ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಪೀಡಿತರ ಬೆಳಕು ಕರುಣಾಶ್ರಯ

Last Updated 7 ನವೆಂಬರ್ 2019, 6:04 IST
ಅಕ್ಷರ ಗಾತ್ರ

ಇ ದು ಕರುಣಾಶ್ರಯ. ಇದಕ್ಕೀಗ 25ರ ಪ್ರಾಯ! ಸಾವಿನ ಹೊಸ್ತಿಲಲ್ಲಿರುವ ರೋಗಿಗಳು ಬದುಕಿನ ಕೊನೆಯ ಕ್ಷಣಗಳನ್ನು ಶಾಂತಿ ಮತ್ತು ಘನತೆಯಿಂದ ಕಳೆಯಲು ಅವಕಾಶ ಕಲ್ಪಿಸುವ ಮಹತ್ವದ ಉದ್ದೇಶದಿಂದ 1994ರಲ್ಲಿ ಇದು ಜನ್ಮ ತಾಳಿದ್ದು. ಐದು ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಆಶ್ರಮ ಇದೀಗ ಹೆಮ್ಮರವಾಗಿ ಬೆಳೆದು ನಿಂತಿದೆ. ಬದುಕುವ ಆಸೆಯನ್ನೇ ಕಳೆದುಕೊಂಡ ಕ್ಯಾನ್ಸರ್‌ ಪೀಡಿತರ ಬಾಳಿಗೆ ಆಶಾಕಿರಣವಾಗಿದೆ.

ಸದಾ ಜನದಟ್ಟನೆಯಿಂದ ಕೂಡಿದ ವರ್ತೂರು ಮುಖ್ಯರಸ್ತೆಯಲ್ಲಿರುವ ಈ ಬೃಹತ್‌ ಕಲ್ಲಿನ ಕಟ್ಟಡ ಮಾನವೀಯತೆಯ ಸಾಕಾರಮೂರ್ತಿಯಂತಿದೆ.ಭಾರತೀಯ ಕ್ಯಾನ್ಸರ್ ಸೊಸೈಟಿಯ ಕರ್ನಾಟಕ ಶಾಖೆ ಮತ್ತು ಇಂದಿರಾ ನಗರದ ರೋಟರಿ ಕ್ಲಬ್‌ ಆಫ್‌ ಬೆಂಗಳೂರು ಈ ಎರಡು ಸಂಸ್ಥೆಗಳ ಕಲ್ಪನೆಯ ಕೂಸು ಈ ಕರುಣಾಶ್ರಯ. ಸದ್ಯ ಬೆಂಗಳೂರು ಹಾಸ್ಪೈಸ್‌ ಟ್ರಸ್ಟ್‌ (ಬಿಎಚ್‌ಟಿ)ಈ ಆಶ್ರಮದ ಹೊಣೆ ಹೊತ್ತಿದೆ.

ಸಾವು–ಬದುಕಿನೊಂದಿಗೆ ಸೆಣಸುತ್ತಿರುವ ಕ್ಯಾನ್ಸರ್‌ ರೋಗಿಗಳಿಗೆ ಉಚಿತವಾಗಿ ಆರೈಕೆ ಮಾಡುವ ಕರುಣೆಯ ತಾಣವಿದು. ಕರುಣಾಶ್ರಯ ತನ್ನ ಒಡಲಿನಲ್ಲಿಇಲ್ಲಿಯವರೆಗೆ 24 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್‌ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಅಕ್ಕರೆಯಿಂದ ಪೋಷಿಸಿದೆ.

‘ರೋಗಿಗಳ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಒದಗಿಸಲುಆರಂಭದಲ್ಲಿ ಆಟೊವೊಂದನ್ನು ಖರೀದಿಸಿದ್ದೆವು. ಸಮಾಲೋಚಕರು, ನರ್ಸ್‌ ಮತ್ತು ವೈದ್ಯರನ್ನು ಆಟೊದಲ್ಲಿ ರೋಗಿಗಳ ಮನೆಗೆ ಕರೆದೊಯ್ದು ಸೇವೆ ಒದಗಿಸುತ್ತಿದ್ದೆವು’ ಎನ್ನುತ್ತಲೇ ಬಿಎಚ್‌ಟಿ ವ್ಯವಸ್ಥಾಪಕ ಟ್ರಸ್ಟಿ ಗುರ್ಮಿತ್‌ ಸಿಂಗ್‌ ರಾಂಡ್ವಾ‘ಮೆಟ್ರೊ’ ಜತೆ ಮಾತಿಗಿಳಿದರು.

ಅದಾದ ಐದು ವರ್ಷಗಳ ನಂತರ ವರ್ತೂರು ಬಳಿ ಐದು ಎಕರೆ ಭೂಮಿಯನ್ನು ಕರ್ನಾಟಕ ಸರ್ಕಾರದಿಂದ ಲೀಸ್‌ ಪಡೆಯಲಾಯಿತು. ಅದೇ ಜಾಗದಲ್ಲಿ ಈಗ ಕರುಣಾಶ್ರಯ ತಲೆ ಎತ್ತಿ ನಿಂತಿದೆ ಎಂದು ಅವರು ನೆನಪುಗಳನ್ನು ಹರಡಿಕೊಂಡು ಕುಳಿತರು.

ಟ್ರಸ್ಟ್‌ನ ಮೂರು ತಂಡಗಳು ಕ್ಯಾನ್ಸರ್‌ ರೋಗಿಗಳ ಆರೈಕೆಯಲ್ಲಿ ತೊಡಗಿವೆ. ಜಯನಗರ ಮತ್ತು ಕಲ್ಯಾಣನಗರದಲ್ಲಿ ಎರಡು ತಂಡ ಮತ್ತು ಕರುಣಾಶ್ರಯದ ಹೊರಗೆ ಮತ್ತೊಂದು ತಂಡ ಸಕ್ರಿಯವಾಗಿವೆ.

ಕರುಣಾಶ್ರಯದಲ್ಲಿ 75 ಹಾಸಿಗೆಗಳ ಆರೈಕಾ ಕೇಂದ್ರವಿದ್ದು ಪ್ರತಿವರ್ಷ 1,600 ರೋಗಿಗಳಿಗೆ ಆಶ್ರಯ ಕಲ್ಪಿಸಲಾಗುತ್ತದೆ. ಈ ಕೇಂದ್ರದಲ್ಲಿ ಆರು ತಜ್ಞ ವೈದ್ಯರು, ಸಮಾಲೋಚಕರು, ಫಿಸಿಯೊಥೆರಪಿಸ್ಟ್‌ ಮತ್ತು ಶುಶ್ರೂಷಕಿಯರ ದೊಡ್ಡ ತಂಡವೇ ಇದೆ.

‘ಇಲ್ಲಿಗೆ ಬರುವ ರೋಗಿಗಳು ಸಾಮಾನ್ಯವಾಗಿ 15ರಿಂದ 20 ದಿನ ಬದುಕಿರುತ್ತಾರೆ. ಕೆಲವೊಬ್ಬರು ತಿಂಗಳಾನುಗಟ್ಟಲೇ ಇರುತ್ತಾರೆ. ಇನ್ನೂ ಕೆಲವರು ಇಲ್ಲಿಗೆ ಬಂದು ವಾರದಲ್ಲಿಯೇ ಕೊನೆಯುಸಿರೆಳೆಯುತ್ತಾರೆ. ಅವರ ರೋಗ ಯಾವ ಹಂತದಲ್ಲಿದೆ ಎನ್ನುವುದರ ಮೇಲೆ ಇದು ನಿರ್ಧಾರವಾಗುತ್ತದೆ. ಸದ್ಯ 75 ಕ್ಯಾನ್ಸರ್‌ಪೀಡಿತರು ಇಲ್ಲಿದ್ದಾರೆ’ ಎಂದು ಗುರ್ಮೀತ್‌ ಮಾಹಿತಿ ನೀಡಿದರು.

ಯಾವುದೇ ಚಿಕಿತ್ಸೆ ಇಲ್ಲ, ಸಾವೊಂದೇ ಮಾರ್ಗ ಎಂದು ವೈದ್ಯರು ಕೈಚೆಲ್ಲಿದ ನಂತರ ರೋಗಿಗಳು ಇಲ್ಲಿಗೆ ಬರುತ್ತಾರೆ. ಅವರಲ್ಲಿ ಹೆಚ್ಚಿನವರು ಕ್ಯಾನ್ಸರ್‌ ಉಲ್ಬಣಗೊಂಡು ಕೊನೆಯ ಹಂತದಲ್ಲಿರುತ್ತಾರೆ. ಕಿದ್ವಾಯಿ ಆಸ್ಪತ್ರೆಯ ವೈದ್ಯರು ರೋಗಿಗಳನ್ನು ಇಲ್ಲಿಗೆ ಶಿಫಾರಸು ಮಾಡುತ್ತಾರೆ. ರೋಗಿಗಳನ್ನು ಅವರ ಸಂಬಂಧಿಗಳು ಯಾವಾಗ ಬೇಕಾದರೂ ಭೇಟಿಯಾಗಲು ಅವಕಾಶವಿದೆ.ನಾವು ನಮ್ಮ ಕೈಲಾದಷ್ಟು ಉಚಿತವಾಗಿ ಸೇವೆ ನೀಡುತ್ತೇವೆ ಎಂದು ವಿವರಿಸಿದರು.

ಮುಂಬೈನ ಟಾಟಾ ಟ್ರಸ್ಟ್‌ ಮೊದಲಿನಿಂದಲೂ ಆರ್ಥಿಕ ನೆರವು ನೀಡುತ್ತಿದೆ. ರೊಟರಿ ಪ್ರತಿಷ್ಠಾನ ₹65 ಲಕ್ಷ ದೇಣಿಗೆ ನೀಡಿದೆ. ದೆಹಲಿಯ ಹಂಸ ಪ್ರತಿಷ್ಠಾನ ಕೂಡ ನೆರವು ನೀಡುತ್ತಿದೆ. ಇದನ್ನೆಲ್ಲ ಮೀರಿ ಜನರು ಧಾರಾಳವಾಗಿ ದಾನ ಮಾಡುತ್ತಿದ್ದಾರೆ ಎಂದು ರಾಂಡ್ವಾ ಕೃತಜ್ಞತೆ ಸಲ್ಲಿಸಿದರು.

ಕರುಣಾಶ್ರಯ ಸಂಪರ್ಕ ಸಂಖ್ಯೆ: 080–28476133

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT