ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಯದ ಬದಲು ಕಾಳಜಿ ಇರಲಿ’

Last Updated 2 ಅಕ್ಟೋಬರ್ 2020, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಸೋಂಕಿತರಾದಲ್ಲಿ ಸಮಾಜ ನಮ್ಮನ್ನು ಬೇರೆ ದೃಷ್ಟಿಯಿಂದ ನೋಡಬಹುದು ಎಂಬ ಅಳುಕು ಹಲವರಲ್ಲಿದೆ. ಪರೀಕ್ಷೆ ಮಾಡಿಸಿಕೊಳ್ಳದಿದ್ದರೆ ನಮ್ಮಿಂದ ಮನೆ ಮಂದಿಯೆಲ್ಲ ಸೋಂಕಿತರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಎಲ್ಲ ಚಿಂತೆ, ಭಯವನ್ನು ಬಿಟ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’.

- ಇದು ನಗರದ ಕೆ.ಸಿ. ಜನರಲ್ ಅಸ್ಪತ್ರೆಯ ಕೋವಿಡ್‌ ನೋಡಲ್ ಅಧಿಕಾರಿ ಡಾ. ಲಕ್ಷ್ಮೀಪತಿ ಅವರ ಕಿವಿಮಾತು.

‘ಪ್ಲೇಗ್, ಎಚ್‌1ಎನ್‌1 ಸೇರಿದಂತೆ ಹಲವು ವೈರಾಣುಗಳು ಮಾನವ ಸಮಾಜವನ್ನು ಕಾಡಿವೆ. ಆದರೆ, ಅವುಗಳ ವಿರುದ್ಧದ ಸಂಘರ್ಷದಲ್ಲಿ ನಾವು ಜಯಿಸಿದ್ದೇವೆ. ಅದೇ ರೀತಿ, ಮುಂದಿನ ದಿನಗಳಲ್ಲಿ ಕೋವಿಡ್‌ ಕೂಡ ಈ ಸಾಲಿಗೆ ಸೇರಲಿದೆ. ಇದು ಹೊಸ ಕಾಯಿಲೆ ಆಗಿರುವುದರಿಂದ ಅದರ ವರ್ತನೆಯ ಬಗ್ಗೆ ಸದ್ಯ ಸ್ಪಷ್ಟತೆ ದೊರೆಯುತ್ತಿಲ್ಲ. ಈ ಮೊದಲು ವೈರಾಣು ಕೇವಲ ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ ಎನ್ನುವುದು ತಿಳಿದಿತ್ತು. ಆದರೆ, ಈಗ ಬೇರೆ ಅಂಗಗಳ ಮೇಲೆ ಕೂಡ ಇದು ಪರಿಣಾಮ ಬೀರಬಲ್ಲದು ಎನ್ನುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಹಾಗಾಗಿ ಔಷಧ ಬರುವವರೆಗೂ ಮುನ್ನೆಚ್ಚರಿಕೆ ಅಗತ್ಯ’ ಎಂದರು.

‘ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಮುಖಗವಸು ಧರಿಸುವಿಕೆ ನಮ್ಮ ಜೀವನದ ಭಾಗವಾಗಬೇಕು. ಕೆಲವರು ಮಾತನಾಡುವಾಗ ಮುಖಗವಸನ್ನು ತೆಗೆಯುತ್ತಾರೆ. ಇದು ಎದುರುಗಡೆ ಇರುವವರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಕೈಗಳನ್ನು ಆಗಾಗ ಸ್ವಚ್ಛ ಮಾಡಿಕೊಳ್ಳುತ್ತಿರಬೇಕು. ಈ ಸಂದರ್ಭದಲ್ಲಿ ಜೀವನ ವಿಧಾನದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಸಮರ್ಪಕ ನಿದ್ದೆ, ಉತ್ತಮ ಆಹಾರ ಮತ್ತು ನಿಗದಿತ ವ್ಯಾಯಾಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

‘ಒಂದು ವೇಳೆ ಸೋಂಕಿತರಾದರೆ ನಮ್ಮಿಂದ ಕುಟುಂಬದ ಸದಸ್ಯರು ಕೂಡ ಕೋವಿಡ್‌ ಪೀಡಿತರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸೋಂಕಿನ ಯಾವುದೇ ಲಕ್ಷಣ ಕಾಣಿಸಿಕೊಂಡರೂ ಪರೀಕ್ಷೆ ಮಾಡಿಸಿಕೊಳ್ಳಬೇಕು.ಕೋವಿಡ್‌ ಪೀಡಿತರಾದರೂ ಧೈರ್ಯ ಕಳೆದುಕೊಳ್ಳಬಾರದು. ನಮ್ಮಿಂದ ಇನ್ನೊಬ್ಬರಿಗೆ ಹರಡದಂತೆ ಎಚ್ಚರ ವಹಿಸಬೇಕು. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧ ತೆಗೆದುಕೊಳ್ಳಬಾರದು. ಗುಣಮುಖರಾದ ಬಳಿಕವೂ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ರೋಗನಿರೋಧಕ ಶಕ್ತಿ ವೃದ್ಧಿಗೆ ತರಕಾರಿ, ಹಣ್ಣು, ಸೊಪ್ಪು, ಮೊಳಕೆ ಕಾಳುಗಳನ್ನು ಸೇವಿಸಬೇಕು. ವೃದ್ಧರು ಹಾಗೂ ವಿವಿಧ ಕಾಯಿಲೆ ಇರುವವರು ಸಾಧ್ಯವಾದಷ್ಟು ಮನೆಯಲ್ಲಿಯೇ ಇರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT