ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

CDR ಸಂಗ್ರಹ: ನಿವೃತ್ತ IPS ಅಧಿಕಾರಿ, ಇನ್‌ಸ್ಪೆಕ್ಟರ್ ವಿರುದ್ಧ ಎಫ್‌ಐಆರ್

Published 25 ಮೇ 2024, 16:08 IST
Last Updated 25 ಮೇ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ಐಎಎಸ್ ಅಧಿಕಾರಿ ಡಾ. ಎಸ್. ಆಕಾಶ್ ಅವರ ವೈಯಕ್ತಿಕ ಮೊಬೈಲ್ ಫೋನ್‌ ಕರೆಗಳ ವಿವರಗಳನ್ನು (ಸಿಡಿಆರ್) ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪದಡಿ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಹೆಬ್ಬಗೋಡಿ ಠಾಣೆ ಇನ್‌ಸ್ಪೆಕ್ಟರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಆಕಾಶ್ ಅವರು ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಪತ್ನಿ ವಂದನಾ, ಅವರ ತಂದೆಯಾದ ನಿವೃತ್ತ ಐಪಿಎಸ್ ಅಧಿಕಾರಿ ಟಿ.ಆರ್. ಸುರೇಶ್, ಗಾಯತ್ರಿ, ಜಗದೀಶ್ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಹೆಬ್ಬಗೋಡಿ ಠಾಣೆಯ ಇನ್‌ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಬೆಂಗಳೂರು ಸೈಬರ್ ಕ್ರೈಂ ಠಾಣೆ ಮೂಲಗಳು ಹೇಳಿವೆ.

‘ಡಾ. ಆಕಾಶ್ ಹಾಗೂ ಪತ್ನಿ ವಂದನಾ ನಡುವೆ ಕೌಟುಂಬಿಕ ವ್ಯಾಜ್ಯವಿದೆ. ಈ ಸಂಬಂಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಲ್ಲೂ ವಿಚಾರಣೆ ನಡೆಯುತ್ತಿವೆ. ಇದರ ನಡುವೆಯೇ ಆರೋಪಿಗಳು, ಡಾ. ಆಕಾಶ್ ಅವರ ಮೊಬೈಲ್ ಕರೆಗಳ ವಿವರಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಮೊಬೈಲ್ ಕರೆಗಳ ವಿವರಗಳನ್ನು ಮುಂದಿಟ್ಟುಕೊಂಡು ಆರೋಪಿಗಳು, ಆಕಾಶ್ ಅವರಿಗೆ ಕಿರುಕುಳ ನೀಡಿದ್ದಾರೆ. ಜೊತೆಗೆ, ಬ್ಲ್ಯಾಕ್‌ಮೇಲ್ ಸಹ ಮಾಡಿದ್ದಾರೆಂಬ ಆರೋಪವಿದೆ.. ಕೌಟುಂಬಿಕ ವ್ಯಾಜ್ಯದಲ್ಲಿ ಮೊಬೈಲ್ ಕರೆಗಳ ವಿವರವನ್ನು ಅಕ್ರಮವಾಗಿ ಸಂಗ್ರಹಿಸಿರುವ ಆರೋಪಿಗಳ ವಿರುದ್ಧ ದೂರು ನೀಡಲು ಅನುಮತಿ ಕೋರಿ ಆಕಾಶ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಒಪ್ಪಿಗೆ ಸಿಗುತ್ತಿದ್ದಂತೆ ಠಾಣೆಗೆ ದೂರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ರೇವ್ ಪಾರ್ಟಿ ಪ್ರಕರಣದಲ್ಲಿ ನೋಟಿಸ್: ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿರುವ ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ಇತ್ತೀಚೆಗೆ ದಾಳಿ ಮಾಡಿದ್ದರು. ಇದೇ ಪ್ರಕರಣದಲ್ಲಿ ಠಾಣೆಯ ಇನ್‌ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ಅವರಿಗೆ ಕರ್ತವ್ಯ ಲೋಪದ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಇಲಾಖೆ ವಿಚಾರಣೆ ಪ್ರಗತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT