ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ: ಅಭ್ಯರ್ಥಿ ಆಯ್ಕೆ; ಸಚಿವರ ಶಿಫಾರಸಿಗೆ ಅಪಸ್ವರ

ಲೋಕಸಭಾ ಚುನಾವಣಾ ತಯಾರಿಗೆ ಕಾಂಗ್ರೆಸ್‌ ಪ್ರದೇಶ ಚುನಾವಣಾ ಸಮಿತಿ ಸಭೆ
Published 19 ಜನವರಿ 2024, 22:26 IST
Last Updated 19 ಜನವರಿ 2024, 22:26 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳ ಕುರಿತು ಸಚಿವರು ನೀಡಿರುವ ಶಿಫಾರಸುಗಳ ಕುರಿತು ಕಾಂಗ್ರೆಸ್‌ ಪ್ರದೇಶ ಚುನಾವಣಾ ಸಮಿತಿ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದ್ದು, ಮತ್ತೊಂದು ಸುತ್ತಿನ ಅಭಿಪ್ರಾಯ ಸಂಗ್ರಹಕ್ಕೆ ಒಲವು ವ್ಯಕ್ತವಾಗಿದೆ.

ಲೋಕಸಭಾ ಕ್ಷೇತ್ರವಾರು ಉಸ್ತುವಾರಿ ವಹಿಸಿರುವ ಸಚಿವರು ಅಭ್ಯರ್ಥಿಗಳ ಆಯ್ಕೆಗೆ ಸಲ್ಲಿಸಿರುವ ಶಿಫಾರಸು ವರದಿಗಳ ಕುರಿತು ಚರ್ಚಿಸಲು ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಚುನಾವಣಾ ಸಮಿತಿ ಸಭೆ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಮಿತಿಯ 58 ಸದಸ್ಯರು ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸಭೆಯಲ್ಲಿದ್ದರು.

‘ಸಚಿವರು ನೀಡಿರುವ ಶಿಫಾರಸುಗಳ ಪಟ್ಟಿಯನ್ನು ಚುನಾವಣಾ ಸಮಿತಿ ಸದಸ್ಯರೊಂದಿಗೆ ಹಂಚಿಕೊಳ್ಳಲಾಯಿತು. ಶಿಫಾರಸುಗಳ ಕುರಿತು ಎಲ್ಲ ಸದಸ್ಯರ ಅಭಿಪ್ರಾಯ ಕೋರಲಾಗಿದೆ. ಹಲವು ಕ್ಷೇತ್ರಗಳಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕೆಲವೆಡೆ ಪ್ರಬಲ ಆಕಾಂಕ್ಷಿಗಳಿದ್ದರೂ ಕಡೆಗಣಿಸಿ ಬೇರೆ ಹೆಸರುಗಳನ್ನು ಸೂಚಿಸಿರುವುದಕ್ಕೆ ಅಪಸ್ವರ ಬಂತು’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ವಿವರಣೆಗೆ ಸೂಚನೆ: ಎಲ್ಲ ಸಚಿವರಿಗೂ ತಮ್ಮ ಶಿಫಾರಸುಗಳ ಕುರಿತು ಶನಿವಾರ ಸಂಜೆಯೊಳಗೆ ವಿವರಣೆ ನೀಡುವಂತೆ ಸುರ್ಜೇವಾಲಾ ಸೂಚಿಸಿದರು. ಆಕ್ಷೇಪ ವ್ಯಕ್ತವಾಗಿರುವ ಕ್ಷೇತ್ರಗಳ ಉಸ್ತುವಾರಿಗಳಿಗೆ ತಮ್ಮ ಶಿಫಾರಸಿನ ಹಿಂದಿರುವ ಕಾರಣಗಳನ್ನು ವಿವರಿಸುವಂತೆಯೂ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಚಿವರಿಂದ ಸಲ್ಲಿಕೆಯಾಗಿರುವ ವರದಿಗಳಲ್ಲಿರುವ ಸಂಭವನೀಯರ ಹೆಸರುಗಳ ಕುರಿತು ಚುನಾವಣಾ ಸಮಿತಿ ಸದಸ್ಯರು ಆದ್ಯತೆಯನ್ನು ಸೂಚಿಸಲು ಅವಕಾಶ ನೀಡಲಾಗಿದೆ. ಆಕ್ಷೇಪಣೆ ಅಥವಾ ಇತರ ಅಂಶಗಳಿದ್ದಲ್ಲಿ ಅವುಗಳನ್ನು ದಾಖಲಿಸಿ, ಸಲ್ಲಿಸುವಂತೆಯೂ ಸೂಚಿಸಲಾಗಿದೆ.

‘ಆಕ್ಷೇಪ ವ್ಯಕ್ತವಾಗಿರುವ ಕ್ಷೇತ್ರಗಳಲ್ಲಿ ಸಂಭವನೀಯರ ಹೆಸರುಗಳ ಕುರಿತು ಸಮರ್ಥನೆ ನೀಡಲು ಸಚಿವರು ವಿಫಲರಾದರೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು, ಶಾಸಕರು ಮತ್ತು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂಬುದಾಗಿ ಸುರ್ಜೇವಾಲಾ ತಿಳಿಸಿದ್ದಾರೆ’ ಎಂದು ಪಕ್ಷದ ಮೂಲಗಳು ಹೇಳಿವೆ.

ಸಭೆಯ ಆರಂಭದಲ್ಲಿ ಮಾತನಾಡಿದ ಸುರ್ಜೇವಾಲಾ, ‘ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನ ಗಳಿಸಲು ಕಾಂಗ್ರೆಸ್‌ ಪಕ್ಷಕ್ಕೆ ಅವಕಾಶವಿದೆ. ಕರ್ನಾಟಕದ ಮೇಲೆ ಪಕ್ಷದ ನಿರೀಕ್ಷೆಯೂ ಜಾಸ್ತಿ ಇದೆ. ಲೋಕಸಭಾ ಚುನಾವಣೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು ಎಂಬ ಸೂಚನೆಯನ್ನೂ ನೀಡಿದರು’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

‘ಯಾವುದೇ ಕ್ಷೇತ್ರದಲ್ಲೂ ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶ ನೀಡಬಾರದು. ಪಕ್ಷದ ವರಿಷ್ಠರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ‘ಜೆಡಿಎಸ್‌–ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ ಇದೆ. ಅದರ ಲಾಭ ಪಡೆಯಲು ಸರಿಯಾದ ಕಾರ್ಯತಂತ್ರ ರೂಪಿಸಬೇಕು’ ಎಂದು ಸಿದ್ದರಾಮಯ್ಯ ಹೇಳಿದರು ಎಂದು ಗೊತ್ತಾಗಿದೆ.

ಸಭೆಯ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸುರ್ಜೇವಾಲಾ, ‘ಸಂಭವನೀಯ ಅಭ್ಯರ್ಥಿಗಳ ಕುರಿತು ಸಚಿವರು ನೀಡಿರುವ ಶಿಫಾರಸುಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಸಚಿವರು, ಶಾಸಕರ ಸ್ಪರ್ಧೆ ಕುರಿತು ಯಾವುದೇ ಚರ್ಚೆಯಾಗಿಲ್ಲ. ಪ್ರದೇಶ ಚುನಾವಣಾ ಸಮಿತಿ ಶಿಫಾರಸಿನ ಬಳಿಕ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆಗೆ ಬರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT