ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಯೋಜನಾ ಪ್ರಾಧಿಕಾರಗಳ ವಿಲೀನಕ್ಕೆ ಚಿಂತನೆ

ಬಿಡಿಎ ಅಥವಾ ಬಿಎಂಆರ್‌ಡಿಎ ಜತೆ ವಿಲೀನ
Last Updated 27 ಮೇ 2020, 19:15 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಿರುವ ನಗರ ಯೋಜನಾ ಪ್ರಾಧಿಕಾರಗಳನ್ನು ಬಿಡಿಎ ಅಥವಾ ಬಿಎಂಆರ್‌ಡಿಎ ಜತೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ವಿವಿಧ ಯೋಜನೆಗಳಿಗೆ ತ್ವರಿತಗತಿಯಲ್ಲಿ ಒಪ್ಪಿಗೆ ನೀಡುವುದು, ಖರ್ಚು ವೆಚ್ಚಗಳನ್ನು ತಗ್ಗಿಸುವುದು ಮತ್ತು ಬೊಕ್ಕಸಕ್ಕೆ ಆದಾಯದ ಹರಿವನ್ನು ತ್ವರಿತಗೊಳಿಸಲು ಇಂತಹದ್ದೊಂದು ಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೈ ಹಾಕಿದ್ದಾರೆ.

ನಗರಕ್ಕೆ ಹೊಂದಿಕೊಂಡಂತೆ ಆನೇಕಲ್‌, ಹೊಸಕೋಟೆ, ನೆಲಮಂಗಲ, ಬಿಡದಿ, ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌ ಯೋಜನಾ ಪ್ರಾಧಿಕಾರಗಳು ಇವೆ. ಇವುಗಳನ್ನು ವಿಲೀನಗೊಳಿಸುವ ಬಗ್ಗೆ ವಾರದೊಳಗೆ ಪ್ರಸ್ತಾವನೆಯನ್ನೂ ಸಲ್ಲಿಸುವಂತೆಯೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಲವು ನಗರ ಯೋಜನಾ ಪ್ರಾಧಿಕಾರಗಳಿಂದಾಗಿ ಬೆಂಗಳೂರು ಹೊರ ವಲಯದಲ್ಲಿ ಅಭಿವೃದ್ಧಿ ಕಾರ್ಯಗಳು ಅದರಲ್ಲೂ ನಿರ್ಮಾಣ ಕಾರ್ಯ ತಡವಾಗುತ್ತಿದೆ. ಯಾವುದೇ ಒಂದು ಕಟ್ಟಡಕ್ಕೆ ಅನುಮತಿ ಪಡೆಯಲು ಕನಿಷ್ಠ ಆರು ತಿಂಗಳು ಹಿಡಿಯುತ್ತಿದೆ. ಯೋಜನಾ ಪ್ರಾಧಿಕಾರಗಳು, ಬಿಬಿಎಂಪಿ, ಬಿಎಂಆರ್‌ಡಿಎ ಸಮನ್ವಯವೇ ಇಲ್ಲವಾಗಿದೆ. ಇದಕ್ಕೆ ಕಾಯಕಲ್ಪ ನೀಡಬೇಕೆಂಬುದೇ ಸರ್ಕಾರದ ಉದ್ದೇಶ ಎಂದು ಮೂಲಗಳು ಹೇಳಿವೆ.

ಹಲವು ಸಂದರ್ಭಗಳಲ್ಲಿ ಯೋಜನಾ ಪ್ರಾಧಿಕಾರಗಳು ಆರರಿಂದ ಏಳು ತಿಂಗಳು ಸಭೆಯನ್ನೇ ಸೇರುವುದಿಲ್ಲ. ಅಧಿಕಾರಿಗಳೂ ವರ್ಗಾವಣೆ ಆಗುತ್ತಾರೆ. ಹೀಗಾಗಿ ಯೋಜನೆಗಳಿಗೆ ಅನುಮತಿಯೇ ಸಿಗದೇ ಕಡತಗಳ ನನೆಗುದಿಗೆ ಬೀಳುತ್ತಿವೆ ಎಂಬ ವಿಷಯವನ್ನು ಅಧಿಕಾರಿಗಳು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದಾರೆ.

ಈಗಾಗಲೇ ಹೊಸಕೋಟೆ, ನೆಲಮಂಗಲ, ಬಿಡದಿ, ಆನೇಕಲ್‌ ನಗರದ ಭಾಗವಾಗಿವೆ. ಮುಂದಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿಯೇ ನಗರದ ಬೆಳವಣಿಗೆ ಆಗುವ ಹಿನ್ನೆಲೆಯಲ್ಲಿ ಯೋಜನೆಗಳಿಗೆ ತ್ವರಿತ ಮಂಜೂರಾತಿಗೆ ಅಡೆತಡೆಗಳು ಇರಬಾರದು. ಯಾವುದೇ ಅನುಮೋದನೆಗೂ ಬಿಡಿಎ, ಬಿಬಿಎಂಪಿ ಮತ್ತು ಬಿಎಂಆರ್‌ಡಿಎ ಮಧ್ಯೆ ಸಮನ್ವಯದಲ್ಲೇ ಆಗಬೇಕು ಎಂಬುದು ಮುಖ್ಯಮಂತ್ರಿಯವರ ಇಂಗಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಲೀನ ಸಾಧ್ಯತೆ ಪ್ರಾಧಿಕಾರಗಳು

ಆನೆಕಲ್‌ ನಗರ ಯೋಜನಾ ಪ್ರಾಧಿಕಾರ

ಹೊಸಕೋಟೆ ನಗರ ಯೋಜನಾ ಪ್ರಾಧಿಕಾರ

ನೆಲಮಂಗಲ ನಗರ ಯೋಜನಾ ಪ್ರಾಧಿಕಾರ

ಬಿಡದಿ ನಗರ ಯೋಜನಾ ಪ್ರಾಧಿಕಾರ

ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌ ಯೋಜನಾ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT