ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದ ಆಮಿಷವೊಡ್ಡಿ ವಂಚನೆ: ಆರೋಪಿ ಬಂಧನ

Last Updated 2 ಜುಲೈ 2020, 21:31 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕುಟುಂಬದವರು ಆತ್ಮೀಯರೆಂದು ಹೇಳಿಕೊಂಡು, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಕೇಂದ್ರ ಅಪರಾಧ ದಳದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಹಾವೇರಿಯ ಶಿವಕುಮಾರ್ ಹೊಸಳ್ಳಿ ಬಂಧಿತ ಆರೋಪಿ. ಉತ್ತರ ಕರ್ನಾಟಕ ಭಾಗದ ನೂರಾರು ಜನರನ್ನು ನಂಬಿಸಿ ಲಕ್ಷಾಂತರ ಹಣ ಪಡೆದು ವಂಚಿ ಸಿದ್ದಾನೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಕಮಿಷನರ್‌ ಸಂದೀಪ ಪಾಟೀಲ ತಿಳಿಸಿದರು.

‘ಮುಖ್ಯಮಂತ್ರಿ ಮತ್ತು ಕುಟುಂಬ ನನಗೆ ಬಹಳ ಆತ್ಮೀಯ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ಹುದ್ದೆ ಗಳು ಖಾಲಿ ಇವೆ. ನಿಮಗೆ ಕೆಲಸ ಬೇಕಾದರೆ ಇಂತಿಷ್ಟು ಹಣ ನೀಡಬೇಕು’ ಎಂದು ಹೇಳಿ ಆರೋಪಿ ವಂಚಿಸುತ್ತಿದ್ದ ಎಂದು ವಿಚಾರಣೆಯಿಂದ ಗೊತ್ತಾಗಿದೆ.

ಲೋಕೋಪಯೋಗಿ ಇಲಾಖೆ ಸೇರಿ ದಂತೆ ಹಲವು ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಕಾಮಗಾರಿಯ ಬಿಲ್ ಚುಕ್ತಾ ಮಾಡಿಸುವುದಾಗಿ ಲಕ್ಷಾಂತರ ಹಣ ಪಡೆದಿದ್ದ. ಈ ವಿಷಯವನ್ನು ಕೆಲವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಳಿ ಹೇಳಿಕೊಂಡಿದ್ದರು. ಹೀಗಾಗಿ, ಗೃಹ ಸಚಿವರು ಸಿಸಿಬಿ ತನಿಖೆಗೆ ವಹಿಸಿದ್ದರು.

‘ಹಣ ಪಡೆದು ವಂಚಿಸಿರುವ ಬಗ್ಗೆ ಆರೋಪಿಯೇ ಬಾಯಿಬಿಟ್ಟಿದ್ದಾನೆ. ತನಿಖೆ ಮುಂದುವರಿದಿದೆ’ ಎಂದು ಸಂದೀಪ್ ಪಾಟೀಲ ಹೇಳಿದರು.

ಮೊಬೈಲ್‌, ಹಣ ಕಿತ್ತ ದುಷ್ಕರ್ಮಿಗಳು
ಮೂವರು ದುಷ್ಕರ್ಮಿಗಳು ಕ್ಯಾಬ್ ಚಾಲಕ ಮತ್ತು ಪ್ರಯಾಣಿಕರನ್ನು ಬೆದರಿಸಿ ಮೊಬೈಲ್, ಹಣ ಕಿತ್ತುಕೊಂಡು ಪರಾರಿಯಾದ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪ ನಡೆದಿದೆ.

ಶಿವಕುಮಾರ್ ನೀಡಿದ ದೂರಿನ ಮೇರೆಗೆ ಮೂವರು ಅಪರಿಚಿತರ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ. ಖಾಸಗಿ ಕಂಪನಿಯ ನೌಕರ ಶಿವಕುಮಾರ್, ಮಡಿವಾಳದಲ್ಲಿರುವ ಸ್ನೇಹಿತನ ಮನೆಯಿಂದ ಜೂನ್ 29ರ ರಾತ್ರಿ 11ಕ್ಕೆ ಕ್ಯಾಬ್‌ನಲ್ಲಿ ಮನೆಗೆ ಮರಳುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿ ಬಸ್ ನಿಲ್ದಾಣದ ಬಳಿ ಬೈಕ್‌ನಲ್ಲಿ ಬಂದ ಮೂವರು ಕ್ಯಾಬ್‌ಗೆ ಅಡ್ಡ ಬಂದು, ಚಾಲಕನ ಜತೆ ಗಲಾಟೆ ಮಾಡಿದ್ದಾರೆ. ಬಳಿಕ ಮಾರಕಾಸ್ತ್ರಗಳನ್ನು ತೋರಿಸಿ, ಕ್ಯಾಬ್‌ ಚಾಲಕ ಮತ್ತು ಶಿವಕುಮಾರ್ ಮೇಲೆ ಹಲ್ಲೆ ಮಾಡಿ, ಮೊಬೈಲ್ ಹಾಗೂ ಹಣ ದೋಚಿದ್ದಾರೆ. ಪಾದಚಾರಿಯನ್ನೂ ಬೆದರಿಸಿ ಹಣ, ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT