ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮಂಡಳಿಯಲ್ಲಿ ಬಡ್ತಿಗಾಗಿಯೇ ಹುದ್ದೆ ಸೃಷ್ಟಿ!

4 ಮುಖ್ಯ ಎಂಜಿನಿಯರ್, 11 ಹೆಚ್ಚುವರಿ ಮುಖ್ಯ ಎಂಜಿನಿಯರ್ ಹುದ್ದೆ ಹೆಚ್ಚುವರಿ ಸೃಷ್ಟಿಗೆ ಪ್ರಸ್ತಾವನೆ
Last Updated 14 ಮೇ 2022, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬಡ್ತಿಗಾಗಿ ಕಾದಿರುವ ಎಂಜಿನಿಯರ್‌ಗಳನ್ನು ತೃಪ್ತಿಪಡಿಸುವ ಸಲುವಾಗಿಯೇ ಹೆಚ್ಚುವರಿಯಾಗಿ ನಾಲ್ಕು ಮುಖ್ಯ ಎಂಜಿನಿಯರ್‌ ಸೇರಿ 27 ಹುದ್ದೆಗಳನ್ನು ಸೃಷ್ಟಿಸಲು ಜಲಮಂಡಳಿ ಮುಂದಾಗಿದೆ.

ಜಲಮಂಡಳಿಯಲ್ಲಿ ಸದ್ಯ 6 ಮುಖ್ಯ ಎಂಜಿನಿಯರ್, 11 ಹೆಚ್ಚುವರಿ ಮುಖ್ಯ ಎಂಜಿನಿಯರ್, 43 ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಗಳಿವೆ. ಈ ಹುದ್ದೆಗಳ ಸಂಖ್ಯೆಯನ್ನು ಕ್ರಮವಾಗಿ 10, 24 ಮತ್ತು 55ಕ್ಕೆ ಹೆಚ್ಚಿಸಲು ಜಲಮಂಡಳಿ ನಿರ್ಧರಿಸಿದ್ದು, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ.

‘ಈ ಪ್ರಸ್ತಾವನೆಗೆ ಜಲಮಂಡಳಿಯ ಆಡಳಿತ ಮಂಡಳಿ ಒಪ್ಪಿಗೆ ದೊರೆತಿದೆ. ಹಣಕಾಸು ಇಲಾಖೆಯ ಸಮ್ಮತಿಯೂ ಸಿಕ್ಕಿದೆ. ಬಡ್ತಿಗಾಗಿ ಹುದ್ದೆ ಸೃಷ್ಟಿಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಇತ್ತೀಚೆಗಷ್ಟೇ ಹೇಳಿದ್ದರು. ಅವರ ಉಸ್ತುವಾರಿಯಲ್ಲೇ ಇರುವ ಜಲಮಂಡಳಿಯಲ್ಲಿ ಬಡ್ತಿ ನೀಡುವ ಸಲುವಾಗಿಯೇ ಹುದ್ದೆಗಳನ್ನು ಸೃಷ್ಟಿ ಮಾಡಲು ಹೊರಟಿರುವುದು ಎಷ್ಟು ಸರಿ. ಬಿಳಿಯಾನೆಯಂತಹ ಈ ಹುದ್ದೆಗಳು ಜಲಮಂಡಳಿಗೆ ಈಗ ನಿಜಕ್ಕೂ ಅಗತ್ಯ ಇವೆಯೇ’ ಎಂದು ಮಂಡಳಿ ನಿವೃತ್ತ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

‘ಜಲಮಂಡಳಿಯಲ್ಲಿ ಕೆಳಹಂತದಲ್ಲಿ ಕಾರ್ಯನಿರ್ವಹಿಸಬೇಕಾದ ಸಹಾಯಕ ಎಂಜಿನಿಯರ್‌ಗಳು ಮತ್ತು ಕಿರಿಯ ಎಂಜಿನಿಯರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿಕೊಳ್ಳುವ ಅಗತ್ಯವಿದೆಯೇ ಹೊರತು, ಮೇಲ್ಮಟ್ಟದಲ್ಲಿ ಅಧಿಕಾರಿಗಳ ಹುದ್ದೆಗಳನ್ನು ಸೃಷ್ಟಿಸುವ ಅಗತ್ಯ ಇಲ್ಲ’ ಎನ್ನುತ್ತಾರೆ ಜಲ ಮಂಡಳಿ ನಿವೃತ್ತ ಮುಖ್ಯ ಎಂಜಿನಿಯರ್ ಹಾಗೂ ಆಡಳಿತ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದ ಎಸ್‌.ಎಂ.ಬಸವರಾಜ್.

‘ಕೆಲವರು ಕೂಟ ಕಟ್ಟಿಕೊಂಡು ಆಡಳಿತ ಮಂಡಳಿಯನ್ನು ದಿಕ್ಕು ತಪ್ಪಿಸಿದ್ದಾರೆ. ಮಂಡಳಿಗೆ ಅಧ್ಯಕ್ಷರಾಗಿ ಬರುವ ಐಎಎಸ್‌ ಅಧಿಕಾರಿಗಳಿಗೆ ಈ ಬಗ್ಗೆ ಕಾಳಜಿ ಇರುವುದಿಲ್ಲ. ಸದಸ್ಯರೂ ಇಲಾಖೆ ಅಧಿಕಾರಿಗಳೇ ಆಗಿದ್ದು, ಅವರಿಗೂ ಜಲಮಂಡಳಿ ಆಡಳಿತದ ಬಗ್ಗೆ ಅಷ್ಟೇನೂ ಜವಾಬ್ದಾರಿ ಇರುವುದಿಲ್ಲ. ಸಭೆಯಲ್ಲಿ ಮಂಡನೆಯಾದ ಕಾರ್ಯಸೂಚಿಗೆ ತಲೆಯಾಡಿಸಿ ಹೋಗುತ್ತಾರೆ. ಆದ್ದರಿಂದಲೇ ಈ ರೀತಿಯ ಪ್ರಸ್ತಾವನೆ ಸರ್ಕಾರದವರಗೆ ತಲುಪಿವೆ’ ಎಂದು ಅವರು ಹೇಳಿದರು.

‘ಬಡ್ತಿ ವಿಷಯದಲ್ಲಿ ಕೋಟಿಗಟ್ಟಲೆ ಹಣಕಾಸಿನ ವಹಿವಾಟು ಕೂಡ ನಡೆದಿರುತ್ತದೆ. ಸರ್ಕಾರ ಕಣ್ಮುಚ್ಚಿಕೊಂಡು ಹುದ್ದೆಗಳ ಸೃಷ್ಟಿಗೆ ಅವಕಾಶ ನೀಡುವ ಬದಲು, ಮಂಡಳಿಗೆ ಆರ್ಥಿಕವಾಗಿ ಹೊರೆಯಾಗಲಿರುವ ಈ ಹುದ್ದೆಗಳ ಸೃಷ್ಟಿಯ ಅಗತ್ಯದ ಬಗ್ಗೆ ಯೋಚಿಸಬೇಕು’ ಎಂದರು.

‘ಜಲಮಂಡಳಿಯ ಹಣಕಾಸಿನ ಸ್ಥಿತಿ ಅಷ್ಟೇನು ಸುಸ್ಥಿತಿಯಲ್ಲಿ ಇಲ್ಲ. ನೀರಿನ ಸಂಪರ್ಕ ಕಲ್ಪಿಸುವಾಗ ಪ್ರೊ–ರೇಟಾ ಶುಲ್ಕದಿಂದ ಸಂಗ್ರಹ ಆಗುವ ಮೊತ್ತವನ್ನೇ ನೌಕರರ ಸಂಬಳಕ್ಕೆ ಬಳಸಿಕೊಂಡು ಖಾಲಿ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೆಲವೇ ಕೆಲವರ ಹಿತಕ್ಕಾಗಿ ಜಲಮಂಡಳಿ ಮೇಲಿನ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸುವುದು ಸರಿಯಾದ ನಿರ್ಧಾರವಲ್ಲ’ ಎಂದು ಹೇಳಿದರು.

‘ಅಗತ್ಯಕ್ಕೆ ಅನುಗುಣವಾಗಿ ಹುದ್ದೆ ಸೃಷ್ಟಿ’

‘ಕೆಲಸದ ಒತ್ತಡ ಮತ್ತು ಅಗತ್ಯಕ್ಕೆ ಅನುಗುಣವಾಗಿ ಹುದ್ದೆಗಳನ್ನು ಸೃಜಿಸಲಾಗಿದೆಯೇ ಹೊರತು ಯಾರಿಗೋ ಬಡ್ತಿ ನೀಡಬೇಕು ಎಂಬ ಉದ್ದೇಶದಿಂದ ಅಲ್ಲ’ ಎಂದು ಜಲ ಮಂಡಳಿ ಅಧ್ಯಕ್ಷ ಎನ್‌.ಜಯರಾಂ ಸ್ಪಷ್ಟಪಡಿಸಿದರು.

‘ಬಿಬಿಎಂಪಿಯಲ್ಲಿ ವಲಯಕ್ಕೊಬ್ಬರು ಮುಖ್ಯ ಎಂಜಿನಿಯರ್‌ಗಳಿದ್ದಾರೆ. ಕೇಂದ್ರ ಕಚೇರಿಯಲ್ಲೂ ವಿಭಾಗಕ್ಕೊಬ್ಬರು ಮುಖ್ಯ ಎಂಜಿನಿಯರ್ ಇದ್ದಾರೆ. ಜಲಮಂಡಳಿಯ ನಿರ್ವಹಣಾ ವಿಭಾಗಕ್ಕೆ ಇಬ್ಬರು ಮಾತ್ರ ಮುಖ್ಯ ಎಂಜಿನಿಯರ್‌ಗಳಿದ್ದಾರೆ. ಕುಡಿಯುವ ನೀರು ಮತ್ತು ಒಳಚರಂಡಿ ನೀರಿನ ನಿರ್ವಹಣೆಯ ಹೊಣೆ ಮಾತ್ರ ಇರುವುದರಿಂದ ಬಿಬಿಎಂಪಿಯಷ್ಟು ಮುಖ್ಯ ಎಂಜಿನಿಯರ್‌ಗಳ ಅಗತ್ಯ ಮಂಡಳಿಗೆ ಇಲ್ಲ ನಿಜ. ಆದರೂ, ಎರಡು ವಲಯಕ್ಕೆ ಒಬ್ಬರು ಮುಖ್ಯ ಎಂಜಿನಿಯರ್ ಇರಬೇಕು ಎಂದು ಆಡಳಿತ ಮಂಡಳಿ ತೀರ್ಮಾನಿಸಿದೆ’ ಎಂದು ತಿಳಿಸಿದರು.

ಅಂಕಿ–ಅಂಶ

4,578

ಜಲಮಂಡಳಿಯಲ್ಲಿನ ಕಾಯಂ ನೌಕರರು

2,400
ಗುತ್ತಿಗೆ ನೌಕರರು‌

6
ಹಾಲಿ ಇರುವ ಮುಖ್ಯ ಎಂಜಿನಿಯರ್‌ ಹುದ್ದೆಗಳು

4
ಹೊಸದಾಗಿ ಪ್ರಸ್ತಾಪಿಸಿರುವ ಮುಖ್ಯ ಎಂಜಿನಿಯರ್‌ಗಳ ಹುದ್ದೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT