ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ ನೋಟ| ದಟ್ಟಣೆ ಕಿರಿಕಿರಿ – ಕಸದ ಬೀಡು

ಹೆಸರಿಗಷ್ಟೇ ಕೈಗಾರಿಕಾ ಪ್ರದೇಶ: ಆಸುಪಾಸಿನಲ್ಲಿ ಹತ್ತು ಹಲವು ಕೊರತೆಗಳು l ವಿಷದ ಬಟ್ಟಲುಗಳಾಗಿವೆ ಕೆರೆಗಳು
Last Updated 11 ಡಿಸೆಂಬರ್ 2019, 20:17 IST
ಅಕ್ಷರ ಗಾತ್ರ

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಬಡಾವಣೆಗಳಲ್ಲಿ ದೂರದ ಊರುಗಳಿಂದ ಬದುಕುಕಟ್ಟಿಕೊಳ್ಳಲು ಬಂದು ನೆಲೆಯೂರಿದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಸುತ್ತಮುತ್ತ ಇದ್ದ ಹಳೆಯ ಊರುಗಳು ಈಗ ಹಳ್ಳಿ ಸೊಗಡು ಕಳೆದುಕೊಂಡು ಜನದಟ್ಟಣೆ ಮತ್ತು ಕಾಂಕ್ರಿಟ್ ಕಾಡಿನಲ್ಲಿ ಕಳೆದು ಹೋಗಿವೆ. ಕೆರೆಗಳು ಮಲ ಮತ್ತು ಕಾರ್ಖಾನೆ ತ್ಯಾಜ್ಯದ ಬಟ್ಟಲಾಗಿವೆ. ಮೂಲ ಸೌಕರ್ಯದ ಕೊರತೆಯಂತೂ ಮುಗಿಯದ ಕಥೆಯಾಗಿದೆ. ಲಗ್ಗೆರೆ, ಹೆಗ್ಗನಹಳ್ಳಿ, ರಾಜಗೋಪಾಲನಗರ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್‌ನ ಸದ್ಯದ ಚಿತ್ರಣವನ್ನು ವಿಜಯಕುಮಾರ್ ಎಸ್.ಕೆ. ಕಟ್ಟಿಕೊಟ್ಟಿದ್ದಾರೆ.

ವಾರ್ಡ್‌ 69– ಲಗ್ಗೆರೆ

ರಾಜಕುಮಾರ್ ಸಮಾಧಿ ರಸ್ತೆಯ ಆಜು–ಬಾಜಿನ ಬಡಾವಣೆಗಳನ್ನು ಲಗ್ಗೆರೆ ವಾರ್ಡ್‌ ಒಳಗೊಂಡಿದೆ. ವಾರ್ಡ್ ಅಂಚಿನಲ್ಲಿ ಹಾದು ಹೋಗುವ ರಿಂಗ್ ರಸ್ತೆ ದಾಟುವುದೇ ವಾಹನಗಳ ಸವಾರರಿಗೆ ದೊಡ್ಡ ಸವಾಲಿನ ಕೆಲಸ. ಲಗ್ಗೆರೆ ಕಡೆಯಿಂದ ನಗರಕ್ಕೆ ಮತ್ತು ಕುರುಬರಹಳ್ಳಿ ಕಡೆಯಿಂದ ಲಗ್ಗೆರೆ ಕಡೆಗೆ ಹೋಗಲು ಇರುವ ಪ್ರಮುಖ ಮಾರ್ಗ ಇದಾಗಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆ ಲಗ್ಗೆರೆ ಸೇತುವೆಯಲ್ಲಿ ಕನಿಷ್ಠ ಒಂದು ಕಿಲೋ ಮೀಟರ್ ತನಕ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಲಗ್ಗೆರೆ ಕಡೆಯಿಂದ ಬಂದು ನಾಯಂಡಹಳ್ಳಿ ಕಡೆಗೆ ಹೋಗುವ ವಾಹನಗಳು ಮುಂದೆ ಸಾಗಿ ಅಂಡರ್ ಪಾಸ್‌ನಲ್ಲಿ ಯೂಟರ್ನ್ ಪಡೆಯಬಹುದು. ಆದರೆ, ಆ ರಸ್ತೆ ಗುಂಡಿ ಬಿದ್ದಿರುವ ಕಾರಣ ಎಲ್ಲರೂ ಸೇತುವೆಯನ್ನೇ ಬಳಸುತ್ತಾರೆ. ಅಲ್ಲದೇ ಕೆಲವೆಡೆ ಸರ್ವೀಸ್ ರಸ್ತೆಗಳೇ ಇಲ್ಲ. ಹೀಗಾಗಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಸಿಗ್ನಲ್ ರಹಿತ ಈ ಜಂಕ್ಷನ್‌ನಲ್ಲಿ ವಾಹನಗಳನ್ನು ನಿಯಂತ್ರಿಸುವುದು ಪೊಲೀಸರಿಗೂ ಪ್ರಯಾಸದ ಕೆಲಸ. ಲಗ್ಗೆರೆಯಲ್ಲಿ ರಸ್ತೆಗಳ ಸ್ಥಿತಿ ಅಷ್ಟೇನೂ ಸುಧಾರಿಸಿಲ್ಲ. ಲಗ್ಗೆರೆ ಮುಖ್ಯರಸ್ತೆ ಮೊದಲೇ ಕಿರಿದಾಗಿದ್ದು, ಇದರ ನಡುವೆ ತರಕಾರಿ, ಹೂವು-
ಹಣ್ಣುಗಳ ತಳ್ಳುವ ಗಾಡಿಗಳು ರಸ್ತೆಯಲ್ಲಿ ನಿಲ್ಲುವ ಮೂಲಕ ಟ್ರಾಫಿಕ್ ಸಮಸ್ಯೆ ಹುಟ್ಟುಹಾಕಿವೆ. ಬಸ್ ನಿಲ್ದಾಣದ ರಸ್ತೆ ಗುಂಡಿ ಬಿದ್ದು ಅದೆಷ್ಟೋ ವರ್ಷಗಳು ಕಳೆದಿವೆ. ಕಸ ನಿರ್ವಹಣೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಆಗಾಗ ರಸ್ತೆ ಬದಿಯಲ್ಲಿ ಕಸದ ರಾಶಿ ಬೀಳುವುದು ತಪ್ಪಿಲ್ಲ. ಆದರೆ, ಕುಡಿಯುವ ನೀರಿಗೆ ತೊಂದರೆ ಇಲ್ಲ ಎನ್ನುತ್ತಾರೆ ನಿವಾಸಿಗಳು.

ವಾರ್ಡ್ 70– ರಾಜಗೋಪಾಲನಗರ

ಬಡವರು, ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜಗೋಪಾಲನಗರ ವಾರ್ಡ್‌ನಲ್ಲಿ ಮೂಲಸೌಕರ್ಯದ ಕೊರತೆ ಸಾಕಷ್ಟಿದೆ. ಇಲ್ಲಿನ ಕೊಳೆಗೇರಿಗಳಲ್ಲಿ ಸಮಸ್ಯೆಗಳು ಬೆಟ್ಟದಷ್ಟಿವೆ. ತಗ್ಗು ಪ್ರದೇಶಗಳೇ ಇರುವ ವಾರ್ಡ್‌ನಲ್ಲಿ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸಲಾಗಿದೆಯಾದರೂ, ಅವು ಕೆಲವೆಡೆ ಹಾಳಾಗಿವೆ. ಒಳಚರಂಡಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಆಗಿಲ್ಲ. ನಿವಾಸಿಗಳಿಗೆ ತಮ್ಮ ಮನೆಯ ವಾರಸುದಾರರಾಗುವ ಭಾಗ್ಯ ಇನ್ನೂ ಸಿಕ್ಕಿಲ್ಲ. ಆದರೆ, ಕುಡಿಯಲು ಕಾವೇರಿ ನೀರಿನ ಸೌಕರ್ಯ ಇದೆ.

ಬಸಪ್ಪನಕಟ್ಟೆಯ ತಗ್ಗು ಪ್ರದೇಶದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಸರ್ಕಾರಿ ಪ್ರೌಢಶಾಲೆ ಬೇಕೆಂಬ ಬೇಡಿಕೆ ಇದೆ. ಆದರೆ, ನಿರ್ಮಾಣಕ್ಕೆ ಸರ್ಕಾರಿ ಜಾಗ ಇಲ್ಲ. ಹೀಗಾಗಿ ಬಡವರ ಮನೆ ಮಕ್ಕಳೂ ಖಾಸಗಿ ಶಾಲೆಗೆ ಹೋಗಬೇಕಾಗಿದೆ. ಬಸಪ್ಪನಕಟ್ಟೆ ಸುತ್ತಮುತ್ತ ಇರುವ ಪಾಳು ಜಾಗ ಬಡಾವಣೆಯ ಅನೈರ್ಮಲ್ಯವನ್ನು ಹೆಚ್ಚಿಸಿದೆ. ಕಸದ ಗಾಡಿಗಳು ಮನೆ ಮುಂದೆ ಬಂದರೂ ಈ ಪಾಳು ಬಿದ್ದ ಪ್ರದೇಶದಲ್ಲಿ ಕಸ ಸುರಿಯುವುದು ನಿಂತಿಲ್ಲ. ಗಿಡಗಂಟಿಗಳು ಬೆಳೆದು ನಿಂತಿರುವ ಪ್ರದೇಶದಲ್ಲಿ ಮೂಗುಮುಚ್ಚಿ ಜನ ತಿರುಗಾಡಬೇಕಿದೆ. ಈ ಜಾಗ ವ್ಯಾಜ್ಯದಲ್ಲಿರುವ ಕಾರಣ ಸ್ವಚ್ಛಗೊಳಿ
ಸಲು ಆಗುತ್ತಿಲ್ಲ ಎನ್ನುತ್ತಾರೆ ಈ ವಾರ್ಡ್‌ನ ಪಾಲಿಕೆ ಸದಸ್ಯೆ. ಬಸಪ್ಪನಕಟ್ಟೆ ಕೆರೆ ಅಭಿವೃದ್ಧಿಪಡಿಸುವ ಹಲವು ವರ್ಷಗಳ ಯೋಜನೆ ನನೆಗುದಿಗೆ ಬಿದ್ದಿದೆ. ಇದು ಕೂಡ ಕಸ ಸುರಿಯುವ ಜಾಗವಾಗಿದೆ. ಕುಡಿಯಲು ಕಾವೇರಿ ನೀರಿನ ಸೌಕರ್ಯ ಇದೆ.

ವಾರ್ಡ್ 71– ಹೆಗ್ಗನಹಳ್ಳಿ

ಪೀಣ್ಯ ಎರಡನೇ ಹಂತದ ಜೊತೆಗೆ ಹೊಂದಿಕೊಂಡಿರುವ ಹೆಗ್ಗನಹಳ್ಳಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಕಸ ನಿರ್ವಹಣೆ ಸುಧಾರಿಸದೇ ಇರುವುದೇ ಈ ವಾರ್ಡ್‌ನ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೆಗ್ಗನಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತ ನಿಲ್ಲುವುವರೆಲ್ಲರೂ ಮೂಗುಮುಚ್ಚಿಯೇ ನಿಲ್ಲುತ್ತಾರೆ. ಏಕೆಂದರೆ ನಿಲ್ದಾಣದ ಹಿಂಭಾಗದಲ್ಲಿ ಕಸದ ರಾಶಿ ಸದಾ ಬಿದ್ದಿರುತ್ತದೆ. ಬಿಬಿಎಂಪಿ ಮತ್ತು ಖಾಸಗಿ ವ್ಯಕ್ತಿಯೊಬ್ಬರ ನಡುವಿನ ವ್ಯಾಜ್ಯದಲ್ಲಿರುವ ಖಾಲಿ ಜಾಗ ಕಸ ಸುರಿಯುವ ತಾಣವಾಗಿದೆ. ಸಣ್ಣ ಟಿಪ್ಪರ್‌ ಗಳಲ್ಲಿ ಸಂಗ್ರಹಿಸಿ ತಂದ ಕಸವನ್ನು ಇದೇ ಜಾಗದಲ್ಲಿ ಲಾರಿಗಳಿಗೆ ತುಂಬಿಕೊಳ್ಳಲಾಗುತ್ತದೆ. ಇದೇ ಖಾಲಿ ನಿವೇಶನದ ಮೂಲಕ ಬಡಾವಣೆಗಳಿಗೆ ತೆರಳುವ ರಸ್ತೆ ಇದೆ. ಶಾಲಾ ಮಕ್ಕಳು, ಸಾವಿರಾರು ವಾಹನಗಳು ಇದನ್ನು ದಾಟಿಕೊಂಡೇ ಹೋಗುತ್ತವೆ. ಅಕ್ಕ–ಪಕ್ಕದ ಮನೆಗಳಲ್ಲಿ ವಾಸ ಇರುವ ಜನರ ಪಾಡಂತೂ ಹೇಳ ತೀರದು. ‘ಈ ಕಸದ ರಾಶಿಗೆ ಹೆದರಿ ಹಲವರು ಮನೆ ಮಾರಾಟ ಮಾಡಿ ಹೋಗಿದ್ದಾರೆ. ಬಿಬಿಎಂಪಿಗೆ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಉಸಿರು ಬಿಗಿ ಹಿಡಿದು ಜೀವನ ನಡೆಸುವಂತಾಗಿದೆ’ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ. ಇನ್ನು ವಾರ್ಡ್‌ನಲ್ಲಿ ಸುತ್ತಾಡಿದರೆ ಅಲ್ಲಲ್ಲಿ ರಸ್ತೆ ಬದಿ, ಖಾಲಿ ನಿವೇಶನಗಳ ಬಳಿ ಕಸದ ರಾಶಿ ಸಿಗುತ್ತದೆ. ರಸ್ತೆ, ಚರಂಡಿ ವ್ಯವಸ್ಥೆಯನ್ನು ತಕ್ಕಮಟ್ಟಿಗೆ ಕಲ್ಪಿಸಿದ್ದಾರೆ. ಇನ್ನಷ್ಟು ಸುಧಾರಣೆ ಆಗಬೇಕು ಎನ್ನತ್ತಾರೆ ನಿವಾಸಿಗಳು.

ವಾರ್ಡ್‌ 41– ಪೀಣ್ಯ ಕೈಗಾರಿಕಾ ಪ್ರದೇಶ

ದಕ್ಷಿಣ ಏಷ್ಯಾದಲ್ಲಿನ ಅತಿದೊಡ್ಡ ಕೈಗಾರಿಕಾ
ಪ್ರದೇಶಗಳಲ್ಲಿ ಒಂದಾದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ಕೈಗಾರಿಕಾ ಪ್ರದೇಶಗಳ ಜತೆಗೆ ಶಿವಪುರ, ನೆಲಗದರನಹಳ್ಳಿ ಮತ್ತು ಸುತ್ತಮುತ್ತಲ ಹಳೇ ಊರುಗಳು, ಹೊಸ ಬಡಾವಣೆಗಳೂ ಈ ವಾರ್ಡ್‌ನಲ್ಲಿವೆ. ವಾರ್ಡ್‌ನಲ್ಲಿ ಓಡಾಡಿದರೆ ದೂಳಿನ ಸ್ನಾನವಾಗುತ್ತದೆ. ಶಿವಪುರ ಮತ್ತು ಸುತ್ತಮುತ್ತಲ ಕೆರೆಗಳಿಗೆ ಒಳಚರಂಡಿ ನೀರು, ಕಾರ್ಖಾನೆಗಳ ತ್ಯಾಜ್ಯ ಸೇರುತ್ತಿದೆ. ಕೆರೆಗಳ ಬಳಿ ಒಂದೆರಡು ನಿಮಿಷ ನಿಂತರೆ ಅದರ ದುರ್ನಾತ ಮೈಗೆ ಮೆತ್ತಿಕೊಂಡ ಅನುಭವವಾಗುತ್ತದೆ.

‘ಈ ಕೆರೆಯ ನೀರನ್ನು ಕುಡಿಯಲು ಉಪಯೋಗಿ ಸುತ್ತಿದ್ದ ಕಾಲವೂ ಇತ್ತು. ಆದರೀಗ ನೀರು ಕುಡಿಯು ವುದಿರಲಿ, ಕೆರೆ ಸುತ್ತಮುತ್ತ ಇರುವ ಮನೆಗಳಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ. ಹಲವು ತಜ್ಞರು ಬಂದು ಕೆರೆ ನೀರನ್ನು ಪರೀಕ್ಷೆಗೆಂದು ಕೊಂಡೊಯ್ದರು. ಆದರೂ, ಕೆರೆಗೆ ಕಾರ್ಖಾನೆಗಳ ತ್ಯಾಜ್ಯ ಸೇರುವುದು ತಪ್ಪಲಿಲ್ಲ. ಹಲವರು ಜಾನುವಾರುಗಳನ್ನು ಸಾಕಿದ್ದಾರೆ. ಆಕಸ್ಮಿಕವಾಗಿ ಅವು ಕೆರೆ ನೀರು ಕುಡಿದರೆ ಬದುಕುವುದಿಲ್ಲ. ₹50 ಸಾವಿರ ಬೆಲೆ ಬಾಳುತ್ತಿದ್ದ ಗರ್ಭ ಧರಿಸಿದ್ದ ಹಸುವೊಂದು ಈ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಯಿತು. ಸಾಯುವುದು ಖಾತರಿಯಾಗಿ ₹1 ಸಾವಿರ ಬೆಲೆಗೆ ಕಸಾಯಿಖಾನೆಗೆ ಮಾರಾಟ ಮಾಡಿದೆ’ ಎಂದು ಶಿವ‍ಪುರದ ಲಕ್ಷ್ಮಣ ‘‍ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಈ ನರಕದಿಂದ ನಮಗೆ ಯಾವಾಗ ಮುಕ್ತಿಯೋ ಗೊತ್ತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಮೂಗುಮುಚ್ಚಿಕೊಂಡೇ ಬಂದು ನೋಡಿ ಹೋಗುತ್ತಾರೆ. ಪರಿಹಾರ ಮಾರ್ಗೋಪಾಯ ಮಾತ್ರ ಇಲ್ಲ’ ಎಂದರು.‌

ಪಾಲಿಕೆ ಸದಸ್ಯರು ಹೇಳೋದೇನು?

ಅನುದಾನ ಬಂದಿದೆ: ಕೆಲಸ ಆಗಲಿದೆ

ಲಗ್ಗೆರೆ ಬ್ರಿಡ್ಜ್‌ ಸಮೀಪ ಟ್ರಾಫಿಕ್ ಸಮಸ್ಯೆ ಇದೆ. ಕೆಲವೆಡೆ ಸರ್ವೀಸ್ ರಸ್ತೆಗಳಿಲ್ಲದೆ ಇರುವುದು ಇದಕ್ಕೆ ಕಾರಣ. 17 ಮನೆಗಳನ್ನು ಸ್ವಾಧೀನಪಡಿಸಿಕೊಂಡು ತೆರವುಗೊಳಿಸಬೇಕಿದೆ. ಈ ಕೆಲಸವನ್ನು ಬಿಡಿಎ ಮಾಡಿಲ್ಲ. ವಾರ್ಡ್‌ನಲ್ಲಿ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಸೇರಿ ಮೂಲ ಸೌಕರ್ಯಕ್ಕೆ ಈ ಹಿಂದಿನ ಶಾಸಕ ಮುನಿರತ್ನ ಅವರು ಶ್ರಮದಿಂದ ₹65 ಕೋಟಿ ಅನುದಾನ ಲಭ್ಯವಾಗಿದೆ. ಸದ್ಯದಲ್ಲೇ ಎಲ್ಲಾ ರಸ್ತೆಗಳೂ ಡಾಂಬರು ಹಾಕಲಾಗುತ್ತದೆ. ರಸ್ತೆ ಬದಿ ಕಸ ಬೀಳದಂತೆ ಎಚ್ಚರಿಕೆ ವಹಿಸಿದ್ದೇವೆ.

– ಮಂಜುಳಾ ಎನ್. ಸ್ವಾಮಿ,ಲಗ್ಗೆರೆ

***

ಸರ್ಕಾರಿ ಶಾಲೆಗೆ ಜಾಗವಿಲ್ಲ

ನಮ್ಮ ವಾರ್ಡ್‌ನಲ್ಲಿ ಒಳಚರಂಡಿ ಸಮಸ್ಯೆ ಇದೆ. ಸರಿಪಡಿಸುವ ಪ್ರಯತ್ನದಲ್ಲಿದ್ದೇವೆ. ಬಸಪ್ಪನಕಟ್ಟೆ ಅಭಿವೃದ್ಧಿಪಡಿಸಿ ಉದ್ಯಾನ ನಿರ್ಮಿಸುವ ಯೋಜನೆ ಇದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ಸರ್ಕಾರಿ ಪ್ರೌಢಶಾಲೆ ಬೇಕು ಎಂಬ ಬೇಡಿಕೆ ಇದೆ. ಆದರೆ, ಸರ್ಕಾರಿ ಜಾಗ ಇಲ್ಲದ ಕಾರಣ ಸಮಸ್ಯೆಯಾಗಿದೆ. ಸರ್ಕಾರಿ ಆಸ್ಪತ್ರೆಯನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಸರ್ಕಾರ ಅನುದಾನ ಕೊಟ್ಟರೆ ಶೀಘ್ರದಲ್ಲಿ ಕಾಮಗಾರಿ ನಡೆಸಬಹುದು.

–ಪದ್ಮಾವತಿ ನರಸಿಂಹಮೂರ್ತಿ,ರಾಜಗೋಪಾಲನಗರ

***

ಶಾಶ್ವತ ಪರಿಹಾರಕ್ಕೆ ಪ್ರಯತ್ನ

ವರ್ಷಕ್ಕೆ ₹3 ಕೋಟಿ ಅನುದಾನದ ಜತೆಗೆ ಶಾಸಕರು ಮತ್ತು ಸಂಸದರ ನಿಧಿಯಿಂದಲೂ ಅನುದಾನ ಪಡೆದು ರಸ್ತೆ, ಚರಂಡಿ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಬಸ್ ನಿಲ್ದಾಣದ ಬಳಿಯ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇವೆ. ಖಾಲಿ ನಿವೇಶನಗಳಲ್ಲಿ ಕಸ ಹಾಕುವುದನ್ನು ತಪ್ಪಿಸಬೇಕಿದೆ. ವಾರ್ಡ್‌ ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರವೂ ಬೇಕು

–ಭಾಗ್ಯಮ್ಮ ಕೃಷ್ಣಯ್ಯ,ಹೆಗ್ಗನಹಳ್ಳಿ

***

ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್‌ ಸದಸ್ಯೆ ಲಲಿತಾ ತಿಮ್ಮನಂಜಯ್ಯಅವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

***

ದುರ್ನಾತದ ನಡುವೆ ಜೀವನ

ಹೆಗ್ಗನಹಳ್ಳಿಯಲ್ಲಿ ಬಸ್ ನಿಲ್ದಾಣದ ಬಳಿಯೇ ಕಸದ ರಾಶಿ ಬಿದ್ದಿದೆ. ಇದರ ವಾಸನೆ ತಡೆಯಲಾಗಿದೆ ಹಲವರು ಮನೆ ಮಾರಾಟ ಮಾಡಿ ಹೋದರು. ನಾವು ವಿಧಿಯಿಲ್ಲದೇ ಇಲ್ಲೇ ಜೀವನ ನಡೆಸುತ್ತಿದ್ದೇವೆ. ಬಿಬಿಎಂಪಿ ಅಧಿಕಾರಿಗಳಿಗೆ, ಪಾಲಿಕೆ ಸದಸ್ಯರಿಗೆ ಎಷ್ಟು ಬಾರಿ ದೂರು ನೀಡಿದರೂ ಸ್ಪಂದನೆ ಸಿಕ್ಕಿಲ್ಲ. ಬೇರೆ ಯಾರಿಗೆ ದೂರು ಹೇಳಬೇಕೋ ಗೊತ್ತಾಗುತ್ತಿಲ್ಲ

–ನಾರಾಯಣಮ್ಮ, ಹೆಗ್ಗನಹಳ್ಳಿ ನಿವಾಸಿ

***

ಮನೆಗೆ ನುಗ್ಗುವ ಕಸದ ರಸ

ಖಾಲಿ ಜಾಗವನ್ನು ಕಸದ ತೊಟ್ಟಿಯನ್ನಾಗಿ ಮಾಡಲಾಗಿದೆ. ಮಳೆ ಬಂದರೆ ಕಸದೊಂದಿಗೆ ಕೊಳೆತ ನೀರು ರಸ್ತೆ ಮತ್ತು ಮೋರಿಗಳಿಗೆ ಬರುತ್ತದೆ. ಅವುಗಳು ಕಟ್ಟಿಕೊಂಡರೆ ನಮ್ಮ ಮನೆಗಳಿಗೇ ಆ ನೀರು ನುಗ್ಗುತ್ತದೆ. ನರಕದಲ್ಲಿ ಜೀವನ ನಡೆಸಿದ ಅನುಭವವಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ

–ಜಫ್ರುಲ್ಲಾ, ಹೆಗ್ಗನಹಳ್ಳಿ ನಿವಾಸಿ

***

ತಪ್ಪದ ಸಂಚಾರ ಕಿರಿಕಿರಿ

ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಲಗ್ಗೆರೆ ಸೇತುವೆ ಮೂಲಕ ಸಾಗುವುದು ದೊಡ್ಡ ಸಮಸ್ಯೆ. ಇದು ಇಂದು, ನಿನ್ನೆಯಿಂದ ಹುಟ್ಟಿಕೊಂಡಿರುವ ಸಮಸ್ಯೆಯಲ್ಲ. ಆದರೂ, ಆಳುವವರ ನಿರ್ಲಕ್ಷ್ಯದಿಂದ ಸಮಸ್ಯೆ ಬಗೆಹರಿದಿಲ್ಲ. ಕೆಳ ಸೇತುವೆಯಲ್ಲಿ ರಾತ್ರಿ ವೇಳೆ ಸಂಚರಿಸಲು ದೀಪದ ವ್ಯವಸ್ಥೆ ಇಲ್ಲ. ಕಳ್ಳರ ಕಾಟ ಕೂಡ ಇದೆ.

–ಪುರುಷೋತ್ತಮ, ನಂದಿನಿ ಲೇಔಟ್ ನಿವಾಸಿ

***

ಕೆರೆಯಲ್ಲ ವಿಷದ ಬಟ್ಟಲುಗಳು

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆರೆಗಳಿಗೆ ಕಾರ್ಖಾನೆಗಳ ನೀರು ಹರಿಯುತ್ತಿದ್ದು, ಅವು ವಿಷದ ಬಟ್ಟಲಾಗಿ ಪರಿವರ್ತನೆಯಾಗಿವೆ. ‌ ಅದರ ಜತೆಗೆ ಒಳಚರಂಡಿ ನೀರನ್ನೂ ಕೆರೆಗೇ ಹರಿಸಲಾಗುತ್ತಿದೆ. ಬಂದವರು ಒಂದು ಕ್ಷಣ ಮೂಗು ಮುಚ್ಚಿಕೊಂಡು ನೋಡಿ ವಾಪಸ್ ಹೋಗುತ್ತಾರೆ. ಇಲ್ಲವೇ ವಾಸ ಮಾಡಬೇಕಾದ ನಾವು ಏನು ಮಾಡಬೇಕು?

–ರಾಜು, ಪೀಣ್ಯ

***

ಸರ್ಕಾರಿ ಪ್ರೌಢಶಾಲೆ ಬೇಕು

ರಾಜಗೋಪಾಲನಗರ ಬಸಪ್ಪನಕಟ್ಟೆ ಸುತ್ತಮುತ್ತ ಬಡವರೇ ವಾಸ ಮಾಡುತ್ತಿದ್ದೇವೆ. ಸರ್ಕಾರಿ ಪ್ರಾಥಮಿಕ ಶಾಲೆ ಚೆನ್ನಾಗಿ ನಡೆಯುತ್ತಿದೆ. ಪ್ರೌಢಶಾಲೆ ಬೇಕು ಎಂದು ಹಲವು ವರ್ಷಗಳಿಂದ ಕೇಳುತ್ತಿದ್ದೇವೆ. ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿಲ್ಲ.

–ಸತೀಶ, ರಾಜಗೋಪಾಲನಗರ

***

‌ಪ್ರಮುಖ ಮೂರು ಸಮಸ್ಯೆಗಳು

ಲಗ್ಗೆರೆ

* ಸಂಚಾರ ದಟ್ಟಣೆಯ ಕಿರಿಕಿರಿ

* ಗುಂಡಿ ಬಿದ್ದಿರುವ ರಸ್ತೆಗಳು

* ರಸ್ತೆ ಬದಿ ಆಗಾಗ ಬೀಳುವ ಕಸ

ರಾಜಗೋಪಾಲನಗರ

* ಪಾಳು ಬಿದ್ದಿರುವ ಜಾಗವೇ ಕಸದ ತೊಟ್ಟಿ

* ಮುಚ್ಚಿ ಹೋಗಿರುವ ರಾಜಕಾಲುವೆ

* ಅಭಿವೃದ್ಧಿ ಕಾಣದ ಬಸಪ್ಪನಕಟ್ಟೆ ಕೆರೆ

ಹೆಗ್ಗನಹಳ್ಳಿ

* ಕಸ ನಿರ್ವಹಣೆ ಸಮಸ್ಯೆಯೇ ದೊಡ್ಡದು

* ಒಳಚರಂಡಿ ವ್ಯವಸ್ಥೆ ಇನ್ನಷ್ಟು ಸಮರ್ಪಕ ಆಗಬೇಕಿದೆ

* ಖಾಲಿ ನಿವೇಶನಗಳಲ್ಲಿ ಬಿದ್ದಿರುವ ಕಸದ ರಾಶಿ

ಪೀಣ್ಯ ಕೈಗಾರಿಕಾ ಪ್ರದೇಶ

‌* ಕೆರೆಗೆ ಸೇರು‌ವ ಕಾರ್ಖಾನೆ ತ್ಯಾಜ್ಯಕ್ಕೆ ತಡೆ ಇಲ್ಲ

* ರಸ್ತೆಗಳು ಅಭಿವೃದ್ಧಿಯೂ ಇಲ್ಲಿ ಮರೀಚಿಕೆ

* ಕಸ ನಿರ್ವಹಣೆಯೂ ಅಸಮರ್ಪಕ

2011ರ ಜನಗಣತಿ ಪ್ರಕಾರ ಜನಸಂಖ್ಯೆ

ಲಗ್ಗೆರೆ– 57,077

ರಾಜಗೋಪಾಲನಗರ–61,479

ಹೆಗ್ಗನಹಳ್ಳಿ–66,314

ಪೀಣ್ಯಾ ಕೈಗಾರಿಕಾ ಪ್ರದೇಶ–57,814

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT