ಸೋಮವಾರ, ಆಗಸ್ಟ್ 15, 2022
27 °C
ಈದ್ಗಾ: ಆಟದ ಮೈದಾನವಾಗಿಯೇ ಉಳಿಯಲಿ– ನಾಗರಿಕರ ಒಕ್ಕೂಟ ವೇದಿಕೆ

ಈದ್ಗಾ ಮೈದಾನ ಆಟದ ಮೈದಾನವಾಗಿಯೇ ಉಳಿಸುವಂತೆ ಆಗ್ರಹಿಸಿ 12ಕ್ಕೆ ಚಾಮರಾಜಪೇಟೆ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಚಾಮರಾಜಪೇಟೆ ಈದ್ಗಾ ಮೈದಾನವನ್ನು ಆಟದ ಮೈದಾನ ವನ್ನಾಗಿಯೇ ಉಳಿಸಿಕೊಳ್ಳಬೇಕು. ಎಲ್ಲ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಜುಲೈ 12ರಂದು ಬಂದ್‌ಗೆ ಕರೆ ನೀಡಿದೆ.

ಚಾಮರಾಜಪೇಟೆಯ ಜಂಗಮ ಸಮುದಾಯ ಭವನದಲ್ಲಿ ಸ್ಥಳೀಯ ಸುಮಾರು 30 ಸಂಘ–ಸಂಸ್ಥೆಗಳ ಸದಸ್ಯರು ಹಾಗೂ ನಾಗರಿಕರು ಚಾಮ ರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಯಡಿ ಭಾನುವಾರ ಸಭೆ ನಡೆಸಿ ಬಂದ್‌ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ.

‘ಈದ್ಗಾ ಮೈದಾನಕ್ಕೆ ಸಂಬಂಧಿ ಸಿದಂತೆ ವೇದಿಕೆ ಒಂದಷ್ಟು ಬೇಡಿಕೆ ಗಳನ್ನು ಮುಂದಿಟ್ಟಿದೆ. ಅವುಗಳನ್ನು ಮನವಿ ರೂಪದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸಲ್ಲಿಸಲಿದೆ. ಬೇಡಿಕೆ ಈಡೇರಿಸದಿದ್ದರೆ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪ್ರದೇಶದಲ್ಲಿ ಶಾಂತಿಯುತವಾಗಿ ಬಂದ್‌ ನಡೆಸಲಾಗುವುದು’ ಎಂದು ವೇದಿಕೆ ಸದಸ್ಯ ಶಶಾಂಕ್‌ ತಿಳಿಸಿದರು.

‘ಬಿಬಿಎಂಪಿ ಮುಖ್ಯ ಆಯುಕ್ತರು ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಎರಡೆರಡು ಹೇಳಿಕೆಗಳನ್ನು ನೀಡಿದ್ದಾರೆ. ಅವುಗಳನ್ನು ಹಿಂಪಡೆಯಬೇಕು, ಕ್ಷಮೆಯಾಚಿಸಬೇಕು. ಆಟದ ಮೈದಾನವನ್ನಾಗಿಯೇ ಉಳಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

‘ಶಾಸಕ ಜಮೀರ್‌ ಅಹಮದ್‌ 2006ರಲ್ಲಿ ಒಂದು ಒಪ್ಪಂದ ಮಾಡಿದ್ದರು. ಇಲ್ಲಿ ಬಿರುಕುಬಿಟ್ಟಿರುವ ಗೋಡೆಯನ್ನು ದುರಸ್ತಿ ಮಾಡಲು ಅವಕಾಶ ಮಾಡಿಕೊಡಿ. ನಂತರ ಸಾರ್ವಜನಿಕರು ಗಣೇಶ, ದಸರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಳ್ಳಿ. ವರ್ಷಕ್ಕೆ ಎರಡು ಬಾರಿ ನಮಗೆ ಅವಕಾಶ ಮಾಡಿಕೊಡಿ ಎಂದಿದ್ದರು. ದುರಸ್ತಿ ಮುಗಿದ ಮೇಲೆ ಈ ಮಾತನ್ನು ನಡೆಸಿಕೊಂಡಿಲ್ಲ. ಅವರು ಎಲ್ಲರಿಗೂ ಶಾಸಕರು, ಒಂದುಸಮುದಾಯಕ್ಕಲ್ಲ. ಆದ್ದರಿಂದ ಅವರನ್ನೂ ಈ ಬಗ್ಗೆ ಪ್ರಶ್ನಿಸಲು ನಿರ್ಣಯ ಕೈಗೊಂಡಿದ್ದೇವೆ’ ಎಂದರು.

‘ಜೈ ಚಾಮರಾಜೇಂದ್ರ ಒಡೆಯರ್‌ ಆಟದ ಮೈದಾನ ಎಂದು ನಾಮಕರಣ ಮಾಡಬೇಕು‌ ಎಂದೂ ಒತ್ತಾಯ ಮಾಡಲಿದ್ದೇವೆ’ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು