ಮಂಗಳವಾರ, ಜೂನ್ 28, 2022
25 °C

ವರ್ಗಾವಣೆ ಮಾಡದೆ ಸ್ಥಳ ಬದಲಾವಣೆ ಮಾಡಲಾಗದು: ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸರ್ಕಾರಿ ನೌಕರನಿಗೆ ವರ್ಗಾವಣೆ ಆದೇಶವಿಲ್ಲದೆ ಸಾಮಾನ್ಯ ಪರಿಭಾಷೆಯಲ್ಲಿ ಮೂವ್‌ಮೆಂಟ್‌ ಆರ್ಡರ್‌ (ಸ್ಥಳ ಬದಲಾವಣೆ ಆದೇಶ) ಹೊರಡಿಸಲು ಆಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಇನ್‌ಸ್ಪೆಕ್ಟರ್‌ ಒಬ್ಬರನ್ನು ಒಡಿಶಾದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಹೊರಡಿಸಿದ ಆದೇಶವನ್ನು ಪೀಠ ರದ್ದುಪಡಿಸಿತು.

ಬಿಎಸ್‌ಎಫ್‌ ಇನ್‌ಸ್ಪೆಕ್ಟರ್ ಆಗಿ ಯಲಹಂಕದಲ್ಲಿರುವ ಟಿ.ಎಸ್.ವೆಂಕಟೇಶ್ ಅವರನ್ನು ಒಡಿಶಾದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ 2021ರ ಫೆಬ್ರುವರಿ 8ರಂದು ನೀಡಿರುವ ಆದೇಶ ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. 2020ರ ಏಪ್ರಿಲ್‌ನಲ್ಲೇ ನಿವೃತ್ತಿಯಾಗಬೇಕಿತ್ತು. ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ವಿಸ್ತರಿಸಿರುವ ಕಾರಣ 2023ರ ಏಪ್ರಿಲ್‌ ತನಕ ಸೇವೆ ವಿಸ್ತರಣೆಯಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

‘ಬಿಎಸ್‌ಎಫ್‌ ವರ್ಗಾವಣೆ ಮತ್ತು ನಿಯೋಜನೆ ನಿಯಮಗಳ 10ರ ಅಡಿಯಲ್ಲಿ ಸಿಬ್ಬಂದಿಗೆ ವರ್ಗಾವಣೆ ಆದೇಶವಿಲ್ಲದೆ ಕರ್ತವ್ಯಕ್ಕೆ ಬೇರೆಡೆಗೆ ಕಳುಹಿಸುವುದು ನಿಷೇಧ’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

‘34 ವರ್ಷಗಳ ಸೇವಾ ಅವಧಿಯಲ್ಲಿ ವಿವಿಧೆಡೆಗೆ ವೆಂಕಟೇಶ್ ಅವರನ್ನು ವರ್ಗಾಯಿಸಲಾಗಿದೆ. ನಿವೃತ್ತಿ ಅವಧಿ ವಿಸ್ತರಿಸಲ್ಪಟ್ಟ ಅವಧಿಯಲ್ಲಿ ವರ್ಗಾವಣೆ ಮಾಡುವುದು ನಿಯಮಗಳಿಗೆ ವಿರುದ್ಧ. ನಿವೃತ್ತಿಯ ಅಂಚಿನಲ್ಲಿ ಬೆಂಗಳೂರಿನಿಂದ ಒಡಿಶಾಗೆ ಅವರನ್ನು ನಿಯೋಜಿಸುವ ಯಾವುದೇ ಅನಿವಾರ್ಯತೆ ಇಲ್ಲ’ ಎಂದು ‍ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ಇದು ಕೇವಲ ಸ್ಥಳ ಬದಲಾವಣೆ ಆದೇಶ ಎಂಬ ಬಿಎಸ್‌ಎಫ್‌ ವಾದವನ್ನು ಒಪ್ಪಲು ಪೀಠ ನಿರಾಕರಿಸಿತು. ‘ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡದೆ ಸ್ಥಳ ಬದಲಾವಣೆ ಆದೇಶ ನೀಡಲು ಸಾಧ್ಯವಿಲ್ಲ’ ಎಂದು ‍‍ಪೀಠ ತಿಳಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು