಸಂಬಂಧವನ್ನು ಸುಭದ್ರಗೊಳಿಸುವ ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತಿಳಿಸಲಾಗಿರುವ ಜ್ಞಾನ ವರ್ಧನೆಯ ಆಶಯವನ್ನು ಬೆಂಬಲಿಸಲಿದೆ’ ಎಂದರು. ಬ್ರಿಟಿಷ್ ಕೌನ್ಸಿಲ್‍ನ ದಕ್ಷಿಣ ಭಾರತ ನಿರ್ದೇಶಕಿ ಜಾನಕ ಪುಷ್ಪನಾಥನ್ ಮಾತನಾಡಿ, ಉದ್ಯೋಗ ಮತ್ತು ಕೌಶಲ್ಯಭಿವೃದ್ಧಿಯ ಆಶಯ ಈಡೇರಿಸಲು ಈ ಒಪ್ಪಂದ ಸಹಕಾರಿಯಾಗಲಿದೆ’ ಎಂದರು.

ಒಡಂಬಡಿಕೆಯಲ್ಲಿನ ಅಂಶಗಳು

* ಎರಡೂ ರಾಷ್ಟ್ರಗಳು ಹಿತಾಸಕ್ತಿದಾರರು, ಶಿಕ್ಷಣ ತಜ್ಞರು, ಶೈಕ್ಷಣಿಕ ಆಡಳಿತಗಾರರು, ಕಾರ್ಯನೀತಿ ನಿರೂಪಕರು, ಹಾಗೂ ನಿಯಂತ್ರಕ ಸಂಸ್ಥೆಗಳ ನಡುವೆ ಸಭೆಗಳನ್ನು ಆಯೋಜಿಸುವುದು,

*ಕಾಲೇಜು ಶಿಕ್ಷಣ ಪ್ರವೇಶಿಸುವ ಹಂತದಲ್ಲಿ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷೆ ಕೌಶಲಾಭಿವೃದ್ಧಿಗೆ ಬೆಂಬಲಿತ ಕ್ರಮಗಳನ್ನು ಕೈಗೊಳ್ಳುವುದು.

* ಪರಿಕಲ್ಪನೆ ವಿನಿಮಯ. ಶಿಕ್ಷಣ ಕಾರ್ಯಕ್ರಮಗಳನ್ನು ಯೋಜಿಸಲು ನೀಲನಕ್ಷೆ ರೂಪಿಸುವುದು.

* ರಾಷ್ಟ್ರೀಯ ಶಿಕ್ಷಣ ಕಾರ್ಯನೀತಿಯ ಶಿಫಾರಸುಗಳಿಗೆ ಅನುಗುಣವಾಗಿ ಬ್ರಿಟನ್‌ ಸಂಸ್ಥೆಗಳ ಸಹಭಾಗಿತ್ವಕ್ಕೆ ಸೇತುವಾಗುವುದು.

* ಉನ್ನತ ಶಿಕ್ಷಣ ಬೋಧಕ ವೃಂದದಲ್ಲಿ ನಾಯಕತ್ವ ವೃದ್ಧಿ, ವಿದ್ಯಾರ್ಥಿಗಳು ಮತ್ತು ಬೋಧಕರ ಮಟ್ಟದಲ್ಲಿ ಎರಡೂ ದೇಶಗಳ ನಡುವೆ ಪರಸ್ಪರ ವಿನಿಮಯಕ್ಕೆ ಅವಕಾಶ.

* ಶೈಕ್ಷಣಿಕ ಸಂಶೋಧನೆ ಹಾಗೂ ಶಿಕ್ಷಣ ಗುಣಮಟ್ಟದ ಅಂತರರಾಷ್ಟ್ರೀಯಕರಣದ ಬಗ್ಗೆ ಗಮನ ಕೇಂದ್ರೀಕರಿಸುವುದು.

*
ಇಂಗ್ಲಿಷ್ ತರಬೇತಿ, ಬೋಧಕ ವೃಂದದವರಿಗೆ ನಾಯಕತ್ವ ತರಬೇತಿ, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು ಒಪ್ಪಂದದ ಉದ್ದೇಶ.
-ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT