ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡರಹಳ್ಳಿ ದುರಂತ| ಹೆಣ್ಮಕ್ಕಳ ಜೀವನ ಹಾಳು ಮಾಡುತ್ತಿದ್ದ ಪತ್ನಿ: ಪತಿ ದೂರು

ಬ್ಯಾಡರಹಳ್ಳಿಯಲ್ಲಿ ಐವರು ಮೃತಪಟ್ಟ ಪ್ರಕರಣ l ಪತ್ನಿ ವಿರುದ್ಧವೇ ದೂರು ಕೊಟ್ಟ ಶಂಕರ್
Last Updated 18 ಸೆಪ್ಟೆಂಬರ್ 2021, 19:21 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕೂಸು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟ ಪ್ರಕರಣದಲ್ಲಿ, ಸಾವುಕಂಡ ಭಾರತಿ ಅವರ ಪತಿ ಹಲ್ಲೇಗೆರೆ ಶಂಕರ್ ಅವರು ಪೊಲೀಸರಿಗೆ ಎಂಟು ‍ಪುಟಗಳ ದೂರು ನೀಡಿದ್ದಾರೆ.

‘ಪತ್ನಿ ಭಾರತಿಯ ಪ್ರೇರಣೆ ಹಾಗೂ ಒತ್ತಡದಿಂದ ಮಕ್ಕಳು ಮಾನಸಿಕವಾಗಿ ಜರ್ಝರಿತರಾಗಿರಬಹುದು. ಅದರಿಂದಲೇ ಮಕ್ಕಳಾದ ಸಿಂಚನಾ ಕುಮಾರ್, ಸಿಂಧುರಾಣಿ, ಮಧುಸಾಗರ, 9 ತಿಂಗಳ ಗಂಡು ಮಗು ಹಾಗೂ ಪತ್ನಿ ಭಾರತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ದೂರಿನಲ್ಲಿ ಶಂಕರ್ ಹೇಳಿದ್ದಾರೆ.’

‘33 ವರ್ಷಗಳ ಹಿಂದೆ ಭಾರತಿ ಮದುವೆಯಾಗಿದ್ದೆ. ಅಂದಿನಿಂದಲೂ ಒಂದಿಲ್ಲೊಂದು ಕಷ್ಟಪಡುತ್ತಿದ್ದೆ. ಮೊದಲ ಮಗಳು ಸಿಂಚನಾ ಕುಮಾರಿಗೆ 2015ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಪತಿ ಜೊತೆ ಇರಲು ಒಪ್ಪದ ಆಕೆ, ನಿತ್ಯವೂ ಜಗಳ ಮಾಡುತ್ತಿದ್ದಳು. ಇದಕ್ಕೆ ಪತ್ನಿ ಭಾರತಿ ಕುಮ್ಮಕ್ಕು ನೀಡುತ್ತಿದ್ದಳು. ಗಂಡನೊಂದಿಗೆ ಹೊಂದಿಕೊಂಡು ಹೋಗಬೇಕೆಂದು ಹಲವು ಬಾರಿ ಹೇಳಿದರೂ ಮಾತು ಕೇಳುತ್ತಿರಲಿಲ್ಲ.’

‘ಅಳಿಯ ಹಾಗೂ ಬೀಗರನ್ನೂ ಮಗಳು ಹೆದರಿಸುತ್ತಿದ್ದಳು. ಗಂಡನ ಮನೆಯಲ್ಲೂ ಕೈ ಕೊಯ್ದುಕೊಂಡಿದ್ದಳು. ಆಕೆಯನ್ನು ಬೀಗರೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ನಂತರ, ಮನೆಗೆ ಬಂದ ಮಗಳಿಗೆ ಪತ್ನಿ ಇಲ್ಲಸಲ್ಲದನ್ನು ಹೇಳಿ ತಲೆ ಕೆಡಿಸಿದ್ದಳು. ಗಂಡನ ಮನೆಗೆ ಹೋಗದಂತೆ ತಡೆಯುತ್ತಿದ್ದಳು’ ಎಂಬ ಅಂಶವೂ ದೂರಿನಲ್ಲಿದೆ.

‘ಎರಡನೇ ಮಗಳು ಸಿಂಧುರಾಣಿಗೆ 2020ರ ಫೆಬ್ರುವರಿಯಲ್ಲಿ ಮದುವೆಯಾಗಿತ್ತು. ಆಕೆಗೂ ಇಲ್ಲಸಲ್ಲದನ್ನು ಹೇಳಿ ಪತಿ ಜೊತೆ ಹೊಂದಾಣಿಕೆ ಆಗದಂತೆ ಪತ್ನಿ ಮಾಡಿದ್ದಳು. ಮೊದಲ ಮಗಳ ಜೀವನ ಹಾಳಾಗಿದ್ದು, ಎರಡನೇ ಮಗಳದ್ದೂ ಆ ರೀತಿಯಾಗುವುದು ಬೇಡ
ವೆಂದು ಹೇಳಿದರೂ ಬುದ್ದಿ ಕಲಿಯಲಿಲ್ಲ. ಬಸವೇಶ್ವರನಗರದ ನಿಸರ್ಗ ಪಾರ್ಟಿ ಹಾಲ್‌ನಲ್ಲಿ 2021ರ ಸೆ. 2ರಂದು ಮಗುವಿನ ನಾಮಕರಣ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು.’

‘ಮಗುವಿಗೆ ಕಿವಿ ಚುಚ್ಚುವುದು ಬೇಡವೆಂದು ಅಳಿಯ ಹೇಳಿದ್ದ. ಆ ಬಗ್ಗೆ ನನಗೆ ಗೊತ್ತಿಲ್ಲವೆಂದು ಸುಮ್ಮನಾಗಿದ್ದೆ. ಕಿವಿ ಚುಚ್ಚಿಸಿರಬಹುದೆಂದು ತಿಳಿದ ಅಳಿಯ, ಮಗಳಿಗೆ ಕರೆ ಮಾಡಿ ವಿಚಾರಿಸಿದ್ದ. ಅಷ್ಟಕ್ಕೆ ಕೋಪಗೊಂಡಿದ್ದ ಮಗಳು, ‘ಕಿವಿ ಚುಚ್ಚಿಸಿದರೆ, ಪ್ರಪಂಚ ಮುಳುಗಿ ಹೋಗುತ್ತಾ?’ ಎಂದು ಬಾಯಿಗೆ ಬಂದಂತೆ ಬೈದಿದ್ದಳು. ನಂತರ, ಪತ್ನಿ ಹಾಗೂ ಮಕ್ಕಳೆಲ್ಲರೂ ಒಂದಾಗಿ, ಮಗುವಿನ ನಾಮಕರಣ ನಡೆಯಲು ಬಿಡಲಿಲ್ಲ. ಕಾಲು ಹಿಡಿದುಕೊಂಡು ಕೇಳಿದರೂ ಅವರ ಮನಸ್ಸು ಕರಗಲಿಲ್ಲ.’

ಆತ್ಮಹತ್ಯೆಗೆ ಯತ್ನಿಸಿದ್ದ ಮಗಳು: ‘ರಾತ್ರಿ 11 ಗಂಟೆ ಸುಮಾರಿಗೆ ಕಚೇರಿಯಿಂದ ಮನೆಗೆ ಬರುತ್ತಿದ್ದಂತೆ, ಮನೆಯಲ್ಲಿ ವಾತಾವರಣ ಬದಲಾಗಿತ್ತು. ಪತ್ನಿ ಕೊಠಡಿಯೊಂದಕ್ಕೆ ಹೋಗಿ ನೋಡಿದಾಗ, ಮಗಳು 25–30 ಮಾತ್ರೆ ತೆಗೆದುಕೊಂಡು ಪ್ರಜ್ಞೆ ಕಳೆದುಕೊಂಡಿದ್ದಳು. ಕೂಡಲೇ ಆಕೆಯನ್ನು ಆಂಬುಲೆನ್ಸ್‌ನಲ್ಲಿ ಲಕ್ಷ್ಮಿ ನರ್ಸಿಂಗ್ ಹೋಮ್‌ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು. ವೈದ್ಯರು, ಘಟನೆ ಬಗ್ಗೆ ಬ್ಯಾಡರಹಳ್ಳಿ ಠಾಣೆಗೆ ಮೆಮೊ ಕಳುಹಿಸಿದ್ದರು’ ಎಂದೂ ದೂರಿನಲ್ಲಿ ಹೇಳಲಾಗಿದೆ.

‘ಆಸ್ಪತ್ರೆಗೆ ಬಂದ ಪೊಲೀಸರು, ಸಿಂಧುರಾಣಿಯಿಂದ 4 ಪುಟ ಹೇಳಿಕೆ ಪಡೆದರು. ನನ್ನ ಹಾಗೂ ನನ್ನ ಶ್ರೀಕಾಂತ್ ವಿರುದ್ಧ ಹೇಳಿಕೆ ನೀಡಿದ್ದಳು. ನಮ್ಮಿಬ್ಬರನ್ನು ಪೊಲೀಸರು ಠಾಣೆಗೆ ಕರೆಸಿದ್ದರು. ನಾನು ಅವರ ತಂಟೆಗೆ ಹೋಗುವುದಿಲ್ಲವೆಂದು ಹೇಳಿ ಠಾಣೆಗೆ ಮುಚ್ಚಳಿಗೆ ಬರೆದುಕೊಟ್ಟಿದ್ದೆ.’
‘ಮಗನ ಹೆಸರಿನಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ಸಿದ್ಧತೆ ನಡೆಸಿದ್ದೆ. ಈ ವಿಚಾರವಾಗಿಯೂ ಮಗ ಜಗಳ ಮಾಡಿದ್ದ. ಆಸ್ತಿ, ಆಭರಣ ಏನು ಬೇಡವೆಂದಿದ್ದ ನಾನು, ಆಶ್ರಮ ತೆರೆಯುವುದಾಗಿ ಹೇಳಿದ್ದೆ. ಆಶ್ರಮಕ್ಕಾಗಿ ಮಂಡ್ಯ ತಾಲ್ಲೂಕಿನಲ್ಲಿ 5 ಎಕರೆ 1 ಗುಂಟೆ ಜಾಗ ಖರೀದಿಸಲು ಮಗನ ಬಳಿ ಇದ್ದ ₹ 10 ಲಕ್ಷ ಕೊಡುವಂತೆ ಕೇಳಿದ್ದೆ. ಆತ ಕೊಡಲಿಲ್ಲ. ಮನೆಯಲ್ಲಿ ಉಳಿದರೆ ಜಗಳವಾಗುತ್ತದೆಂದು ತಿಳಿದು ಕಚೇರಿಗೆ ಹೋಗಿದ್ದೆ’ ಎಂಬ ಸಂಗತಿಯೂ ದೂರಿನಲ್ಲಿದೆ.

‘ಭಾನುವಾರ (ಸೆ. 12) ಸಂದೇಶ ಕಳುಹಿಸಿದ್ದ ಮಗ ಮಧುಸಾಗರ್, ‘ನಾಳೆ ನಿಮಗೆ ಬೇಕಾದ ಹಣ ಸಿಗುತ್ತದೆ’ ಎಂದಿದ್ದ. ತಡವಾಗಿ ಸಂದೇಶದ ನೋಡಿ, ಆತನಿಗೆ ಕರೆ ಮಾಡಿದ್ದೆ. ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಮನೆಗೆ ಹೋಗಿ ನೋಡಿದಾಗ, ಬೀಗ ಹಾಕಿತ್ತು. ಬಾಡಿಗೆ ಕಾರಿನಲ್ಲಿ ಎಲ್ಲರೂ ದೇವಸ್ಥಾನಕ್ಕೆ ಹೋಗಿರಬಹುದೆಂದು ತಿಳಿದಿದ್ದೆ. ನಾಲ್ಕು ದಿನ ಕಳೆದರೂ ಮನೆ ಬಳಿ ಯಾರೂ ಬಂದಿರಲಿಲ್ಲ.’

‘ಆತಂಕ ಹಾಗೂ ಭಯವಾಗಿ ಮನೆ ಬಳಿ ಹೋಗಿ ಬೀಗ ಕೀಗಾಗಿ ಹುಡುಕಾಟ ನಡೆಸಿದ್ದೆ. ಕಿಟಕಿ ಬಳಿ ಹೋದಾಗ, ದುರ್ನಾತ ಬರುತ್ತಿತ್ತು. ಬ್ಯಾಡರಹಳ್ಳಿ ಠಾಣೆಗೆ ಮಾಹಿತಿ ನೀಡಿದೆ. ಹೊಯ್ಸಳ ವಾಹನದ ಸಿಬ್ಬಂದಿ ಹಾಗೂ ಸಾರ್ವಜನಿಕರ ಜೊತೆ ಮನೆಯೊಳಗೆ ಹೋಗಿ ನೋಡಿದಾಗಲೇ ಮೃತದೇಹಗಳು ಕಂಡವು. ಈ ಘಟನೆಯಲ್ಲಿ ನನ್ನ, ಬೀಗರ, ಅಳಿಯಂದಿರ ಯಾವುದೇ ಪಾತ್ರ ಇರುವುದಿಲ್ಲ’ ಎಂದೂ ದೂರಿನಲ್ಲಿ ಶಂಕರ್ ತಿಳಿಸಿದ್ದಾರೆ.

ಮನೆಯಲ್ಲಿ ಡೈರಿ, ಮರಣಪತ್ರ ಪತ್ತೆ

‘ಪತ್ನಿ ಹಾಗೂ ಮಕ್ಕಳ ವಾಸಕ್ಕಾಗಿ ಶಂಕರ್, ಐಷಾರಾಮಿ ಮನೆ ಕಟ್ಟಿಸಿದ್ದರು. ಆತ್ಮಹತ್ಯೆ ನಂತರ, ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಮಗ ಮಧುಸಾಗರ್ ಬರೆಯುತ್ತಿದ್ದ ಎನ್ನಲಾದ ಡೈರಿ ಹಾಗೂ ಮರಣ ಪತ್ರ ಸಿಕ್ಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತಂದೆ ಹಾಗೂ ಮಗನ ಜೊತೆ ಹಲವು ಬಾರಿ ಗಲಾಟೆ ಆಗಿತ್ತು. ಠಾಣೆಯಲ್ಲೂ ಸಂಧಾನ ನಡೆದಿತ್ತು. ಈ ಅಂಶವನ್ನು ಮಗ, ಡೈರಿಯಲ್ಲಿ ಬರೆದಿದ್ದಾನೆ. ಉಳಿದಂತೆ ಎಲ್ಲ ಸಂಗತಿಗಳ ಪರಿಶೀಲನೆ ನಡೆಸಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

‘ವಿಶೇಷ ತಂಡದಿಂದ ತನಿಖೆ’

‘ಐವರು ಮೃತಪಟ್ಟ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಶೇಷ ತಂಡದಿಂದ ತನಿಖೆ ಮುಂದುವರಿದಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ತನಿಖೆ ಪೂರ್ಣಗೊಂಡ ಬಳಿಕವೇ ಆತ್ಮಹತ್ಯೆಗೆ ನಿಖರ ಕಾರಣವೇನು? ಹಾಗೂ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ ಎಂಬುದು ತಿಳಿಯಲಿದೆ’ ಎಂದೂ ತಿಳಿಸಿದರು.

‘ಯುಪಿಎಸ್ಸಿ ತರಬೇತಿ ಪಡೆಯುತ್ತಿದ್ದ ಮಕ್ಕಳು’

‘ಹೆಣ್ಣು ಮಕ್ಕಳನ್ನು ಐಎಎಸ್ ಅಧಿಕಾರಿ ಮಾಡಬೇಕೆಂದುಕೊಂಡಿದ್ದ ಶಂಕರ್, ಸಿಂಧುರಾಣಿ ಹಾಗೂ ಸಿಂಚನಾ ಅವರನ್ನು ಯುಪಿಎಸ್ಸಿ ಪರೀಕ್ಷೆ ತರಬೇತಿಗಾಗಿ ಸಂಸ್ಥೆಯೊಂದಕ್ಕೆ ಸೇರಿಸಿದ್ದರು. ಅವರಿಬ್ಬರು ಸಂಸ್ಥೆಗೆ ಹೋಗಿಬರಲು ಪ್ರತ್ಯೇಕ ಕಾರಿನ ವ್ಯವಸ್ಥೆಯನ್ನು ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಿಂಧುರಾಣಿ, ಎಂಬಿಎ ಪದವೀಧರೆ. ಇನ್ನೊಬ್ಬ ಮಗಳು ಸಿಂಚನಾ, ಬಿ.ಇ ಪದವಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲ ವರ್ಷ ಕೆಲಸ ಮಾಡಿದ್ದರು. ಮಗು ಆದ ಬಳಿಕ ಕೆಲಸ ಬಿಟ್ಟಿದ್ದರು. ಮಗ ಮಧುಸಾಗರ್, ಬಿ.ಇ‌ ಪದವೀಧರ. ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತನ ಬಳಿ ತಂದೆ ಕುಟುಂಬ ನಿರ್ವಹಣೆಗೆ ಹಣ ಕೇಳುತ್ತಿರಲಿಲ್ಲ. ಹೆಚ್ಚಿನ ದುಡಿಮೆಗೆ ಆತನಿಗೆ ಬಾರ್‌ ತೆರೆದುಕೊಡಲು ತೀರ್ಮಾನಿಸಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಮನೆ ಕೆಲಸದ ಮಹಿಳೆ, ಅಳಿಯಂದಿರ ವಿಚಾರಣೆ’

‘ಕಲಬುರ್ಗಿಯ ಮಹಿಳೆಯೊಬ್ಬರು ಮನೆಯಲ್ಲಿ ಕೆಲಸಕ್ಕೆ ಇದ್ದರು. ಕಳೆದ ತಿಂಗಳು ಕೆಲಸ ಬಿಟ್ಟು ಹೋಗಿದ್ದರು. ಅವರ ಜಾಗಕ್ಕೆ ಬೇರೊಬ್ಬ ಮಹಿಳೆ ಬಂದಿದ್ದರೆಂದು ಗೊತ್ತಾಗಿದೆ. ಅವರೂ ಭಾನುವಾರದಿಂದ ಕೆಲಸಕ್ಕೆ ಬಂದಿರಲಿಲ್ಲ. ಆ ಮಹಿಳೆಯನ್ನು ಪತ್ತೆ ಮಾಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮನೆ ಮಾಲೀಕ ಶಂಕರ್, ಅಳಿಯಂದಿರು ಹಾಗೂ ಇತರರನ್ನು ವಿಚಾರಣೆ ನಡೆಸಲಾಗುತ್ತಿದೆ. ಮೊಬೈಲ್‌ಗಳನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎಲ್ಲರ ಹೇಳಿಕೆ ಪಡೆದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT