ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಇ: ಬೆಂಗಳೂರು ವಲಯಕ್ಕೆ ಶೇ 99.83 ಫಲಿತಾಂಶ, ಫಲಿತಾಂಶದಲ್ಲಿ ಸುಧಾರಣೆ

ದೇಶದಲ್ಲಿ ನಾಲ್ಕನೇ ಸ್ಥಾನ ಪಡೆದ ವಲಯ *
Last Updated 30 ಜುಲೈ 2021, 20:17 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 12ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಂಗಳೂರು ವಲಯ ಅಥವಾ ಪ್ರಾಂತ್ಯವು ಉತ್ತಮ ಸಾಧನೆ ಮಾಡಿದೆ. ಪ್ರದೇಶದ ಶೇ 99.83ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ದೇಶದಲ್ಲಿಯೇ ಬೆಂಗಳೂರು ನಾಲ್ಕನೇ ಸ್ಥಾನ ಪಡೆದಿದೆ.

ಕಳೆದ ವರ್ಷ ಬೆಂಗಳೂರು ವಿಭಾಗದ ಶಾಲೆಗಳಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ ಶೇ 98.23ರಷ್ಟು ಮಂದಿ ಉತ್ತೀರ್ಣರಾಗಿದ್ದರು. ಈ ಬಾರಿ ಶೇ 1.6ರಷ್ಟು ಫಲಿತಾಂಶ ಏರಿಕೆಯಾಗಿದೆ. ಈ ಮಧ್ಯೆ, ತಾಂತ್ರಿಕ ಕಾರಣಗಳಿಂದ ಕೆಲ ಶಾಲಾ ಮಕ್ಕಳ ಫಲಿತಾಂಶ ಇನ್ನೂ ಪ್ರಕಟಿಸಲಾಗಿಲ್ಲ. ಫಲಿತಾಂಶ ಬಾಕಿ ಇರುವ 65 ಸಾವಿರ ವಿದ್ಯಾರ್ಥಿಗಳ ಫಲಿತಾಂಶವನ್ನು ಆ.5ರಂದು ಪ್ರಕಟಿಸಲಾಗುವುದು ಎಂದು ಮಂಡಳಿ ಹೇಳಿದೆ.

ಕೋವಿಡ್ ಕಾರಣದಿಂದ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಲಾಗಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 12ನೇ ತರಗತಿಯ ಕಿರು ಪರೀಕ್ಷೆಗಳು, ಅರ್ಧವಾರ್ಷಿಕ ಮತ್ತು ಪೂರ್ವಸಿದ್ಧತಾ ಪರೀಕ್ಷೆಗಳ ಶೇ.40ರಷ್ಟು ಅಂಕ, ಪ್ರಥಮ ಪಿಯುಸಿಯ ಶೇ.30ರಷ್ಟು ಮತ್ತು ಎಸ್ಸೆಸ್ಸೆಲ್ಸಿಯ ಶೇ.30ರಷ್ಟು ಅಂಕಗಳ ಆಧಾರದ ಮೇಲೆ ಈ ಬಾರಿಯ ಫಲಿತಾಂಶ ಪ್ರಕಟಿಸುವುದಾಗಿ ಮಂಡಳಿ ಹೇಳಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ಕೂಡ ಒಪ್ಪಿಗೆ ನೀಡಿತ್ತು. ಅದರಂತೆ ಫಲಿತಾಂಶ ಪ್ರಕಟಿಸಿದೆ.

ವಿಜ್ಞಾನ ವಿಭಾಗದಲ್ಲಿ ಹೆಚ್ಚು:ಪರೀಕ್ಷೆ ಇಲ್ಲದೆ ಹಿಂದಿನ ತರಗತಿಗಳ ಫಲಿತಾಂಶ ಆಧರಿಸಿ ಪ್ರಕಟಿಸಿರುವ ಫಲಿತಾಂಶದ ಬಗ್ಗೆ ಬಹುಪಾಲು ಶಾಲೆಗಳು ಮತ್ತು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಫಲಿತಾಂಶ ಬಂದಿದೆ ಎಂದು ವಿವಿಧ ಶಾಲೆಗಳ ಪ್ರಾಂಶುಪಾಲರು ಹೇಳಿದ್ದಾರೆ.

ಸಿಎಂಆರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಮುಖ್ಯಸ್ಥರಾದ ಸ್ವಾತಿ ಸೋನಿ, ‘ಸಿಬಿಎಸ್‌ಇ ಈ ಬಾರಿಯ ಹೊಸ ಮಾದರಿ ಮೌಲ್ಯಮಾಪನ ಪದ್ಧತಿ ರೂಪಿಸಿದರೂ ಅದು ನಿಖರವಾಗಿದೆ. ಕಳೆದ ವರ್ಷ ಶೇ 35ರಷ್ಟು ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರು. ಈ ವರ್ಷ ಶೇ 45ರಷ್ಟು ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಇದರಿಂದ ಯಾವುದೇ ಪ್ರತಿಭಾವಂತ ಮಕ್ಕಳಿಗೆ ಫಲಿತಾಂಶದಲ್ಲಿ ಅನ್ಯಾಯವಾಗಿಲ್ಲ ಎಂಬುದು ತಿಳಿಯುತ್ತದೆ’ ಎಂದು ಹೇಳಿದರು.

ಐಟಿಪಿಎಲ್ ಶಾಲೆಯ ಮುಖ್ಯಸ್ಥರಾದ ಜ್ಯೋತಿ ಮೆನನ್, ‘ಹೊಸ ಮೌಲ್ಯಮಾಪನ ಪದ್ಧತಿಯಿಂದ ಶೇ 95ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ಇದು ನ್ಯಾಯಯುತ ಮಾದರಿ. ಫಲಿತಾಂಶದ ಬಗ್ಗೆ ತೃಪ್ತಿ ಇರದ ಮಕ್ಕಳು, ಮುಂದಿನ ದಿನಗಳಲ್ಲಿ ಮತ್ತೆ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವನ್ನೂ ಕಲ್ಪಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT