ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ಕೋಟಿ ಅವ್ಯವಹಾರ ಪ್ರಕರಣ: ಸಿಐಡಿ ತನಿಖೆಗೆ ಆದೇಶ

ಶ್ರೀ ಗುರುರಾಘವೇಂದ್ರ ಬ್ಯಾಂಕ್‌
Last Updated 1 ಜುಲೈ 2020, 22:20 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಗುಡಿ ಶ್ರೀ ಗುರುರಾಘವೇಂದ್ರ ಬ್ಯಾಂಕ್‌ ಹಾಗೂ ಶ್ರೀ ಗುರುಸಾರ್ವಭೌಮ ಸೌಹಾರ್ದ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂಪಾಯಿ ಅಕ್ರಮ ಮತ್ತು ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬ್ಯಾಂಕ್‌ ಮತ್ತು ಸಂಘದ ವಿರುದ್ಧ ಬಸವನಗುಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಡಿಜಿ ಮತ್ತು ಐಜಿ ಜೂನ್‌ 20 ರಂದು ಸಿಐಡಿಗೆ ಒಪ್ಪಿಸಿದ್ದಾರೆ. ಮತ್ತೊಂದೆಡೆ, ಎಸಿಬಿ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಎಫ್‌ಐಆರ್ ದಾಖಲಿಸಿದ್ದು, ಎಲ್ಲ ಪ್ರಕರಣಗಳನ್ನು ಒಂದೇ ತನಿಖಾ ಸಂಸ್ಥೆಗೆ ವಹಿಸುವಂತೆ ಜೂನ್‌ 23ರಂದು ಹೈಕೋರ್ಟ್‌ ನೀಡಿದ್ದ ನಿರ್ದೇಶನದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಅಕ್ರಮ ಹಾಗೂ ವಂಚನೆ ಕುರಿತು ತನಿಖೆ ನಡೆಸಲು ಸಿಐಡಿ ಸೂಕ್ತ ಸಂಸ್ಥೆಯಾಗಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಿಐಡಿ ತ್ವರಿತವಾಗಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹಣಕಾಸು ಅವ್ಯವಹಾರ ಕುರಿತು ಸಾರ್ವಜನಿಕರಿಂದ ಬಂದಿದ್ದ ದೂರುಗಳನ್ನು ಆಧರಿಸಿ ಎಸಿಬಿ ಜೂನ್‌ 18ರಂದು ಬ್ಯಾಂಕಿನ ಪ್ರಧಾನ ಶಾಖೆ, ಬಸವನಗುಡಿ ಶಾಖೆ, ಶ್ರೀ ಗುರುಸಾರ್ವಭೌಮ ಸೌಹಾರ್ದ ಸಹಕಾರ ಸಂಘ, ಬ್ಯಾಂಕಿನ ಮಾಜಿ ಅಧ್ಯಕ್ಷ ರಾಮಕೃಷ್ಣ ಹಾಗೂ ಮಾಜಿ ಸಿಇಒ ವಾಸುದೇವ ಮಯ್ಯ ಮನೆಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿತ್ತು.

ಸಾವಿರಾರು ಠೇವಣಿದಾರರ ಹಣ ಹಿಂತಿರುಗಿಸದೆ ವಂಚಿಸಿರುವ ಬ್ಯಾಂಕಿನ ಈ ಹಿಂದಿನ ಆಡಳಿತ ಮಂಡಳಿ, ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಹಾಗೂ ನಕಲಿ ಖಾತೆಗಳ ಮೂಲಕ ಭದ್ರತೆ ಪಡೆಯದೆ ನೂರಾರು ಕೋಟಿ ಸಾಲ ವಿತರಿಸಿದ ಆರೋಪಕ್ಕೆ ಒಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT