ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವರ್ಷ ಕಳೆದರೂ ಹರಿಯದ ‘ಕಾವೇರಿ’

ಲಕ್ಷಾಂತರ ರೂಪಾಯಿ ಪಾವತಿಸಿ ಕಾಯುತ್ತಿರುವ ಜನರು | ದುಬಾರಿ ದರದ ಟ್ಯಾಂಕರ್‌ ನೀರೇ ಆಸರೆ
Published 23 ಆಗಸ್ಟ್ 2024, 23:31 IST
Last Updated 23 ಆಗಸ್ಟ್ 2024, 23:31 IST
ಅಕ್ಷರ ಗಾತ್ರ

ಬೆಂಗಳೂರು: ‘ನಲ್ಲಿಗಳಲ್ಲಿ ಕಾವೇರಿ ಹರಿದು ಬರುತ್ತಾಳೆಂದರೆ, ಹನಿ ನೀರಿನ ದರ್ಶನಕ್ಕೆ 10ರಿಂದ 20 ದಿನ ಕಾಯಬೇಕು. ನೀರು ಬಂದರೂ ಕುಟುಂಬದ ಬಳಕೆಗೆ ಸಾಕಾಗುವಷ್ಟೂ ದೊರಕದು. ಕಾವೇರಿ ನೀರಿನ ಸಂಪರ್ಕವಿದ್ದರೂ ನಿತ್ಯ ಬಳಕೆಗೆ ದುಬಾರಿ ದರ ತೆತ್ತು ಟ್ಯಾಂಕರ್‌ ನೀರು ಖರೀದಿಸಲೇಬೇಕು. . . '

– ಇದು ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 100 ಗ್ರಾಮಗಳ ವ್ಯಾಪ್ತಿಯಲ್ಲಿ ಬೆಂಗಳೂರು ಜಲಮಂಡಳಿಗೆ ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಿ ‘ಕಾವೇರಿ’ ಸಂಪರ್ಕ ಪಡೆದಿರುವ 50 ಸಾವಿರ ಗ್ರಾಹಕರಲ್ಲಿ ಬಹುಪಾಲು ಮಂದಿ ಎದುರಿಸುತ್ತಿರುವ ಸಮಸ್ಯೆ.

ಜಲಮಂಡಳಿ ನಗರಕ್ಕೆ ದಿನನಿತ್ಯ 1,450 ಎಂಎಲ್‌ಡಿ ಕಾವೇರಿ ನೀರು ಪೂರೈಸುತ್ತಿದೆ. ಕಾವೇರಿ ಐದನೇ ಹಂತದ ಕಾಮಗಾರಿ ಪೂರ್ಣಗೊಂಡ ನಂತರ ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳಿಗೆ ನೀರು ಪೂರೈಕೆಯ ಭರವಸೆ ನೀಡಿತ್ತು. ಕೆಲವು ಗ್ರಾಮಗಳು, ಬಡಾವಣೆಗಳ ಹಲವು ಮನೆಗಳಿಗೆ ಈಗಾಗಲೇ ಕೊಳವೆ ಸಂಪರ್ಕ ನೀಡಿದೆ. ಆದರೆ, ಯಾವ ಬಡಾವಣೆಗೂ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ.

ಹತ್ತು ದಿನಕ್ಕೊಮ್ಮೆ ನೀರು

ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಬಾಗಲಗುಂಟೆ ವಾರ್ಡ್‌ನ ಬೈರವೇಶ್ವರನಗರ ಅಂದಾನಪ್ಪ ಬಡಾವಣೆ, ಬೈರವೇಶ್ವರ ಬಡಾವಣೆಗಳ ಮನೆಗಳಿಗೆ 10 ದಿನಕ್ಕೊಮ್ಮೆ ಕಡಿಮೆ ಪ್ರಮಾಣದಲ್ಲಿ ಕಾವೇರಿ ನೀರು ಪೂರೈಸಲಾಗುತ್ತಿದೆ. ಅಬ್ಬಿಗೆರೆಯ ಕೆಂಪೇಗೌಡ ಗಾರ್ಡನ್ ಸೇರಿ 22ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಕಾವೇರಿ ನೀರಿನ ಸಂಪರ್ಕವಿದ್ದರೂ ನೀರು ಪೂರೈಕೆ ಆಗುತ್ತಿಲ್ಲ.

‘ಮೊದಲು ಹತ್ತು ದಿನಗಳಿಗೊಮ್ಮೆ ನೀರು ಬರುತ್ತಿತ್ತು, ಇತ್ತೀಚೆಗೆ 20 ದಿನಗಳಿಗೊಮ್ಮೆ ಬಿಡುತ್ತಿದ್ದಾರೆ’ ಎಂದು ಶೆಟ್ಟಿಹಳ್ಳಿ, ರಾಯಲ್ ಅವೆನ್ಯೂ ಬಡಾವಣೆ ಮತ್ತು ಚಿಕ್ಕಸಂದ್ರದ ಜನರು ಬೇಸರ ವ್ಯಕ್ತಪಡಿಸುತ್ತಾರೆ.

'ಒಂದು ವರ್ಷದ ಹಿಂದೆ ಕಾವೇರಿ ನೀರಿನ ಸಂಪರ್ಕ ನೀಡಿದ್ದಾರೆ. ಆದರೆ, ನೀರೇ ಬರುತ್ತಿಲ್ಲ. ಈ ಭಾಗದಲ್ಲಿ ಕೊಳವೆ ಬಾವಿಗಳು ಬತ್ತಿವೆ, ನೀರಿನ ಕೊರತೆಯ ಸಮಸ್ಯೆ ಅಧಿಕವಾಗಿದೆ. ಅಧಿಕಾರಿಗಳನ್ನು ಕೇಳಿದರೆ ಕಾವೇರಿ ಐದನೇ ಹಂತದ ಯೋಜನೆಯಡಿ ನೀರು ಪೂರೈಕೆ ಆರಂಭವಾದ ಬಳಿಕ ನೀರು ಕೊಡುತ್ತೇವೆ ಎನ್ನುತ್ತಾರೆ' ಎಂದು ಅಬ್ಬಿಗೆರೆ ನಿವಾಸಿ ಮಂಜುನಾಥ್ ಹೇಳುತ್ತಾರೆ.

ಬೊಮ್ಮನಹಳ್ಳಿ ವ್ಯಾಪ್ತಿಯ ರಾಘವೇಂದ್ರ ಬಡಾವಣೆ, ಮೈಕೊ ಬಡಾವಣೆ, ಪಟೇಲ್ ಲೇಔಟ್, ಪರಪ್ಪನ ಅಗ್ರಹಾರ, ಬೇಗೂರು ಗ್ರಾಮ, ಬಿಳೇಕಹಳ್ಳಿ ಸೇರಿದಂತೆ ಬಹುತೇಕ ಕಡೆ ವಾರಕ್ಕೊಮ್ಮೆ, ಇನ್ನೂ ಕೆಲವು ಕಡೆ 15 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ.

‘ನೀರಿನ ಸಂಪರ್ಕಕ್ಕೆ ಮುನ್ನವೇ ಹಣ ಕಟ್ಟಿಸಿಕೊಂಡರು. ಆದರೆ ಈವರೆಗೂ ಕಾವೇರಿ ನೀರು ಕುಡಿಯುವ ಭಾಗ್ಯ ಸಿಕ್ಕಿಲ್ಲ. ಬಿಬಿಎಂಪಿ ಕೊರೆಸಿರುವ ನಾಲ್ಕು ಕೊಳವೆ ಬಾವಿಗಳು ಈಗ ಬತ್ತಿ ಹೋಗಿವೆ. ಇದರಿಂದ ನೀರಿನ ಸಮಸ್ಯೆ ತೀವ್ರವಾಗಿದೆ’ ಎಂದು ಕಾಳೇನ ಅಗ್ರಹಾರ ಗ್ರಾಮ ನಿವಾಸಿ ಉಮೇಶ್ ದೂರುತ್ತಾರೆ.

‘ನನ್ನ ಎರಡು ಮನೆಗಳಿಗೆ ಕಾವೇರಿ ನೀರಿನ ಸಂಪರ್ಕಕ್ಕಾಗಿ ₹4.30 ಲಕ್ಷ ರೂಪಾಯಿ ಶುಲ್ಕ ಪಾವತಿಸಿದ್ದೇನೆ. ಆದರೆ ವಾರಕ್ಕೊಂದು ದಿನ, ಕೇವಲ ಎರಡು ಗಂಟೆ ಮಾತ್ರ ನೀರು ಪೂರೈಸುತ್ತಾರೆ. ಇದು ಯಾವುದಕ್ಕೂ ಸಾಲದು. ಇಷ್ಟು ಹಣ ಪಾವತಿಸಿಯೂ ನೀರು ಕೊಟ್ಟಿಲ್ಲ. ಹೀಗಾಗಿ ಟ್ಯಾಂಕರ್ ನೀರನ್ನೇ ಅವಲಂಬಿಸಿದ್ದೇವೆ’ ಎನ್ನುತ್ತಾರೆ ಬೇಗೂರು ರಸ್ತೆ ಮೈಕೊ ಬಡಾವಣೆ ನಿವಾಸಿ ಎಂ.ರಾಜು.

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹೇರೋಹಳ್ಳಿ, ಬ್ಯಾಡರಹಳ್ಳಿ ವಾರ್ಡ್‌ನ ಬಹುತೇಕ ಹಳ್ಳಿಗಳು, ಬಡಾವಣೆಗಳಲ್ಲಿ ಮೂರು, ನಾಲ್ಕು, ಐದು ದಿನಗಳಿಗೊಮ್ಮೆ ನೀರು ಬಿಟ್ಟರೂ, ಪ್ರಮಾಣ ಕಡಿಮೆ ಇರುತ್ತದೆ ಎನ್ನುವುದು ಅಲ್ಲಿನ ನಿವಾಸಿಗಳ ಅಳಲು.

ಯಲಹಂಕ ಭಾಗದ ದೊಡ್ಡಬೆಟ್ಟೇನಹಳ್ಳಿ ಹಾಗೂ ಕೆ.ಆರ್‌.ಪುರ ಕ್ಷೇತ್ರದ 11 ಹಾಗೂ ಮಹದೇವಪುರ ಕ್ಷೇತ್ರದ 31 ಹಳ್ಳಿಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಈ ಭಾಗದ ಹಳ್ಳಿಗಳಲ್ಲಿ ಕಾವೇರಿ ನೀರಿಗಾಗಿ ಕೊಳವೆ ಸಂಪರ್ಕ ಕಲ್ಪಿಸಿ, ಮೀಟರ್ ಅಳವಡಿಸಲಾಗಿದೆ. ಆದರೆ ನೀರು ಬಂದಿಲ್ಲ.

ನಗರದ ಒಳಗೂ ಸಮಸ್ಯೆ

ಹೊರವಲಯವಷ್ಟೇ ಅಲ್ಲ, ನಗರದ ಒಳಭಾಗದಲ್ಲಿರುವ ಕೆಲವು ಬಡಾವಣೆಗಳಲ್ಲೂ ಕಾವೇರಿ ನೀರು ಪೂರೈಕೆ ಸಮಪರ್ಕವಾಗಿಲ್ಲ ಎಂಬ ದೂರುಗಳಿವೆ.

‘ನಮ್ಮಲ್ಲಿ ಎರಡು ದಿನಕ್ಕೊಮ್ಮೆ ಕಾವೇರಿ ನೀರು ಬಿಟ್ಟರೂ, ಪ್ರಮಾಣ ಕಡಿಮೆ. ಇದರಿಂದ ಟ್ಯಾಂಕರ್ ನೀರಿನ ಮೇಲೆ ಅವಲಂಬನೆ ತಪ್ಪಿಲ್ಲ. ಈ ಭಾಗದಲ್ಲಿ ಅಪಾರ್ಟ್‌ಮೆಂಟ್‌ಗಳಿಗೆ ನೀರಿನ ಸಮಸ್ಯೆ ಇಲ್ಲ. ಆದರೆ, ನಮ್ಮ ಮನೆಗಳಿಗೆ ಸರಿಯಾಗಿ ನೀರು ಪೂರೈಕೆಯಾವುದಿಲ್ಲ. ವಾಲ್ವ್‌ಮೆನ್‌ಗಳಿಗೆ ಹೇಳಿದರೆ ಕೇಳಿಸಿಕೊಳ್ಳುವುದಿಲ್ಲ. ಸಮಸ್ಯೆ ಇದ್ದರೆ, ಜಲಮಂಡಳಿಗೆ ದೂರು ಕೊಡಿ ಎನ್ನುತ್ತಾರೆ. ವಯಸ್ಸಾದ ನಾವು ಕಚೇರಿಗೆ ಹೋಗಿ ದೂರು ಕೊಡುವುದು ಹೇಗೆ’ ಎಂದು ಸಂಜಯನಗರದ ಹಿರಿಯ ನಾಗರಿಕರೊಬ್ಬರು ಬೇಸರದಿಂದ ಪ್ರಶ್ನಿಸುತ್ತಾರೆ.

‘ಶೀಘ್ರದಲ್ಲಿ ಸಮಸ್ಯೆ ಪರಿಹಾರ’

‘ಜಲಮಂಡಳಿಯ ಕಾವೇರಿ ಐದನೇ ಹಂತದ ಯೋಜನೆಯಡಿ 110 ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆ ಈಗ ಆರಂಭವಾಗುತ್ತಿದೆ. ಬಳಿಕ ಈ ಗ್ರಾಮಗಳಲ್ಲಿ ನೀರಿನ ಪೂರೈಕೆಯಲ್ಲಿನ ಸಮಸ್ಯೆಗೆ ಪರಿಹಾರ ದೊರಕಲಿದೆ’ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾತ್ ಮನೋಹರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದೆ ಬೆಂಗಳೂರಿಗೆ ಹಂಚಿಕೆಯಾಗುತ್ತಿದ್ದ ನೀರಿನ ಪಾಲಿನಲ್ಲೇ, ಹೊರವಲಯದ ಹಳ್ಳಿಗಳ ಸುಮಾರು 50 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಿದ್ದೆವು. ಐದನೇ ಹಂತದಡಿ ನೀರು ಪೂರೈಕೆ ಆರಂಭ ಆಗುವವರೆಗೂ ವಾರಕ್ಕೊಮ್ಮೆ, 10–15 ದಿನಗಳಿಗೊಮ್ಮೆ ಮಾತ್ರ ನೀರು ಪೂರೈಸುವುದಾಗಿ ಸಂಪರ್ಕ ಕೊಡುವಾಗಲೇ ತಿಳಿಸಿದ್ದೆವು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT