ಮಂಗಳವಾರ, ಜನವರಿ 21, 2020
25 °C
ಸಾವಿರಾರು ನಕಲಿ ಅಂಕ ಪಟ್ಟಿಗಳು ಪತ್ತೆ, ಇಬ್ಬರು ವಶಕ್ಕೆ

ನಕಲಿ ಅಂಕ ಪಟ್ಟಿ ದಂಧೆ: ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಮೇಲೆ ಸಿಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಕಲಿ ಅಂಕ ಪಟ್ಟಿ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಶ್ರೀ ವೆಂಕಟೇಶ್ವರ ಇನ್‍ಸ್ಟಿಟ್ಯೂಟ್ ಮೇಲೆ ದಾಳಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಸಂಜೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಅಪಾರ ಪ್ರಮಾಣದ ನಕಲಿ ಅಂ‌ಕ ಪಟ್ಟಿಗಳು ಪತ್ತೆಯಾಗಿವೆ. ಆಂಧ್ರ ಪ್ರದೇಶದ ಶ್ರೀನಿವಾಸ್ ರೆಡ್ಡಿ ಎಂಬವರಿಗೆ ಸೇರಿದ ಈ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಈ  ದಂಧೆ ನಡೆಯುತ್ತಿದೆ ಎನ್ನಲಾಗಿದೆ. 

ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಗಳ ನಕಲಿ ಅಂಕ ಪಟ್ಟಿಯನ್ನು ಮಾಡಿ ಕೊಡಲಾಗುತಿತ್ತು. ಒಂದು ವಿಷಯಕ್ಕೆ 15 ಸಾವಿರದಿಂದ 3 ಲಕ್ಷದವರೆಗೂ ಹಣ ವಸೂಲಿ ಮಾಡಲಾಗುತಿತ್ತು. ಪರೀಕ್ಷೆಗೆ ಹಾಜರಾದರೆ ಸಾಕು, ಇಲ್ಲಿ ಸುಲಭವಾಗಿ ಪದವಿ ಅಂಕ ಪಟ್ಟಿ ಸಿಗುತಿತ್ತು. ಎಲ್.ಎಲ್.ಬಿ ಪದವಿಗಾಗಿ 3 ಲಕ್ಷ ಕೊಟ್ಟರೆ ಸರ್ಟಿಫಿಕೇಟ್ ಮಾಡಿಸಿ ಕೊಡುತ್ತಿದ್ದರು ಎಂದು ಹೇಳಲಾಗಿದೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಿಂದ ಕೆಲವೇ ದೂರದಲ್ಲಿ ಈ ಸಂಸ್ಥೆ ಇದೆ.

ಆಂಧ್ರಪ್ರದೇಶ ಸೇರಿ ಇತರ ರಾಜ್ಯಗಳ ಅನೇಕ ವಿಶ್ವವಿದ್ಯಾಲಯಗಳ ಅಂಕಪಟ್ಟಿಗಳನ್ನು ಆರೋಪಿಗಳು ಕೊಡುತ್ತಿದ್ದರು. ಕಾರ್ಲೆಕ್ಸ್ ಟೀಚರ್ ಯುನಿವರ್ಸಿಟಿ, ನಾರ್ತ್ ಈಸ್ಟ್ ಯುನಿವರ್ಸಿಟಿ, ಸ್ವಾಮಿ ವಿವೇಕಾನಂದ ಯುನಿವರ್ಸಿಟಿಗಳ ಅಂಕ ಪಟ್ಟಿಗಳನ್ನು ಹಣ ತೆಗೆದುಕೊಂಡು ಕೊಡಿಸುತ್ತಿದ್ದರು.

ಈ ಬಗ್ಗೆ ಮಾಹಿತಿ ಆದರಿಸಿ ದಾಳಿ ನಡೆಸಿದ್ದ ಸಿಸಿಬಿ ತಂಡ, ಸಾವಿರಾರು ನಕಲಿ ಅಂಕ ಪಟ್ಟಿಗಳನ್ನು ವಶಪಡಿಸಿಕೊಂಡಿದೆ. ದಾಳಿ ವೇಳೆ ಇನ್‍ಸ್ಟಿಟ್ಯೂಟ್‌ನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗ: ಸರಣಿ ಅಪಘಾತದಲ್ಲಿ ವ್ಯಕ್ತಿ ಸಾವು, 7 ಜನರಿಗೆ ಗಂಭೀರ ಗಾಯ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು