ಶುಕ್ರವಾರ, ಏಪ್ರಿಲ್ 3, 2020
19 °C
ಚೀನಾ ಶೈಲಿಯ ಮಾಂಸಾಹಾರ ಸೇವನೆಯಿಂದ ಕೋವಿಡ್‌ ವೈರಸ್‌ ಸೋಂಕು ಹರಡುವ ವದಂತಿ

ಚೈನೀಸ್ ಆಹಾರ ಸೇವನೆಗೆ ಹಿಂದೇಟು

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚೀನಾದಲ್ಲಿ ಕಾಣಿಸಿಕೊಂಡ ‘ಕೋವಿಡ್‌–19’ ವೈರಸ್‌ ಸೋಂಕಿನ ಕರಿ ನೆರಳು ಚೈನೀಸ್‌ ಖಾದ್ಯ ಸೇವನೆ ಮೇಲೂ ಬಿದ್ದಿದೆ. ವೈರಸ್‌ ಹರಡುವುದಕ್ಕೆ ಚೀನಾ ಶೈಲಿಯ ಮಾಂಸಾಹಾರ ಸೇವನೆಯೂ ಕಾರಣ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹಬ್ಬಿರುವ ಪರಿಣಾಮ ಚೈನೀಸ್‌ ಹೋಟೆಲ್ ಹಾಗೂ ರೆಸ್ಟೋರಂಟ್‌ಗಳಲ್ಲಿ ಆಹಾರ ಸೇವನೆಗೆ ಜನ ಹಿಂದೇಟು ಹಾಕುತ್ತಿದ್ದಾರೆ.

ಬೆಂಗಳೂರಿನಲ್ಲೂ ಚೈನೀಸ್‌ ಆಹಾರಕ್ಕೆ ಮಾರು ಹೋದವರ ಸಂಖ್ಯೆ ದೊಡ್ಡದಿದೆ. ಚೀನಾ ಶೈಲಿಯ ಮಂಚೂರಿಯನ್‌ಗಳು, ಹಕ್ಕಾ ನೂಡಲ್ಸ್, ಫ್ರೈಡ್ ರೈಸ್, ಚಿಕನ್ ಚಾಪ್ಸಿ, ಹಾಟ್ ಮೊಮೊ, ವಿವಿಧ ಬಗೆಯ ಸೂಪ್‌ಗಳು ಯುವಜನರ ನೆಚ್ಚಿನ ಖಾದ್ಯಗಳು. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಇಂದಿರಾನಗರ, ವಿಜಯನಗರ, ಕೋರಮಂಗಲ, ರಾಜಾಜಿನಗರ, ಜಯನಗರಗಳಲ್ಲಿ ಇಂತಹ ಖಾದ್ಯಗಳನ್ನು ಉಣಬಡಿಸುವ ಹೋಟೆಲ್‌/ ರೆಸ್ಟೋರಂಟ್‌ಗಳಿಗೆ ಚೈನೀಸ್‌ ಆಹಾರ ಪ್ರಿಯರು ಕಾಯಂ ಗಿರಾಕಿಗಳಾಗಿದ್ದರು. ವಾರಾಂತ್ಯಗಳಲ್ಲಂತೂ
ಇಂತಹ ಹೋಟೆಲ್‌ಗಳಿಗೆ ಗ್ರಾಹಕರು ಮುಗಿಬೀಳುತ್ತಿದ್ದರು. ಆದರೆ, ಇತ್ತೀಚೆಗೆ ಹೋಟೆಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. 

‘ವ್ಯಾಪಾರಕ್ಕೆ ಭಾರಿ ಹೊಡೆತವೇನೂ ಬಿದ್ದಿಲ್ಲ. ತುಸು ಕಡಿಮೆಯಗಿರಬಹುದು ಅಷ್ಟೇ’ ಎನ್ನುತ್ತಾರೆ ಹೋಟೆಲ್ ಮಾಲೀಕರು.

ನಗರದಲ್ಲಿ ಚೀನಿಯರು ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಆದರೆ, ಸೋಂಕಿನ ಭೀತಿಯಿಂದ ಮುಂಜಾಗ್ರತಾ ಕ್ರಮವಾಗಿ ಚೀನಾ– ಭಾರತ ನಡುವಿನ ವಿಮಾನಯಾನ ಸೇವೆಯನ್ನು ಜೂನ್‌ 30ರವರೆಗೆ ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮ ನಗರಕ್ಕೆ ಬರುವ ಚೀನಿಯರ ಸಂಖ್ಯೆ ಕಡಿಮೆಯಾಗಿದೆ.

‘ನೂಡಲ್ಸ್‌ ನನ್ನ ನೆಚ್ಚಿನ ಚೈನೀಸ್‌ ಖಾದ್ಯ. ಕೋವಿಡ್‌ ಭೀತಿಯಿಂದ ಮೊದಲು ಭಯವಾಗಿತ್ತು. ಆಹಾರಕ್ಕೆ ಬಳಸುವ ಪದಾರ್ಥಗಳನ್ನು ಇಲ್ಲೇ ತಯಾರಿಸುತ್ತಾರೆ. ಇದರಿಂದ ಕೊರೊನ ಹರಡುವ ಸಾಧ್ಯತೆ ಇಲ್ಲ’ ಎನ್ನುತ್ತಾರೆ ನಿಖಿತಾ.

‘ದೇಶದಲ್ಲಿ ಶೇ 27ರಷ್ಟು ಚೈನೀಸ್‌ ಆಹಾರ ಪ್ರಿಯರು’
ಭಾರತೀಯ ರಾಷ್ಟ್ರೀಯ ಹೋಟೆಲ್‌ ಸಂಘ (ಎನ್‌ಆರ್‌ಎಐ) ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ದೇಶದ ಶೇ 23ರಷ್ಟು ಮಂದಿ ಚೈನೀಸ್‌ ಆಹಾರ ಪ್ರಿಯರಿದ್ದಾರೆ ಎಂದು ತಿಳಿಸಿದೆ. 2019ರಲ್ಲಿ ಚೈನೀಸ್‌ ಆಹಾರ ಉದ್ಯಮದಿಂದ ₹4.2 ಲಕ್ಷ ಕೋಟಿ ವಹಿವಾಟು ನಡೆದಿದೆ.

‘ಗಾಳಿ ಸುದ್ದಿಗೆ ಕಿವಿಗೊಡಬೇಡಿ’
‘ಕೋವಿಡ್‌ ಸೋಂಕಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದಿನ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಜನರು ಮುಗ್ಧರಂತೆ ಅಲ್ಲಿ ಬರುವ ವಿಷಯಗಳನ್ನೇ ನಿಜವೆಂದು ನಂಬುತ್ತಿದ್ದಾರೆ. ಆಹಾರದಿಂದ ವೈರಸ್‌ ಹರಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದ್ದು, ಸಾರ್ವಜನಿಕರು ಗಾಳಿ ಸುದ್ದಿಗೆ ಕಿವಿಗೊಡಬಾರದು’ ಎಂದು ಬ್ರಿಗೇಡ್ ರಸ್ತೆಯ ಚೈನೀಸ್ ಹೋಟೆಲೊಂದರ ಮಾಲೀಕ ಸಮೀರ್‌ ಸಲಹೆ ನೀಡಿದರು.

*
ಚೀನಾ ಎಂದರೆ ಕೋವಿಡ್‌ ವೈರಸ್‌ ಎಂಬ ಭಾವನೆ ಜನರಲ್ಲಿದೆ. ಖಾದ್ಯಗಳ ಹೆಸರಿನಲ್ಲಿ ಚೈನೀಸ್ ಪದ ಇರುವುದರಿಂದ ಆಹಾರ ಸೇವನೆಗೆ ಹಿಂಜರಿಯುತ್ತಿದ್ದಾರೆ
.–ವಿನಯ್‌, ಬೆಂಗಳೂರು ನಿವಾಸಿ

*
ಕೋವಿಡ್‌ ವೈರಸ್‌ ಭೀತಿಯಿಂದ ಬೆಂಗಳೂರಿನ ಚೈನೀಸ್‌ ಹೋಟೆಲ್‌ಗಳು ನಷ್ಟ ಎದುರಿಸುವ ಸ್ಥಿತಿ ತಲುಪಿಲ್ಲ. ವ್ಯಾಪಾರ ನಡೆಯುತ್ತಿದೆ.
–ಬಿ.ಚಂದ್ರಶೇಖರ್ ಹೆಬ್ಬಾರ್, ಅಖಿಲ ಕರ್ನಾಟಕ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು