ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಲಾಕ್‌ಅಪ್‌ ಡೆತ್: ತನಿಖೆ ಪೂರ್ಣಗೊಳಿಸಲು ಆಗ್ರಹ

Published 30 ಆಗಸ್ಟ್ 2024, 15:59 IST
Last Updated 30 ಆಗಸ್ಟ್ 2024, 15:59 IST
ಅಕ್ಷರ ಗಾತ್ರ

ಬೆಂಗಳೂರು: ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಲಾಕ್‌ಅಪ್‌ನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸತ್ಯಶೋಧನಾ ಸಮಿತಿ ಆಗ್ರಹಿಸಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಯುಸಿಎಲ್‌ ಸಂಘಟನೆಯ ಐಶ್ವರ್ಯಾ, ‘ಪೊಲೀಸರ ವಶದಲ್ಲಿದ್ದಾಗಲೇ ಮೃತಪಟ್ಟಿರುವ ಆದಿಲ್‌ ಅವರ ಪತ್ನಿಗೆ ಆರ್ಥಿಕ ನೆರವಿನ ಜೊತೆಗೆ ಉದ್ಯೋಗವನ್ನೂ ನೀಡಬೇಕು. ತನಿಖೆಗೆ ಆಗ್ರಹಿಸಿ ಶಾಂತಿಯುತ ಪ್ರತಿಭಟನೆ ನಡೆಸಿದವರ ವಿರುದ್ಧ ದಾಖಲಿಸಿದ ಪ್ರಕರಣ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಜೂಜಾಟದ ಆರೋಪದಲ್ಲಿ ಚನ್ನಗಿರಿ ಪೊಲೀಸರು ಆದಿಲ್‌ ಎಂಬವರನ್ನು ಬಂಧಿಸಿದ್ದರು. ಮೇ 24ರಂದು ಪೊಲೀಸ್‌ ಕಸ್ಟಡಿಯಲ್ಲಿ ಆದಿಲ್ ಮೃತಪಟ್ಟಿದ್ದರು. ಈ ಬಗ್ಗೆ ಪೀಪಲ್‌ ಯೂನಿಯನ್‌ ಫಾರ್‌ ಸಿವಿಲ್‌ ಸೊಸೈಟಿ (ಪಿಯುಸಿಎಲ್‌), ಅಸೋಸಿಯೇಶನ್‌ ಫಾರ್‌ ಪ್ರೊಟೆಕ್ಷನ್‌ ಆಫ್‌ ಸಿವಿಲ್ ರೈಟ್ಸ್‌ (ಎಪಿಸಿಆರ್‌), ಬಹುತ್ವ ಕರ್ನಾಟಕ, ಆಲ್‌ ಇಂಡಿಯಾ ಲಾಯರ್ಸ್ ಅಸೋಸಿಯೇಶನ್‌ ಫಾರ್‌ ಜಸ್ಟೀಸ್‌ (ಎಐಎಲ್‌ಎಜೆ) ಸಂಘಟನೆಗಳು ಸೇರಿ ಸತ್ಯಶೋಧನೆ ನಡೆಸಿವೆ. ಬಂಧನ ಮತ್ತು ಪ್ರಕರಣ ದಾಖಲಿಸುವ ಪ್ರಕ್ರಿಯೆಯಲ್ಲಿ ದೋಷ ಕಂಡು ಬಂದಿದೆ ಎಂದು ತಿಳಿಸಿದರು.

ಆದಿಲ್‌ ಮೃತಪಟ್ಟಾಗ ಸಾವಿರಾರು ಜನರು ಚನ್ನಗಿರಿ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಕೆಲವರು ಪೊಲೀಸ್‌ ವಾಹನಕ್ಕೆ ಹಾನಿ ಮಾಡಿದ್ದರು. ಆದರೆ, ಈ ಪ್ರಕರಣದಲ್ಲಿ 47 ಮಂದಿ ಅಮಾಯಕರನ್ನು ಬಂಧಿಸಿದ್ದಾರೆ. ಅವರನ್ನು ಬಿಡುಗಡೆ ಮಾಡಬೇಕು. ನೈಜ ಆರೋಪಿಗಳನ್ನಷ್ಟೇ ಬಂಧಿಸಬೇಕು ಎಂದು ಎಪಿಸಿಆರ್‌ನ ನಿಜಾಮುದ್ದೀನ್‌, ಆಮೆಯ್‌, ಪಿಯುಸಿಎಲ್‌ನ ಕಿಶೋರ್‌ ಗೋವಿಂದ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT