ಹಾಂಗ್‌ಝೌ: ಭಾರತದ ಅನುಭವಿ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಸೋಮವಾರ ಏಷ್ಯನ್ ಕ್ರೀಡಾಕೂಟದ ಪುರುಷರ ಸಿಂಗಲ್ಸ್‌ನಲ್ಲಿ ವಿಯೆಟ್ನಾಂನ ಫಟ್ ಲೆ ಡಕ್ ವಿರುದ್ಧ ನೇರ ಗೇಮ್‌ಗಳ ಮೂಲಕ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಮುನ್ನಡೆದರು.
2021ರ ವಿಶ್ವ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಭಾರತದ ಆಟಗಾರ 21–10, 21–10 ರಿಂದ ಎದುರಾಳಿ ಆಟಗಾರನನ್ನು ಹಿಮ್ಮೆಟ್ಟಿಸಿದರು. ಮೊದಲ ಪಂದ್ಯವನ್ನು ಕೇವಲ 29 ನಿಮಿಷದಲ್ಲಿ ಮುಗಿಸಿದ ಶ್ರೀಕಾಂತ್ ಅವರು, ಮುಂದಿನ ಸುತ್ತಿನಲ್ಲಿ ಕೊರಿಯಾದ ಲೀ ಯುನ್ ಗ್ಯು ಅವರನ್ನು ಎದುರಿಸುವರು.
ಭಾರತದ ಸ್ಟಾರ್ ಜೋಡಿ ಸಾತ್ವಿಕ್‌ರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಅವರು 21-11, 21-16 ರಿಂದ ಹಾಂಗ್‌ಕಾಂಗ್‌ನ ಚೌ ಹಿನ್ ಲಾಂಗ್ ಮತ್ತು ಲುಯಿ ಚುನ್ ವೈ ವಿರುದ್ಧ ಗೆಲುವು ಸಾಧಿಸಿ, ಪುರುಷರ ಡಬಲ್ಸ್‌ನಲ್ಲಿ ಪ್ರೀ ಕ್ವಾರ್ಟರ್‌ಫೈನಲ್‌ಗೆ ಸಾಗಿದರು. ವಿಶ್ವದ ಮೂರನೇ ಕ್ರಮಾಂಕದ ಈ ಜೋಡಿ ಇಂಡೊನೇಷ್ಯಾದ ಲಿಯೊ ರೋಲಿ ಕಾರ್ನಾಂಡೊ ಮತ್ತು ಡೇನಿಯಲ್ ಮಾರ್ಥಿನ್ ಅವರ ಸವಾಲನ್ನು ಎದುರಿಸಲಿದೆ.
ಮಿಕ್ಸೆಡ್ ಡಬಲ್ಸ್‌ನಲ್ಲಿ ಸಾಯಿ ಪ್ರತೀಕ್– ತನೀಶಾ ಕ್ರಾಸ್ತೊ ಜೋಡಿಯು 21-18, 21-14 ರಿಂದ ಮಕಾವ್‌ನ ಲಿಯಾಂಗ್ ಐಯೊಕ್ ಚೊಂಗ್ ಮತ್ತು ವೆಂಗ್ ಚಿ ಎನ್‌ಜಿ ಅವರನ್ನು ಸೋಲಿಸಿತು. ಅವರು ಪ್ರೀ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಮಲೇಷ್ಯಾದ ಚೆನ್ ಟ್ಯಾಂಗ್ ಜೀ ಮತ್ತು ತೋ ಈ ವೀ ವಿರುದ್ಧ ಸೆಣಸಲಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಎಂ.ಆರ್. ಅರ್ಜುನ್ ಮತ್ತು ಧ್ರುವ ಕಪಿಲಾ ಜೋಡಿಯು ಜಪಾನ್ ಆಟಗಾರರ ವಿರುದ್ಧ 3-13 ರಿಂದ ಹಿನ್ನಡೆಯಲ್ಲಿರುವಾಗ ಪಂದ್ಯದಿಂದ ಹಿಂದೆ ಸರಿಯಿತು. ಮತ್ತೊಂದೆಡೆ ಮಿಶ್ರ ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ ಮತ್ತು ರೋಹನ್ ಕಪೂರ್ ಜೋಡಿಯು ಪಂದ್ಯ ಆರಂಭವಾದ ಎರಡೇ ನಿಮಿಷದಲ್ಲಿ ಮಲೇಷ್ಯಾದ ಆಟಗಾರರಿಗೆ ಬಿಟ್ಟುಕೊಟ್ಟಿತು. ಎಂ.ಆರ್. ಅರ್ಜುನ್ ಬೆನ್ನು ನೋವಿನಿಂದ ಹಾಗೂ ರೋಹನ್ ಕಪೂರ್ ಜ್ವರದಿಂದ ಬಳಲುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.