ಸೋಮವಾರ, ನವೆಂಬರ್ 23, 2020
23 °C
ಮೂರು ದಿನ, ಎರಡು ಬಾರಿ ಹೋಟೆಲ್‌ ಬದಲು

ಕಾಲೇಜು ಸ್ನೇಹಿತರ ಡ್ರಗ್ಸ್ ದಂಧೆ: ದರ್ಶನ್ ಲಮಾಣಿ ಭಾಗಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್‌ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಡಾರ್ಕ್‌ನೆಟ್ ಮೂಲಕ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಜಾಲದ ವಿರುದ್ಧ ನ. 4ರಂದು ಎಫ್‌ಐಆರ್ ದಾಖಲಾಗಿತ್ತು. ಅದೇ ಪ್ರಕರಣದಲ್ಲಿ, ಸುಜಯ್, ಹೇಮಂತ್ ಹಾಗೂ ಸುನೇಶ್ ಎಂಬಾತನನ್ನು ಬಂಧಿಸಲಾಗಿದೆ. ಅವರಿಗೆ ಆಶ್ರಯ ನೀಡಿದ್ದ ಆರೋಪ ದರ್ಶನ್ ಮೇಲಿದೆ’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ನಾಲ್ವರು ಆರೋಪಿಗಳು, ಕಾಲೇಜು ಸ್ನೇಹಿತರು. ಒಬ್ಬಾತ ಕಾನೂನು ವಿದ್ಯಾರ್ಥಿ. ಆರಂಭದಲ್ಲಿ ಸುಜಯ್‌ನನ್ನು ಮಾತ್ರ ಬಂಧಿಸಲಾಗಿತ್ತು. ಅದು ತಿಳಿಯುತ್ತಿದ್ದಂತೆ ಹೇಮಂತ್ ಹಾಗೂ ಸುನೇಶ್ ಪರಾರಿಯಾಗಿದ್ದರು. ದರ್ಶನ್ ಜೊತೆ ಸೇರಿ ಗೋವಾಕ್ಕೆ ಹೋಗಿದ್ದರು. ಅವರ ಜೊತೆ ಮತ್ತೊಬ್ಬ ಸ್ನೇಹಿತನಿದ್ದ.’

‘ಆರೋಪಿಗಳ ಮಾಹಿತಿ ಸಿಗುತ್ತಿದ್ದಂತೆ ಪೊಲೀಸ್ ತಂಡ ಗೋವಾಕ್ಕೆ ಹೋಗಿತ್ತು. ಮೂರು ದಿನ ಗೋವಾದಲ್ಲಿದ್ದ ಆರೋಪಿಗಳು, ಪೊಲೀಸರಿಗೆ ಸುಳಿವು ಸಿಗಬಾರದೆಂದು ಎರಡು ಬಾರಿ ಹೋಟೆಲ್‌ ಬದಲಾಯಿಸಿದ್ದರು. ಅವರ ಮೇಲೆ ನಿಗಾ ಇರಿಸಿದ್ದ ತಂಡ, ಭಾನುವಾರ ವಶಕ್ಕೆ ಪಡೆದು ಬಂಧಿಸಿದೆ’ ಎಂದೂ ತಿಳಿಸಿದರು.

ಡ್ರಗ್ಸ್ ವ್ಯಸನಿಗಳು?: ‘ಬಂಧಿತ ಆರೋಪಿಗಳು, ಡ್ರಗ್ಸ್ ವ್ಯಸನಿಗಳೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆರಂಭದಲ್ಲಿ ತಮಗಾಗಿ ಡ್ರಗ್ಸ್  ಖರೀದಿಸುತ್ತಿದ್ದ ಆರೋಪಿಗಳು, ನಂತರ ಅದನ್ನೇ ದಂಧೆ ಮಾಡಿಕೊಂಡಿದ್ದರು’ ಎಂದೂ ಅಧಿಕಾರಿ ಹೇಳಿದರು.

‘ಡಾರ್ಕ್‌ನೆಟ್‌ ಬಗ್ಗೆ ತಿಳಿದಿದ್ದ ಆರೋಪಿಗಳು, ಅದರ ಮೂಲಕವೇ ವಿದೇಶದಲ್ಲಿರುವ ಪೆಡ್ಲರ್‌ಗಳನ್ನು ಸಂಪರ್ಕಿಸುತ್ತಿದ್ದರು. ಯಾರಿಗೂ ಅನುಮಾನಬಾರದಂತೆ ಅಂಚೆ ಮೂಲಕ ತಮ್ಮ ವಿಳಾಸಕ್ಕೆ ಡ್ರಗ್ಸ್ ತರಿಸಿಕೊಂಡು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಬೇಡಿಕೆಗೆ ತಕ್ಕಂತೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು’ ಎಂದೂ ತಿಳಿಸಿದರು.

‘‘ದರ್ಶನ್‌ ಅವರೇ ಗೋವಾದ ಹೋಟೆಲ್‌ನಲ್ಲಿ ಆರೋಪಿಗಳಿಗೆ ಕೊಠಡಿ ಕಾಯ್ದಿರಿಸಿಕೊಟ್ಟಿದ್ದರು. ಡ್ರಗ್ಸ್‌ ಪ್ರಕರಣದಲ್ಲಿ ಆತ ಸಹ ಭಾಗಿಯಾಗಿರುವ ಅನುಮಾನ ಇದೆ. ಸದ್ಯ ಅವರನ್ನು ಕಸ್ಟಡಿಗೆ ಪಡೆಯಲಾಗಿದ್ದು, ವಿಚಾರಣೆ ನಡೆಸಿದ ಬಳಿಕವೇ ಮತ್ತಷ್ಟು ಮಾಹಿತಿ ಹೊರಬೀಳಲಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು