ಮಂಗಳವಾರ, ಏಪ್ರಿಲ್ 7, 2020
19 °C
9 ಮಂದಿ ಬಲಿ ಪಡೆದ ಕಾರ್ಲಟನ್ ಬೆಂಕಿ ದುರಂತಕ್ಕೆ 10 ವರ್ಷ * ಮಡಿದವರಿಗೆ ನುಡಿ ನಮನ

30 ನಿಯಮ ಉಲ್ಲಂಘನೆಯಿಂದ ಅವಘಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘2010ರಲ್ಲಿ ಒಂಬತ್ತು ಮಂದಿಯನ್ನು ಬಲಿ ಪಡೆದಿದ್ದ ಕಾರ್ಲಟನ್‌ ಕಟ್ಟಡದಲ್ಲಿ ಅಗ್ನಿ ಸುರಕ್ಷತೆಗೆ ಸಂಬಂಧಿ
ಸಿದ 30 ನಿಯಮಗಳನ್ನು ಉಲ್ಲಂಘಿಸಲಾಗಿತ್ತು ಎಂಬುದು ತನಿಖೆಯಿಂದ ಗೊತ್ತಾಗಿತ್ತು’ ಎಂದು ಅಗ್ನಿ ಸುರಕ್ಷತಾ ಎಂಜಿನಿಯರ್ ಸುಮಿತ್ ಖನ್ನಾ ಹೇಳಿದರು.

ಎಚ್ಎಎಲ್ ವಿಮಾನ ನಿಲ್ದಾಣ ರಸ್ತೆಯ ಕಾರ್ಲಟನ್ ಕಟ್ಟಡದಲ್ಲಿ ಸಂಭವಿಸಿದ್ದ ಬೆಂಕಿ ದುರಂತಕ್ಕೆ 10 ವರ್ಷವಾಗಿದ್ದು, ಈ ಅವಘಡದಲ್ಲಿ ಪ್ರಾಣ ಕಳೆದುಕೊಂಡವರಿಗೆ ನಮನ ಸಲ್ಲಿಸಲು ನಗರದಲ್ಲಿ ಶನಿವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂವಾದದಲ್ಲಿ ಮಾತನಾಡಿದ ಸುಮಿತ್, ‘ಕಾರ್ಲಟನ್‌ ದುರಂತದ ಬಗ್ಗೆ ತನಿಖೆ ನಡೆಸಿದಾಗ, ಕಟ್ಟಡದಲ್ಲಿ ಅನೇಕ ಲೋಪಗಳಿದ್ದುದು ಕಂಡು ಬಂತು. ಎರಡು, ಮೂರು ಹಾಗೂ ನಾಲ್ಕನೇ ಮಹಡಿಗಳ ಪ್ರವೇಶ ದ್ವಾರಗಳು ಮುಚ್ಚಿದ್ದವು. ಕಾರಿಡಾರ್‌ನಲ್ಲೂ ಸಾಗಲು ಅವಕಾಶವಿರಲಿಲ್ಲ. ಇದುವೇ ಹೆಚ್ಚಿನ ಪ್ರಾಣಹಾನಿಗೆ ಕಾರಣವಾಯಿತು. ಕಾರ್ಲಟನ್ ದುರಂತದ ಬಳಿಕವೇ ರಾಷ್ಟ್ರೀಯ ಕಟ್ಟಡ ನೀತಿ ರೂಪಗೊಂಡಿತು’ ಎಂದು ಹೇಳಿದರು.

‘ಬಹುಮಹಡಿ ಕಟ್ಟಡಗಳಲ್ಲಿ ಪ್ರಾಣ ರಕ್ಷಣೆ ಹಾಗೂ ಅಗ್ನಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವಂತೆ ರಾಷ್ಟ್ರೀಯ ಕಟ್ಟಡ ನೀತಿ ಹೇಳುತ್ತದೆ. ಪ್ರತಿಯೊಂದು ಕಟ್ಟಡಕ್ಕೂ ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯ. ಆದರೆ, ಎನ್‌ಒಸಿ ಪಡೆದ ಬಳಿಕವೂ ಕಟ್ಟಡಗಳಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆ’ ಎಂದರು.

ಜೀವ ಒತ್ತೆಯಿಟ್ಟು ಕೆಲಸ: ‘ಬೆಂಕಿ ದುರಂತದ ವೇಳೆ ಕಟ್ಟಡದ ಒಳಗಿದ್ದವರು ಹೊರಗೆ ಬಂದು ಪ್ರಾಣ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಾರೆ. ಬೆಂಕಿ ನಂದಿಸುವವರು ಮಾತ್ರ ಪ್ರಾಣ ಒತ್ತೆಯಿಟ್ಟು ಬೆಂಕಿ ಇರುವ ಕಟ್ಟಡದೊಳಗೇ ನುಗ್ಗುತ್ತಾರೆ. ಬೇರೆಯವರ ಪ್ರಾಣ ಉಳಿಸುವುದೊಂದೇ ಅವರ ಗುರಿ ಆಗಿರುತ್ತದೆ’ ಎಂದು ಸುಮಿತ್ ಅವರು ಅಗ್ನಿಶಾಮಕ ಸಿಬ್ಬಂದಿ ಮಹತ್ವವನ್ನು ವಿವರಿಸಿದರು. 

‘ಬಿಯಾಂಡ್ ಕಾರ್ಲಟನ್‌’ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ದುರಂತದಲ್ಲಿ ಮಡಿದವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು. ಸಂಗೀತಗಾರ ಪ್ರಕಾಶ್ ಸೊಂಟಕ್ಕೆ ಹಾಗೂ ಸಂಗಡಿಗರು ಸಂಗೀತದ ಮೂಲಕ ನಮನ ಸಲ್ಲಿಸಿದರು. 

‘ಆರೋಪಿಗಳ ವಿರುದ್ಧದ ತನಿಖೆಗೆ ತಡೆ’
‘ಕಾರ್ಲಟನ್‌ ಬೆಂಕಿ ದುರಂತಕ್ಕೆ ಕಾರಣರಾದವರ ವಿರುದ್ಧದ ತನಿಖೆಗೆ ತಡೆ ನೀಡಲಾಗಿದ್ದು, ಇದುವರೆಗೂ ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ. ರಾಜ್ಯ ಸರ್ಕಾರವೇ ಹೆಚ್ಚಿನ ಗಮನ ಹರಿಸಿ ತಡೆಯನ್ನು ತೆರವುಗೊಳಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು. ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ ನ್ಯಾಯ ಒದಗಿಸಬೇಕು’ ಎಂದು ಕಾರ್ಯಕ್ರಮ ಆಯೋಜಕರು ಕೋರಿದರು.  

ದುರಂತದಲ್ಲಿ ಮಡಿದವರು
ಅಖಿಲ್ ಉದಯ್‌, ಬೆನ್ಜಿಕುಮಾರ್, ಫಯಾಜ್ ಫಾಷಾ, ಮದನ್ ಪುರೋಹಿತ್, ರಾಜೇಶ್ ಸುಬ್ರಹ್ಮಣ್ಯನ್, ಎಸ್. ಸವಿತಾ, ಸಿದ್ಧಾರ್ಥ್ ಪದಮ್, ಸುನೀಲ್ ಅಯ್ಯರ್ ಹಾಗೂ ಸುರಭಿ ಜೋಶಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು