ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಸ್ಮಾರ್ಟ್‌ ಸಿಟಿ‘ ಅವ್ಯವಸ್ಥೆ ವೀಕ್ಷಿಸದ ಬಿಎಸ್‌ವೈ

ಟೆಂಡರ್ ಶ್ಯೂರ್, ವೈಟ್ ಟ್ಯಾಪಿಂಗ್ ಕಾಮಗಾರಿ ವೀಕ್ಷಣೆ
Last Updated 23 ಜುಲೈ 2021, 19:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜೀನಾಮೆ ವಿಷಯದ ಗೊಂದಲ ಮತ್ತು ಒತ್ತಡದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ನಗರ ಪ್ರದಕ್ಷಿಣೆ ನಡೆಸಿದರು.

ಸ್ಮಾರ್ಟ್ ಸಿಟಿ ಯೋಜನೆ, ಟೆಂಡರ್ ಶ್ಯೂರ್ ಮತ್ತು ವೈಟ್ ಟ್ಯಾಪಿಂಗ್ ರಸ್ತೆಗಳನ್ನು ಪರಿಶೀಲನೆ ನಡೆಸಿದರು. ಆದರೆ, ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡಿರುವ ರಸ್ತೆಗಳ ದರ್ಶನವನ್ನಷ್ಟೇ ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಡಿಸಿದರು. ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ(ಸಿಬಿಡಿ) ಕಾಮಗಾರಿ ವಿಳಂಬದಿಂದ ಸಂಚಾರ ದಟ್ಟಣೆಯಲ್ಲಿ ಜನ ನಿತ್ಯ ಸಿಲುಕುತ್ತಿದ್ದಾರೆ.

ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಅಧಿಕಾರಿಗಳು ಮುಖ್ಯಮಂತ್ರಿ ಅವರಿಗೆ ತೋರಿಸಲೂ ಇಲ್ಲ. ಕಮರ್ಷಿಯಲ್ ಸ್ಟ್ರೀಟ್‌ ಪಕ್ಕದಲ್ಲೇ ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಮುಚ್ಚಲಾಗಿತ್ತು. ಮುಖ್ಯಮಂತ್ರಿ ಬರುವ ಹಾದಿಯನ್ನು ಆದಷ್ಟು ಸಿಂಗರಿಸಲಾಗಿತ್ತು. ರಾಜಭವನ ರಸ್ತೆಯ ಪಾದಚಾರಿ ಮಾರ್ಗದಲ್ಲಿ ತಾತ್ಕಾಲಿಕವಾಗಿ ಸಸಿಗಳನ್ನು ಉದ್ದಕ್ಕೂ ಜೋಡಿಸಲಾಗಿತ್ತು.

ಪ್ರಗತಿಯಲ್ಲಿರುವ ಕಾಮಗಾರಿ ಬಗ್ಗೆ ಪರಿಶೀಲಿಸುವ ಗೋಜಿಗೆ ಮುಖ್ಯಮಂತ್ರಿ ಅವರೂ ಹೋಗಲಿಲ್ಲ. ಬೆಳಿಗ್ಗೆ 11ಕ್ಕೆ ಬಿಎಂಟಿಸಿ ವೋಲ್ವೊ ಬಸ್ ಏರಿ ಕುಳಿತ ಮುಖ್ಯಮಂತ್ರಿ ಮೊದಲಿಗೆ ಟೆಂಡರ್ ಶ್ಯೂರ್‌ ಯೋಜನೆಯಡಿ ಗಾಂಧಿನಗರದಲ್ಲಿ ನಿರ್ಮಾಣವಾಗಿರುವ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ವೀಕ್ಷಿಸಿದರು.

ಬಳಿಕ ನಾಯಂಡಹಳ್ಳಿ ಜಂಕ್ಷನ್ ಅಭಿವೃದ್ಧಿಪಡಿಸಿ ನಿರ್ಮಿಸಿರುವ ‘ಮೈಸೂರು ದಸರಾ ದಿಬ್ಬ’ವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿಂದ ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ಪೂರ್ಣಗೊಂಡಿರುವ ವೈಟ್‌ ಟಾಪಿಂಗ್ ಕಾಮಗಾರಿಯನ್ನು ಬಸ್‌ನಲ್ಲಿ ಕುಳಿತೇ ವೀಕ್ಷಿಸಿದರು. ಗೊರಗುಂಟೆ ಪಾಳ್ಯ, ಯಶವಂತಪುರ ಮೂಲಕ ಮೇಖ್ರಿ ವೃತ್ತ, ನೆಹರು ತಾರಾಲಯ ರಸ್ತೆಗೆ ತೆರಳಿದರು. ಅಲ್ಲಿಯೂ ಬಸ್‌ನಿಂದ ಇಳಿಯದೆ ಕುಳಿತಲ್ಲೇ ಪಾದಚಾರಿ ಮಾರ್ಗ ಪರಿಶೀಲಿಸಿದರು.

ಅಲ್ಲಿಂದ ಕಮರ್ಷಿಯಲ್ ಸ್ಟ್ರೀಟ್‌ಗೆ ತೆರಳಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಪಾದಚಾರಿ ಮಾರ್ಗವನ್ನು ನೋಡಿದರು. ವುಡ್ಡೀಸ್ ಹೋಟೆಲ್‌ನಲ್ಲಿ ಉಪಾಹಾರ ಸೇವಿಸಿ ಕಾಫಿ ಕುಡಿದರು. ಅಲ್ಲಿಂದ ಇಂದಿರಾ ನಗರಕ್ಕೆ ತೆರಳಿ ವೈಟ್‌ಟಾಪಿಂಗ್ ಕಾಮಗಾರಿ ಪರಿಶೀಲಿಸಿದರು.

ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಮೂಲಕ ಶಾಂತಿನಗರಕ್ಕೆ ತೆರಳಿದರು. ಕೆ.ಆರ್‌.ಮಾರುಕಟ್ಟೆಯಿಂದ ಕೋರಮಂಗಲ ತನಕದ ರಾಜಕಾಲುವೆಗೆ ಯಾವುದೇ ಕೊಳಚೆ ನೀರು ಹರಿಯದಂತೆ ತಡೆದು ಮಳೆ ನೀರಷ್ಟೇ ಹರಿಯುವಂತೆ ಮಾಡುವ ಯೋಜನೆಯ ಕಾಮಗಾರಿಯನ್ನು ಶಾಂತಿನಗರ ಬಿಎಂಟಿಸಿ ಬಸ್‌ ನಿಲ್ದಾಣದ ಎದುರು ಮಳೆಯ ನಡುವೆ ವೀಕ್ಷಿಸಿದರು.

ಮುಖ್ಯಮಂತ್ರಿ ಜೊತೆಗೆ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಆರ್. ಅಶೋಕ, ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ವಿ. ಸೋಮಣ್ಣ, ಕೆ.ಗೋಪಾಲಯ್ಯ, ಅರವಿಂದ ಲಿಂಬಾವಳಿ ಇದ್ದರು.

ಶಾಂತಿನಗರದಲ್ಲಿ ಶಾಸಕ ಎನ್‌.ಎ.ಹ್ಯಾರಿಸ್ ಅವರು ಮುಖ್ಯಮಂತ್ರಿ ಅವರನ್ನು ಅಭಿನಂದಿಸಿದರು. ಇಂದಿರಾನಗರದಲ್ಲಿ ಮುಖ್ಯಮಂತ್ರಿ ಅವರನ್ನು ಶಾಸಕ ಎಸ್‌.ರಘು ಸನ್ಮಾನಿಸಿದರು. ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಸ್ವಾಗತಿಸಿದರು.

‘ನಿಜವಾದ ಸಿಲಿಕಾನ್ ಸಿಟಿ ಆಗಬೇಕು’

ನಗರವನ್ನು ನಿಜವಾದ ಸಿಲಿಕಾನ್ ಸಿಟಿ ಮತ್ತು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ವಿವಿಧ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ನಗರ ಪ್ರದಕ್ಷಿಣೆ ಮುಗಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜಕಾಲುವೆ ಅಭಿವೃದ್ಧಿ, ಕೆರೆಗಳ ಪುನರುಜ್ಜೀವನಕ್ಕೆ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಕೆಲಸಗಳನ್ನು ಆದ್ಯತೆಯ ಮೇರೆಗೆ ಮಾಡಲಾಗುವುದು. ಕೆರೆ– ಕಟ್ಟೆಗಳು, ಉದ್ಯಾನಗಳ ಸಮಗ್ರ ಅಭಿವೃದ್ಧಿಗೆ ಹಣಕಾಸಿನ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಎಲ್ಲೆಡೆ ಸಂಚಾರ ದಟ್ಟಣೆ

ಮುಖ್ಯಮಂತ್ರಿ ನಗರ ಪ್ರದಕ್ಷಿಣೆ ವೇಳೆ ಬೇರೆ ವಾಹನಗಳ ಸಂಚಾರ ತಡೆದು ನಿಲ್ಲಿಸಲಾಗಿತ್ತು. ಇದರಿಂದ ಎಲ್ಲೆಡೆ ಸಂಚಾರ ದಟ್ಟಣೆಯುಂಟಾಗಿ ವಾಹನ ಸವಾರರು ಪರದಾಡಿದರು.

ಮೈಸೂರು ರಸ್ತೆ, ನಾಯಂಡಹಳ್ಳಿ ಜಂಕ್ಷನ್, ಕೆ.ಆರ್. ವೃತ್ತ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ರಾಜಭವನರಸ್ತೆ, ಶಾಂತಿನಗರ, ಎಂ.ಜಿ. ರಸ್ತೆಯಲ್ಲಿ ವಾಹನ ಸವಾರರು ಕಿಲೋ ಮೀಟರ್ ತನಕ ಕಾದು ನಿಲ್ಲುವಂತಾಗಿತ್ತು.

ಅಂಕಿ–ಅಂಶ

ಟೆಂಡರ್ ಶ್ಯೂರ್

20 ರಸ್ತೆಗಳು:ಟೆಂಡರ್ ಶ್ಯೂರ್ ಯೋಜನೆಯಡಿ ನಿರ್ಮಾಣ ಆಗರುವುದು


₹224.69 ಕೋಟಿ:ಈ ಯೋಜನೆಯಡಿ ಆಗಿರುವ ಖರ್ಚು


9 ರಸ್ತೆಗಳು:ಟೆಂಡರ್ ಶ್ಯೂರ್ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿ


₹118.50 ಕೋಟಿ:ಅಂದಾಜು ಮೊತ್ತ

ವೈಟ್‌ ಟಾಪಿಂಗ್

22 ರಸ್ತೆಗಳು: ಕಾಮಗಾರಿ ಪೂರ್ಣಗೊಂಡಿರುವ ವೈಟ್‌ ಟಾಪಿಂಗ್ ರಸ್ತೆಗಳು

₹467.28 ಕೋಟಿ : ವೈಟ್‌ ಟಾಪಿಂಗ್ ಕಾಮಗಾರಿಗೆ ಆಗಿರುವ ವೆಚ್ಚ

27 ರಸ್ತೆಗಳು: ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಗಳು

₹677.92 ಕೋಟಿ:ಪ್ರಗತಿಯಲ್ಲಿರುವ ಕಾಮಗಾರಿಗೆ ಆಗಲಿರುವ ವೆಚ್ಚ

ಸ್ಮಾರ್ಟ್‌ಸಿಟಿ

36 ರಸ್ತೆಗಳು: ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವುದು

₹481.65 ಕೋಟಿ: ಯೋಜನೆಯ ಒಟ್ಟು ಮೊತ್ತ

29.53 ಕಿ.ಮೀ: ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ ಆಗಲಿರುವ ರಸ್ತೆ

9 ರಸ್ತೆಗಳು: ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಪೂರ್ಣಗೊಂಡಿರುವುದು

₹57.15 ಕೋಟಿ: ಪೂರ್ಣಗೊಂಡಿರುವ ಕಾಮಗಾರಿ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT