ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಮಂಡಳಿಗೆ ಪಾವತಿಸದೆ ಕೋಟ್ಯಂತರ ರೂಪಾಯಿ ದುರುಪಯೋಗ: 13 ಮಂದಿ ಅಮಾನತು

ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ಜಯರಾಂ ಆದೇಶ; ಕೋಟ್ಯಂತರ ರೂಪಾಯಿ ನಷ್ಟ
Last Updated 3 ಜನವರಿ 2023, 21:02 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಹಕರಿಂದ ಸಂಗ್ರಹಿಸಿದ ನಗದನ್ನು ಜಲ ಮಂಡಳಿಗೆ ಪಾವತಿಸದೆ ಕೋಟ್ಯಂತರ ರೂಪಾಯಿ ದುರುಪಯೋಗ ಮಾಡಿಕೊಂಡಿರುವ ಕಾರ್ಯನಿರ್ವಾಹಕ ಎಂಜಿನಿಯರ್ ಆರ್. ಶ್ರೀನಿವಾಸ್ ಸೇರಿದಂತೆ 13 ನೌಕರರನ್ನು ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷರು ಅಮಾನತು ಮಾಡಿದ್ದಾರೆ.

ಜಲಮಂಡಳಿಯ ದಕ್ಷಿಣ, ಆಗ್ನೇಯ, ನೈರುತ್ಯ, ಉತ್ತರ, ಈಶಾನ್ಯ ನಿರ್ವಹಣಾ ಉಪ ವಿಭಾಗಗಳಲ್ಲಿ ಮ್ಯಾನುಯಲ್‌ ಕ್ಯಾಷ್‌ ಕೌಂಟರ್‌ ಮೂಲಕ ನೀರಿನ ಬಿಲ್ ಪಾವತಿ ಮೂಲಕ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಪ್ರಕರಣದಲ್ಲಿ ಇವರು ಭಾಗಿಯಾಗಿರುವುದು ತನಿಖೆಯಿಂದ ಸಾಬೀತಾಗಿದೆ. ಹೀಗಾಗಿ ಈ 13 ಮಂದಿಯನ್ನು ಜ.3 ರಂದು ಅಮಾನತು ಗೊಳಿಸಲಾಗಿದೆ.

ಗ್ರಾಹಕರು ನಗದಾಗಿ ಪಾವತಿಸಿದ ನೀರಿನ ಬಿಲ್ ಅನ್ನು ಸಜಲ ತಂತ್ರಾಂಶದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಕಂದಾಯ ವ್ಯವಸ್ಥಾಪಕ, ಹಿರಿಯ ಜಲಪರಿವೀಕ್ಷಕರ ಲಾಗಿನ್, ಪಾಸ್‌ವರ್ಡ್‌ ಬಳಸಿ ನಕಲಿ ಪಾವತಿಯನ್ನು ದಾಖಲಿಸಲಾಗಿದೆ. ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ಮಂಡಳಿಯ ಪ್ರಥಮ ಪರಿಶೋಧನೆ ಹಾಗೂ ತನಿಖೆಯಿಂದಲೇ ತಿಳಿದುಬಂದಿತ್ತು. ಸಹಾಯಕ ಲೆಕ್ಕ ನಿಯಂತ್ರಕ ಜಿ. ಶಂಕರಾಚಾರ್ಯ ಅವರ ಮೂರು ತಂಡವನ್ನು ರಚಿಸಿ ಪರಿಶೋಧನೆ ಕಾರ್ಯ ನಡೆಸಿ ವರದಿ ಸಲ್ಲಿಸಲು ಅಧ್ಯಕ್ಷರು ಸೂಚಿಸಿದ್ದರು. ಈ ತಂಡ ಸಲ್ಲಿಸಿರುವ ವರದಿಯಲ್ಲಿ ಗುತ್ತಿಗೆ ನೌಕರರ ಜೊತೆಗೆ ಜಲಮಂಡಳಿ ಸಿಬ್ಬಂದಿಯೂ ಭಾಗಿಯಾಗಿರುವುದು ಬಹಿರಂಗವಾಗಿದೆ,

ಗ್ರಾಹಕರಿಂದ ಪಡೆದ ಚೆಕ್‌/ಡಿಡಿ ಹಾಗೂ ನಗದನ್ನು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಕಂದಾಯ ವ್ಯವಸ್ಥಾಪಕರಿಗೆ ಸಜಲ ತಂತ್ರಾಂಶದಲ್ಲಿ ದಾಖಲಿಸುವ ಜವಾಬ್ದಾರಿ ವಹಿಸಲಾಗಿತ್ತು. ಅವರ ಲಾಗಿನ್‌ನಲ್ಲಿ ನಕಲಿ ದಾಖಲೆ ಮಾಡಲಾಗಿದೆ. ಹಣ ಮಾತ್ರ ಮಂಡಳಿಗೆ ಪಾವತಿಯಾಗಿಲ್ಲ. ಹೊರ ಗುತ್ತಿಗೆದಾರರು ನಗದನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿತ್ತು. ಈ ಬಗ್ಗೆ ಯಾವುದೇ ಕ್ರಮ ಆಗಿರಲಿಲ್ಲ. ಈ ಬಗ್ಗೆ ನ್ಯೂನತೆ ಕಂಡುಬಂದಿದ್ದರೂ ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರಂಥ ಹಿರಿಯ ಅಧಿಕಾರಿ ಕ್ರಮ ಕೈಗೊಂಡಿರಲಿಲ್ಲ.

ಸಜಲ ತಂತ್ರಾಂಶದಲ್ಲಿ ನೀರಿನ ಬಿಲ್ ಪಾವತಿಯ ವಿವರ ಹಾಗೂ ಹಣ ಸಂಗ್ರಹ, ಮಂಡಳಿ ಖಾತೆಗೆ ವರ್ಗಾಯಿಸುವ ಜವಾಬ್ದಾರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಕಂದಾಯ ವ್ಯವಸ್ಥಾಪಕ ಅವರದ್ದಾಗಿತ್ತು. ಆದರೆ ಇವರೊಂದಿಗೆ ಕಾರ್ಯನಿರ್ವಾಹಕ ಎಂಜಿನಿಯರ್ ಗಳೂ ಸೇರಿಕೊಂಡು ದುರುಪಯೋಗ ಮಾಡಿಕೊಂಡು ಜಲಮಂಡಳಿಗೆ ಆರ್ಥಿಕ ನಷ್ಟ ಉಂಟುಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT