ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್‌ ಸಮೀಕ್ಷೆ – ಸಿ.ವಿ. ರಾಮನ್ ನಗರ: ರಘುವಿಗೆ ಜಯವೋ, ’ಕೈ‘ಗೆ ಆನಂದವೋ

ಆರ್‌ಪಿಐ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ : ಆಮ್‌ ಆದ್ಮಿ ಪಾರ್ಟಿ ಕಸರತ್ತು
Published 6 ಮೇ 2023, 20:20 IST
Last Updated 6 ಮೇ 2023, 20:20 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ವಿಜ್ಞಾನಿ ಸರ್ ಸಿ.ವಿ. ರಾಮನ್ ಹೆಸರಿರುವ ಕ್ಷೇತ್ರವನ್ನು ಭದ್ರಕೋಟೆ ಮಾಡಿಕೊಂಡಿರುವ ‘ಕಮಲ’ವನ್ನು ಬಾಡಿಸಲು ‘ಕೈ’ ಪ್ರಬಲ ಪೈಪೋಟಿ ಒಡ್ಡಿದೆ.

ಪರಿಶಿಷ್ಟರು, ಹಿಂದುಳಿದ ವರ್ಗದ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಕ್ಷೇತ್ರದಲ್ಲಿ ಸಿ.ವಿ. ರಾಮನ್‌ ನಗರ, ಲಾಲ್‌ ಬಹದ್ದೂರ್ ನಗರ, ಹೊಸ ಬೈಯಪ್ಪನಹಳ್ಳಿ, ಹೊಯ್ಸಳ ನಗರ, ಹಳೇ ತಿಪ್ಪಸಂದ್ರ, ನ್ಯೂ ತಿಪ್ಪಸಂದ್ರ, ಜಲಕಂಠೇಶ್ವರನಗರ, ಜೀವನ್‌ಬಿಮಾನಗರ ಹಾಗೂ ಕೋನೇನ ಅಗ್ರಹಾರ ವಾರ್ಡ್‌ಗಳಿವೆ.

ಪ್ರತಿಷ್ಠಿತ ಬಡಾವಣೆಗಳಿಂದ ಹಿಡಿದು ಕೊಳೆಗೇರಿ ಪ್ರದೇಶವನ್ನು ಒಳಗೊಂಡಿರುವ ಕ್ಷೇತ್ರ ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗೆ ಮೀಸಲು. ಸದ್ಯ 251 ಮತಗಟ್ಟೆಗಳಿವೆ. 

2008ರಲ್ಲಿ ಕ್ಷೇತ್ರ ಮರು ವಿಂಗಡನೆಯಾದಾಗ ನಡೆದ ಮೊದಲ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಶಾಸಕರಾಗಿದ್ದ ಬಿಜೆಪಿಯ ಎಸ್. ರಘು, 2013 ಹಾಗೂ 2018ರ ಚುನಾವಣೆಯಲ್ಲೂ ವಿಜಯ ಪತಾಕೆ ಹಾರಿಸಿದ್ದಾರೆ.

ಈ ಬಾರಿಯೂ ಎಸ್‌.ರಘು ಬಿಜೆಪಿ ಅಭ್ಯರ್ಥಿಯಾಗಿದ್ದು, ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಇವರನ್ನು ಮಣಿಸಲು ತಂತ್ರ ರೂಪಿಸಿರುವ ಕಾಂಗ್ರೆಸ್, ಹೊಯ್ಸಳ ನಗರದ ಮಾಜಿ ಕಾರ್ಪೊರೇಟರ್ ಆಗಿರುವ ಎಸ್. ಆನಂದ್‌ಕುಮಾರ್ ಅವರನ್ನು ಕಣಕ್ಕೆ ಇಳಿಸಿದೆ. 

2018ರ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಸಂಪತ್‌ ರಾಜ್, ಎರಡನೇ ಸ್ಥಾನದಲ್ಲಿದ್ದರು. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ರಮೇಶ್, 20,478 ಮತ ಪಡೆದು ಮೂರನೇ ಸ್ಥಾನ ಪಡೆದಿದ್ದರು. ಆದರೆ, ಈ ಬಾರಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿಲ್ಲ. ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಅಭ್ಯರ್ಥಿ ಎಂ. ರಾಜೇಂದ್ರ ಅವರಿಗೆ ಬೆಂಬಲ ನೀಡುವುದಾಗಿ ಜೆಡಿಎಸ್ ಘೋಷಿಸಿದೆ. ಹೀಗಾಗಿ, ರಾಜೇಂದ್ರ ಅವರು ಹೆಚ್ಚು ಮತ ಗಳಿಸುವ ವಾತಾವರಣವಿದೆ.

ಆಮ್‌ ಆದ್ಮಿ ಪಾರ್ಟಿಯಿಂದ ಸ್ಪರ್ಧಿಸಿದ್ದ ಮೋಹನ್ ದಾಸರಿ, ಐದನೇ ಸ್ಥಾನದಲ್ಲಿದ್ದರು. ಈ ಬಾರಿಯೂ ಅವರು ಆಮ್‌ ಆದ್ಮಿ ಪಾರ್ಟಿಯಿಂದ ಸ್ಪರ್ಧಿಸಿದ್ದಾರೆ.

ಐಟಿ–ಬಿಟಿ ಉದ್ಯೋಗಿಗಳು, ರಕ್ಷಣಾ ಪಡೆಗಳ ನೌಕರರು, ದಿನಗೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. ಕ್ಷೇತ್ರದಲ್ಲಿರುವ ಇಂದಿರಾನಗರ ಹೆಸರುವಾಸಿಯಾದ ಪ್ರದೇಶ. ಹೀಗಾಗಿ, ಎಲ್ಲ ವರ್ಗ ಹಾಗೂ ಧರ್ಮ–ಜಾತಿ ಜನರ ಮತಗಳನ್ನು ಸೆಳೆಯಲು ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ.

‘15 ವರ್ಷಗಳಿಂದ ಶಾಸಕನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈ ಬಾರಿಯೂ ಆಶೀರ್ವಾದ ಮಾಡಿ, ಸೇವೆಗೆ ಅವಕಾಶ ನೀಡಿ’ ಎಂದು ಬಿಜೆಪಿ ಅಭ್ಯರ್ಥಿ ರಘು ಕೋರುತ್ತಿದ್ದಾರೆ.

ಕಾಂಗ್ರೆಸ್‌ನ ಆನಂದ್‌ಕುಮಾರ್, ‘ಕ್ಷೇತ್ರದಲ್ಲಿ ಹೇಳಿಕೊಳ್ಳುವಂಥ ಅಭಿವೃದ್ಧಿ ಆಗಿಲ್ಲ. ಕ್ಷೇತ್ರಕ್ಕೆ ಬಂದ ಅನುದಾನ ಎಲ್ಲಿಗೆ ಹೋಯಿತು ಎಂಬ ಮಾಹಿತಿಯೂ ಇಲ್ಲ. ಈ ಬಾರಿಯಾದರೂ ಬದಲಾವಣೆ ತನ್ನಿ’ ಎಂದು ಪ್ರಚಾರ ಮಾಡುತ್ತಿದ್ದಾರೆ.

ಆಮ್‌ ಆದ್ಮಿ ಪಾರ್ಟಿಯ ಮೋಹನ್ ದಾಸರಿ, ‘2018ರ ಚುನಾವಣೆ ನಂತರವೂ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದೇನೆ. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುತ್ತಿದ್ದೇನೆ. ಮತ ನೀಡಿ’ ಎಂದು ಪ್ರಚಾರದಲ್ಲಿ ತೊಡಗಿದ್ದಾರೆ.

ಎಲ್ಲರನ್ನು ನಗುತ್ತಲೇ ಬೀಳ್ಕೊಡುತ್ತಿರುವ ಮತದಾರರು, ‘ಕ್ಷೇತ್ರದಲ್ಲಿ ಮೊದಲಿನಿಂದಲೂ ಬಿಜೆಪಿ ಅಭ್ಯರ್ಥಿ ಮೇಲೆ ಒಲವಿದೆ. ಕಾಂಗ್ರೆಸ್ ಪ್ರತಿ ವರ್ಷವೂ ಅಭ್ಯರ್ಥಿಯನ್ನು ಬದಲಿಸುತ್ತಿದೆ. ಹೀಗಾಗಿ, ಈ ಬಾರಿ ಬಿಜೆಪಿ–ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ’ ಎನ್ನುತ್ತಿದ್ದಾರೆ. ಆದರೆ, ಯಾರಾಗಲಿದ್ದಾರೆ ಮುಂದಿನ ಶಾಸಕ ಎಂಬ ಗುಟ್ಟು ಬಿಟ್ಟು ಕೊಡುತ್ತಿಲ್ಲ.

ಬಹುಜನ ಸಮಾಜ ಪಾರ್ಟಿಯಿಂದ (ಬಿಎಸ್‌ಪಿ) ವಿ. ಅಂಜಿ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಜಿ. ಚೈತ್ರಾ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಡಾ. ಮಂಜುನಾಥ್ ಎಸ್. ಕಣದಲ್ಲಿದ್ದಾರೆ. ಎಸ್. ಚಂದ್ರಶೇಖರ್, ಪಿ. ರಮೇಶ್ ಹಾಗೂ ರಾಕೇಶ್‌ಕುಮಾರ್ ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT