ಮಂಗಳವಾರ, ಆಗಸ್ಟ್ 16, 2022
22 °C
ಕೋವಿಡ್ ರೋಗಿಗಳಿಗೆ ಉಚಿತ ಪರೀಕ್ಷೆ, ಚಿಕಿತ್ಸೆ– ಆರೋಗ್ಯ ಸಚಿವ ಸುಧಾಕರ್

ಕೊವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಮುಖ್ಯಮಂತ್ರಿ ಬಿಎಸ್‌ವೈ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

BSY

ಬೆಂಗಳೂರು: ‘ರಾಜ್ಯದಲ್ಲಿ ಕೊವ್ಯಾಕ್ಸಿನ್ ಲಸಿಕೆ ಯಶಸ್ವಿಯಾಗುವ ನಿರೀಕ್ಷೆಯಿದ್ದು, ಲಸಿಕೆ ವಿತರಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಭಾರತ್ ಬಯೋಟೆಕ್ ಸಹಯೋಗದಲ್ಲಿ ಕೊವ್ಯಾಕ್ಸಿನ್ ಕೋವಿಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಧಾಕರ್, ‘ದೇಶದ 12 ರಾಜ್ಯಗಳ 25 ಭಾಗಗಳಲ್ಲಿ ಕ್ಲಿನಿಕಲ್‌ ಪ್ರಯೋಗ ನಡೆಯುತ್ತಿದ್ದು, ಸುಮಾರು 26 ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ 1,600ರಿಂದ 1,800 ಜನರಿಗೆ ಲಸಿಕೆಯನ್ನು ಪ್ರಾಯೋಗಿಕವಾಗಿ ನೀಡಲು ನಿರ್ಧರಿಸಲಾಗಿದೆ. ಲಸಿಕೆ ನೀಡುವ ಸಮಯದಲ್ಲಿ ಊಹಾಪೋಹಗಳು ಕೇಳಿಬರುತ್ತವೆ. ಅದಕ್ಕೆ ಯಾರೂ ಕಿವಿಗೊಡಬಾರದು’ ಎಂದರು.

‘ಪ್ರಪಂಚದಲ್ಲಿ ಶೇ 15ರಿಂದ ಶೇ 20ರಷ್ಟು ಭಾರತೀಯ ಕಂಪನಿಗಳೇ ಲಸಿಕೆ ನೀಡುವ ಮಟ್ಟಿಗೆ ಬೆಳೆದಿವೆ. ಲಸಿಕೆಯಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗಬಹುದು. ಆದರೆ, ಇದನ್ನು ತಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಯಾವುದೇ ಆತಂಕಪಡುವ ಅಗತ್ಯ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಸಂಶೋಧನೆಗೆ ₹ 900 ಕೋಟಿ ಮೀಸಲಿಟ್ಟಿದ್ದಾರೆ. ಲಸಿಕೆ ಪ್ರಯೋಗ ನಡೆಯುತ್ತಿರುವ ಸಂಸ್ಥೆಗಳಿಗೆ ಪ್ರಧಾನಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಜ್ಯ ಸರ್ಕಾರ ಮುಖ್ಯಮಂತ್ರಿ ನೇತೃತ್ವದಲ್ಲಿ ಕೋವಿಡ್ ಚಿಕಿತ್ಸೆಗಾಗಿ ₹ 300 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದೆ. ದಿನಕ್ಕೆ 1.25 ಲಕ್ಷ ಪರೀಕ್ಷೆ ಮಾಡುತ್ತಿದ್ದು, ಈವರೆಗೆ 1.20 ಕೋಟಿ ಉಚಿತ ಪರೀಕ್ಷೆ ಮಾಡಲಾಗಿದೆ’ ಎಂದರು.

‘ಲಸಿಕೆ ವಿತರಣೆಗೆ ರಾಜ್ಯದಲ್ಲಿ 29,451 ವಿತರಣೆ ಕೇಂದ್ರಗಳು ಹಾಗೂ 10,008 ಸಿಬ್ಬಂದಿಯನ್ನು ಗುರುತಿಸಲಾಗಿದೆ. ಲಸಿಕೆ ಸಂಗ್ರಹ ಹಾಗೂ ವಿತರಣೆಗೆ 2,855 ಕೋಲ್ಡ್ ಚೇನ್ ಕೇಂದ್ರಗಳು ಲಭ್ಯವಿದೆ. ಬೆಂಗಳೂರು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಹೊಸತಾಗಿ ಪ್ರಾದೇಶಿಕ ಲಸಿಕೆ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಕೊರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವವರಿಗೆ ಮೊದಲು ಲಸಿಕೆ ನೀಡಲಾಗುವುದು. ನಂತರ 50 ವರ್ಷ ದಾಟಿದವರಿಗೆ ನೀಡಲಾಗುವುದು’ ಎಂದೂ ಅವರು ಮಾಹಿತಿ ನೀಡಿದರು.

ಕೋವಿಡ್‌: ಸ್ಮಾರ್ಟ್‌ ಲಸಿಕಾ ತಂತ್ರ

ನವದೆಹಲಿ: ಕೋವಿಡ್‌–19 ಮತ್ತಷ್ಟು ವ್ಯಾಪಿಸುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ‌, ಎಲ್ಲರಿಗೂ ಲಸಿಕೆ ನೀಡುವ ಬದಲು ಆಯ್ದ ಜನರ ಗುಂಪಿಗೆ ಲಸಿಕೆ ನೀಡುವ ‘ಸ್ಮಾರ್ಟ್‌ ಲಸಿಕಾ ತಂತ್ರ’ವನ್ನು ಕೇಂದ್ರ ಆರೋಗ್ಯ ಸಚಿವಾಲಯ ರೂಪಿಸಿದೆ.‌

ಪ್ರತಿಯೊಬ್ಬರನ್ನು ಸೋಂಕಿನಿಂದ ರಕ್ಷಿಸಲು ಎಲ್ಲರಿಗೂ ಕೋವಿಡ್‌ ಲಸಿಕೆಯನ್ನು ನೀಡುವ ಯೋಜನೆಯನ್ನು ಈ ಹಿಂದೆ ರೂಪಿಸಲಾಗಿತ್ತು. ಈ ಯೋಜನೆಯು ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲೂ ಉಲ್ಲೇಖಿಸಲಾಗಿತ್ತು. ಆದರೆ, ಸ್ಮಾರ್ಟ್‌ ಲಸಿಕಾ ತಂತ್ರವೂ ಈ ಹಿಂದೆ ರೂಪಿಸಿದ್ದ ಯೋಜನೆಗಿಂತ ವಿಭಿನ್ನವಾಗಿದೆ ಎಂದು ತಜ್ಞರು ಹೇಳಿದ್ದಾರೆ.

‘ಸ್ಮಾರ್ಟ್‌ ಲಸಿಕಾ ತಂತ್ರ’ದ ಪ್ರಕಾರ ಮೂರು ಭಿನ್ನ ಗುಂಪುಗಳನ್ನು ವಿಂಗಡಿ ಸಲಾಗಿದ್ದು, ಇದರಲ್ಲಿ ತುರ್ತು ಅಗತ್ಯ ಇರುವವರಿಗೆ ಮೊದಲು ಲಸಿಕೆ ನೀಡಲು ಯೋಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು