ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ವಿ.ಕೆ ಅಯ್ಯಂಗಾರ್ ರಸ್ತೆ: ತಪ್ಪದ ಸಂಚಾರ ಕಿರಿಕಿರಿ

ಬಿ.ವಿ.ಕೆ ಅಯ್ಯಂಗಾರ್ ರಸ್ತೆಯಲ್ಲಿ ನಿತ್ಯದ ಗೋಳು l ಪಾದಚಾರಿ ಮಾರ್ಗ ಅತಿಕ್ರಮಣ
Last Updated 25 ಫೆಬ್ರುವರಿ 2022, 21:01 IST
ಅಕ್ಷರ ಗಾತ್ರ

ಬೆಂಗಳೂರು: ಗುಂಡಿ ಬಿದ್ದ ರಸ್ತೆಗಳು... ನಿಧಾನಗತಿಯಲ್ಲಿ ಸಾಗಿರುವ ಕಾಮಗಾರಿ... ಕಿರಿದಾದ ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸಿದ ವಾಹನಗಳು... ರಸ್ತೆ ಅವ್ಯವಸ್ಥೆ ಹಾಗೂ ಪಾದಚಾರಿ ಮಾರ್ಗದ ಒತ್ತುವರಿಯಿಂದ ಉಂಟಾದ ದಟ್ಟಣೆ. ಸಾಲುಗಟ್ಟಿ ನಿಂತ ವಾಹನಗಳು... ಪಾದಚಾರಿ ಮಾರ್ಗಗಳಲ್ಲಿ ನಡೆದಾಡಲು ಕಷ್ಟಪಡುವ ಜನ...

ನಗರದ ವಾಣಿಜ್ಯ ವಹಿವಾಟಿನ ಕೇಂದ್ರ ಸ್ಥಳಗಳಲ್ಲಿ ಒಂದಾದ ಬಿವಿಕೆ ಅಯ್ಯಂಗಾರ್ ರಸ್ತೆ ಹಾಗೂ ಒಳರಸ್ತೆಗಳ ಸ್ಥಿತಿ ಇದು. ನಿತ್ಯವೂ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವ ರಸ್ತೆಯು ಅವ್ಯವಸ್ಥೆ ಆಗರವಾಗಿದ್ದು, ಇದರಿಂದಾಗಿ ಮಾರುಕಟ್ಟೆಗೆ ಬಂದು ಹೋಗುವ ಜನ ಸಂಚಾರ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಎಲೆಕ್ಟ್ರಿಕ್ ಉತ್ಪನ್ನ, ಬಟ್ಟೆಗಳು, ಸೀರೆಗಳು, ಮದುವೆ ಆಮಂತ್ರಣ ಪತ್ರಿಕೆ, ವಾಹನಗಳ ಬಿಡಿಭಾಗ ಸೇರಿದಂತೆ ಹಲವು ವಸ್ತುಗಳ ಮಾರಾಟ ಮಳಿಗೆಗಳು ಅಯ್ಯಂಗಾರ್ ರಸ್ತೆಯಲ್ಲಿವೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಸಣ್ಣ ವ್ಯಾಪಾರಿಗಳು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಂದು ಹೋಗುತ್ತಾರೆ. ಸದ್ಯದ ರಸ್ತೆ ಸ್ಥಿತಿ ನೋಡಿ ಅವರೆಲ್ಲ, ಸ್ಥಳೀಯ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮೈಸೂರು ರಸ್ತೆಯಿಂದ ಕೆಂಪೇಗೌಡ ರಸ್ತೆಯವರೆಗೆ ಬಿವಿಕೆ ಅಯ್ಯಂಗಾರ್ ರಸ್ತೆ ವ್ಯಾಪಿಸಿದೆ. ಇದಕ್ಕೆ ಹೊಂದಿಕೊಂಡು ರಂಗಸ್ವಾಮಿ ಗುಡಿ ಬೀದಿ, ಕಿಲ್ಲಾರಿ ರಸ್ತೆ, ಹಳೇ ತಾಲ್ಲೂಕು ಕಚೇರಿ ರಸ್ತೆ, ಸುಲ್ತಾನ್‌ ಪೇಟೆ ಮುಖ್ಯರಸ್ತೆ, ಪೊಲೀಸ್ ರಸ್ತೆ ಹಾಗೂ ಪೂರ್ಣ ವೆಂಕಟರಾವ್ ರಸ್ತೆಗಳಿವೆ. ಕಿಲ್ಲಾರಿ ರಸ್ತೆಯಲ್ಲಿ ಹಲವು ತಿಂಗಳಿನಿಂದ ಕಾಮಗಾರಿ ನಡೆದಿದ್ದು, ಮುಗಿಯುವ ಲಕ್ಷಣವೇ ಗೋಚರಿಸುತ್ತಿಲ್ಲವೆಂದು ಸ್ಥಳೀಯರು ದೂರುತ್ತಿದ್ದಾರೆ.

‘ನಗರದ ಇತರೆ ರಸ್ತೆಗಳಿಗೆ ಹೋಲಿಸಿದರೆ, ಅಯ್ಯಂಗಾರ್ ರಸ್ತೆಯಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚು. ಅತೀ ಹೆಚ್ಚು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಭರಿಸುವ ವ್ಯಾಪಾರಿಗಳು ಇಲ್ಲಿದ್ದಾರೆ. ಆದರೆ, ಮೂಲ ಸೌಕರ್ಯ ಸಹ ನಮಗೆ ಸಿಗುತ್ತಿಲ್ಲ’ ಎಂದು ಸಗಟು ಬಟ್ಟೆ ವ್ಯಾಪಾರಿ ಸುಖದೇವ್‌ ಹೇಳಿದರು.

‘ಸ್ಮಾರ್ಟ್‌ ಸಿಟಿ ಹಾಗೂ ಟೆಂಡರ್‌ ಶ್ಯೂರ್ ಕಾಮಗಾರಿ ಹೆಸರಿನಲ್ಲಿ ಒಳ ರಸ್ತೆಗಳನ್ನು ಅಗೆಯಲಾಗಿದ್ದು, ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಇದರಿಂದ ಜನರ ಓಡಾಟಕ್ಕೆ ತೊಂದರೆ ಆಗಿದ್ದು, ವ್ಯಾಪಾರದ ಮೇಲೂ ಹೊಡೆತ ಬಿದ್ದಿದೆ’ ಎಂದರು.

ಎಲೆಕ್ಟ್ರಿಕ್‌ ಉತ್ಪನ್ನ ವ್ಯಾಪಾರಿ ರಾಜೇಂದ್ರ, ‘ಅಯ್ಯಂಗಾರ್‌ ರಸ್ತೆಯ ಎರಡೂ ಬದಿಯಲ್ಲೂ ವಾಹನಗಳು ಸಂಚರಿಸುತ್ತವೆ. ರಸ್ತೆ ಚಿಕ್ಕದಾಗಿರುವುದರಿಂದ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಇರುತ್ತದೆ. ಯಾರಾದರೂ ವಾಹನವನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದರೆ ದಟ್ಟಣೆ ಉಂಟಾಗಿ, ವಾಹನಗಳು ಸಾಲುಗಟ್ಟಿ ನಿಲ್ಲುವ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದೂ ತಿಳಿಸಿದರು.

‘ಸಾಲು ಸಾಲು ಬಹುಮಹಡಿ ಕಟ್ಟಡಗಳು ಇಲ್ಲಿವೆ. ಒಳ ಚರಂಡಿ ವ್ಯವಸ್ಥೆ ಸಮಪರ್ಕವಾಗಿಲ್ಲ. ಕುಡಿಯುವ ನೀರಿಗೂ ಪರದಾಟವಿದೆ. ಸಾರ್ವಜನಿಕ ಶೌಚಾಲಯಗಳಿದ್ದರೂ ನಿರ್ವಹಣೆ ಕೊರತೆಯಿಂದ ಪ್ರಯೋಜನಕ್ಕೆ ಬರುತ್ತಿಲ್ಲ. ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಗುತ್ತಿಲ್ಲ’ ಎಂದೂ ಹೇಳಿದರು.

ಪಾದಚಾರಿ ಮಾರ್ಗ ಅತಿಕ್ರಮಣ: ‘ನಿತ್ಯವೂ ಲಕ್ಷಾಂತರ ಮಂದಿ ಅಯ್ಯಂಗಾರ್ ರಸ್ತೆಗೆ ಬರುತ್ತಾರೆ. ಅದರಲ್ಲಿ ಪಾದಚಾರಿಗಳ ಸಂಖ್ಯೆ ಹೆಚ್ಚು. ಪಾದಚಾರಿ ಮಾರ್ಗಗಳ ಅತಿಕ್ರಮಣದಿಂದಾಗಿ ಅವರ ಓಡಾಟಕ್ಕೆ ತೊಂದರೆ ಉಂಟಾಗಿದೆ’ ಎಂದು ಬಟ್ಟೆ ವ್ಯಾಪಾರಿ ಗಣಪತಿ ರಾವ್ ಹೇಳಿದರು.

‘ಕೆಲವರು ಎಲ್ಲೆಂದರಲ್ಲಿ ತಾತ್ಕಾಲಿಕ ಮಳಿಗೆ ತೆರೆಯುತ್ತಾರೆ. ಜನರು ಓಡಾಡಲೂ ಜಾಗವಿಲ್ಲದಂತೆ ಮಾಡುತ್ತಾರೆ. ಅಂಥವರನ್ನು ಪ್ರಶ್ನಿಸಿದರೆ, ನಮ್ಮ ಜೊತೆಯೇ ಗಲಾಟೆ ಮಾಡುತ್ತಾರೆ. ಆಟೊ ಚಾಲಕರ ಹಾವಳಿಯೂ ಇದೆ. ಸಿಕ್ಕ ಸಿಕ್ಕಲೇ ಆಟೊ ನಿಲ್ಲಿಸಿ, ದಟ್ಟಣೆಗೆ ಕಾರಣವಾಗುತ್ತಿದ್ದಾರೆ. ಇವರೆಲ್ಲರಿಂದ ಪೊಲೀಸರು ‘ಮಾಮೂಲಿ’ ವಸೂಲಿ ಮಾಡುತ್ತಿರುವ ದೂರುಗಳಿವೆ’ ಎಂದೂ ಆರೋ‍ಪಿಸಿದರು.

‘ದಂಡ ವಸೂಲಿಗಷ್ಟೇ ಪೊಲೀಸರು ಸೀಮಿತ’

‘ಹಣದ ಸಮೇತವೇ ವ್ಯಾಪಾರಕ್ಕೆಂದು ಜನರು ಅಯ್ಯಂಗಾರ್‌ ರಸ್ತೆಗೆ ಬರುತ್ತಾರೆ. ಇದನ್ನು ತಿಳಿದಿರುವ ಸಂಚಾರ ಪೊಲೀಸರ ದಂಡ ವಸೂಲಿ ಜೋರಾಗಿರುತ್ತದೆ. ಹಾಳಾದ ರಸ್ತೆಯಲ್ಲಿ ಜನರು ಆಯತಪ್ಪಿ ಬಿದ್ದರೂ ಕ್ಯಾರೆ ಎನ್ನದ ಪೊಲೀಸರು, ತಮ್ಮ ಪಾಡಿಗೆ ದಂಡ ವಸೂಲಿ ಮಾಡಿಕೊಂಡು ಹೋಗುತ್ತಿದ್ದಾರೆ’ ಎಂದು ವ್ಯಾಪಾರಿಗಳು ದೂರಿದರು.

'ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತರೂ ಪೊಲೀಸರು ಮೌನವಾಗಿರುತ್ತಾರೆ. ಅಡ್ಡಾದಿಡ್ಡಿ ವಾಹನ ನಿಲ್ಲಿಸುವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದೂ ಹೇಳಿದರು.

‘ಸಂಡೆ ಮಾರ್ಕೆಟ್ ವೇಳೆ ಜನಜಂಗುಳಿ’

‘ಬಿ.ವಿ.ಅಯ್ಯಂಗಾರ್ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಯಲ್ಲಿ ಪ್ರತಿ ಭಾನುವಾರಕ್ಕೊಮ್ಮೆ ನಡೆಯುವ ಸಂಡೇ ಮಾರ್ಕೆಟ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದರು. ಆದರೆ, ಕೋವಿಡ್ ಕಾರಣದಿಂದ ಕೆಲ ತಿಂಗಳಿನಿಂದ ಸಂಡೇ ಮಾರ್ಕೆಟ್ ಬಂದ್ ಮಾಡಲಾಗಿದೆ’ ಎಂದು ವ್ಯಾಪಾರಿಗಳು ಹೇಳಿದರು.

‘ಭಾನುವಾರ ಬೆಳಿಗ್ಗೆ ಅಲ್ಲಲ್ಲಿ ಅಂಗಡಿಗಳು ತಲೆ ಎತ್ತುತ್ತವೆ. ಮಧ್ಯಾಹ್ನದ ನಂತರ ಬಂದ್ ಆಗುತ್ತವೆ. ಇಂಥ ಸ್ಥಿತಿಯಲ್ಲೂ ಹೆಚ್ಚಿನ ಜನ ಮಾರುಕಟ್ಟೆಗೆ ಬಂದು ಹೋಗುತ್ತಾರೆ. ಈ ವೇಳೆ ದಟ್ಟಣೆ ಸಾಮಾನ್ಯ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT