ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಪಂಚವಾರ್ಷಿಕ ಸಂಕಲ್ಪ

Published 1 ಅಕ್ಟೋಬರ್ 2023, 21:16 IST
Last Updated 1 ಅಕ್ಟೋಬರ್ 2023, 21:16 IST
ಅಕ್ಷರ ಗಾತ್ರ

ಭಾನುವಾರ ಬೆಕ್ಕಣ್ಣ ನನಗೆ ಉದ್ದ ಕಸಬರಿಕೆಯನ್ನು ಕೊಟ್ಟು, ‘ನಾ ಮನಿವಳಗ ಸ್ವಚ್ಛ ಮಾಡತೀನಿ, ಹತ್ತು ಗಂಟೆಗೆ ಸ್ವಚ್ಛತಾ ಆಂದೋಲನ ಮಾಡ್ತಾರಲ್ಲ, ನೀ ಅದ್ರಾಗೆ ಭಾಗವಹಿಸು’ ಎಂದು ಒತ್ತಾಯ ಮಾಡಿ ಮನೆಯಿಂದ ಹೊರದಬ್ಬಿತು.

ನಾನು ಹೊರಹೋಗಿ, ಎಲ್ಲರ ಜೊತೆ ನಾಕಾರು ಪ್ಲಾಸ್ಟಿಕ್‌ ಬಾಟಲಿ, ಹಳೇ ಪೇಪರಿನ ತುಣುಕುಗಳನ್ನು ಆರಿಸಿ, ಫೋಟೊಗೆ ಪೋಸು ಕೊಟ್ಟು ಒಳಬಂದೆ. ಹಳೇ ಪೇಪರುಗಳನ್ನು ಜೋಡಿಸಿಡುತ್ತಿದ್ದ ಬೆಕ್ಕಣ್ಣ ಸುದ್ದಿಯೊಂದನ್ನು ಓದುತ್ತ, ಕಣ್ಣೊರೆಸಿಕೊಳ್ಳುವುದು ಕಾಣಿಸಿತು.

‘ಹಂತಾಪರಿ ಅಳ್ಕೋತ ಏನ್‌ ಸುದ್ದಿ ಓದಾಕೆ ಹತ್ತೀಯಲೇ’ ಬೆಕ್ಕಣ್ಣನಿಗೆ ಕಣ್ಣೊರೆಸಿಕೊಳ್ಳಲು ಕರ್ಚೀಫು ಕೊಡುತ್ತ ಕೇಳಿದೆ.

‘ನನಗೆ ಸ್ವಂತ ಮನಿ ಇಲ್ಲದಿದ್ದರೂ ಕೋಟ್ಯಂತರ ಮಹಿಳೆಯರಿಗೆ ಮನಿ ಕಟ್ಟಿಸಿಕೊಟ್ಟು, ಮನೆಯೊಡತಿ ಮಾಡೀನಿ ಅಂತ ಮೋದಿಮಾಮ ಹೇಳ್ಯಾನ. ಇಡೀ ದೇಶದ ಪ್ರಧಾನಿ, ಪಾಪ… ಅವಂಗೇ ಮನಿಯಿಲ್ಲ’ ಎಂದು ಮತ್ತೆ ಮೂಗಿನಲ್ಲಿ ಸೊರ್ ಸೊರ್‌ ಸದ್ದು ಮಾಡಿತು.

‘ಅವರಿಗೆ ಈಗ ಸದ್ಯಕ್ಕೆ ಸರ್ಕಾರಿ ಬಂಗಲೆ ಐತಲ್ಲ… ಇನ್ನಾ ಎಷ್ಟೋ ವರ್ಷ ನಾನೇ ಪ್ರಧಾನಿಯಾಗಿರತೀನಿ ಅಂತ ಹೇಳತಾನೆ ಇರತಾರಲ್ಲ, ಸರ್ಕಾರಿ ಬಂಗಲೆ ಇದ್ದೇ ಇರತೈತಿ’ ಎಂದೆ.

‘75 ವರ್ಷ ಆದಮ್ಯಾಗೆ ನಮ್‌ ಬಿಜೆಪಿವಳಗ ರಿಟೈರ್‌ಮೆಂಟು ಅಂತಿದ್ದರಲ್ಲ, ರಿಟೈರ್‌ ಆದಮೇಲೆ ಅವರಿಗೆ ಮನಿ ಬೇಕಲ್ಲ’ ಬೆಕ್ಕಣ್ಣನಿಗೆ ಅಳುವುಕ್ಕಿತು.

‘ಅವರ ಹತ್ರ ಎರಡು ಕೋಟಿ ರೂಪಾಯಿ ಐತೆ ಅಂತ ಪ್ರಧಾನಿ ಕಚೇರಿ ವೆಬ್‌ಸೈಟೇ ಹೇಳತೈತಿ. ಆಮ್ಯಾಗೆ ಒಂದು ಮನಿ ತಗಳತಾರೆ, ನೀ ಎದಕ್ಕ ಅಳತೀ’ ಎಂದು ಜೋರು ಮಾಡಿದೆ.

ಕಣ್ಣು, ಮೂಗು ಒರೆಸಿಕೊಂಡ ಬೆಕ್ಕಣ್ಣ ‘ಸಂಕಲ್ಪ ಸಪ್ತಾಹ’ದ ಸುದ್ದಿ ಓದುತ್ತ, ‘ಮುಂದಿನ ಅಕ್ಟೋಬರಿನಾಗೆ ಸಂಕಲ್ಪ ಸಪ್ತಾಹ ನೋಡಾಕೆ ನಾನೇ ಇರತೀನಿ ಅಂತ ಮೋದಿಮಾಮ ಪಂಚವಾರ್ಷಿಕ ಸಂಕಲ್ಪ ಮಾಡ್ಯಾನ. ಮುಂದಿನ ಐದು ವರ್ಷ ಮೋದಿಮಾಮಗೆ ಮನಿಯಿಲ್ಲ ಅನ್ನೂ ಚಿಂತೆಯಿಲ್ಲ’ ಎಂದು ಖುಷಿಯಿಂದ ಕುಣಿಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT