ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ: ಬೆಂಗಳೂರು, ಮೈಸೂರು ವಿದ್ಯಾರ್ಥಿಗಳ ಸಾಧನೆ

ಸೆಪ್ಟೆಂಬರ್‌ನಲ್ಲಿ ದಾಖಲೆ ಪರಿಶೀಲನೆ; ಅಕ್ಟೋಬರ್‌ನಲ್ಲಿ ಕೌನ್ಸೆಲಿಂಗ್
Last Updated 21 ಆಗಸ್ಟ್ 2020, 20:02 IST
ಅಕ್ಷರ ಗಾತ್ರ
ADVERTISEMENT
""
""
""
""

ಬೆಂಗಳೂರು: ಕೋವಿಡ್‌ ಒತ್ತಡದ ನಡುವೆಯೂ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಐದು ವಿಭಾಗಗಳಲ್ಲಿ ಮೊದಲ ಐದು ರ‍್ಯಾಂಕ್‌ಗಳಲ್ಲಿ ಹೆಚ್ಚಿನ ಪಾಲು ಪಡೆದಿರುವ ಬೆಂಗಳೂರು, ಮೈಸೂರು ಮತ್ತು ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಕೆಇಎ ಕಚೇರಿಯಲ್ಲಿ ಶುಕ್ರವಾರ ಫಲಿತಾಂಶ ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಇದೇ ಮೊದಲ ಬಾರಿಗೆ ದಾಖಲೆಯ 20 ದಿನಗಳಲ್ಲಿಯೇ ಫಲಿತಾಂಶ ನೀಡಲಾಗಿದೆ’ ಎಂದರು.

ಸೆಪ್ಟೆಂಬರ್‌ 2ರಿಂದ ವಿದ್ಯಾರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ. ಸೆ.2 ಮತ್ತು 3ರಂದು ಮೊದಲ ರ‍್ಯಾಂಕ್‌ನಿಂದ 2,000ದವರೆಗಿನ ರ‍್ಯಾಂಕ್, ಸೆ.4ರಿಂದ 6ರವರೆಗೆ 7,000ದ ವರೆಗಿನ ರ‍್ಯಾಂಕಿಂಗ್‌ನ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ನಡೆಯಲಿದೆ. ನಂತರದ ರ‍್ಯಾಂಕಿಂಗ್‌ನವರಿಗೆ ಸೆ. 27ರವರೆಗೆ ಮೊದಲ ಸುತ್ತಿನ ಪರಿಶೀಲನೆ ನಡೆಯಲಿದೆ.

ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ವಿದ್ಯಾರ್ಥಿಗಳು ಕೆಎಇ ವೆಬ್‌ಸೈಟ್‌ನಲ್ಲಿ ನಿಗದಿತ ಲಿಂಕ್‌ ಆಯ್ಕೆ ಮಾಡಿಕೊಂಡು ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು.

ಅಕ್ಟೋಬರ್‌ನಲ್ಲಿ ಕೌನ್ಸೆಲಿಂಗ್:ಜೆಇಇ, ನೀಟ್‌ ಮುಂತಾದ ಪರೀಕ್ಷೆಗಳ ಕೌನ್ಸೆಲಿಂಗ್‌ ವೇಳಾಪಟ್ಟಿಯನ್ನು ನೋಡಿಕೊಂಡು ಸಿಇಟಿ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಬಹುತೇಕ ಅಕ್ಟೋಬರ್‌ನಲ್ಲಿ ಕೌನ್ಸೆಲಿಂಗ್‌ ನಡೆಯಲಿದೆಎಂದು ಅಶ್ವತ್ಥನಾರಾಯಣ ಹೇಳಿದರು.

ಸಿಇಟಿ: ಐದು ವಿಭಾಗಗಳಲ್ಲಿ ಮೊದಲ ರ‍್ಯಾಂಕ್‌ ಗಳಿಸಿದವರು

ಪಶುವೈದ್ಯಕೀಯ ಹಾಗೂ ಬಿ.ಫಾರ್ಮಾ, ಡಿ.ಫಾರ್ಮಾ
ಪಿ. ಸಾಯಿವಿವೇಕ್‌:ನಾರಾಯಣ ಇ–ಟೆಕ್ನೊ ಪಿಯು ಕಾಲೇಜು, ಕೆಂಪಾಪುರ, ಬೆಂಗಳೂರು

ಕಾಲೇಜಿನಲ್ಲಿ ಮುಖ್ಯವಾಗಿ ನೀಟ್‌ ಬಗ್ಗೆಯೇ ತರಬೇತಿ ಕೊಡುತ್ತಿದ್ದರು. ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಿದರು. ಉಪನ್ಯಾಸಕರು ನಿರ್ದಿಷ್ಟ ವೇಳಾಪಟ್ಟಿ ಹಾಕಿಕೊಟ್ಟಿದ್ದರು. ಅದರ ಪ್ರಕಾರವೇ ಅಭ್ಯಾಸ ಮಾಡಿದೆ. ಎರಡು ವಿಭಾಗದಲ್ಲಿ ಮೊದಲ ಮತ್ತು ಯೋಗವಿಜ್ಞಾನ–ನ್ಯಾಚುರೋಪಥಿ ವಿಭಾಗದಲ್ಲಿ ಮೂರನೇ ರ‍್ಯಾಂಕ್‌ ಬಂದಿರುವುದು ಸಂತಸ ತಂದಿದೆ. ನೀಟ್‌ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದೇನೆ. ಎಂಬಿಬಿಎಸ್‌ ಮಾಡಬೇಕೆಂದುಕೊಂಡಿದ್ದೇನೆ– ಸಾಯಿವಿವೇಕ್‌

ಎಂಜಿನಿಯರಿಂಗ್
ಎಂ. ರಕ್ಷಿತ್:ಆರ್.ವಿ.ಪಿಯು ಕಾಲೇಜು, ಬೆಂಗಳೂರು

ನಾನು ಟ್ಯೂಷನ್‌ಗೆ ಹೋಗಿರಲಿಲ್ಲ. ಆದರೆ, ಮೊದಲ ಪಿಯುಸಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುತ್ತಿದ್ದೆ. ಲಾಕ್‌ಡೌನ್‌ ಸಮಯದಲ್ಲಿ ಅಭ್ಯಾಸ ಮಾಡಲು ಹೆಚ್ಚು ಸಮಯ ಸಿಕ್ಕಿತು. ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಎಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ. ಜೆಇಇ ಮುಖ್ಯಪರೀಕ್ಷೆ ಬರೆದು, ನಂತರ ಕೋರ್ಸ್‌ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತೇನೆ- ರಕ್ಷಿತ್

ಕೃಷಿ ವಿಜ್ಞಾನ
ಎ.ಬಿ. ವರುಣ್‌ಗೌಡ:
ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು

ಕಾಲೇಜಿನ ಪಾಠ, ಕೋಚಿಂಗ್ ಹಾಗೂ ಪ್ರತಿದಿನದ ಓದು ಉತ್ತಮ ರ‍್ಯಾಂಕ್ ಬರಲು ಸಹಕಾರಿಯಾಯಿತು.ಹಾಸ್ಟೆಲ್‌ನಲ್ಲಿ ಉಳಿದು ಕಾಲೇಜಿಗೆ ಹೋಗುತ್ತಿದ್ದೆ. ಅಲ್ಲಿ ಚೆನ್ನಾಗಿ ಓದಿಸುತ್ತಿದ್ದರು. ಜೊತೆಗೆ ನನ್ನ ಶ್ರಮವೂ ಸಾಕಷ್ಟಿತ್ತು. ಉಳಿದ ಆಕರ್ಷಣೆಗಳನ್ನು ಬದಿಗೊತ್ತಿ, ಓದಿನಲ್ಲಿ ಏಕಾಗ್ರತೆ ಬೆಳೆಸಿಕೊಂಡರೆ, ರ‍್ಯಾಂಕ್‌ ಗಳಿಸುವುದು ಕಷ್ಟವಲ್ಲ. ಒಳ್ಳೆಯ ರ‍್ಯಾಂಕ್‌ ನಿರೀಕ್ಷಿಸಿದ್ದೆ. ಮೊದಲ ರ‍್ಯಾಂಕ್‌ ಬಂದಿರುವುದು ಖುಷಿ ತಂದಿದೆ– ವರುಣ್‌ಗೌಡ

ಯೋಗವಿಜ್ಞಾನ ಮತ್ತು ನ್ಯಾಚುರೋಪಥಿ
ಪಿ.ಪಿ. ಆರ್ನವ್‌‌ ಅಯ್ಯಪ್ಪ:ಆಳ್ವಾಸ್‌ ಪಿಯು ಕಾಲೇಜು, ಮೂಡುಬಿದಿರೆ, ದಕ್ಷಿಣ ಕನ್ನಡ

ಸಿಇಟಿಗೆಂದು ಹೆಚ್ಚು ಶ್ರಮ ಪಟ್ಟಿಲ್ಲ. ನೀಟ್ ಪರೀಕ್ಷೆಯ ಸಿದ್ಧತೆಯ ಜೊತೆ ಈ ಪರೀಕ್ಷೆಗೂ ಓದಿದ್ದೆ. ನೀಟ್ ಪರೀಕ್ಷೆಗಾಗಿ ತಯಾರಿ ಮುಂದುವರಿಸಿದ್ದೇನೆ. ಆ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್‌ ಪಡೆಯುವ ಗುರಿ ಇದೆ. ಮುಂದೆ ನಾನು ವೈದ್ಯನಾಗಬೇಕು. ಈಗಿನ ಪರಿಸ್ಥಿತಿಯಲ್ಲಿ ವೈದ್ಯರ ಸೇವೆ ಅಗತ್ಯವಿದ್ದು, ನನ್ನ ಅಮ್ಮನ ಆಸೆ ಕೂಡ ಅದೇ ಆಗಿದೆ. ಅಮ್ಮನ ಆಸೆ ಈಡೇರಿಸುವುದಕ್ಕಾಗಿ ಎಂಬಿಬಿಎಸ್‌ ಮಾಡುತ್ತೇನೆ– ಆರ್ನವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT